ಮಾಹಿತಿ ಇರುವಲ್ಲಿ ಹೋಗಲು

ಬೇರೆಬೇರೆ ಭಾಷೆಯಲ್ಲಿ ಮಾತಾಡುವ ವರದ ಬಗ್ಗೆ ಬೈಬಲ್‌ ಎನ್‌ ಕಲಿಸುತ್ತದೆ?

ಬೇರೆಬೇರೆ ಭಾಷೆಯಲ್ಲಿ ಮಾತಾಡುವ ವರದ ಬಗ್ಗೆ ಬೈಬಲ್‌ ಎನ್‌ ಕಲಿಸುತ್ತದೆ?

ಬೈಬಲ್‌ ಕೊಡೋ ಉತ್ತರ

 ಮೊದಲನೇ ಶತಮಾನದ ಕೆಲವು ಕ್ರೈಸ್ತರಿಗೆ “ಬೇರೆಬೇರೆ ಭಾಷೆಯಲ್ಲಿ” ಮಾತಾಡೋ ಸಾಮರ್ಥ್ಯ ಇತ್ತು. ಆ ಭಾಷೆಯನ್ನ ಅವರು ಕಲಿಯದೇ ಇದ್ರು ಅದನ್ನ ಅವರು ಮಾತಾಡ್ತಾ ಇದ್ದರು. (ಅಪೊಸ್ತಲರ ಕಾರ್ಯ 10:46) ಅವರು ಮಾತಾಡುತ್ತಿದ್ದಾಗ ಯಾರಿಗೆ ಚೆನ್ನಾಗಿ ಆ ಭಾಷೆ ಗೊತ್ತಿತ್ತೋ ಅವರು ಸಹ ಸುಲಭವಾಗಿ ಅರ್ಥಮಾಡಿಕೊಳ್ತಿದ್ದರು. (ಅಪೊಸ್ತಲರ ಕಾರ್ಯ 2:4-8) ಯೆಹೋವ ದೇವರು ಮೊದಲನೇ ಶತಮಾನದ ಕೆಲವು ಕ್ರೈಸ್ತರಿಗೆ ಕೊಟ್ಟ ಪವಿತ್ರಶಕ್ತಿಯ ವರಗಳಲ್ಲಿ ಬೇರೆಬೇರೆ ಭಾಷೆಯಲ್ಲಿ ಮಾತಾಡೋ ವರ ಸಹ ಒಂದು.—ಇಬ್ರಿಯ 2:4; 1 ಕೊರಿಂಥ 12:4, 30.

 ಬೇರೆಬೇರೆ ಭಾಷೆಗಳಲ್ಲಿ ಮಾತಾಡೋದು ಎಲ್ಲಿ ಶುರುವಾಯ್ತು? ಯಾವಾಗ ಶುರುವಾಯ್ತು?

 ಈ ಅದ್ಭುತ ಮೊದಲು ಕ್ರಿ.ಶ. 33 ಯೆಹೂದ್ಯರ ಪಂಚಾಶತ್ತಮ ಹಬ್ಬದಂದು ಬೆಳಿಗ್ಗೆ ಯೆರೂಸಲೇಮಿನಲ್ಲಿ ನಡೆಯಿತು. ಯೇಸುವಿನ 120 ಶಿಷ್ಯರು ಒಂದು ಕಡೆ ಸೇರಿಬಂದಿದ್ರು. ಆಗ “ಅಲ್ಲಿದ್ದ ಎಲ್ರಿಗೆ ಪವಿತ್ರಶಕ್ತಿ ಸಿಕ್ತು. ಇದ್ರಿಂದ ಅವರು ಬೇರೆಬೇರೆ ಭಾಷೆ ಮಾತಾಡೋಕೆ ಶುರುಮಾಡಿದ್ರು.” (ಅಪೊಸ್ತಲರ ಕಾರ್ಯ 1:15; 2:1-4) “ಭೂಮಿ ಮೇಲಿದ್ದ ಎಲ್ಲ ದೇಶದಿಂದ” ಬಂದ ತುಂಬ ಜನರು ಅಲ್ಲಿ ತಮ್ಮತಮ್ಮ ‘ಮಾತೃಭಾಷೆಯಲ್ಲಿ ಮಾತಾಡೋದನ್ನ ಕೇಳಿದ್ರು.’—ಅಪೊಸ್ತಲರ ಕಾರ್ಯ 2:5, 6.

