ಮಾಹಿತಿ ಇರುವಲ್ಲಿ ಹೋಗಲು

135ನೇ ಗಿಲ್ಯಡ್‌ ಶಾಲೆಯ ಪದವಿ ಪ್ರದಾನ ಸಮಾರಂಭ

135ನೇ ಗಿಲ್ಯಡ್‌ ಶಾಲೆಯ ಪದವಿ ಪ್ರದಾನ ಸಮಾರಂಭ

ಸೆಪ್ಟೆಂಬರ್‌ 14, 2013ರಂದು ನಡೆದ 135ನೇ ಗಿಲ್ಯಡ್‌ ಶಾಲೆಯ ಪದವಿಪ್ರದಾನ ಕಾರ್ಯಕ್ರಮಕ್ಕೆ ಸುಮಾರು 10,500 ಮಂದಿ ಹಾಜರಿದ್ದರು. ಇದು ನ್ಯೂ ಯಾರ್ಕ್‌ನ ಪ್ಯಾಟರ್ಸನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಎಜ್ಯುಕೇಷನಲ್‌ ಸೆಂಟರ್‌ನಲ್ಲಿ ನಡೆಯಿತು. ಈ ಶಾಲೆಯಲ್ಲಿ ಯೆಹೋವನ ಸಾಕ್ಷಿಗಳ ಅನುಭವಿ ಪ್ರಚಾರಕರಿಗೆ ತಮ್ಮ ನೇಮಕಗಳನ್ನು ಇನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಲು ತರಬೇತಿ ನೀಡಲಾಗುತ್ತದೆ.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಗೈ ಪಿಯರ್ಸ್‌ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ, “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ, . . . ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ” ಎಂಬ ಮತ್ತಾಯ 28:19, 20​ರಲ್ಲಿರುವ ವಿಷಯವನ್ನಾಧರಿಸಿ ಮಾತಾಡಿದರು.

ಯೇಸುವಿನ ಈ ಮಾತುಗಳು ಇಂದಿಗೂ ನೆರವೇರುತ್ತಿವೆ ಎಂದು ಸಹೋದರ ಪಿಯರ್ಸ್‌ ತಿಳಿಸಿದರು. ಜನರನ್ನು ನಾವು ಶಿಷ್ಯರನ್ನಾಗಿ ಮಾಡುವಾಗ ಯೇಸು ಹೇಳಿದ ಎಲ್ಲಾ ಆಜ್ಞೆಗಳನ್ನು ಪಾಲಿಸುವಂತೆ ಅವರಿಗೆ ಕಲಿಸುತ್ತೇವೆ. ಆ ಆಜ್ಞೆಗಳಲ್ಲಿ ‘ರಾಜ್ಯದ ಸುವಾರ್ತೆಯನ್ನು’ ಸಾರುವುದೂ ಸೇರಿದೆ. (ಮತ್ತಾಯ 24:14) ಹೀಗೆ ಪ್ರತಿಯೊಬ್ಬ ಶಿಷ್ಯನು ರಾಜ್ಯದ ಪ್ರಚಾರಕನೂ ಬೋಧಕನೂ ಆಗುತ್ತಾನೆ. ಇದರ ಪರಿಣಾಮವೇನು? ಸಹೋದರ ಪಿಯರ್ಸ್‌ ಹೇಳಿದ್ದು: “ಪ್ರಪಂಚದ ಜನಸಂಖ್ಯೆ ಹೆಚ್ಚಿದಂತೆಯೇ ದೇವ ಜನರ ಸಂಖ್ಯೆ ಸಹ ಹೆಚ್ಚುತ್ತಿದೆ.”

