ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಸ್ಯೆಗಳನ್ನು ಬಗೆಹರಿಸುವ ಸರಕಾರ

“ನಿತ್ಯ ಸಮಾಧಾನವಿರುವದು”

“ನಿತ್ಯ ಸಮಾಧಾನವಿರುವದು”

ಎಲ್ಲಾ ರಾಷ್ಟ್ರಗಳ ಮಧ್ಯೆ ಸಹಕಾರ ಇರಬೇಕು, ಮಾನವರ ಹಕ್ಕುಗಳನ್ನು ಸಂರಕ್ಷಿಸಬೇಕು ಮತ್ತು ನಮ್ಮ ಭೂಗ್ರಹವನ್ನು ಕಾಪಾಡಬೇಕು ಎಂಬ ಗುರಿಗಳಿಂದ ವಿಶ್ವ ಸಂಸ್ಥೆಯು “ವಿಶ್ವವ್ಯಾಪಿ ಪೌರತ್ವ” ಎಂಬ ಯೋಜನೆಯ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಕಾರಣ? “ಹವಾಮಾನಗಳ ಬದಲಾವಣೆ, ಭೀಕರ ಅಪರಾಧಗಳು, ಅಸಮಾನತೆ, ಕೊನೆಗಾಣದ ಯುದ್ಧಗಳು, ಹೆಚ್ಚುತ್ತಿರುವ ನಿರಾಶ್ರಿತರು, ಲೋಕವ್ಯಾಪಕ ಭಯೋತ್ಪಾದಕರ ಕಾಟ, ಅಂಟುರೋಗಗಳು ಮತ್ತು ಇಂಥ ಇತರ ಸಮಸ್ಯೆಗಳಿಗೆ ಗಡಿಗಳಿಲ್ಲ” ಎಂದು ಮಾಹೆರ್‌ ನಾಸರ್‌ ಎಂಬವರು ಯು.ಎನ್‌. ಕ್ರಾನಿಕಲ್‌ ಪತ್ರಿಕೆಯಲ್ಲಿ ಹೇಳಿದರು.

ಆದರೆ ಬೇರೆ ಕೆಲವು ಪ್ರಮುಖರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ವಿಶ್ವವ್ಯಾಪಿ ಸರಕಾರ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಕೆಲವರು, ಇಟಲಿಯ ತತ್ವಜ್ಞಾನಿ, ಕವಿ, ಗಣ್ಯ ರಾಜಕಾರಣಿಯೂ ಆಗಿದ್ದ ಡಾಂಟೆ (1265-1321) ಮತ್ತು ಭೌತ ವಿಜ್ಞಾನಿಯಾದ ಆಲ್ಬರ್ಟ್‌ ಐನ್‌ಸ್ಟೀನ್‌ (1879-1955). ರಾಜಕೀಯವಾಗಿ ವಿಭಜಿತವಾಗಿರುವ ಲೋಕದಲ್ಲಿ ಸಮಾಧಾನ ಇರುವುದಿಲ್ಲ ಎಂದು ಡಾಂಟೆ ನಂಬುತ್ತಿದ್ದನು. ಅವನು ಯೇಸುವಿನ ಮಾತುಗಳನ್ನೇ ಉಲ್ಲೇಖಿಸುತ್ತಾ “ತನ್ನೊಳಗೆ ಒಡೆದು ವಿಭಾಗವಾಗಿರುವ . . . ರಾಜ್ಯವು ಹಾಳಾಗುವುದು” ಎಂದು ಹೇಳಿದನು.—ಲೂಕ 11:17.

