ಮಾಹಿತಿ ಇರುವಲ್ಲಿ ಹೋಗಲು

ಬೈಬಲಲ್ಲಿ ಇರೋ ವಿಷಯ ಬದಲಾಗಿದ್ಯಾ ಅಥವಾ ತಿರುಚಲಾಗಿದ್ಯಾ?

ಬೈಬಲಲ್ಲಿ ಇರೋ ವಿಷಯ ಬದಲಾಗಿದ್ಯಾ ಅಥವಾ ತಿರುಚಲಾಗಿದ್ಯಾ?

 ಇಲ್ಲ. ಸಾವಿರಾರು ವರ್ಷಗಳಿಂದ ಬೈಬಲನ್ನ ನಕಲು ಮಾಡಿ ಹಾಳಾಗುವ ವಸ್ತುಗಳ ಮೇಲೆ ಬರೆಯಲಾಗಿದೆ. ಆದ್ರೂ ಇಂದು ನಾವು ಬಳಸುವ ಬೈಬಲನ್ನ ಹಳೆಯ ಹಸ್ತಪ್ರತಿಗಳಿಗೆ ಹೋಲಿಸಿದ್ರೆ ಅದ್ರ ಸಂದೇಶ ಇದ್ದ ಹಾಗೆ ಇದೆ, ಬದಲಾಗಿಲ್ಲ ಅಂತ ಗೊತ್ತಾಗುತ್ತೆ.

ಹಾಗಾದ್ರೆ ಇದ್ರ ಅರ್ಥ ಬೈಬಲನ್ನ ನಕಲು ಮಾಡ್ವಾಗ ಯಾವ ತಪ್ಪೂ ಆಗಿಲ್ಲ ಅಂತನಾ?

 ಬೈಬಲಿನ ಸಾವಿರಾರು ಹಳೆಯ ಹಸ್ತಪ್ರತಿಗಳು ಸಿಕ್ಕಿವೆ. ಅದರಲ್ಲಿ ಕೆಲವು ಹಸ್ತಪ್ರತಿಗಳು ಒಂದಕ್ಕೊಂದು ಹೊಂದಿಕೆಯಾಗಲ್ಲ. ಇದು ನಕಲು ಮಾಡ್ವಾಗ ಕೆಲವು ತಪ್ಪುಗಳಾಗಿವೆ ಅನ್ನೋದನ್ನ ತೋರ್ಸುತ್ತೆ. ಆ ಹಸ್ತಪ್ರತಿಗಳಲ್ಲಿ ಹೆಚ್ಚಿನ ತಪ್ಪುಗಳು ಸಣ್ಣ ಪುಟ್ಟ ತಪ್ಪುಗಳಾಗಿದ್ರು ಬೈಬಲಿನಲ್ಲಿರೋ ಮುಖ್ಯ ವಿಷಯದ ಅರ್ಥ ಬದಲಾಗಿಲ್ಲ. ಆದರೆ ಕೆಲವು ತಪ್ಪುಗಳನ್ನ ನಿರ್ಲಕ್ಷ ಮಾಡಕ್ಕಾಗಲ್ಲ. ಯಾಕಂದ್ರೆ ಬೈಬಲ್‌ ಸಂದೇಶವನ್ನ ನಕಲು ಮಾಡ್ವಾಗ ಕೆಲವು ಹಸ್ತಪ್ರತಿಗಳಲ್ಲಿ ಉದ್ದೇಶಪೂರ್ವಕವಾಗಿ ಈ ಬದಲಾವಣೆ ಮಾಡಲಾಗಿದೆ. ಇಂಥ ಎರಡು ಉದಾಹರಣೆಗಳನ್ನ ನೋಡೋಣ:

  1.  1. ಕೆಲವು ಹಳೆಯ ಬೈಬಲ್‌ ಭಾಷಾಂತರಗಳನ್ನು ನೋಡ್ವಾಗ 1 ಯೋಹಾನ 5:7 ರಲ್ಲಿ ಈ ಪದಗಳಿವೆ: “ಸ್ವರ್ಗದಲ್ಲಿ, ತಂದೆ, ವಾಕ್ಯ ಮತ್ತು ಪವಿತ್ರಾತ್ಮ: ಈ ಮೂರು ಒಂದೇ.” ಆದರೆ ಬೈಬಲಿನ ಮೂಲ ಪ್ರತಿಗಳಲ್ಲಿ ಈ ಪದಗಳು ಇರ್ಲಿಲ್ಲ ಅಂತ ಕೆಲವು ಬೈಬಲ್‌ ಹಸ್ತಪ್ರತಿಗಳನ್ನ ಪರೀಕ್ಷಿಸಿದಾಗ ಗೊತ್ತಾಗುತ್ತೆ. ಈ ಪದಗಳನ್ನ ನಂತ್ರ ಸೇರಿಸಲಾಗಿದೆ ಅನ್ನೋದನ್ನ ಇದು ರುಜುಪಡಿಸುತ್ತೆ. a ಹಾಗಾಗಿ ಇಂದಿನ ಅನೇಕ ಪ್ರಸಿದ್ಧ ಬೈಬಲ್‌ಗಳಲ್ಲಿ ಈ ಪದಗಳನ್ನ ತೆಗೆದುಹಾಕಲಾಗಿದೆ.