“ಅವರು ತಮ್ಮ ಸಾಮರ್ಥ್ಯಕ್ಕೂ ಮೀರಿ ಕೊಟ್ಟರು.” ಅಮೆರಿಕದ ಬ್ರಾಂಚ್‌ ಕಮಿಟಿಯ ಸದಸ್ಯರಾದ ಥಾಮಸ್‌ ಚೀಕೀ 2 ಕೊರಿಂಥ 8:1-4​ರಲ್ಲಿರುವ ವಿಷಯವನ್ನಾಧರಿಸಿ ಭಾಷಣ ಮಾಡಿದರು. ಮೊದಲನೆ ಶತಮಾನದಲ್ಲಿದ್ದ ಮಕೆದೋನ್ಯದ ಸಭೆಗಳವರು ಕಡು ಬಡವರಾಗಿದ್ದರೂ, ಯೆರೂಸಲೇಮಿನಲ್ಲಿ ಕಷ್ಟದಲ್ಲಿದ್ದ ಸಹೋದರರಿಗೆ ಸಹಾಯ ಮಾಡಲು ತಮಗೂ ಅವಕಾಶ ಕೊಡಬೇಕೆಂದು ಬೇಡಿಕೊಂಡರು. ಗಿಲ್ಯಡ್‌ ವಿದ್ಯಾರ್ಥಿಗಳು ಸಹ ಅವರಂತೆಯೇ ಉದಾರತೆ ಮತ್ತು ಸ್ವತ್ಯಾಗದ ಗುಣವನ್ನು ತೋರಿಸಿದ್ದಾರೆ ಎಂದವರು ಹೇಳಿದರು.

ಮಕೆದೋನ್ಯದವರು ವಿವೇಕಿಗಳಾಗಿದ್ದರು. ಯಾಕೆಂದರೆ ಅವರು ತಮ್ಮ ಕುಟುಂಬಕ್ಕೆ ಅಥವಾ ದೇವರ ಆರಾಧನೆಗಾಗಿ ಉಪಯೋಗಿಸಲು ಏನೂ ಉಳಿಯದಷ್ಟು ಖಂಡಿತ ಕೊಡಲಿಲ್ಲ. ಅವರನ್ನು ಅನುಕರಿಸುತ್ತಾ ಕೊಡುವ ವಿಷಯದಲ್ಲಿ ಸಮತೂಕದ ನೋಟವನ್ನು ಕಾಪಾಡಿಕೊಳ್ಳುವಂತೆ ಸಹೋದರ ಚೀಕೀ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

“ಶಾಲೆ ಮುಗಿದಿದೆ.” ಆಡಳಿತ ಮಂಡಲಿಯ ಸದಸ್ಯರಾದ ಸ್ಯಾಮುವೇಲ್‌ ಹರ್ಡ್‌ ವಿದ್ಯಾರ್ಥಿಗಳು ಈ ಗಿಲ್ಯಡ್‌ ಶಾಲೆಯಲ್ಲಿ ತಮಗಾದ ಅನುಭವಗಳನ್ನು ಯಾಕೆ ಯಾವಾಗಲೂ ನೆನಪಿನಲ್ಲಿಡಬೇಕೆಂದು ತಿಳಿಸಿದರು. ಬೆಳಿಗ್ಗೆ ಎದ್ದ ಕೂಡಲೇ ಸಂಗೀತವನ್ನು ಕೇಳಿದರೆ ಅದು ಹೇಗೆ ಇಡೀ ದಿನ ನಮ್ಮ ಮನಸ್ಸಿನಲ್ಲಿರುತ್ತದೋ ಅದೇ ರೀತಿ ಗಿಲ್ಯಡ್‌ನ ನೆನಪುಗಳು ಶಾಲೆ ಮುಗಿದು ಎಷ್ಟೇ ವರ್ಷಗಳಾದರೂ ಮನಸ್ಸಿನಲ್ಲಿ ಅಚ್ಚಳಿಯದೆ ಇರಬೇಕು, ಅವು ವಿದ್ಯಾರ್ಥಿಗಳಿಗೆ ಬಲ ಶಕ್ತಿಯನ್ನು ಕೊಡುತ್ತವೆ ಎಂದು ಅವರು ಹೇಳಿದರು.

