ಮಾಹಿತಿ ಇರುವಲ್ಲಿ ಹೋಗಲು

ಲೋಕದಾದ್ಯಂತ ಜನರು ದೇವರ ಕುರಿತು ತಿಳಿದುಕೊಳ್ಳಲೆಂದು ದುಡಿಯುತ್ತಿರುವ ಮುದ್ರಣಾಲಯ

ಲೋಕದಾದ್ಯಂತ ಜನರು ದೇವರ ಕುರಿತು ತಿಳಿದುಕೊಳ್ಳಲೆಂದು ದುಡಿಯುತ್ತಿರುವ ಮುದ್ರಣಾಲಯ

ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ಲೋಕದಾದ್ಯಂತ ಜನರು ಓದುತ್ತಾರೆ. ಈಗ ನೀವು ಓದುತ್ತಿರುವಂತೆ ಈ ಸಾಹಿತ್ಯವನ್ನು ಲಕ್ಷಾಂತರ ಜನರು ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಓದುತ್ತಾರೆ. ಆದರೆ ಇದರಿಂದ ನಮ್ಮ ಮುದ್ರಣ ಕೆಲಸ ಕಡಿಮೆಯಾಗದೆ ಇನ್ನೂ ಹೆಚ್ಚಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. 2013ರಷ್ಟಕ್ಕೆ ಸುಮಾರು 700 ಭಾಷೆಗಳಲ್ಲಿ ಬೈಬಲಾಧರಿತ ಪ್ರಕಾಶನಗಳು ಪ್ರಕಟಿಸಲ್ಪಟ್ಟಿವೆ ಮತ್ತು 239 ದೇಶಗಳಲ್ಲಿ ಅವುಗಳನ್ನು ವಿತರಿಸಲಾಗಿದೆ.

ಮೊದಲು ನಮ್ಮ ಮುದ್ರಣ ಕೆಲಸವನ್ನು ಖಾಸಗಿ ಕಂಪನಿಗಳಿಂದ ಮಾಡಿಸಲಾಗುತ್ತಿತ್ತು. ಆದರೆ 1920ರಿಂದ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಸಣ್ಣದೊಂದು ಜಾಗವನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ನಮ್ಮ ಕೆಲವು ಪತ್ರಿಕೆಗಳನ್ನು ಮತ್ತು ಪುಸ್ತಿಕೆಗಳನ್ನು ಮುದ್ರಿಸಲು ಆರಂಭಿಸಲಾಯಿತು. ಹಾಗೇ ಚಿಕ್ಕದಾಗಿ ಆರಂಭಿಸಿ ಈಗ ಆಫ್ರಿಕ, ಏಷಿಯಾ, ಆಸ್ಟ್ರೇಲಿಯ, ಯುರೋಪ್‌, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಹೀಗೆ ಸುಮಾರು 15 ಕಡೆಗಳಲ್ಲಿ ಮುದ್ರಣ ಕಾರ್ಯವನ್ನು ಮಾಡಲಾಗುತ್ತಿದೆ.

ಅತೀ ಪ್ರಾಮುಖ್ಯ ಪುಸ್ತಕ

ನಾವು ಮುದ್ರಿಸುವ ಪುಸ್ತಕಗಳಲ್ಲೇ ಅತೀ ಪ್ರಾಮುಖ್ಯವಾದ ಪುಸ್ತಕ ಬೈಬಲ್‌. ನಮ್ಮ ಮುದ್ರಣಾಲಯದಿಂದ ಮೊದಲ ಬಾರಿಗೆ ಸಂಪೂರ್ಣ ಬೈಬಲ್‌ ಹೊರಬಂದದ್ದು 1942ರಲ್ಲಿ. ಅದು ಕಿಂಗ್‌ ಜೇಮ್ಸ್‌ ವರ್ಷನ್‌ನ ಇಂಗ್ಲಿಷ್‌ ಪ್ರತಿಯಾಗಿತ್ತು. 1961ರಿಂದ ಯೆಹೋವನ ಸಾಕ್ಷಿಗಳು ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರವನ್ನು ಸಂಪೂರ್ಣವಾಗಿ ಭಾಷಾಂತರಿಸಿ, ಒಂದೇ ಸಂಪುಟದಲ್ಲಿ ಪ್ರಕಟಿಸುತ್ತಿದ್ದಾರೆ. 2013ರಷ್ಟಕ್ಕೆ ನಾವು 121 ಭಾಷೆಗಳಲ್ಲಿ 18 ಕೋಟಿ 40 ಲಕ್ಷ ಬೈಬಲ್‌ಗಳನ್ನು ತಯಾರಿಸಿದ್ದೇವೆ.

