ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನೀವು . . . ಹೆಚ್ಚು ಬೆಲೆಯುಳ್ಳವರು.”—ಮತ್ತಾಯ 10:31

ದೇವರು ನಿಮ್ಮನ್ನು ಗಮನಿಸುತ್ತಾನಾ?

ದೇವರು ನಿಮ್ಮನ್ನು ಗಮನಿಸುತ್ತಾನಾ?

ಸೃಷ್ಟಿ ನಮಗೆ ಏನು ಕಲಿಸುತ್ತದೆ?

ಮಗು ತಾಯಿಯ ಗರ್ಭದಿಂದ ಹೊರ ಬಂದ ಮೊದಲ 60 ನಿಮಿಷಗಳು ತುಂಬ ಮುಖ್ಯ. ಯಾಕೆ? ಯಾಕೆಂದರೆ, ಈ ಸಮಯದಲ್ಲಿ ತಾಯಿಯು ನವಜಾತ ಮಗುವಿನೊಂದಿಗೆ ಬೆಸೆಯುವ ಬಂಧವು ಆ ಮಗು ಶಾರೀರಿಕ ಮತ್ತು ಮಾನಸಿಕವಾಗಿ ಚೆನ್ನಾಗಿ ಬೆಳೆಯುವಂತೆ ಮಾಡುತ್ತದೆ. *

ತನ್ನ ನವಜಾತ ಶಿಶುವನ್ನು ತಾಯಿ ಕೋಮಲವಾಗಿ ನೋಡಿಕೊಳ್ಳುವಂತೆ ಆಕೆಯನ್ನು ಯಾವುದು ಪ್ರೇರಿಸುತ್ತದೆ? ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಆಕ್ಸಿಟೊಸಿನ್‌ ಹಾರ್ಮೋನುಗಳು “ಮಗುವಿನ ಜನನದ ನಂತರ ತಾಯಿ ಅದನ್ನು ಮುಟ್ಟುವಾಗ, ನೋಡುವಾಗ, ಎದೆಹಾಲುಣಿಸುವಾಗ ತಾಯ್ತನದ ಭಾವನೆಗಳನ್ನು ಹುಟ್ಟಿಸುತ್ತವೆ” ಎಂದು ಉಪನ್ಯಾಸಕಿ ಜನೆಟ್‌ ಕ್ರೆನ್‌ಶೋರವರು ದ ಜರ್ನಲ್‌ ಆಫ್‌ ಪೆರಿನ್ಯಾಟಲ್‌ ಎಜುಕೇಶನ್‌ ಎಂಬ ತನ್ನ ಪುಸ್ತಕದಲ್ಲಿ ವಿವರಿಸಿದ್ದಾಳೆ. ಈ ಸಮಯದಲ್ಲಿ ಉತ್ಪತ್ತಿಯಾಗುವ ಇನ್ನೊಂದು ರೀತಿಯ ಹಾರ್ಮೋನು “ತಾಯಿ ತನ್ನ ಮಗುವಿಗೆ ಸ್ಪಂದಿಸಲು ಸಹಾಯ ಮಾಡುತ್ತದೆ” ಮತ್ತು ತಾಯಿ-ಮಗುವಿನ ಬಂಧವನ್ನು ಬಲಪಡಿಸುತ್ತದೆ. ಇದನ್ನು ನಾವು ಯಾಕೆ ಚರ್ಚಿಸುತ್ತಿದ್ದೇವೆ?

ತಾಯಿ-ಮಗುವಿನ ಮಧ್ಯೆ ಅಂಥ ಆಪ್ತ ಬಂಧವನ್ನು ಏರ್ಪಡಿಸಿರುವುದು ನಮ್ಮ ಪ್ರೀತಿಯ ಸೃಷ್ಟಿಕರ್ತನಾದ ಯೆಹೋವ ದೇವರು. * ತನ್ನನ್ನು ತಾಯಿಯ ‘ಗರ್ಭದಿಂದ ಬರಮಾಡಿದವನು’ ಮತ್ತು ತಾಯಿಯ ಮಡಿಲಲ್ಲಿ ಸುರಕ್ಷಿತವಾಗಿರಿಸಿದವನು ದೇವರೇ ಎಂದು ರಾಜ ದಾವೀದನು ಹೇಳಿದನು. “ಹುಟ್ಟಿದಂದಿನಿಂದ ನೀನೇ ನನಗೆ ಆಧಾರ; ತಾಯಿ ಹೆತ್ತಂದಿನಿಂದ ನನ್ನ ದೇವರು ನೀನೇ” ಎಂದವನು ಪ್ರಾರ್ಥಿಸಿದನು.—ಕೀರ್ತನೆ 22:9, 10.