ಯೆಹೋವನ ನೆನಪಿನ ಶಕ್ತಿ ಅಪಾರ ಎನ್ನುವುದನ್ನು ಸಹೋದರ ಹರ್ಡ್‌ ವಿದ್ಯಾರ್ಥಿಗಳಿಗೆ ನೆನಪಿಸಿದರು. ಇಡೀ ಪ್ರಪಂಚದಲ್ಲಿರುವ ಕೋಟ್ಯಾನುಕೋಟಿ ನಕ್ಷತ್ರಗಳಲ್ಲಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ ಮತ್ತು ಆತನು ಅದರಲ್ಲಿ ಒಂದನ್ನೂ ಮರೆಯುವುದಿಲ್ಲ. (ಕೀರ್ತನೆ 147:4) ಅವುಗಳನ್ನೇ ಮರೆಯುವುದಿಲ್ಲ ಎಂದ ಮೇಲೆ ಗಿಲ್ಯಡ್‌ ತರಬೇತಿಯಲ್ಲಿ ವಿದ್ಯಾರ್ಥಿಗಳು ಹಾಕುವ ಪ್ರಯತ್ನವನ್ನು ಆತನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವನು ಅನ್ನುವುದಂತೂ ಖಂಡಿತ. ಈ ವಿದ್ಯಾರ್ಥಿಗಳು ‘ಸ್ವರ್ಗದಲ್ಲಿ ಸಂಪತ್ತನ್ನು ಕೂಡಿಸಿಟ್ಟುಕೊಂಡಿದ್ದಾರೆ.’ ಅವರ ಬಗ್ಗೆ ಯೆಹೋವನ ನೆನಪಿನಲ್ಲಿರುವ ಅಮೂಲ್ಯ ವಿಷಯಗಳನ್ನು ಯಾರಿಂದಲೂ ಕದಿಯಲು ಅಥವಾ ಅಳಿಸಿ ಹಾಕಲು ಸಾಧ್ಯವಿಲ್ಲ.​—ಮತ್ತಾಯ 6:20.

ಗಿಲ್ಯಡ್‌ ಶಾಲೆ ನಿಮ್ಮ ಜೀವನದ ಒಂದು ಸವಿನೆನಪಾಗಿರಲಿ. ಯಾಕೆಂದರೆ ಇಲ್ಲಿ ನೀವು ಮಾಡಿದ್ದನ್ನು ಮತ್ತು ಯೆಹೋವನಿಗೆ ತೋರಿಸಿದ ಪ್ರೀತಿಯನ್ನು ಆತನು ಮರೆಯುವುದಿಲ್ಲ. ಈ ವಿಷಯಗಳೆಲ್ಲಾ ನಿಮ್ಮ ನೆನಪಿಗೆ ಬಂದು ಅದರಿಂದ ನಿಮಗೆ ಉತ್ತೇಜನ ಸಿಕ್ಕಿದಾಗೆಲ್ಲಾ ಮರೆಯದೇ ಯೆಹೋವನಿಗೆ ಕೃತಜ್ಞತೆ ತಿಳಿಸಿ. ಇಲ್ಲಿ ನೀವು ಕಲಿತ ವಿಷಯಗಳನ್ನು ನೆನಪಿಸಿಕೊಳ್ಳುತ್ತಾ ಇದ್ದರೆ ಪ್ರತಿ ಸಂದರ್ಭದಲ್ಲಿ ಪ್ರಯೋಜನ ಸಿಗುತ್ತದೆ.

“ಯೆಹೋವನ ಅಪಾರ ಶಕ್ತಿಯ ಸಹಾಯ ಪಡೆಯಿರಿ.” ಗಿಲ್ಯಡ್‌ ಶಾಲೆಯ ಬೋಧಕರಾದ ಸ್ಯಾಮ್‌ ರಾಬರ್‌ಸನ್‌ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುವಾಗ ಸ್ವಂತ ಬುದ್ಧಿಯಿಂದ ಅದನ್ನು ಸರಿಪಡಿಸಲು ಪ್ರಯತ್ನಿಸದೆ ಯೆಹೋವನ ಶಕ್ತಿಯನ್ನು ಅವಲಂಬಿಸಬೇಕು. ದೇವರು ‘ನಾವು ಬೇಡುವುದಕ್ಕಿಂತಲೂ ಗ್ರಹಿಸುವುದಕ್ಕಿಂತಲೂ ಎಷ್ಟೋ ಮಿಗಿಲಾದದ್ದನ್ನು ಅತ್ಯಧಿಕವಾಗಿ ಮಾಡಶಕ್ತನಾಗಿದ್ದಾನೆ’ ಎಂದು ಎಫೆಸ 3:20 ತಿಳಿಸುತ್ತದೆ. ಆತನ ಶಕ್ತಿ ನಮ್ಮ ಊಹೆಗೆ ನಿಲುಕದ್ದು. ಆದ್ದರಿಂದ ನಾವು ‘ಗ್ರಹಿಸುವುದಕ್ಕಿಂತಲೂ ಎಷ್ಟೋ ಮಿಗಿಲಾದದ್ದು’ ಎಂದು ಈ ವಚನದಲ್ಲಿ ತಿಳಿಸಲಾಗಿದೆ. ಆದರೆ ಈ ಪದಗಳಲ್ಲಿ ಸಹ ಯೆಹೋವನ ಶಕ್ತಿಯನ್ನು ಸಂಪೂರ್ಣವಾಗಿ ವರ್ಣಿಸಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದಲೇ ಅಲ್ಲಿ ಅತ್ಯಧಿಕ ಎಂಬ ಇನ್ನೊಂದು ಪದವನ್ನು ಬಳಸಲಾಗಿದೆ.

ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೆ ತನ್ನ ಶಕ್ತಿಯನ್ನು ಕೊಡುತ್ತಾನೆ. ಕಷ್ಟದಲ್ಲಿರುವಾಗ ‘ಶೂರನಂತೆ’ ಅಥವಾ ಬಲಶಾಲಿ ಸೈನಿಕನಂತೆ ನಮಗೆ ಸಹಾಯ ಮಾಡುತ್ತಾನೆ. (ಯೆರೆಮೀಯ 20:11) ಯಾವುದೇ ಕಷ್ಟ ಅಥವಾ ಸಮಸ್ಯೆ ಎದುರಾದರೂ ಅದನ್ನು ಎದುರಿಸಲು ಯೆಹೋವನು ಖಂಡಿತ ಸಹಾಯ ಮಾಡುತ್ತಾನೆ ಎಂದು ಸಹೋದರ ರಾಬರ್‌ಸನ್‌ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

“ರಾಜ್ಯ ಸೇವೆಯಲ್ಲಿ ನಿಮಗಿರುವ ಹೆಸರನ್ನು ಕಾಪಾಡಿಕೊಳ್ಳಿ.” ಗಿಲ್ಯಡ್‌ ಬೋಧಕರಾದ ವಿಲ್ಯಮ್‌ ಸ್ಯಾಮುವೇಲ್‌ ಸನ್‌ ಗಿಲ್ಯಡ್‌ ವಿದ್ಯಾರ್ಥಿಗಳು ಎರಡು ವಿಷಯಗಳನ್ನು ಮಾಡುವ ಮೂಲಕ ಹೆಸರನ್ನು ಪಡೆದಿದ್ದಾರೆ ಎಂದರು. ಮೊದಲನೆಯದಾಗಿ, ಈ ಶಾಲೆಗೆ ಬರುವ ಮುಂಚಿನಿಂದ ಹಿಡಿದು ಶಾಲೆಯ ಸಮಯದುದ್ದಕ್ಕೂ ತಾವು ಮಾಡಿದ ರಾಜ್ಯ ಕೆಲಸದ ಮೂಲಕ. ಎರಡನೆಯದಾಗಿ, ವಿಶ್ವದಲ್ಲೇ ಉನ್ನತ ಸರಕಾರವಾದ ದೇವರ ರಾಜ್ಯವನ್ನು ಪ್ರತಿನಿಧಿಸುತ್ತಾ ಮುಂದುವರಿಯುವ ಮೂಲಕ ಹೆಸರು ಪಡೆದಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಹೆಸರನ್ನು ಹೇಗೆ ಕಾಪಾಡಿಕೊಳ್ಳಬಹುದು? ಸಹೋದರ ಸ್ಯಾಮುವೇಲ್‌ ಸನ್‌, ವಿದ್ಯಾರ್ಥಿಗಳು ಯೆಹೋವನಿಗೆ ಆಳವಾದ ಗೌರವ ತೋರಿಸುವ ಮೂಲಕ ಮತ್ತು ಯೇಸುವಿನಂತೆ ಇತರರನ್ನು ಗೌರವಿಸುವ ಮೂಲಕ ತಮ್ಮ ಹೆಸರನ್ನು ಕಾಪಾಡಿಕೊಳ್ಳಬೇಕೆಂದು ಉತ್ತೇಜಿಸಿದರು. ಯೇಸು ಇತರರನ್ನು ತಿದ್ದಬೇಕಾದ ಸಂದರ್ಭದಲ್ಲಿ ಸಹ ಅವರೊಂದಿಗೆ ಗೌರವಯುತವಾಗಿ ವ್ಯವಹರಿಸಿದನು. ಹೀಗೆ ಮಾಡಿದರೆ ವಿದ್ಯಾರ್ಥಿಗಳು ಏನನ್ನು ಸಾಧಿಸುತ್ತಾರೆ? ಸ್ವತಃ ತಮ್ಮನ್ನಲ್ಲ ಬದಲಿಗೆ ಪೌಲನಂತೆ ಶುಶ್ರೂಷೆಯನ್ನು ಮಹಿಮೆಪಡಿಸುವ ಮೂಲಕ ತಮ್ಮ ಹೆಸರನ್ನು ಕಾಪಾಡಿಕೊಳ್ಳುತ್ತಾರೆ.—ರೋಮನ್ನರಿಗೆ 11:13.