ನಮ್ಮ ಮುದ್ರಣದ ಕಾರ್ಯ ವೈಖರಿ ಕೇವಲ ಅಂಕಿ ಅಂಶಗಳಲ್ಲಿ ಮಾತ್ರವೇ ಅಲ್ಲ, ಬೈಬಲ್‌ ತಯಾರಿಕೆಯಲ್ಲಾದ ಪ್ರಯತ್ನಗಳಲ್ಲೂ ಎದ್ದು ಕಾಣುತ್ತದೆ. ನಾವು ತಯಾರಿಸುವಂಥ ಬೈಬಲ್‌ ತುಂಬಾ ಬಾಳಿಕೆ ಬರುವಂಥದ್ದು. ಅದರ ಪುಟಗಳು ಆ್ಯಸಿಡ್‌ ಮುಕ್ತ ಪೇಪರ್‌ಗಳಾಗಿದ್ದು ಅವು ಹಳದಿ ಬಣ್ಣಕ್ಕೆ ತಿರುಗುವುದಿಲ್ಲ. ಅಲ್ಲದೇ, ಈ ಪುಟಗಳು ಸುಲಭವಾಗಿ ಕಿತ್ತು ಬರುವುದಿಲ್ಲ. ಹಾಗಾಗಿ, ದಿನನಿತ್ಯದ ಬಳಕೆಯಲ್ಲಿ ಎಷ್ಟೇ ಉಪಯೋಗಿಸಿದರು ನಮ್ಮ ಬೈಬಲ್‌ ಹೆಚ್ಚು ಬಾಳಿಕೆ ಬರುತ್ತದೆ.

ಇತರ ಪ್ರಕಾಶನಗಳು

ಜನರು ಬೈಬಲನ್ನು ಅರ್ಥಮಾಡಿಕೊಳ್ಳುವಂತೆ ನೆರವಾಗುವ ಪ್ರಕಾಶನಗಳನ್ನು ಸಹ ನಾವು ಮುದ್ರಿಸುತ್ತೇವೆ. 2013ರಿಂದ ಮುದ್ರಣವಾದ ಕೆಲವೊಂದು ಪ್ರಕಾಶನಗಳ ಅಂಕಿಅಂಶಗಳನ್ನು ಪರಿಗಣಿಸಿ:

  • ಕಾವಲಿನಬುರುಜು – ಇದು ನಮ್ಮ ಪ್ರಮುಖ ಪತ್ರಿಕೆ. 210ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರಕಟಗೊಳ್ಳುತ್ತದೆ ಮತ್ತು ಪ್ರಪಂಚದ ಅತೀ ಹೆಚ್ಚು ಭಾಗಗಳಿಗೆ ವಿತರಣೆಯಾಗುತ್ತಿದೆ. 16 ಪುಟಗಳ ಪ್ರತಿಯೊಂದು ಸಂಚಿಕೆಯು ಸುಮಾರು 4 ಕೋಟಿ 50 ಲಕ್ಷದಷ್ಟು ಮುದ್ರಣವಾಗುತ್ತಿವೆ.

  • ಎಚ್ಚರ! – ಇದು ಕಾವಲಿನಬುರುಜು ಪತ್ರಿಕೆಯ ಸಂಗಾತಿ ಪತ್ರಿಕೆಯಾಗಿದ್ದು, ವಿತರಣೆಯಲ್ಲಿ ಎರಡನೇ ಸ್ಥಾನದಲ್ಲಿದೆ. 99 ಭಾಷೆಗಳಲ್ಲಿ ಮುದ್ರಣವಾಗುತ್ತದೆ. ಪ್ರತಿಯೊಂದು ಸಂಚಿಕೆಯು ಸುಮಾರು 4 ಕೋಟಿ 40 ಲಕ್ಷದಷ್ಟು ಮುದ್ರಣವಾಗುತ್ತಿವೆ.

  • ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? – ಇದು 224 ಪುಟಗಳ ಒಂದು ಪುಸ್ತಕ. ಓದುಗರಿಗೆ ಬೈಬಲಿನ ಮೂಲಭೂತ ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವಂತೆ ಈ ಪುಸ್ತಕವನ್ನು ವಿನ್ಯಾಸಿಸಲಾಗಿದೆ. 2005ರಿಂದ 240ಕ್ಕೂ ಹೆಚ್ಚು ಭಾಷೆಗಳಲ್ಲಿ 21ಕೋಟಿ 40 ಲಕ್ಷಕ್ಕಿಂತಲೂ ಹೆಚ್ಚಿನ ಪ್ರತಿಗಳನ್ನು ಮುದ್ರಿಸಲಾಯಿತು.

