ಮಾಹಿತಿ ಇರುವಲ್ಲಿ ಹೋಗಲು

ಶಾಲಾ ಪಠ್ಯ ಪುಸ್ತಕವಾದ ಬೈಬಲ್‌ ಕಥೆಗಳ ಪುಸ್ತಕ

ಶಾಲಾ ಪಠ್ಯ ಪುಸ್ತಕವಾದ ಬೈಬಲ್‌ ಕಥೆಗಳ ಪುಸ್ತಕ

2012ರಲ್ಲಿ ಬೈಬಲ್‌ ಕಥೆಗಳ ನನ್ನ ಪುಸ್ತಕ ಪಾಂಗಸೀನಾನ್‌ ಭಾಷೆಯಲ್ಲಿ ಬಿಡುಗಡೆಯಾಯಿತು. ಈ ಪುಸ್ತಕದಿಂದ ಫಿಲಿಪ್ಪೀನ್ಸ್‌ನಲ್ಲಿ ಯಾರು ಆ ಭಾಷೆ ಮಾತಾನಾಡುತ್ತಾರೋ ಅಂಥ ಶಾಲಾ ಮಕ್ಕಳಿಗೆ ಸಹಾಯವಾಗುತ್ತಿದೆ. ಮಕ್ಕಳ ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕೊಡಬೇಕೆಂಬುದು ಫಿಲಿಪ್ಪೀನ್ಸ್‌ನ ಶಿಕ್ಷಣ ಇಲಾಖೆಯ ನಿರ್ದೇಶನವಾಗಿತ್ತು. ಅದಕ್ಕೆ ತಕ್ಕಂತೆ ಈ ಪುಸ್ತಕವಿತ್ತು.

ಫಿಲಿಪ್ಪೀನ್ಸ್‌ನಲ್ಲಿ 100ಕ್ಕಿಂತ ಹೆಚ್ಚು ಬೇರೆ ಬೇರೆ ಭಾಷೆಗಳನ್ನಾಡುವ ಜನರಿದ್ದಾರೆ. ಹಾಗಾಗಿ ಯಾವ ಭಾಷೆಯಲ್ಲಿ ಶಾಲಾ ತರಗತಿಗಳನ್ನು ನಡೆಸಬೇಕು ಎಂಬ ವಿಷಯದಲ್ಲಿ ಅನೇಕ ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇತ್ತು. ಆದರೆ 2012ರಲ್ಲಿ ಶಿಕ್ಷಣ ಇಲಾಖೆ “ಮನೆಯಲ್ಲಿ ಮಾತಾಡುವ ಭಾಷೆಯಲ್ಲಿ” ಮಕ್ಕಳಿಗೆ ಕಲಿಸಿದರೆ, ಅವರು “ಉತ್ತಮವಾಗಿ ಮತ್ತು ಬೇಗ ಬೇಗ ವಿಷಯಗಳನ್ನು ಕಲಿಯುತ್ತಾರೆ” ಎಂದು ಗಮನಿಸಿತು. ಫಲಿತಾಂಶವಾಗಿ, “ಮಾತೃಭಾಷೆಯನ್ನು ಮುಖ್ಯ ಭಾಷೆಯನ್ನಾಗಿರಿಸಿದ ಬಹುಭಾಷಾ ಶಿಕ್ಷಣ” ಜಾರಿಗೆ ಬಂತು.

ಶಿಕ್ಷಣಕ್ಕಾಗಿ ಆಯ್ಕೆ ಮಾಡಿದ ಭಾಷೆಗಳಲ್ಲಿ ಪಾಂಗಸೀನಾನ್‌ ಭಾಷೆ ಕೂಡ ಒಂದಾಗಿತ್ತು. ಆದರೆ ಇದರಲ್ಲೊಂದು ಸಮಸ್ಯೆ ಇತ್ತು. ಶಾಲೆಯ ಮುಖ್ಯೋಪಧ್ಯಾಯರೊಬ್ಬರು ಈ ಭಾಷೆಯಲ್ಲಿ ಹೆಚ್ಚಿನ ಕಲಿಕಾ ಸಾಹಿತ್ಯಗಳಿಲ್ಲ ಎಂದು ಒಪ್ಪಿಕೊಂಡರು. ಸಮಯಕ್ಕೆ ಸರಿಯಾಗಿ ಪಾಂಗಸೀನಾನ್‌ ಭಾಷೆಯಲ್ಲಿ ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನು ಯೆಹೋವನ ಸಾಕ್ಷಿಗಳು 2012ರ ನವೆಂಬರ್‌ ತಿಂಗಳ ಜಿಲ್ಲಾ ಅಧಿವೇಶನದಲ್ಲಿ ಬಿಡುಗಡೆ ಮಾಡಿದರು.