ಎರಡು ಅಣುಬಾಂಬು ಉಪಯೋಗಿಸಲ್ಪಟ್ಟ 2ನೆಯ ಮಹಾಯುದ್ಧದ ಬಳಿಕ ಆಲ್ಬರ್ಟ್‌ ಐನ್‌ಸ್ಟೀನ್‌, ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಗೆ ಒಂದು ಬಹಿರಂಗ ಪತ್ರವನ್ನು ಕಳುಹಿಸಿದನು. “ವಿಶ್ವಸಂಸ್ಥೆಯು ಲೋಕವ್ಯಾಪಕ ಒಂದೇ ಸರಕಾರವನ್ನು ರೂಪಿಸುವ ಮೂಲಕ ಅಂತಾರಾಷ್ಟ್ರೀಯ ಸುರಕ್ಷೆಗಾಗಿ ಬೇಗನೆ ಕ್ರಮಕೈಗೊಳ್ಳಬೇಕು” ಎಂದು ಅದರಲ್ಲಿ ಬರೆದಿದ್ದನು.

ಆದರೆ ಈ ರೀತಿಯ ವಿಶ್ವವ್ಯಾಪಿ ಸರಕಾರದಲ್ಲಿ ಒಳಗೂಡುವ ರಾಜಕಾರಣಿಗಳು ಭ್ರಷ್ಟರಾಗಲ್ಲ, ಅಸಮರ್ಥರಾಗಿರುವುದಿಲ್ಲ ಮತ್ತು ಶೋಷಣೆ ಮಾಡುವುದಿಲ್ಲ ಎಂದು ಹೇಳಲು ಸಾಧ್ಯನಾ? ಅಥವಾ ಅವರೂ ಈ ಹಿಂದೆ ಇದ್ದ ಅಧಿಕಾರಿಗಳ ಹಾಗೆಯೇ ಇರುತ್ತಾರಾ? ಇದು ಬ್ರಿಟಿಷ್‌ ಇತಿಹಾಸಕಾರನಾದ ಲಾರ್ಡ್‌ ಆ್ಯಕ್ಟನ್‌ರು ಹೇಳಿದ ಈ ಮಾತುಗಳನ್ನು ನೆನಪಿಗೆ ತರುತ್ತದೆ: ‘ಅಧಿಕಾರ ಸಿಕ್ಕಿದ ವ್ಯಕ್ತಿ ಭ್ರಷ್ಟನಾಗುತ್ತಾನೆ, ಹೆಚ್ಚು ಅಧಿಕಾರ ಸಿಕ್ಕಿದಾಗ ಹೆಚ್ಚು ಭ್ರಷ್ಟನಾಗುತ್ತಾನೆ.’

ಒಂದು ವೇಳೆ ಇಂಥ ಸರಕಾರ ಬಂದರೂ ಮಾನವ ಕುಟುಂಬ ನಿಜವಾದ ಶಾಂತಿ ಸಾಮರಸ್ಯದಿಂದ ಇರಬೇಕಾದರೆ ಎಲ್ಲರು ಐಕ್ಯರಾಗಿ ಇರಬೇಕು. ಆದರೆ ಇದು ಸಾಧ್ಯನಾ? ಖಂಡಿತ ಸಾಧ್ಯ, ಎಲ್ಲರೂ ಐಕ್ಯದಿಂದ ಇರಬಹುದು ಅಂತ ಬೈಬಲ್‌ ಹೇಳುತ್ತದೆ. ಹೇಗೆ? ಭ್ರಷ್ಟ ರಾಜಕಾರಣಿಗಳಿಂದ ಕೂಡಿರುವ ಲೋಕಸರಕಾರದಿಂದಲ್ಲ, ದೇವರು ರೂಪಿಸುವ ಸರಕಾರದಿಂದಲೇ ಇದು ಸಾದ್ಯ. ದೇವರಿಗೆ ಮಾತ್ರ ನಮ್ಮನ್ನು ಆಳುವ ಅಧಿಕಾರ ಇದೆ ಮತ್ತು ಆತನ ಸರಕಾರವು ಬಲುಬೇಗನೆ ಭೂಮಿಯನ್ನು ಆಳಲಿದೆ. ಆ ಸರಕಾರ ಯಾವುದು? ಬೈಬಲಿನಲ್ಲಿ ಅದನ್ನು “ದೇವರ ರಾಜ್ಯ” ಎಂದು ಹೇಳಲಾಗಿದೆ.—ಲೂಕ 4:43.