ಯೋಚಿಸಿ: ತಾಯಿ ತನ್ನ ಮಗುವನ್ನು ಕೋಮಲವಾಗಿ ನೋಡಿಕೊಳ್ಳಲು, ಅದರ ಅಗತ್ಯಗಳಿಗೆ ಸ್ಪಂದಿಸಲು ಇಂಥ ಕ್ಲಿಷ್ಟಕರ ವ್ಯವಸ್ಥೆಯನ್ನು ಸೃಷ್ಟಿಸಿರುವ ದೇವರು ತನ್ನ “ಸಂತಾನ” ಅಥವಾ ಮಕ್ಕಳಾಗಿರುವ ನಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆ ಆಸಕ್ತಿವಹಿಸದೇ ಇರುತ್ತಾನಾ?—ಅಪೊಸ್ತಲರ ಕಾರ್ಯಗಳು 17:29.

ದೇವರು ನಮ್ಮನ್ನು ಅಕ್ಕರೆಯಿಂದ ಗಮನಿಸುವುದರ ಬಗ್ಗೆ ಬೈಬಲ್‌ ಏನು ಕಲಿಸುತ್ತದೆ?

ಸೃಷ್ಟಿಕರ್ತನ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ತಿಳಿದಿರುವ ಯೇಸು ಕ್ರಿಸ್ತನು ಹೀಗೆ ಹೇಳಿದನು: “ಸಣ್ಣ ಮೌಲ್ಯವಿರುವ ಒಂದು ಕಾಸಿಗೆ ಎರಡು ಗುಬ್ಬಿಗಳು ಮಾರಲ್ಪಡುವುದಿಲ್ಲವೇ? ಹಾಗಿದ್ದರೂ ನಿಮ್ಮ ತಂದೆಗೆ ತಿಳಿಯದೆ ಅವುಗಳಲ್ಲಿ ಒಂದೂ ನೆಲಕ್ಕೆ ಬೀಳುವುದಿಲ್ಲ. ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿರಿ; ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.”—ಮತ್ತಾಯ 10:29-31.

ನಾವು ಚಿಕ್ಕ ಹಕ್ಕಿಗಳನ್ನು ನೋಡುವಾಗ ಅವುಗಳಲ್ಲಿ ಪ್ರತಿಯೊಂದಕ್ಕೂ ಗಮನ ಕೊಡುವುದು ತುಂಬ ಕಡಿಮೆ, ‘ಅವುಗಳಲ್ಲಿ ಒಂದು ನೆಲಕ್ಕೆ ಬೀಳುವುದನ್ನು’ ನೋಡುವುದಂತೂ ದೂರದ ಮಾತು. ಆದರೆ ನಮ್ಮ ಸ್ವರ್ಗೀಯ ತಂದೆ ಅವುಗಳಲ್ಲಿ ಪ್ರತಿಯೊಂದನ್ನು ಗಮನಿಸುತ್ತಾನೆ! ದೇವರ ದೃಷ್ಟಿಯಲ್ಲಿ ಮಾನವನು ತುಂಬ ಹಕ್ಕಿಗಳಿಗಿಂತ ಹೆಚ್ಚು ಬೆಲೆಯುಳ್ಳವನು. ಇದರಿಂದ ನಮಗೇನು ಪಾಠ? ದೇವರು ನಮ್ಮ ಬಗ್ಗೆ ಆಸಕ್ತಿವಹಿಸುತ್ತಾನೆ.ಹಾಗಾಗಿ ನಾವು ‘ಭಯಪಡಬೇಕಿಲ್ಲ,’ ದೇವರು ನಮ್ಮನ್ನು ಗಮನಿಸುವುದೇ ಇಲ್ಲ ಎಂದು ನಾವೆಣಿಸಬಾರದು.

ನಮ್ಮ ಬಗ್ಗೆ ದೇವರಿಗೆ ತುಂಬ ಆಸಕ್ತಿ ಇದೆ, ನಮ್ಮ ಬಗ್ಗೆ ಚಿಂತೆ ಅಕ್ಕರೆ ಇರುವುದರಿಂದ ನಮ್ಮನ್ನು ಗಮನಿಸುತ್ತಿರುತ್ತಾನೆ

ಬೈಬಲ್‌ ಕೊಡುವ ಆಶ್ವಾಸನೆ

  • “ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು.”ಜ್ಞಾನೋಕ್ತಿ 15:3.

