ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗುರಿಗಳು ನೀಲಿನಕ್ಷೆಯಂತಿದ್ದು, ನೀವು ಪ್ರಯತ್ನ ಮಾಡಿದರೆ ಅವನ್ನು ಸಾಕಾರಗೊಳಿಸಬಲ್ಲಿರಿ

ಯುವಜನರಿಗಾಗಿ

12: ಗುರಿಗಳು

12: ಗುರಿಗಳು

ಅರ್ಥವೇನು?

ಗುರಿ ಎನ್ನುವುದು ಬರೀ ಕನಸಲ್ಲ, ಅಂದರೆ ‘ಹೀಗಾದರೆ ಚೆನ್ನಾಗಿತ್ತು, ಹಾಗಾದರೆ ಚೆನ್ನಾಗಿತ್ತು’ ಎಂಬ ಹಾರೈಕೆ ಮಾತ್ರವಲ್ಲ. ನಿಜವಾದ ಗುರಿಗಳಲ್ಲಿ ಯೋಜನೆಮಾಡುವುದು, ಪರಿಸ್ಥಿತಿಗೆ ತಕ್ಕ ಹಾಗೆ ಹೊಂದಿಕೊಳ್ಳುವುದು, ಕಠಿನ ಶ್ರಮ ಇದೆಲ್ಲವೂ ಒಳಗೂಡಿದೆ.

ಗುರಿಗಳು ಅಲ್ಪಾವಧಿಯದ್ದು (ಕೆಲವೇ ದಿನಗಳು, ವಾರಗಳಲ್ಲಿ ಮುಟ್ಟುವಂಥದ್ದು), ಮಧ್ಯಮಾವಧಿಯದ್ದು (ತಿಂಗಳುಗಳು) ಮತ್ತು ದೀರ್ಘಾವಧಿಯದ್ದು (ಒಂದು ಅಥವಾ ಹೆಚ್ಚು ವರ್ಷ) ಆಗಿರಬಲ್ಲವು. ದೀರ್ಘಾವಧಿಯ ಗುರಿಗಳನ್ನು ತಲಪಲಿಕ್ಕಾಗಿ ಸರಣಿಯಾಗಿ ಕೆಲವೊಂದು ಅಲ್ಪಾವಧಿಯ ಮತ್ತು ಮಧ್ಯಮಾವಧಿಯ ಗುರಿಗಳನ್ನಿಡಬೇಕು.

ಯಾಕೆ ಮುಖ್ಯ?

ಗುರಿಗಳನ್ನು ಮುಟ್ಟಿದಾಗ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಸ್ನೇಹಬಂಧಗಳು ಬಲಗೊಳ್ಳುತ್ತವೆ ಮತ್ತು ಸಂತೋಷ ಹೆಚ್ಚಾಗುತ್ತದೆ.

ಆತ್ಮವಿಶ್ವಾಸ: ನೀವು ಚಿಕ್ಕ ಗುರಿಗಳನ್ನಿಟ್ಟು ಅದನ್ನು ತಲಪಿದಾಗ ಇನ್ನೂ ದೊಡ್ಡ ಗುರಿಗಳನ್ನಿಡುವ ಆತ್ಮವಿಶ್ವಾಸ ಬರುತ್ತದೆ. ಪ್ರತಿದಿನ ಬರುವ ಸವಾಲುಗಳನ್ನು ಎದುರಿಸಲು, ಉದಾಹರಣೆಗೆ ಸಮಪ್ರಾಯದವರ ಒತ್ತಡವನ್ನು ಎದುರಿಸಲು ಹೆಚ್ಚು ಆತ್ಮವಿಶ್ವಾಸ ನಿಮ್ಮಲ್ಲಿರುತ್ತದೆ.

ಸ್ನೇಹಬಂಧಗಳು: ಜನರು ಗುರಿಗಳನ್ನು ಸಾಧಿಸುವವರೊಟ್ಟಿಗೆ ಅಂದರೆ ತಾವೇನು ಸಾಧಿಸಬೇಕೆಂದು ತಿಳಿದಿದ್ದು ಅದಕ್ಕಾಗಿ ಶ್ರಮಿಸಲು ಸಿದ್ಧರಿರುವವರೊಟ್ಟಿಗೆ ಇರಲು ಇಷ್ಟಪಡುತ್ತಾರೆ. ನಿಮ್ಮಂಥದ್ದೇ ಗುರಿಯಿರುವ ಒಬ್ಬ ಸ್ನೇಹಿತನ ಜೊತೆ ಕೆಲಸಮಾಡುವುದು ನಿಮ್ಮ ಸ್ನೇಹಬಂಧವನ್ನು ಬಲಗೊಳಿಸುವ ಅತ್ಯುತ್ತಮ ವಿಧವಾಗಿದೆ.