  2.  2. ದೇವರ ಹೆಸರು ಬೈಬಲಿನ ಪ್ರಾಚೀನ ಹಸ್ತಪ್ರತಿಗಳಲ್ಲಿ ಸಾವಿರಾರು ಬಾರಿ ಕಂಡುಬರುತ್ತೆ. ಆದರೂ ಅನೇಕ ಬೈಬಲ್‌ ಭಾಷಾಂತರಗಳಲ್ಲಿ ದೇವರ ಹೆಸರನ್ನ ತೆಗೆದುಹಾಕಿ “ಕರ್ತ” ಅಥವಾ “ದೇವರು” ಅನ್ನೋ ಬಿರುದುಗಳನ್ನ ಹಾಕಲಾಗಿದೆ.

ಬೈಬಲಿನಲ್ಲಿ ಇನ್ಯಾವ ಬದಲಾವಣೆಗಳೂ ಆಗಿಲ್ಲ ಅಂತ ನಾವು ಹೇಗೆ ಖಚಿತವಾಗಿ ಹೇಳಬಹುದು?

 ಬೈಬಲಿನ ಅನೇಕ ಹಸ್ತಪ್ರತಿಗಳು ಸಿಕ್ಕಿರೋದ್ರಿಂದ ತಪ್ಪುಗಳನ್ನು ಕಂಡುಹಿಡಿಯೋದು ಹಿಂದೆಂದಿಗಿಂತಲೂ ಈಗ ಸುಲಭವಾಗಿದೆ. b ಈ ಎಲ್ಲಾ ಹಸ್ತಪ್ರತಿಗಳನ್ನ ಹೋಲಿಸಿ ನೋಡ್ವಾಗ ಬೈಬಲಿನ ನಿಖರತೆ ಬಗ್ಗೆ ಏನು ಗೊತ್ತಾಗುತ್ತೆ?

  •   “ಹಳೆಯ ಒಡಂಬಡಿಕೆ” ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಹೀಬ್ರೂ ಶಾಸ್ತ್ರಗ್ರಂಥಗಳ ಬಗ್ಗೆ ಬೈಬಲ್‌ ವಿದ್ವಾಂಸರಾದ ವಿಲಿಯಂ ಹೆಚ್‌. ಗ್ರೀನ್‌ ಹೀಗೆ ಹೇಳಿದ್ರು: “ಪುರಾತನ ಕಾಲದ ಯಾವುದೇ ಕೆಲಸವನ್ನು ಇಷ್ಟು ನಿಖರವಾಗಿ ದಾಟಿಸಲಾಗಿಲ್ಲ ಅಂತ ನಾವು ಖಚಿತವಾಗಿ ಹೇಳಬಹುದು.”

  •   ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥ ಅಥವಾ “ಹೊಸ ಒಡಂಬಡಿಕೆಯ” ಬಗ್ಗೆ ಬೈಬಲ್‌ ವಿದ್ವಾಂಸರಾದ ಎಫ್‌. ಎಫ್‌. ಬ್ರೂಸ್‌ ಹೀಗೆ ಬರೆದಿದ್ದಾರೆ: “ಹಳೆಯ ಕಾಲದ ಪ್ರಸಿದ್ಧ ಬರಹಗಾರರ ಅನೇಕ ಪುಸ್ತಕಗಳಿವೆ. ಅದರಲ್ಲಿ ಇರೋ ಸತ್ಯಾಂಶಗಳನ್ನ ಯಾರೂ ಪ್ರಶ್ನಿಸೋಕೆ ಹೋಗಲ್ಲ. ಹಾಗಂದಮೇಲೆ ಹೊಸ ಒಡಂಬಡಿಕೆಯ ನಿಖರತೆ ಬಗ್ಗೆ ಪ್ರಶ್ನಿಸೋದೂ ಸರಿ ಅಲ್ಲ. ಯಾಕಂದ್ರೆ ಅದು ನಿಜ ಅನ್ನೋದಕ್ಕೆ ಹೆಚ್ಚಿನ ಆಧಾರಗಳಿವೆ.”

