ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂದರ್ಶನ | ಯಾನ್‌-ಡ ಸೂ

ಒಬ್ಬ ಭ್ರೂಣಶಾಸ್ತ್ರಜ್ಞ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ

ಒಬ್ಬ ಭ್ರೂಣಶಾಸ್ತ್ರಜ್ಞ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ

ಪ್ರೊಫೆಸರ್‌ ಯಾನ್‌-ಡ ಸೂ ತೈವಾನಿನ ವಿಜ್ಞಾನ ಮತ್ತು ತಂತ್ರಜ್ಞಾನದ ಪಿಂಗ್‌ಟಂಗ್‌ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಭ್ರೂಣ ಸಂಶೋಧನೆ ಮಾಡುವ ತಂಡದ ನಿರ್ದೇಶಕರು. ಅವರು ವ್ಯಾಸಂಗ ಮಾಡುತ್ತಿದ್ದಾಗ ವಿಕಾಸವಾದವನ್ನು ನಂಬುತ್ತಿದ್ದರು. ಆದರೆ ಸಂಶೋಧನಾ ವಿಜ್ಞಾನಿಯಾದ ಮೇಲೆ ಅವರ ನಂಬಿಕೆ ಬದಲಾಯಿತು. ಯಾಕೆ ಅಂತ ಅವರು ಎಚ್ಚರ! ಪತ್ರಿಕೆಯ ಪ್ರತಿನಿಧಿಗೆ ವಿವರಿಸಿದರು.

ನಿಮ್ಮ ಬಗ್ಗೆ ಸ್ವಲ್ಪ ಹೇಳ್ತೀರಾ?

ನಾನು ಹುಟ್ಟಿದ್ದು 1966ರಲ್ಲಿ. ಬೆಳೆದದ್ದು ತೈವಾನ್‍ನಲ್ಲಿ. ನನ್ನ ಅಪ್ಪಅಮ್ಮ ಟಾವೊಮತ ಮತ್ತು ಬೌದ್ಧಮತಕ್ಕೆ ಸೇರಿದವರು. ನಾವು ಪೂರ್ವಜರ ಆರಾಧನೆ ಮತ್ತು ಮೂರ್ತಿಪೂಜೆ ಮಾಡ್ತಾ ಇದ್ವಿ. ಆದರೆ ಎಲ್ಲವನ್ನೂ ಸೃಷ್ಟಿಮಾಡಿದ ಒಬ್ಬ ದೇವರಿದ್ದಾನೆ ಅನ್ನೋ ನಂಬಿಕೆ ಇರಲಿಲ್ಲ.

ನೀವು ಜೀವಶಾಸ್ತ್ರ ಆರಿಸಲು ಕಾರಣ?

ನನಗೆ ಚಿಕ್ಕಂದಿನಲ್ಲಿ ಪ್ರಾಣಿಗಳೆಂದರೆ ತುಂಬ ಇಷ್ಟ. ಹಾಗಾಗಿ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಬರುವ ಕಾಯಿಲೆಗಳನ್ನು ಗುಣಪಡಿಸುವುದರ ಬಗ್ಗೆ ಕಲೀಬೇಕು ಅಂತ ಆಸೆ ಆಯಿತು. ಮೊದಲು ನಾನು ಪಶುವೈದ್ಯನಾಗಲು ಪ್ರಯತ್ನಿಸಿದೆ. ಆದರೆ ಯಾಕೋ ಭ್ರೂಣಶಾಸ್ತ್ರದ ಅಧ್ಯಯನ ಮಾಡಕ್ಕೆ ಹೋದೆ. ಈ ಅಧ್ಯಯನದಿಂದ ಜೀವ ಹೇಗೆ ಬಂತು ಅಂತ ಗೊತ್ತಾಗಬಹುದು ಎಂದು ನನಗನಿಸಿತು.

ನೀವು ಯಾಕೆ ಮೊದಲು ವಿಕಾಸವಾದವನ್ನು ನಂಬ್ತಿದ್ರಿ?

ನಮ್ಮ ಪ್ರೊಫೆಸರ್‌ಗಳು ವಿಕಾಸವಾದದ ಬಗ್ಗೆ ಕಲಿಸುತ್ತಿದ್ದರು. ಇದು ಸತ್ಯ ಅಂತ ರುಜುಪಡಿಸಲು ಆಧಾರನೂ ಇದೆ ಅಂತ ಹೇಳ್ತಿದ್ದರು. ನಾನು ಅದನ್ನು ನಂಬಿದೆ.

ನೀವು ಬೈಬಲನ್ನು ಓದಲು ಯಾಕೆ ಶುರುಮಾಡಿದ್ರಿ?