“ಕುದುರೆಗಳ ಅಧಿಕಾರವು ಅವುಗಳ ಬಾಯಿಗಳಲ್ಲಿ ಇದೆ.” ಕ್ರೈಸ್ತ ಕೂಟಗಳಲ್ಲಿ ಕಲಿತಿದ್ದನ್ನು ಅನ್ವಯಿಸುತ್ತಾ ನಾವು ಅಧಿಕಾರದಿಂದ ಅಂದರೆ ಧೈರ್ಯದಿಂದ ಸಾರುವಾಗ ಪ್ರಕಟನೆ 9:19​ರಲ್ಲಿರುವ ಮಾತಿಗೆ ಹೊಂದಿಕೆಯಲ್ಲಿ ನಡೆಯುತ್ತೇವೆ. ಅದು ಹೇಗೆಂದು ಗಿಲ್ಯಡ್‌ ಶಾಲೆಯ ಇನ್ನೊಬ್ಬ ಬೋಧಕರಾದ ಮೈಕಲ್‌ ಬರ್ನೆಟ್‌ ವಿವರಿಸಿದರು. ನಂತರ ಗಿಲ್ಯಡ್‌ ಶಾಲೆ ನಡೆದ ದಿನಗಳಲ್ಲಿ ತಮಗೆ ಸೇವೆಯಲ್ಲಿ ದೊರೆತ ಅನುಭವಗಳನ್ನು ವಿದ್ಯಾರ್ಥಿಗಳು ವಿವರಿಸುವಾಗ ಅಥವಾ ಪುನರಭಿನಯಿಸುವಾಗ ಅವರೊಂದಿಗೆ ಜೊತೆಗೂಡಿದರು. ಉದಾಹರಣೆಗೆ ಒಂದು ಪುನರಭಿನಯದಲ್ಲಿ, ಒಬ್ಬ ವಿದ್ಯಾರ್ಥಿ ಪೆಟ್ರೋಲ್‌ ಬಂಕಿನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಗೆ, “ಅನ್ಯಜನಾಂಗಗಳ ನೇಮಿತ ಕಾಲ ಯಾವಾಗ ಆರಂಭವಾಯಿತು ಮತ್ತು ಅದು ಯಾವಾಗ ಮುಗಿಯುತ್ತದೆ” ಎಂದು ಕೇಳುವ ಮೂಲಕ ಅವನ ಆಸಕ್ತಿಯನ್ನು ಕೆರಳಿಸಿದನು. (ಲೂಕ 21:24) ಮುಂದಿನ ಭೇಟಿಯಲ್ಲಿ ಸಹೋದರನು ದಾನಿಯೇಲ ಪುಸ್ತಕದ 4ನೇ ಅಧ್ಯಾಯ ಮತ್ತು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪರಿಶಿಷ್ಟವನ್ನು ಉಪಯೋಗಿಸುತ್ತಾ ಅವನಿಗೆ ಉತ್ತರ ತಿಳಿದುಕೊಳ್ಳಲು ಸಹಾಯ ಮಾಡಿದನು.