 ಬೇರೆಬೇರೆ ಭಾಷೆಗಳಲ್ಲಿ ಮಾತಾಡೋ ವರವನ್ನ ದೇವರು ಯಾಕೆ ಕೊಟ್ರು?

  1.   ದೇವರ ಸಹಾಯ ಕ್ರೈಸ್ತರಿಗಿದೆ ಅಂತ ತೋರಿಸಲಿಕ್ಕೆ. ಹಿಂದಿನ ಕಾಲದಲ್ಲಿ ಮೋಶೆಯಂಥ ನಂಬಿಗಸ್ತ ಜನರಿಗೆ ತನ್ನ ಸಹಾಯವಿದೆ ಅಂತ ತೋರಿಸೋಕೆ ದೇವರು ಅದ್ಭುತ ಮಾಡೋ ಶಕ್ತಿ ಕೊಟ್ಟನು. (ವಿಮೋಚನಕಾಂಡ 4:1-9, 29-31; ಅರಣ್ಯಕಾಂಡ 17:10) ಬೇರೆ ಭಾಷೆಯಲ್ಲಿ ಮಾತಾಡೋ ವರವೂ ಒಂದು ಅದ್ಭುತನೇ. ಹೊಸದಾಗಿ ಶುರು ಆಗಿದ್ದ ಕ್ರೈಸ್ತ ಸಭೆಗೂ ದೇವರ ಸಹಾಯ ಇತ್ತು ಅಂತ ಇದು ತೋರಿಸುತ್ತೆ. ಅಪೊಸ್ತಲ ಪೌಲ ಹೀಗೆ ಬರೆದನು: “ಬೇರೆ ಭಾಷೆಗಳಲ್ಲಿ ಮಾತಾಡೋ ಸಾಮರ್ಥ್ಯ ಯೇಸು ಮೇಲೆ ನಂಬಿಕೆ ಇಟ್ಟವ್ರಿಗಲ್ಲ, ನಂಬಿಕೆ ಇಡದವ್ರಿಗೆ ಗುರುತಾಗಿದೆ.”—1 ಕೊರಿಂಥ 14:22.

  2.   ಕ್ರೈಸ್ತರು ಚೆನ್ನಾಗಿ ಸಾಕ್ಷಿಕೊಟ್ಟು ವಿವರಿಸೋಕೆ. ಪಂಚಾಶತ್ತಮ ದಿನದಂದು ಯೇಸುವಿನ ಶಿಷ್ಯರು ಮಾತಾಡಿದ್ದನ್ನ ಕೇಳಿ ಜನರು, “ದೇವರ ಅದ್ಭುತ ಕೆಲಸಗಳ ಬಗ್ಗೆ ನಮ್ಮನಮ್ಮ ಭಾಷೆಯಲ್ಲಿ ಕೇಳ್ತಾ ಇದ್ದೀವಿ. ಅದು ಹೇಗೆ ಸಾಧ್ಯ!” ಅಂತ ಹೇಳಿದ್ರು. (ಅಪೊಸ್ತಲರ ಕಾರ್ಯ 2:11) ಯೇಸು ಕೊಟ್ಟ ಆಜ್ಞೆ ಪ್ರಕಾರ ಕ್ರೈಸ್ತರು ‘ಚೆನ್ನಾಗಿ ವಿವರಿಸಲಿಕ್ಕಾಗಿ’ ಮತ್ತು ‘ಎಲ್ಲಾ ದೇಶದ ಜನ್ರನ್ನ ಶಿಷ್ಯರಾಗಿ ಮಾಡೋ’ ಉದ್ದೇಶದಿಂದ ದೇವರು ಈ ಅದ್ಭುತ ವರವನ್ನ ಕೊಟ್ಟನು. (ಅಪೊಸ್ತಲರ ಕಾರ್ಯ 10:42; ಮತ್ತಾಯ 28:19) ಆ ಅದ್ಭುತವನ್ನು ಕಣ್ಣಾರೆ ನೋಡಿದ ಮತ್ತು ಶಿಷ್ಯರ ಮಾತನ್ನ ಕೇಳಿಸಿಕೊಂಡ ಸುಮಾರು 3000 ಮಂದಿ ಅದೇ ದಿನ ಶಿಷ್ಯರಾದರು.—ಅಪೊಸ್ತಲರ ಕಾರ್ಯ 2:41.