“ನಿನ್ನ ರಾಜ್ಯವು ಬರಲಿ”

ಯೇಸು ಕ್ರಿಸ್ತನು “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು . . . ಭೂಮಿಯಲ್ಲಿಯೂ ನೆರವೇರಲಿ” ಎಂದು ಪ್ರಾರ್ಥನೆಯಲ್ಲಿ ಹೇಳಿದಾಗ, ಅವನ ಮನಸ್ಸಿನಲ್ಲಿ ಇದ್ದದ್ದು ಈ ರಾಜ್ಯವೇ. (ಮತ್ತಾಯ 6:9, 10) ದೇವರ ರಾಜ್ಯವು ದೇವರ ಚಿತ್ತ ಭೂಮಿಯಲ್ಲಿ ನೆರವೇರುವಂತೆ ಮಾಡುತ್ತದೆ, ಅಧಿಕಾರ ವ್ಯಾಮೋಹವಿರುವ ಸ್ವಾರ್ಥ ಮನುಷ್ಯರ ಚಿತ್ತವಲ್ಲ.

ದೇವರ ರಾಜ್ಯವನ್ನು “ಸ್ವರ್ಗದ ರಾಜ್ಯ” ಎಂದೂ ಕರೆಯಲಾಗಿದೆ. (ಮತ್ತಾಯ 5:3) ಯಾಕೆಂದರೆ, ಅದು ಭೂಮಿಯ ಮೇಲೆ ಆಳುವುದಾದರೂ, ಆಳ್ವಿಕೆ ನಡೆಸುವುದು ಭೂಮಿಯಿಂದ ಅಲ್ಲ, ಸ್ವರ್ಗದಿಂದ. ಆಗ ಹೇಗಿರುತ್ತೆ ಅಂತ ಸ್ವಲ್ಪ ಯೋಚಿಸಿನೋಡಿ, ಈ ಸರಕಾರಕ್ಕೆ ಹಣ ಅಥವಾ ತೆರಿಗೆಯ ಅಗತ್ಯವಿಲ್ಲ. ಇದರಿಂದ ಅದರ ಪ್ರಜೆಗಳಿಗೆ ಎಷ್ಟು ನೆಮ್ಮದಿಯಾಗುತ್ತದಲ್ಲವೇ!

“ರಾಜ್ಯ” ಎಂಬ ಪದವು, ದೇವರ ರಾಜ್ಯ ಅಥವಾ ಸರಕಾರಕ್ಕೆ ಒಬ್ಬ ರಾಜ ಇದ್ದಾನೆ ಅಂತ ಸೂಚಿಸುತ್ತದೆ. ದೇವರಿಂದ ಅಧಿಕಾರ ಪಡೆದಿರುವ ಯೇಸು ಕ್ರಿಸ್ತನೇ ಆ ರಾಜ. ಆತನ ಬಗ್ಗೆ ಬೈಬಲ್‌ ಹೀಗೆ ಹೇಳುತ್ತದೆ:

  • ‘ಆಡಳಿತವು ಅವನ ಬಾಹುವಿನ ಮೇಲಿರುವದು; ಅವನ ಆಡಳಿತವು ಅಭಿವೃದ್ಧಿಯಾಗುವದು, ಅವನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು.’—ಯೆಶಾಯ 9:6, 7.

  • “ಸಕಲಜನಾಂಗಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು; ಅವನ ಆಳಿಕೆಯು . . . ಎಂದಿಗೂ ಅಳಿಯದು.”—ದಾನಿಯೇಲ 7:14.