“ಅವರು ಹೃದಯಗಳನ್ನು ದೃಢಪಡಿಸಿಕೊಂಡಿದ್ದಾರೆ.” ಅಮೆರಿಕಾದ ಬ್ರಾಂಚ್‌ ಕಮಿಟಿಯ ಸದಸ್ಯರಾದ ಏಡ್ರಿಯನ್‌ ಫೆರ್ನಾಂಡಿಸ್‌ ವಿದ್ಯಾರ್ಥಿಗಳಲ್ಲಿ ಇಬ್ಬರು ದಂಪತಿಗಳ ಸಂದರ್ಶನ ಮಾಡಿದರು. ಸಹೋದರ ಹೆಲ್ಗ ಶೂಮಿ, ದೇವ ಜನರಲ್ಲಿ ಕೆಲವರು ನೇಮಕಗಳು ದೊರೆತ ನಂತರ ಅಹಂಕಾರಿಗಳಾದರೆಂದು ಅನೇಕ ಬೈಬಲ್‌ ವೃತ್ತಾಂತಗಳು ತೋರಿಸುತ್ತವೆ. ಆದ್ದರಿಂದ ಅಹಂಕಾರಿಗಳಾಗಬಾರದೆಂದು ಗಿಲ್ಯಡ್‌ ತರಬೇತಿಯಲ್ಲಿ ಆಗಾಗ ಸಲಹೆ ಸಿಗುತ್ತಿತ್ತು ಎಂದರು. (2 ಪೂರ್ವಕಾಲವೃತ್ತಾಂತ 26:16) “ನಿಮ್ಮನ್ನು ನೀವು ತಗ್ಗಿಸಿಕೊಳ್ಳಿ” ಎಂದು ಗಿಲ್ಯಡ್‌ ಉಪನ್ಯಾಸವೊಂದರಲ್ಲಿ ಕೊಡಲಾದ ನಿರ್ದೇಶನವನ್ನು ಸಹೋದರ ಪೀಟರ್‌ ಕ್ಯಾನಿಂಗ್‌ ನೆನಪಿಸಿಕೊಂಡರು. ಆ ನಾಲ್ವರೂ ತರಬೇತಿಯಿಂದ ತಮಗಿರುವ ಕೆಲಸವನ್ನು ಮಾಡಲು ಹೆಚ್ಚು ಬಲ ಸಿಕ್ಕಿದೆ, ತಮ್ಮ ಹೃದಯ ದೃಢವಾಗಿದೆ ಎಂದು ತಿಳಿಸುತ್ತಾ ಅದಕ್ಕಾಗಿ ಕೃತಜ್ಞತೆ ತಿಳಿಸಿದರು.​—ಇಬ್ರಿಯ 13:9.

“ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಬರೆಯಲ್ಪಟ್ಟಿವೆ ಎಂದು ಹರ್ಷಿಸಿರಿ.” (ಲೂಕ 10:20) ಆಡಳಿತ ಮಂಡಳಿಯ ಸದಸ್ಯರಾದ ಜೆಫ್ರಿ ಜಾಕ್ಸನ್‌ ಕಾರ್ಯಕ್ರಮದ ಮುಖ್ಯ ಭಾಷಣವನ್ನು ನೀಡಿದರು. ಹಿಂದೆ ಗಿಲ್ಯಡ್‌ ವಿದ್ಯಾರ್ಥಿಗಳನ್ನು ಸುವಾರ್ತೆ ಸಾರಿರದ ಕ್ಷೇತ್ರಗಳಿಗೆ ನೇಮಿಸಲಾಗುತ್ತಿತ್ತು. ಅಲ್ಲಿ ಅವರಿಗೆ ರೋಮಾಂಚನಕಾರಿ ಅನುಭವಗಳು ಸಿಗುತ್ತಿದ್ದವು. ಆದರೆ ಈಗಿನ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರನ್ನು ಅಂಥ ಕ್ಷೇತ್ರಗಳಿಗೆ ನೇಮಿಸಲಾಗುತ್ತಿಲ್ಲ. ಆದ್ದರಿಂದ ಅವರಿಗೆ ಅಂಥ ರೋಮಾಂಚನಕಾರಿ ಅನುಭವಗಳು ಸಿಗದಿರಬಹುದು. ಆಗ ಅವರು ಏನು ಮಾಡಬೇಕು?