 ಬೇರೆಬೇರೆ ಭಾಷೆಗಳಲ್ಲಿ ಮಾತಾಡೋ ವರ ಶಾಶ್ವತವಾಗಿ ಇತ್ತಾ?

 ಇಲ್ಲ. ಬೇರೆ ಭಾಷೆಗಳಲ್ಲಿ ಮಾತಾಡೋ ವರ ಸೇರಿಸಿ ಪವಿತ್ರಶಕ್ತಿಯಿಂದ ಸಿಕ್ಕಿದ ಬೇರೆಲ್ಲ ವರಗಳು ತಾತ್ಕಾಲಿಕವಾಗಿತ್ತು. ಬೈಬಲ್‌ ಇದ್ರ ಬಗ್ಗೆ ಮುಂಚೆನೇ ಹೀಗೆ ಹೇಳಿತ್ತು: “ಭವಿಷ್ಯ ಹೇಳೋ ಸಾಮರ್ಥ್ಯ ಇದ್ರೆ ಅದು ನಿಂತು ಹೋಗುತ್ತೆ. ಬೇರೆಬೇರೆ ಭಾಷೆ ಮಾತಾಡೋ ಸಾಮರ್ಥ್ಯ ಇದ್ರೆ ಅದೂ ಕೊನೆ ಆಗುತ್ತೆ.”—1 ಕೊರಿಂಥ 13:8.

 ಬೇರೆಬೇರೆ ಭಾಷೆಗಳಲ್ಲಿ ಮಾತಾಡೋದು ಯಾವಾಗ ನಿಂತುಹೋಯ್ತು?

 ಸಾಮಾನ್ಯವಾಗಿ ಬೇರೆ ಕ್ರೈಸ್ತರು ಅಪೊಸ್ತಲರ ಮುಂದೆನೇ ಪವಿತ್ರಶಕ್ತಿಯನ್ನ ಪಡೆಯುತ್ತಿದ್ದರು. ಅಪೊಸ್ತಲರು ಅವರ ಮೇಲೆ ಕೈ ಇಟ್ಟಾಗ ಆ ಶಕ್ತಿಯನ್ನ ಪಡೆದುಕೊಳ್ತಿದ್ರು. (ಅಪೊಸ್ತಲರ ಕಾರ್ಯ 8:18; 10:44-46) ಪವಿತ್ರಶಕ್ತಿ ವರವನ್ನ ಯಾರು ಪಡೆದುಕೊಂಡರೋ ಅವರು ಅದನ್ನ ಬೇರೆಯವರಿಗೆ ಕೊಟ್ಟಿಲ್ಲ ಅಂತ ಇದರಿಂದ ಗೊತ್ತಾಗುತ್ತೆ. (ಅಪೊಸ್ತಲರ ಕಾರ್ಯ 8:5-7, 14-17) ಉದಾಹರಣೆಗೆ, ಒಬ್ಬ ಸರ್ಕಾರಿ ಅಧಿಕಾರಿ ಒಬ್ಬನಿಗೆ ಡ್ರೈವಿಂಗ್‌ ಲೈಸನ್ಸ್‌ ಕೊಡ್ತಾನೇ ಹೊರತು ಬೇರೆಯವರಿಗೆ ಲೈಸನ್ಸ್‌ ಕೊಡೋ ಸರ್ಕಾರಿ ಅಧಿಕಾರವನ್ನ ಕೊಡಲ್ಲ. ಹಾಗಾಗಿ ಲೈಸನ್ಸ್‌ ಪಡೆದವರು ಬೇರೆಯವರಿಗೆ ಲೈಸನ್ಸ್‌ ಕೊಡಲು ಆಗಲ್ಲ. ಬೇರೆ ಭಾಷೆಯಲ್ಲಿ ಮಾತಾಡೋ ವರ ಕೂಡ ಹಾಗೆಯೇ. ಅಪೊಸ್ತಲರು ಮತ್ತು ಅವರ ಮೂಲಕ ವರ ಪಡೆದುಕೊಂಡ ಜನರು ಸತ್ತ ಹೋದಾಗ ಆ ವರ ನಿಂತುಹೋಯಿತು ಅಂತ ಇದ್ರಿಂದ ಗೊತ್ತಾಗುತ್ತೆ.