  • “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ” ಅಂದರೆ ನೋಡುತ್ತಾನೆ; “ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.” ಕೀರ್ತನೆ 34:15.

  • “ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು; ನಾನು ಕುಗ್ಗಿಹೋಗಿರುವದನ್ನು ನೋಡಿ ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ.” ಕೀರ್ತನೆ 31:7.

“ಯೆಹೋವನು ನನ್ನನ್ನು ಪ್ರೀತಿಸುತ್ತಿಲ್ಲ ಎಂದು ನನಗನಿಸಿತ್ತು”

ನಮ್ಮ ಬಗ್ಗೆ ದೇವರಿಗೆ ತುಂಬ ಆಸಕ್ತಿ ಇದೆ, ನಮ್ಮ ಬಗ್ಗೆ ಚಿಂತೆ ಅಕ್ಕರೆ ಇರುವುದರಿಂದ ನಮ್ಮನ್ನು ಗಮನಿಸುತ್ತಿರುತ್ತಾನೆ ಎಂದು ತಿಳಿಯುವುದರಿಂದ ನಮ್ಮ ಜೀವನದಲ್ಲಿ ಏನಾದರೂ ಪ್ರಯೋಜನ ಆಗುತ್ತದಾ? ಖಂಡಿತ ಆಗುತ್ತದೆ. ಇಂಗ್ಲೆಂಡಿನ ಹ್ಯಾನಾ * ಎಂಬವಳ ಮಾತನ್ನು ಗಮನಿಸಿ:

“ಯೆಹೋವನು ನನ್ನನ್ನು ಪ್ರೀತಿಸುತ್ತಿಲ್ಲ ಮತ್ತು ನನ್ನ ಪ್ರಾರ್ಥನೆಗಳಿಗೆ ಉತ್ತರನೇ ಸಿಕ್ತಾ ಇಲ್ಲ ಎಂದು ನನಗೆ ತುಂಬ ಸಾರಿ ಅನಿಸಿತ್ತು. ಇದಕ್ಕೆ ಕಾರಣ ನನ್ನ ನಂಬಿಕೆಯ ಕೊರತೆ ಎಂದು ಭಾವಿಸಿದೆ. ದೇವರಿಗೆ ನಾನೇನು ಮುಖ್ಯವಲ್ಲ, ಅದಕ್ಕೇ ನನಗೆ ಶಿಕ್ಷೆ ಸಿಗುತ್ತಿದೆ ಅಥವಾ ತಾತ್ಸಾರ ಮಾಡುತ್ತಿದ್ದಾನೆ ಎಂದೆನಿಸಿತು. ದೇವರಿಗೆ ನನ್ನ ಬಗ್ಗೆ ಚಿಂತೆಯೇ ಇಲ್ಲ ಎಂದುಕೊಂಡೆ.”

ಆದರೆ, ಈಗ ಹ್ಯಾನಾಳಿಗೆ ಯೆಹೋವನು ತನ್ನನ್ನು ಗಮನಿಸುತ್ತಾನಾ ಪ್ರೀತಿಸುತ್ತಾನಾ ಎಂಬ ಸಂಶಯವೇ ಇಲ್ಲ. ಅವಳ ಭಾವನೆ ಬದಲಾಗಲು ಕಾರಣವೇನು? ಅವಳು ವಿವರಿಸಿದ್ದು: “ಇದು ನಿಧಾನವಾಗಿ ಆದ ಬದಲಾವಣೆ. ಯೇಸು ತನ್ನ ಪ್ರಾಣವನ್ನು ನಮಗೋಸ್ಕರ ತ್ಯಾಗ ಮಾಡಿದ್ದರ ಬಗ್ಗೆ ಅನೇಕ ವರ್ಷಗಳ ಹಿಂದೆ ಕೇಳಿಸಿಕೊಂಡ ಒಂದು ಬೈಬಲ್‌ ಭಾಷಣ ನನ್ನ ಮೇಲೆ ತುಂಬ ಪ್ರಭಾವ ಬೀರಿತು. ಯೆಹೋವನು ನನ್ನನ್ನು ಪ್ರೀತಿಸುತ್ತಾನೆ ಎಂಬ ಆಶ್ವಾಸನೆ ಸಿಕ್ಕಿತು. ನನ್ನ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿದಾಗೆಲ್ಲ ಯೆಹೋವನು ಖಂಡಿತವಾಗಿಯೂ ನನ್ನನ್ನು ಪ್ರೀತಿಸುತ್ತಾನೆ ಎಂದು ಅರಿವಾಗಿ ನನಗೆ ಎಷ್ಟೋ ಸಲ ಅಳು ಉಕ್ಕಿ ಬಂದಿದೆ. ಬೈಬಲನ್ನು ಅಧ್ಯಯನ ಮಾಡುವುದರಿಂದ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದರಿಂದ ಯೆಹೋವನ ಬಗ್ಗೆ, ಆತನ ಗುಣಗಳ ಬಗ್ಗೆ ಮತ್ತು ನಮ್ಮ ಬಗ್ಗೆ ಆತನಿಗಿರುವ ಭಾವನೆಯ ಬಗ್ಗೆ ಹೆಚ್ಚನ್ನು ಕಲಿತಿದ್ದೇನೆ. ನಮ್ಮೆಲ್ಲರನ್ನು ಯೆಹೋವನು ಬೆಂಬಲಿಸುತ್ತಾನೆ, ಪ್ರೀತಿ ತೋರಿಸುತ್ತಾನೆ ಮತ್ತು ನಮ್ಮಲ್ಲಿ ಒಬ್ಬೊಬ್ಬರನ್ನೂ ನೋಡಿಕೊಳ್ಳುವ ಬಯಕೆ ಆತನಿಗಿದೆ ಎಂದು ನನಗೀಗ ಸ್ಪಷ್ಟವಾಗಿದೆ.”