ಆ ಅಧಿವೇಶನದಲ್ಲಿ ಸುಮಾರು 10,000 ಪ್ರತಿಗಳನ್ನು ವಿತರಿಸಲಾಯಿತು. ಪುಟಾಣಿಗಳು ಮತ್ತು ಅವರ ಹೆತ್ತವರು ಆ ಪುಸ್ತಕವನ್ನು ತಮ್ಮ ಮಾತೃಭಾಷೆಯಲ್ಲಿ ನೋಡಿ ಸಂತೋಷಿಸಿದರು. ಒಬ್ಬ ದಂಪತಿ, “ಈ ಪುಸ್ತಕ ಚೆನ್ನಾಗಿ ಅರ್ಥವಾಗುವುದರಿಂದ ನಮ್ಮ ಮಕ್ಕಳಿಗೆ ಇದು ತುಂಬಾ ಇಷ್ಟ ಆಗುತ್ತೆ” ಎಂದು ಹೇಳಿದರು.

ಅಧಿವೇಶನದ ನಂತರ ಕೆಲವು ಸಾಕ್ಷಿಗಳು ಬೈಬಲ್‌ ಕಥೆಗಳು ಪುಸ್ತಕದ ತಮ್ಮ ಪ್ರತಿಗಳನ್ನು ಡಾಗೂಪಾನ್‌ನಲ್ಲಿನ ಶಾಲೆಗೆ ತೆಗೆದುಕೊಂಡು ಹೋದರು. ಮಕ್ಕಳಿಗೆ ಕಲಿಸಲು ಈ ಭಾಷೆಯಲ್ಲಿ ಪುಸ್ತಕಗಳಿಲ್ಲದೆ ಹೆಣಗಾಡುತ್ತಿದ್ದ ಶಿಕ್ಷಕರು ಈ ಪುಸ್ತಕಗಳನ್ನು ನೋಡಿ ಬಹಳಷ್ಟು ಸಂತೋಷಿಸಿದರು. ಅಲ್ಲಿ 340ಕ್ಕಿಂತ ಹೆಚ್ಚು ಪುಸ್ತಕಗಳನ್ನು ವಿತರಿಸಲಾಯಿತು. ಮಕ್ಕಳಿಗೆ ತಮ್ಮ ಸ್ವಂತ ಭಾಷೆಯನ್ನು ಓದಲು ಕಲಿಸಲು ಶಿಕ್ಷಕರು ಈ ಪುಸ್ತಕವನ್ನು ಕೂಡಲೇ ಉಪಯೋಗಿಸಿದರು.

ಪುಟಾಣಿಗಳ ಶಿಕ್ಷಣದಲ್ಲಿ, ಈ ಪುಸ್ತಕವನ್ನು ಉಪಯೋಗಿಸುತ್ತಿರುವುದು ಯೆಹೋವನ ಸಾಕ್ಷಿಗಳಿಗೆ ಸಂತೋಷ ತಂದಿದೆ. ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನು ಭಾಷಾಂತರಿಸಿದ ಒಬ್ಬ ಭಾಷಾಂತರಕಾರರು ಹೇಳಿದ್ದು, “ಜನರ ಹೃದಯಗಳನ್ನು ತಲುಪಲು ವಿಷಯಗಳನ್ನು ಮಾತೃಭಾಷೆಯಲ್ಲೇ ತಯಾರಿಸಬೇಕೆನ್ನುವ ಸತ್ಯವನ್ನು ನಾವು ಮೊದಲೇ ಅರಿತಿದ್ದೆವು. ಹಾಗಾಗಿಯೇ, ಸಾಕ್ಷಿಗಳು ಬೈಬಲ್‌ ಮತ್ತು ಬೈಬಲಾಧಾರಿತ ಸಾಹಿತ್ಯವನ್ನು ನೂರಾರು ಭಾಷೆಗಳಲ್ಲಿ ತಯಾರಿಸಲು ಸರ್ವ ಪ್ರಯತ್ನ ಮಾಡುತ್ತಿರುವುದು.”