  • ದೇವರ ಮಾತನ್ನು ಆಲಿಸಿ – ಇದು 32 ಪುಟಗಳ ಒಂದು ಕಿರುಹೊತ್ತಗೆ. ಯಾರಿಗೆ ಅಷ್ಟಾಗಿ ಓದಲು ಬರುವುದಿಲ್ಲವೋ ಅಂಥವರಿಗೆ ಸಹಾಯವಾಗುವಂಥ ರೀತಿಯಲ್ಲಿ ಇದನ್ನು ವಿನ್ಯಾಸಿಸಲಾಗಿದೆ. ಇದರಲ್ಲಿ ಬೈಬಲಿನ ಸರಳವಾದ ಸತ್ಯಗಳನ್ನು, ಸುಂದರವಾಗಿ ದೃಷ್ಟಾಂತಿಸಲಾಗಿದೆ ಮತ್ತು ಚಿಕ್ಕದಾದ ವಿವರಣೆ ಕೊಡಲಾಗಿದೆ. 400ಕ್ಕೂ ಹೆಚ್ಚು ಭಾಷೆಗಳಲ್ಲಿ ಇದನ್ನು 40 ಕೋಟಿ 20 ಲಕ್ಷಕ್ಕಿಂತಲೂ ಹೆಚ್ಚಿನ ಪ್ರತಿಗಳನ್ನು ಮುದ್ರಿಸಲಾಯಿತು.

ಈ ಪ್ರಕಾಶನಗಳ ಜೊತೆಗೆ ಯೆಹೋವನ ಸಾಕ್ಷಿಗಳು ವಿಭಿನ್ನವಾದ ಪುಸ್ತಕಗಳನ್ನು, ಕಿರುಹೊತ್ತಗೆಗಳನ್ನು ಮತ್ತು ಟ್ರ್ಯಾಕ್ಟ್‌ಗಳನ್ನು ಮುದ್ರಿಸುತ್ತಾರೆ. ಇವು ಬೈಬಲ್‌ ವಿದ್ಯಾರ್ಥಿಗಳಿಗೆ ಬೈಬಲ್‌ ಪ್ರಶ್ನೆಗಳ ಕುರಿತು ಸಂಶೋಧಿಸಲು, ಜೀವನದ ಜಂಜಾಟಗಳನ್ನು ನಿಭಾಯಿಸಲು ಮತ್ತು ಸಂತೋಷದ ಕುಟುಂಬವನ್ನು ಕಟ್ಟಲು ನೆರವಾಗುತ್ತವೆ. ಯೆಹೋವನ ಸಾಕ್ಷಿಗಳ ಮುದ್ರಣಾಲಯ 2012ರಲ್ಲಿ 130 ಕೋಟಿಗಿಂತಲೂ ಹೆಚ್ಚು ಪತ್ರಿಕೆಗಳನ್ನು ಮತ್ತು 8 ಕೋಟಿಗಿಂತಲೂ ಹೆಚ್ಚು ಪುಸ್ತಕಗಳನ್ನು ಹಾಗೂ ಬೈಬಲ್‌ಗಳನ್ನು ಮುದ್ರಿಸಿದೆ.

ಯೆಹೋವನ ಸಾಕ್ಷಿಗಳ ಮುದ್ರಣಾಲಯದಿಂದ 2012ರಲ್ಲಿ 130 ಕೋಟಿ ಪತ್ರಿಕೆಗಳು ಮತ್ತು 80 ಕೋಟಿ ಪುಸ್ತಕಗಳು ಹಾಗೂ ಬೈಬಲ್‌ಗಳು ತಯಾರಾದವು.