  • “ಲೋಕದ ರಾಜ್ಯವು ಖಂಡಿತವಾಗಿ ನಮ್ಮ ಕರ್ತನ [ದೇವರ] ಮತ್ತು ಆತನ ಕ್ರಿಸ್ತನ ರಾಜ್ಯವಾಗಿ ಪರಿಣಮಿಸಿತು.” —ಪ್ರಕಟನೆ 11:15.

ಯೇಸುವಿನ ಮಾದರಿ ಪ್ರಾರ್ಥನೆಯಲ್ಲಿ ತಿಳಿಸಿದ ಹಾಗೆ ದೇವರ ರಾಜ್ಯವು ಭೂಮಿಯ ಬಗ್ಗೆ ದೇವರಿಗಿದ್ದ ಉದ್ದೇಶವನ್ನು ಈಡೇರಿಸುತ್ತದೆ. ಆ ರಾಜ್ಯ ಆಳುವಾಗ, ಭೂಮಿಯನ್ನು ಹೇಗೆ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಮಾನವರು ಕಲಿಯುತ್ತಾರೆ. ಹೀಗೆ ಭೂಮಿ ಬಾಳಲು ಸೂಕ್ತವಾಗಿರುವ ಸುಂದರ ತೋಟವಾಗುತ್ತದೆ ಮತ್ತು ಜೀವರಾಶಿಗಳಿಂದ ತುಂಬಿರುತ್ತದೆ.

ಅಷ್ಟೇ ಅಲ್ಲ, ದೇವರ ರಾಜ್ಯದ ಎಲ್ಲಾ ಪ್ರಜೆಗಳಿಗೆ ಒಂದೇ ಮಟ್ಟಗಳನ್ನು ಕಲಿಸಲಾಗುತ್ತದೆ, ಅವರಿಗೆ ಸರಿಯಾದ ಶಿಕ್ಷಣ ನೀಡಲಾಗುತ್ತದೆ. ಯಾವ ರೀತಿಯ ಭಿನ್ನಾಭಿಪ್ರಾಯವು ಅಲ್ಲಿ ಇರುವುದಿಲ್ಲ. ಯೆಶಾಯ 11:9 ಹೇಳುವ ಹಾಗೆ “ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”

ವಿಶ್ವಸಂಸ್ಥೆಯು ಬಯಸಿದರೂ ಸಾಧಿಸಲಿಕ್ಕಾಗದ ವಿಷಯವನ್ನು ದೇವರ ರಾಜ್ಯ ಸಾಧಿಸುತ್ತದೆ. ಅಂದರೆ ಇಡೀ ಭೂಮಿಯ ನಿವಾಸಿಗಳಿಗೆ ವಿಶ್ವವ್ಯಾಪಿ ಪೌರತ್ವ ಇರುತ್ತೆ, ಅವರು ಒಳ್ಳೆ ಪ್ರಜೆಗಳಾಗಿರುತ್ತಾರೆ. “ಅವರು ಮಹಾಸೌಖ್ಯದಿಂದ ಆನಂದಿಸುವರು” ಎಂದು ಕೀರ್ತನೆ 37:11 ಹೇಳುತ್ತದೆ. ಕಾಲಕ್ರಮೇಣ, “ಅಪರಾಧ,” “ಮಾಲಿನ್ಯ,” “ಬಡತನ,” “ಯುದ್ಧ” ಮುಂತಾದ ಪದಗಳನ್ನೇ ನಾವು ಮರೆತು ಹೋಗುತ್ತೇವೆ. ಇದೆಲ್ಲಾ ಯಾವಾಗ ನಡೆಯುತ್ತದೆ? ದೇವರ ರಾಜ್ಯ ಯಾವಾಗ ಆಳಲು ಶುರುಮಾಡುತ್ತದೆ? ಅದು ಹೇಗೆ ಸಂಭವಿಸುತ್ತದೆ? ಆ ಆಳ್ವಿಕೆಯಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು? ಅದನ್ನೇ ಈಗ ನೋಡೋಣ.