  •   ಬೈಬಲ್‌ ಹಸ್ತಪ್ರತಿಗಳ ಪ್ರಸಿದ್ಧ ವಿದ್ವಾಂಸರಾದ ಸರ್‌ ಫ್ರೆಡ್ರಿಕ್‌ ಕ್ಯಾನ್ಯನ್‌ ಹೀಗೆ ಹೇಳ್ತಾರೆ, “ಒಬ್ಬ ಇಡೀ ಬೈಬಲನ್ನ ತನ್ನ ಕೈಯಲ್ಲಿ ಹಿಡಿದುಕೊಂಡು ಯಾವುದೇ ಭಯ ಹಿಂಜರಿಕೆಯಿಲ್ಲದೆ ಇದು ನಿಜವಾಗಿ ದೇವರ ವಾಕ್ಯ ಅಂತ ಹೇಳಬಹುದು. ಸಾವಿರಾರು ವರ್ಷಗಳು ಕಳೆದ್ರೂ ಬೈಬಲಿನ ಸಂದೇಶ ಕಲಬೆರಕೆ ಆಗದೇ ಅದನ್ನ ಪೀಳಿಗೆಯಿಂದ ಪೀಳಿಗೆಗೆ ದಾಟಿಸಲಾಗಿದೆ.”

ಮೂಲ ಹಸ್ತಪ್ರತಿಗಳಲ್ಲಿ ಬರೆದಿರೋ ವಿಷಯಗಳೇ ಬೈಬಲಿನಲ್ಲಿದೆ ಅನ್ನೋದಕ್ಕೆ ಇನ್ನೂ ಯಾವ ಆಧಾರಗಳಿವೆ?

  •   ಯೆಹೂದಿ ಮತ್ತು ಕ್ರೈಸ್ತ ನಕಲುಗಾರರು ದೇವರ ಜನರು ಮಾಡಿದ ಗಂಭೀರ ತಪ್ಪುಗಳನ್ನು ಮುಚ್ಚಿಡದೆ ಆ ವೃತ್ತಾಂತಗಳನ್ನು ಹಾಗೇ ದಾಖಲಿಸಿದ್ದಾರೆ. c (ಅರಣ್ಯಕಾಂಡ 20:12; 2 ಸಮುವೇಲ 11:2-4; ಗಲಾತ್ಯ 2:11-14) ಅದೇ ತರ ಯೆಹೂದಿ ಜನರು ಅವಿಧೇಯರಾದ ಬಗ್ಗೆ, ದೇವರು ಅವರನ್ನ ಖಂಡಿಸಿದರ ಬಗ್ಗೆ ಮತ್ತು ತಾವೇ ಮಾಡಿಕೊಂಡಿದ್ದ ಸಂಪ್ರದಾಯಗಳ ಬಗ್ಗೆ ಸಹ ನಕಲುಗಾರರು ಯಾವುದೇ ಮುಚ್ಚುಮರೆಯಿಲ್ಲದೆ ಬಹಿರಂಗಪಡೆಸಿದ್ದಾರೆ. (ಹೋಶೇಯ 4:2; ಮಲಾಕಿಯ 2:8, 9; ಮತ್ತಾಯ 23:8, 9; 1 ಯೋಹಾನ 5:21) ಈ ವೃತ್ತಾಂತಗಳನ್ನು ನಿಖರವಾಗಿ ನಕಲುಮಾಡುವ ಮೂಲಕ ನಕಲುಗಾರರು ತಮ್ಮ ಪ್ರಾಮಾಣಿಕತೆಯನ್ನ ಮತ್ತು ದೇವರ ಪವಿತ್ರ ಗ್ರಂಥದ ಕಡೆಗೆ ತಮಗಿರೋ ಗೌರವವನ್ನ ತೋರಿಸಿದ್ದಾರೆ.