ಅದಕ್ಕೆ ಎರಡು ಕಾರಣ ಇದೆ. ಒಂದು, ಜನ ಎಷ್ಟೋ ದೇವರುಗಳನ್ನಿಟ್ಟು ಆರಾಧಿಸುವುದಾದರೂ ಈ ಎಲ್ಲ ದೇವರುಗಳಿಗಿಂತ ಮೇಲೆ ಒಬ್ಬ ದೇವರಿರಬೇಕು ಅಂತ ನನಗನಿಸಿತು. ಆ ದೇವರು ಯಾರು ಅಂತ ನನಗೆ ತಿಳೀಬೇಕಿತ್ತು. ಎರಡು, ಬೈಬಲ್‌ ಮೇಲೆ ತುಂಬ ಜನರಿಗೆ ಗೌರವ ಇದೆ. ಇದಕ್ಕೇನು ಕಾರಣ ಅಂತ ನಾನು ಯೋಚಿಸುತ್ತಿದ್ದೆ.

ನಾನು 1992ರಲ್ಲಿ ಬೆಲ್ಜಿಯಮ್‍ನಲ್ಲಿರುವ ಲೂವನಿನ ಕ್ಯಾಥೊಲಿಕ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಆಗ ಒಂದು ಕ್ಯಾಥೊಲಿಕ್‌ ಚರ್ಚಿಗೆ ಹೋಗಿ ‘ಬೈಬಲನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡಿ’ ಎಂದು ಅಲ್ಲಿದ್ದ ಪಾದ್ರಿಯನ್ನು ಕೇಳಿದೆ. ಆದರೆ ಅವರು ಆಗಲ್ಲ ಎಂದುಬಿಟ್ಟರು.

ಹಾಗಾದರೆ ನಿಮಗಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ತಾ?

ಇದಾಗಿ ಎರಡು ವರ್ಷಗಳ ನಂತರ ನಾನಿನ್ನೂ ಬೆಲ್ಜಿಯಮ್‍ನಲ್ಲೇ ಇದ್ದು ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿದ್ದಾಗ ಒಬ್ಬ ಯೆಹೋವನ ಸಾಕ್ಷಿ ನನಗೆ ಸಿಕ್ಕಿದರು. ಅವರ ಹೆಸರು ರೂತ್‌, ಪೋಲೆಂಡ್‍ನವರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಯಾರಿಗಾದರೂ ದೇವರ ಬಗ್ಗೆ ತಿಳುಕೊಳ್ಳಲು ಇಷ್ಟವಿದ್ದರೆ ಅವರಿಗೆ ಸಹಾಯಮಾಡಲಿಕ್ಕಾಗಿಯೇ ರೂತ್‌ ಚೈನೀಸ್‌ ಭಾಷೆ ಕಲಿತಿದ್ದರು. ನನಗವರು ಸಿಕ್ಕಿದಾಗ ತುಂಬ ಖುಷಿಯಾಯಿತು. ನನ್ನ ಪ್ರಾರ್ಥನೆಗೆ ಉತ್ತರ ಸಿಕ್ತು. ನನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ತು.

ಬೈಬಲು ವೈಜ್ಞಾನಿಕ ಪುಸ್ತಕವಲ್ಲ, ಆದರೂ ವೈಜ್ಞಾನಿಕ ವಿಷಯಗಳ ಬಗ್ಗೆ ಬೈಬಲ್‌ ಮಾತಾಡುವಾಗ ಅದು ನಿಷ್ಕೃಷ್ಟವಾಗಿದೆ ಎಂದು ರೂತ್‌ ತೋರಿಸಿಕೊಟ್ಟರು. ಬೈಬಲಿನ ಕೀರ್ತನೆ ಪುಸ್ತಕವನ್ನು ಬರೆದ ದಾವೀದನು ಹೀಗೆ ಹೇಳಿದ್ದಾನೆ: “ನಿನ್ನ ಕಣ್ಣುಗಳು ನನ್ನ ಭ್ರೂಣವನ್ನೂ ನೋಡಿದವು ಮತ್ತು ನಿನ್ನ ಪುಸ್ತಕದಲ್ಲಿ ಅದರ ಸಕಲ ಭಾಗಗಳು ಬರೆದಿಡಲ್ಪಟ್ಟವು. ಅವುಗಳಲ್ಲಿ ಒಂದೂ ಇಲ್ಲದಿದ್ದ ಸಮಯದಲ್ಲಿ ಅವು ಯಾವ ದಿನ ರಚಿಸಲ್ಪಡುವವು ಎಂಬುದು ಬರೆಯಲ್ಪಟ್ಟಿತ್ತು.” (ಕೀರ್ತನೆ 139:16, NW) ದಾವೀದನು ಕಾವ್ಯಾತ್ಮಕವಾಗಿ ಮಾತಾಡುತ್ತಿದ್ದರೂ ಅವನು ಹೇಳಿದ ಮಾತು ಸತ್ಯ. ದೇಹದ ಭಾಗಗಳು ರೂಪುಗೊಳ್ಳುವುದಕ್ಕಿಂತ ಮುಂಚೆಯೇ ಅದಕ್ಕೆ ಬೇಕಾದ ಎಲ್ಲ ಮಾಹಿತಿ ಒಂದೊಂದು ಜೀವಕೋಶದಲ್ಲೂ ಇರುತ್ತದೆ. ಬೈಬಲಿನ ಈ ನಿಷ್ಕೃಷ್ಟತೆ ನೋಡಿ ಇದು ಖಂಡಿತ ದೇವರ ವಾಕ್ಯ ಎಂದು ಅರ್ಥಮಾಡಿಕೊಂಡೆ. ಇರುವುದು ಒಬ್ಬನೇ ದೇವರು, ಅದು ಯೆಹೋವನು ಮಾತ್ರ ಎಂದೂ ಅರ್ಥವಾಯಿತು. 1