ಸಂತೋಷ: ನೀವು ಗುರಿಗಳನ್ನಿಟ್ಟು ಅದನ್ನು ಮುಟ್ಟಿದಾಗ ಏನೋ ಸಾಧಿಸಿದ್ದೀರೆಂಬ ಭಾವನೆ ನಿಮ್ಮಲ್ಲಿ ತುಂಬುತ್ತದೆ.

“ಗುರಿಗಳನ್ನಿಡುವುದು ನನಗೆ ತುಂಬ ಇಷ್ಟ. ಅದರಿಂದಾಗಿ ನಾನು ಕಾರ್ಯಮಗ್ನನಾಗಿರುತ್ತೇನೆ ಮತ್ತು ಏನನ್ನೋ ಎಟುಕಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ಗುರಿಯನ್ನು ಮುಟ್ಟಿದಾಗ ‘ವ್ಹಾವ್‌! ನಾನು ಸಾಧಿಸಿಯೇ ಬಿಟ್ಟೆ! ಇಟ್ಟ ಗುರಿ ತಲುಪಿಯೇ ಬಿಟ್ಟೆ’ ಎಂದು ಹಿಂದಕ್ಕೆ ನೋಡಿ ಹೇಳುವಾಗ ಆಗುವ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ.”—ಕ್ರಿಸ್ಟಫರ್‌.

ಬೈಬಲ್‌ ತತ್ವ: “ಗಾಳಿಯನ್ನು ನೋಡುತ್ತಲೇ ಇರುವವನು ಬೀಜಬಿತ್ತನು; ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರು ಕೊಯ್ಯನು.”—ಪ್ರಸಂಗಿ 11:4.

ನೀವೇನು ಮಾಡಬಹುದು?

ಗುರಿಗಳನ್ನಿಟ್ಟು ಅವುಗಳನ್ನು ತಲಪಲಿಕ್ಕಾಗಿ ಈ ಹೆಜ್ಜೆಗಳನ್ನು ತೆಗೆದುಕೊಳ್ಳಿ.

ಗುರುತಿಸಿ. ನಿಮ್ಮಿಂದ ಮುಟ್ಟಲಿಕ್ಕಾಗುವ ಗುರಿಗಳನ್ನು ಪಟ್ಟಿಮಾಡಿ. ನಂತರ ಆದ್ಯತೆಗನುಸಾರ ಅಂದರೆ ನೀವು ಮುಟ್ಟಬೇಕೆಂದಿರುವ ಒಂದನೇ, ಎರಡನೇ, ಮೂರನೇ ಗುರಿ ಯಾವುದೆಂದು ಬರೆದಿಡಿ.

ಯೋಜನೆಮಾಡಿ. ಒಂದೊಂದು ಗುರಿಗೂ ಇದನ್ನು ಮಾಡಿ:

  • ಇಂತಿಷ್ಟು ತಾರೀಖಿನೊಳಗೆ ಮುಟ್ಟಬೇಕೆಂದು ನಿಗದಿಪಡಿಸಿ.

  • ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಬಗ್ಗೆ ಯೋಜನೆ ಮಾಡಿ.

  • ಯಾವ ತಡೆಗಳು ಎದುರಾಗಬಹುದು ಮತ್ತು ಅವುಗಳನ್ನು ಜಯಿಸುವುದು ಹೇಗೆ ಎಂದು ಮೊದಲೇ ಯೋಚಿಸಿ.

ಕ್ರಿಯೆಗೈಯಿರಿ. ಗುರಿ ತಲುಪಲು ಸೂಕ್ಷ್ಮವಾಗಿ ಯೋಜನೆಮಾಡಿದ ನಂತರವೇ ಪ್ರಯತ್ನ ಶುರುಮಾಡಬೇಕೆಂದು ಕಾಯಬೇಡಿ. ಬದಲಾಗಿ ‘ನನ್ನ ಗುರಿ ತಲಪಲು ನಾನು ಮಾಡಬೇಕಾದ ಮೊದಲ ವಿಷಯವೇನು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ನಂತರ ಅದನ್ನು ಮಾಡಿ. ಒಂದೊಂದು ಹೆಜ್ಜೆ ಮುಂದೆ ಸಾಗಿದಂತೆ ಗುರಿಯ ಕಡೆಗೆ ಎಷ್ಟು ಪ್ರಗತಿಮಾಡಿದ್ದೀರೆಂದು ಬರೆದಿಡಿ.

ಬೈಬಲ್‌ ತತ್ವ: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ.”—ಜ್ಞಾನೋಕ್ತಿ 21:5.