  •   ಬೈಬಲನ್ನ ದೇವರೇ ಪ್ರೇರಿಸಿ ಬರೆಸಿರುವಾಗ ಅದರಲ್ಲಿ ಬದಲಾವಣೆಗಳಾಗಲು ಬಿಡ್ತಾನಾ? d (ಯೆಶಾಯ 40:8; 1 ಪೇತ್ರ 1:24, 25) ದೇವರು ತನ್ನ ಮಾತನ್ನ ಹಿಂದಿನ ಕಾಲದ ಜನರಿಗೆ ಮಾತ್ರವಲ್ಲ ನಮಗೋಸ್ಕರ ಕೂಡ ಬರೆಸಿದ್ದಾನೆ. ಇದರಿಂದ ನಾವು ಸಹ ಪ್ರಯೋಜನ ಪಡೆಯಬೇಕೆಂಬುದೇ ಆತನ ಉದ್ದೇಶ. (1 ಕೊರಿಂಥ 10:11) “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು; ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ ಅವು ಬರೆಯಲ್ಪಟ್ಟವು” ಅಂತ ಬೈಬಲ್‌ ಹೇಳುತ್ತೆ.—ರೋಮನ್ನರಿಗೆ 15:4.

  •   ಯೇಸು ಮತ್ತು ಆತನ ಶಿಷ್ಯರು ಹೀಬ್ರೂ ಶಾಸ್ತ್ರಗ್ರಂಥಗಳ ಹಸ್ತಪ್ರತಿಗಳಿಂದ ವಚನಗಳನ್ನ ಉಲ್ಲೇಖಿಸುತ್ತಾ ಬೋಧಿಸುತ್ತಿದ್ದರು. ಯಾಕಂದ್ರೆ ಅವುಗಳಲ್ಲಿ ಬರೆದ ವಿಷಯಗಳು ಸರಿಯಾಗಿವೆ ಅನ್ನೋ ಖಾತ್ರಿ ಅವರಿಗಿತ್ತು.—ಲೂಕ 4:16-21; ಅಪೊಸ್ತಲರ ಕಾರ್ಯ 17:1-3.

a ಈ ಪದಗಳು ಕೋಡೆಕ್ಸ್‌ ಸಿನೈಟಿಕಸ್‌, ಕೋಡೆಕ್ಸ್‌ ಅಲೆಕ್ಸಾಂಡ್ರಿನಸ್‌, ವ್ಯಾಟಿಕನ್‌ ಹಸ್ತಪ್ರತಿ 1209, ಮೂಲ ಲ್ಯಾಟಿನ್‌ ವಲ್ಗೇಟ್‌, ಫಿಲೋಕ್ಸೆನಿಯನ್‌-ಹಾರ್ಕ್ಲಿಯನ್‌ ಸಿರಿಯಾಕ್‌ ಆವೃತ್ತಿ ಅಥವಾ ಸಿರಿಯಾಕ್‌ ಪೆಶಿಟ್ಟಾ ಅನ್ನೋ ಹಸ್ತಪ್ರತಿಗಳಲ್ಲಿ ಇಲ್ಲ.

b ಉದಾಹರಣೆಗೆ, ಹೊಸ ಒಡಂಬಡಿಕೆಯ ಅಥವಾ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥಗಳ 5,000ಕ್ಕೂ ಹೆಚ್ಚು ಗ್ರೀಕ್‌ ಹಸ್ತಪ್ರತಿಗಳು ಸಿಕ್ಕಿವೆ.

c ಬೈಬಲ್‌ ಬರೆಯಲು ದೇವರು ಉಪಯೋಗಿಸಿದ ಮಾನವರು ತಪ್ಪೇಮಾಡದವರು ಅನ್ನೋ ಚಿತ್ರಣವನ್ನ ಬೈಬಲ್‌ ಕೊಡೋದಿಲ್ಲ. ಬದಲಿಗೆ ನಿಜ ವಿಷ್ಯನ ಒಪ್ಪಿಕೊಳ್ಳುತ್ತಾ “ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲ” ಅಂತ ಬೈಬಲ್‌ ತಿಳಿಸುತ್ತೆ.—1 ಅರಸು 8:46.

d ದೇವರು ಬೈಬಲಿನ ಲೇಖಕರಿಗೆ ಒಂದೊಂದು ಪದವನ್ನು ಹೇಳಿ ಬರೆಸಲಿಲ್ಲ ಅನ್ನೋದಂತೂ ಖಂಡಿತ. ಬದಲಿಗೆ ತನ್ನ ಆಲೋಚನೆಗಳನ್ನ ಮಾನವರ ಮನಸ್ಸಿಗೆ ಹಾಕಿ ಅದನ್ನ ಬರೆಸಿದನು ಅಂತ ಬೈಬಲ್‌ ಹೇಳುತ್ತೆ.—2 ತಿಮೊಥೆಯ 3:16, 17; 2 ಪೇತ್ರ 1:21.