ದೇವರೇ ನಮ್ಮನ್ನು ಸೃಷ್ಟಿಮಾಡಿದ್ದು ಎಂದು ಹೇಗೆ ಅರ್ಥಮಾಡಿಕೊಂಡ್ರಿ?

ವೈಜ್ಞಾನಿಕ ಸಂಶೋಧನೆಯ ಒಂದು ಗುರಿ ಸತ್ಯಾಂಶಗಳನ್ನು ಕಂಡುಹಿಡಿಯುವುದು. ಯಾರೋ ಒಬ್ಬರು ಹೇಳಿದ ಮಾತನ್ನು ನಾವು ನಂಬುತ್ತಾ ಕೂರುವುದಿಲ್ಲ. ಭ್ರೂಣಶಾಸ್ತ್ರದ ಅಧ್ಯಯನ ನನ್ನ ಕಣ್ತೆರೆಸಿತು. ವಿಕಾಸವಾದ ಸುಳ್ಳು, ನಮ್ಮೆಲ್ಲರನ್ನು ಒಬ್ಬನು ಸೃಷ್ಟಿಮಾಡಿದ್ದಾನೆ ಎಂದು ಅರ್ಥಮಾಡಿಕೊಂಡೆ. ದೊಡ್ಡ ಯಂತ್ರಗಳನ್ನು ಜೋಡಿಸಲು ಎಂಜಿನಿಯರುಗಳು ಬಳಸುವ ಅಸೆಂಬ್ಲಿ ಲೈನ್‌ ಬಗ್ಗೆ ಕೇಳಿರುತ್ತೀರಿ. ಇದರಿಂದ ಯಂತ್ರದ ಬಿಡಿಭಾಗಗಳನ್ನು ಸರಿಯಾದ ಕ್ರಮದಲ್ಲಿ ಅದರದರ ಸ್ಥಾನದಲ್ಲಿ ಇಡಲು ಸಾಧ್ಯವಾಗುತ್ತದೆ. ಭ್ರೂಣದ ಬೆಳವಣಿಗೆ ಸಹ ಹೆಚ್ಚುಕಡಿಮೆ ಇದೇ ರೀತಿ. ಆದರೆ ಇದು ತುಂಬ ತುಂಬ ಜಟಿಲ.

ಈ ಭ್ರೂಣದ ಬೆಳವಣಿಗೆ ತಾಯಿಯ ಗರ್ಭದಲ್ಲಿ ಫಲೀಕರಿಸಿದ ಒಂದು ಜೀವಕೋಶದಿಂದ ಆರಂಭವಾಗುತ್ತದೆ, ಅಲ್ವಾ?

ಹೌದು. ಕಣ್ಣಿಗೆ ಕಾಣದ ಆ ಸಣ್ಣ ಜೀವಕೋಶ ವಿಭಜನೆಯಾಗಲು ಆರಂಭವಾಗುತ್ತದೆ. ಸ್ವಲ್ಪ ಸಮಯದ ವರೆಗೆ, ಈ ಜೀವಕೋಶಗಳು ಪ್ರತಿ 12ರಿಂದ 24 ತಾಸಿನ ಅವಧಿಯಲ್ಲಿ ವಿಭಜನೆಯಾಗುತ್ತಾ ಎರಡು ಪಟ್ಟು ಹೆಚ್ಚಾಗುತ್ತಾ ಇರುತ್ತವೆ. ಇದೆಲ್ಲಾ ನಡೆಯಲು ಆರಂಭಿಸುವಾಗ ಕಾಂಡಕೋಶ (ಸ್ಟೆಮ್‌ ಸೆಲ್‌) ಎಂದು ಕರೆಯಲಾಗುವ ಜೀವಕೋಶಗಳು ಉತ್ಪತ್ತಿಯಾಗುತ್ತವೆ. 2 ಈ ಕಾಂಡಕೋಶಗಳು ಒಂದು ಮಗು ಪೂರ್ತಿ ಬೆಳೆಯಲು ಬೇಕಾದ 200ಕ್ಕಿಂತ ಹೆಚ್ಚು ಬಗೆಯ ಜೀವಕೋಶಗಳನ್ನು, ಅಂದರೆ ರಕ್ತದ ಜೀವಕೋಶ, ಮೂಳೆಯ ಜೀವಕೋಶ, ನರಕೋಶ ಇತ್ಯಾದಿಗಳನ್ನು ಉತ್ಪತ್ತಿ ಮಾಡುತ್ತವೆ.