ಹ್ಯಾನಾಳ ಮಾತುಗಳು ನಮಗೆ ಪ್ರೋತ್ಸಾಹ ನೀಡುತ್ತವೆ. ಆದರೆ ದೇವರು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಿಮ್ಮ ಭಾವನೆಗಳನ್ನು ನೆನಪಿನಲ್ಲಿಡುತ್ತಾನೆ ಎನ್ನಲು ಏನು ಆಧಾರವಿದೆ? ಈ ಪ್ರಶ್ನೆಗೆ ಮುಂದಿನ ಲೇಖನವು ಉತ್ತರ ನೀಡಲಿದೆ.

^ ಪ್ಯಾರ. 3 ಹೆರಿಗೆ ನಂತರದ ಖಿನ್ನತೆ (ಬಾಣಂತಿ ಸನ್ನಿ) ಇರುವ ಕೆಲವು ತಾಯಂದಿರಿಗೆ ಮಗುವಿನೊಂದಿಗೆ ಈ ಬಂಧವನ್ನು ಬೆಸೆಯಲು ಕಷ್ಟವಾಗಬಹುದು. ಆದರೆ ಇದು ತಮ್ಮ ತಪ್ಪೆಂದು ತಾಯಂದಿರು ನೆನಸಬಾರದು. ಯು.ಎಸ್‌. ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಯ ಪ್ರಕಾರ ಹೆರಿಗೆ ನಂತರದ ಖಿನ್ನತೆಯು “ದೈಹಿಕ ಮತ್ತು ಭಾವನಾತ್ಮಕ ಅಂಶಗಳ ಒಟ್ಟು ಪರಿಣಾಮ ಆಗಿರಸಾಧ್ಯವಿದೆ . . . ತಾಯಿ ಏನನ್ನೋ ಮಾಡಿದ್ದರಿಂದ ಅಥವಾ ಮಾಡಲು ತಪ್ಪಿಹೋದದರಿಂದ ಹೀಗಾಗುವುದಿಲ್ಲ.” ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎಚ್ಚರ! ಪತ್ರಿಕೆಯ 2003 ಜೂನ್‌ 8​ರ ಇಂಗ್ಲಿಷ್‌ ಆವೃತ್ತಿಯ “ಅಂಡರ್‌ಸ್ಟ್ಯಾಂಡಿಂಗ್‌ ಪೋಸ್ಟ್‌ಪಾರ್ಟಮ್‌ ಡಿಪ್ರೆಶ್ಶನ್‌” ಎಂಬ ಲೇಖನ ನೋಡಿ.

^ ಪ್ಯಾರ. 5 ಯೆಹೋವ ಎನ್ನುವುದು ದೇವರ ಹೆಸರು ಎಂದು ಬೈಬಲ್‌ ತಿಳಿಸುತ್ತದೆ.—ಕೀರ್ತನೆ 83:18.

^ ಪ್ಯಾರ. 15 ಈ ಲೇಖನಗಳಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.