ಯೇಸು ತನ್ನ 70 ಮಂದಿ ಶಿಷ್ಯರನ್ನು ಸುವಾರ್ತೆ ಸಾರಲು ಕಳುಹಿಸಿದ್ದನು. ಅವರು ಹಿಂದಿರುಗಿ ಬಂದು ಯೇಸುವಿಗೆ, ಆತನ ಹೆಸರನ್ನು ಉಪಯೋಗಿಸಿ ದೆವ್ವಗಳನ್ನು ಬಿಡಿಸಿದ್ದನ್ನು ಸಂತೋಷದಿಂದ ಹೇಳಿದರು. (ಲೂಕ 10:1, 17) ಯೇಸು ಇದು ನಿಜಕ್ಕೂ ಸಂತೋಷದ ವಿಷಯವೆಂದು ಒಪ್ಪಿಕೊಂಡರೂ, “‘ದೆವ್ವಗಳು ನಿಮಗೆ ಅಧೀನಮಾಡಲ್ಪಟ್ಟಿವೆ ಎಂದು ನೀವು ಹರ್ಷಿಸದೆ, ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಬರೆಯಲ್ಪಟ್ಟಿವೆ ಎಂದು ಹರ್ಷಿಸಿರಿ’ ಎಂದು ಹೇಳಿದನು.” (ಲೂಕ 10:20) ಯಾವಾಗಲೂ ಇಂತಹ ಪುಳಕಗೊಳಿಸುವ ಘಟನೆಗಳು ನಡೆಯುವುದಿಲ್ಲ ಎಂದು ಮನಗಾಣಿಸಲು ಅವನು ಈ ರೀತಿ ಹೇಳಿದನು. ಶಿಷ್ಯರು ತಮಗೆ ಸಿಗುವ ಫಲಿತಾಂಶಗಳ ಮೇಲೆ ಮನಸ್ಸನ್ನಿಡದೆ ದೇವರಿಗೆ ನಂಬಿಗಸ್ತರಾಗಿ ಇರುವುದರ ಮೇಲೆ ಮತ್ತು ‘ತಮ್ಮ ಹೆಸರುಗಳು ಸ್ವರ್ಗದಲ್ಲಿ ಬರೆಯಲ್ಪಡುವುದರ’ ಮೇಲೆ ಮನಸ್ಸಿಡಬೇಕು ಎಂದು ತಿಳಿಸಿದನು.

ಯೇಸು ತನ್ನ 70 ಮಂದಿ ಶಿಷ್ಯರಿಗೆ ಹೇಳಿದ ವಿಷಯ ನಮಗೂ ಅನ್ವಯಿಸುತ್ತದೆ ಎಂದು ಸಹೋದರ ಜಾಕ್‌ಸನ್‌ ತಿಳಿಸಿದರು. ಸೇವೆಯಲ್ಲಿ ಸಿಗುವ ಒಳ್ಳೆಯ ಪ್ರತಿಫಲದ ಮೇಲೆ ನಮ್ಮ ಸಂತೋಷ ಮತ್ತು ನಂಬಿಕೆ ಹೊಂದಿಕೊಂಡಿಲ್ಲ. ಬದಲಿಗೆ ನಾವು ಯೆಹೋವನಿಗೆಷ್ಟು ಆಪ್ತರು ಮತ್ತು ಆತನ ಸೇವೆ ಮಾಡಲು ಎಷ್ಟು ಪ್ರಯತ್ನಿಸುತ್ತೇವೆ ಅನ್ನುವುದರ ಮೇಲೆ ನಮ್ಮ ನಂಬಿಕೆ ಮತ್ತು ಸಂತೋಷ ಹೊಂದಿಕೊಂಡಿದೆ.