ನಮ್ಮ ಮುದ್ರಣಾಲಯವನ್ನು ನೋಡಲು ಬರುವಂಥ ಸಂದರ್ಶಕರು ಸಾಹಿತ್ಯ ತಯಾರಿಕೆಯಲ್ಲಿ ಶ್ರಮಪಟ್ಟು ಕೆಲಸ ಮಾಡುವ ಸ್ವಯಂಸೇವಕರನ್ನು ನೋಡಿ ಮೂಕವಿಸ್ಮಿತರಾಗುತ್ತಾರೆ. ಮುದ್ರಣಾಲಯದಲ್ಲಿ ಕೆಲಸ ಮಾಡುವ ಸ್ತ್ರೀ, ಪುರುಷರು ತಮ್ಮ ಸಮಯ ಮತ್ತು ಶಕ್ತಿಯನ್ನು ಮುದ್ರಣ ಕೆಲಸಕ್ಕಾಗಿ ನೀಡಿಕೊಳ್ಳುತ್ತಿದ್ದಾರೆ. ಹೀಗೆ ತಮ್ಮನ್ನೇ ನೀಡಿಕೊಳ್ಳುತ್ತಿರುವ ಇವರಿಗೆ “ದೇವರ ಮನೆ” ಎಂಬ ಅರ್ಥವಿರುವ ಬೆತೆಲಿಗೆ ಬರುವಾಗ ಮುದ್ರಣದ ಕೆಲಸದಲ್ಲಿ ಯಾವುದೇ ಅನುಭವವಿರುವುದಿಲ್ಲ. ಹಾಗಿದ್ದರೂ, ಬೆತೆಲಿನಲ್ಲಿ ಸಿಗುವ ತರಬೇತಿ, ಜೊತೆಗೆ ಕೆಲಸದ ಸ್ಥಳದ ವಾತಾವರಣದಿಂದಾಗಿ ಉತ್ತಮ ಫಲಿತಾಂಶ ಸಿಗುತ್ತದೆ. ಉದಾಹರಣೆಗೆ, ಹೆಚ್ಚು ವೇಗವಾಗಿ ಮುದ್ರಿಸುವಂಥ ಯಂತ್ರಗಳನ್ನು ಉಪಯೋಗಿಸಿ 16 ಪುಟಗಳ ಪತ್ರಿಕೆಗಳನ್ನು ಗಂಟೆಗೆ 2 ಲಕ್ಷದಷ್ಟು ಮುದ್ರಿಸಲಾಗುತ್ತದೆ. ಅಂಥ ಯಂತ್ರಗಳನ್ನು 20ರ ಯುವಕರು ಚಲಾಯಿಸುವುದು ಅಲ್ಲಿ ಸಾಮಾನ್ಯವಾಗಿರುತ್ತದೆ.

ಇದಕ್ಕೆಲ್ಲಾ ಹಣ ಎಲ್ಲಿಂದ ಬರುತ್ತದೆ?

ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸ ಸ್ವಯಂಪ್ರೇರಿತ ದಾನಗಳಿಂದ ನಡೆಯುತ್ತದೆ. ಈಗ ವಾಚ್‌ಟವರ್‌ ಎಂದು ಕರೆಯುವ ಪತ್ರಿಕೆಯನ್ನು ಮೊದಲು ಝಯನ್ಸ್‌ ವಾಚ್‌ ಟವರ್‌ ಎಂದು ಕರೆಯಲಾಗುತ್ತಿತ್ತು. ಆ ಪತ್ರಿಕೆಯ 1879ರ ಆಗಸ್ಟ್‌ ಸಂಚಿಕೆಯಲ್ಲಿ ಹೀಗಿತ್ತು: “‘ಝಯನ್ಸ್‌ ವಾಚ್‌ ಟವರ್‌ಗೆ’ ಬೆಂಬಲ ನೀಡುತ್ತಿರುವುದು ಯೆಹೋವ ದೇವರೆಂದು ನಾವು ನಂಬುತ್ತೇವೆ. ಹಾಗಾಗಿ ಯಾವುದೇ ಕಾರಣಕ್ಕೂ ಮಾನವರ ಮುಂದೆ ಕೈ ಚಾಚುವುದಿಲ್ಲ.” ಇಂದಿಗೂ ಈ ಮಾತು ಸತ್ಯವಾಗಿದೆ.

ಈ ಕೆಲಸಕ್ಕಾಗಿ ನಾವು ಯಾಕೆ ಇಷ್ಟೊಂದು ಸಮಯ, ಹಣ ಮತ್ತು ಶಕ್ತಿಯನ್ನು ವ್ಯಯಿಸುತ್ತೇವೆ? ಯಾಕೆಂದರೆ, ನೀವು ನಮ್ಮಿಂದ ಮುದ್ರಿಸಲ್ಪಡುವ ಕೋಟ್ಯಾಂತರ ಬೈಬಲ್‌ಗಳಲ್ಲಿ ಮತ್ತು ಪುಸ್ತಕಗಳಲ್ಲಿ ಯಾವುದನ್ನೇ ಓದಿ ಅಥವಾ ಆನ್‌ಲೈನ್‌ ಮೂಲಕವಾದರೂ ಓದಿ, ದೇವರ ಸಮೀಪಕ್ಕೆ ಬರಲು ಅವು ನಿಮಗೆ ನೆರವಾಗುತ್ತವೆಂಬುದು ನಮ್ಮ ನಿರೀಕ್ಷೆ.