 ಬೇರೆಬೇರೆ ಭಾಷೆಗಳಲ್ಲಿ ಮಾತಾಡೋ ವರ ಈಗ ಯಾರಿಗಾದರೂ ಇದೆಯಾ?

 ಅದ್ಭುತವಾಗಿ ಬೇರೆ ಭಾಷೆಗಳಲ್ಲಿ ಮಾತಾಡೋ ವರ ಕ್ರಿ.ಶ. ಮೊದಲನೇ ಶತಮಾನದಲ್ಲೇ ಕೊನೆಗೊಳ್ತು. ಹಾಗಾಗಿ ದೇವರ ಪವಿತ್ರಶಕ್ತಿಯಿಂದ ಬೇರೆ ಭಾಷೆಗಳಲ್ಲಿ ಮಾತಾಡ್ತೇವೆ ಅಂತ ಯಾರು ಹೇಳೋಕಾಗಲ್ಲ.

 ನಿಜ ಕ್ರೈಸ್ತರನ್ನ ಹೇಗೆ ಗುರುತಿಸಬಹುದು?

 ಸ್ವತ್ಯಾಗದ ಪ್ರೀತಿಯಿಂದ ನಿಜ ಕ್ರೈಸ್ತರನ್ನ ಗುರುತಿಸಬಹುದು ಅಂತ ಯೇಸು ಹೇಳಿದನು. (ಯೋಹಾನ 13:34, 35) ಅಪೊಸ್ತಲ ಪೌಲ ಕೂಡ ನಿಜ ಕ್ರೈಸ್ತರಿಗೆ ಪ್ರೀತಿಯೇ ಶಾಶ್ವತವಾದ ಗುರುತು ಅಂತ ಹೇಳಿದನು. (1 ಕೊರಿಂಥ 13:1, 8) ದೇವರ ಪವಿತ್ರಶಕ್ತಿ ಕ್ರೈಸ್ತರಲ್ಲಿ ಒಳ್ಳೇ ಗುಣಗಳನ್ನ ಬೆಳೆಸುತ್ತೆ ಅಂತ ಅವನು ಹೇಳಿದನು. ಆ ಗುಣಗಳನ್ನೆಲ್ಲ ಒಟ್ಟು ಸೇರಿಸಿ “ಪವಿತ್ರಶಕ್ತಿಯಿಂದ ಬರೋ ಗುಣಗಳು” ಅಂತ ಹೇಳಬಹುದು. ಅದರಲ್ಲಿ ಮೊದಲ ಗುಣ ಪ್ರೀತಿಯಾಗಿದೆ.—ಗಲಾತ್ಯ 5:22, 23.