ಯೇಸುವಿಗೆ ಸಹ ನಿರುತ್ಸಾಹವಾಗುವಂಥ ಪರಿಸ್ಥಿತಿಗಳು ಎದುರಾಗಿದ್ದವು. ಉದಾಹರಣೆಗೆ, ಅವನು ಅದ್ಭುತ ರೀತಿಯಲ್ಲಿ ಸಾವಿರಾರು ಜನರಿಗೆ ಊಟ ಕೊಟ್ಟಾಗ ಅವರು ಅವನನ್ನು ಹಿಂಬಾಲಿಸಿದರು. (ಯೋಹಾನ 6:10-14, 22-24) ಆದರೆ ಸ್ವಲ್ಪ ಸಮಯದಲ್ಲೇ ಅವರು ಯೇಸುವಿನ ಒಂದು ಬೋಧನೆಯನ್ನು ಅಪಾರ್ಥ ಮಾಡಿಕೊಂಡು ಯೇಸುವಿನ ಹಿಂದೆ ಬಂದಷ್ಟೇ ಸುಲಭದಲ್ಲಿ ಹಿಂತಿರುಗಿ ಹೋದರು. (ಯೋಹಾ 6:48-56, 60, 61, 66) ಇವರಿಗೆ ಭಿನ್ನರಾಗಿ ನಂಬಿಗಸ್ತರಾಗಿದ್ದ ಶಿಷ್ಯರು ಯಾವಾಗಲೂ ಯೇಸುವಿನ ಜೊತೆಯಲ್ಲೇ ಉಳಿದರು. ಅವರು ನಮಗೆ ಉತ್ತಮ ಮಾದರಿಯಾಗಿದ್ದಾರೆ. ಯಾಕೆಂದರೆ ಅವರು ತಮ್ಮ ದೃಷ್ಟಿಯನ್ನು ಅವರಿಗೆ ಸಿಗುವ ಪ್ರತಿಫಲಗಳ ಮೇಲಲ್ಲ ಬದಲಿಗೆ ಯೆಹೋವನೊಂದಿಗಿನ ಸಂಬಂಧ ಮತ್ತು ಆತನಿಗೆ ನಂಬಿಗಸ್ತರಾಗಿ ಉಳಿಯುವುದರ ಮೇಲೆ ಇಟ್ಟಿದ್ದರು.​—ಯೋಹಾನ 6:67-69.

ಸಮಾಪ್ತಿ. ಪದವಿ ಪ್ರದಾನವಾದ ನಂತರ ವಿದ್ಯಾರ್ಥಿಗಳಲ್ಲೊಬ್ಬರು ತರಗತಿಯ ಪರವಾಗಿ ಕೃತಜ್ಞತಾ ಪತ್ರವನ್ನು ಓದಿದರು. ಸಹೋದರ ಪಿಯರ್ಸ್‌ ಸಮಾರಂಭದ ಕೊನೆಯಲ್ಲಿ ಮಾತಾಡುತ್ತಾ, ದೇವರ ಸೇವಕರು ಅಥವಾ ಗಿಲ್ಯಡ್‌ ಪದವೀಧರರು ಉಳಿದ ಜನರಿಗಿಂತ ವಿಶೇಷರಲ್ಲ. (ಅಪೊಸ್ತಲರ ಕಾರ್ಯಗಳು 4:13; 1 ಕೊರಿಂಥ 1:27-31) ಆದರೂ ಯೆಹೋವನು ನಮ್ಮ ಸಮರ್ಪಣೆಯನ್ನು ಸ್ವೀಕರಿಸಿ ನಮಗೆ ತನ್ನ ಪವಿತ್ರಾತ್ಮವನ್ನು ಕೊಡುತ್ತಾನೆ. ಯೆಹೋವನು ನಮ್ಮ ವಿದ್ಯಾಭ್ಯಾಸವನ್ನು ನೋಡಿ ನಮ್ಮನ್ನು ಮೆಚ್ಚುವುದಿಲ್ಲ. “ನಾವು ತೋರಿಸುವ ನಂಬಿಕೆ ಮತ್ತು ಭಕ್ತಿಯನ್ನು ನೋಡಿ ಆತನು ನಮ್ಮನ್ನು ಮೆಚ್ಚುತ್ತಾನೆ” ಎಂದರು.