ಭ್ರೂಣಶಾಸ್ತ್ರದ ಅಧ್ಯಯನದಿಂದ ನಮ್ಮನ್ನೆಲ್ಲಾ ಒಬ್ಬನು ಸೃಷ್ಟಿಮಾಡಿದ್ದಾನೆ ಎಂದು ಅರ್ಥಮಾಡಿಕೊಂಡೆ

ಸರಿಯಾದ ಜೀವಕೋಶಗಳು ಸರಿಯಾದ ಕ್ರಮದಲ್ಲಿ ಸರಿಯಾದ ಜಾಗದಲ್ಲಿ ಉತ್ಪತ್ತಿಯಾಗಬೇಕು. ಮೊದಲು ಕೆಲವು ಜೀವಕೋಶಗಳು ಒಟ್ಟುಸೇರಿ ಒಂದು ಮಾಂಸದ ಮುದ್ದೆ ತರ ಕಾಣುತ್ತವೆ. ಆಮೇಲೆ ಇವು ಅಂಗಗಳಾಗಿ ಕೈಕಾಲುಗಳಾಗಿ ರೂಪುಗೊಳ್ಳುತ್ತವೆ. ಈ ಇಡೀ ಪ್ರಕ್ರಿಯೆ ಹೀಗೀಗೆ ನಡೆಯಬೇಕು ಎಂದು ಯಾವ ಎಂಜಿನಿಯರ್‌ ಕೂತು ನಿರ್ದೇಶನಗಳನ್ನು ಬರೆಯಲು ಸಾಧ್ಯ ಹೇಳಿ? ಆದರೆ ಭ್ರೂಣದ ಬೆಳವಣಿಗೆಗೆ ಸಂಬಂಧಪಟ್ಟ ಪ್ರತಿಯೊಂದು ನಿರ್ದೇಶನ ನಮ್ಮ ಡಿ.ಎನ್‌.ಎ.ಯಲ್ಲಿ ಬರೆಯಲಾಗಿದೆ. ಇದನ್ನು ನೋಡುವಾಗ ಮೈ ಜುಮ್ಮೆನಿಸುತ್ತದೆ. ದೇವರು ಸೃಷ್ಟಿಮಾಡದೆ ಇದೆಲ್ಲಾ ಹಾಗೇ ಬಂದಿರಲು ಸಾಧ್ಯನೇ ಇಲ್ಲ.

ನೀವು ಯೆಹೋವನ ಸಾಕ್ಷಿಯಾಗಲು ಕಾರಣವೇನು?

ಒಂದೇ ಮಾತಲ್ಲಿ ಹೇಳಿದರೆ, ಪ್ರೀತಿ. “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು” ಎಂದು ಯೇಸು ಹೇಳಿದ್ದಾನೆ. (ಯೋಹಾನ 13:35) ಈ ಪ್ರೀತಿಯಲ್ಲಿ ಪಕ್ಷಪಾತ ಇಲ್ಲ. ಇದು ವ್ಯಕ್ತಿಯ ಹಿನ್ನೆಲೆ, ಸಂಸ್ಕೃತಿ, ಮೈಬಣ್ಣ ನೋಡುವುದಿಲ್ಲ. ಯೆಹೋವನ ಸಾಕ್ಷಿಗಳಲ್ಲಿ ಇಂಥ ಪ್ರೀತಿ ಇದೆ. ಇದನ್ನು ನಾನು ನೋಡಿ ಅನುಭವಿಸಿದ್ದರಿಂದ ಸಾಕ್ಷಿಯಾದೆ. ▪ (g16-E No. 2)

^ 2. ಪ್ರೊಫೆಸರ್‌ ಯಾನ್‌-ಡ ಸೂ ಅವರ ಕ್ರೈಸ್ತ ಮನಸ್ಸಾಕ್ಷಿ ಒಪ್ಪದ ಕಾರಣ ಅವರು ಮಾನವ ಭ್ರೂಣದಲ್ಲಿರುವ ಕಾಂಡಕೋಶಗಳ ಮೇಲೆ ಪ್ರಯೋಗಗಳನ್ನು ನಡಿಸುವುದಿಲ್ಲ.