ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಐಶ್ವರ್ಯ ದೇವರ ಅನುಗ್ರಹವೋ?

ಐಶ್ವರ್ಯ ದೇವರ ಅನುಗ್ರಹವೋ?

ಬೈಬಲಿನ ದೃಷ್ಟಿಕೋನ

ಐಶ್ವರ್ಯ ದೇವರ ಅನುಗ್ರಹವೋ?

“ಇಂದು ದೇವರು ನನ್ನ ಭಾಗ್ಯದ ಬಾಗಿಲನ್ನು ತೆರೆದ. ನಾನು ಲಕ್ಷಾಧಿಪತಿ ಆಗಲಿರುವೆ!”

“ದೇವದೇವತೆಗಳ ಕೃಪೆಯಿಂದ ನಾನೀಗ ದೊಡ್ಡ ಶ್ರೀಮಂತ.”

“ಸಿರಿಸಂಪತ್ತನ್ನು ಕೊಡುವಾತನು ಭಗವಂತನೇ.”

“ನನ್ನ ಸುಖಸಮೃದ್ಧಿಯು ಈ [ಬೈಬಲ್‌] ಗ್ರಂಥದಿಂದಲೇ.”

ಸಿರಿಸಂಪತ್ತುಗಳು ದೇವರ ಆಶೀರ್ವಾದ ಎಂದು ಹೇಳುವ ಮೇಲಿನ ಹೇಳಿಕೆಗಳು ಅನೇಕ ಧಾರ್ಮಿಕ ಗುಂಪುಗಳ ನೋಟ. ದೇವರು ಮೆಚ್ಚುವುದನ್ನು ಮಾಡಿದರೆ ಆತನು ನಮ್ಮನ್ನು ಈಗ ಮಾತ್ರವಲ್ಲ ಮುಂದಕ್ಕೂ ಐಶ್ವರ್ಯವನ್ನು ಕೊಟ್ಟು ಆಶೀರ್ವದಿಸುವನು ಎಂದವರು ಹೇಳುತ್ತಾರೆ. ಈ ನಂಬಿಕೆ ಹಾಗೂ ಇದನ್ನು ಪ್ರವರ್ಧಿಸುವ ಪುಸ್ತಕಗಳು ಅತ್ಯಂತ ಜನಪ್ರಿಯ. ಆದರೆ, ‘ಸಂಪತ್ಸಮೃದ್ಧಿ ದೇವರಿಂದಲೇ’ ಎಂಬ ನಂಬಿಕೆಯನ್ನು ಬೈಬಲ್‌ ಒಪ್ಪುತ್ತದೋ?

ನಾವು ಸಂತೋಷಕರವಾದ ಯಶಸ್ವೀ ಜೀವನವನ್ನು ನಡಿಸಬೇಕೆಂಬುದೇ ನಮ್ಮ ನಿರ್ಮಾಣಿಕನ ಅಪೇಕ್ಷೆ ಎಂಬುದು ನಿಜ. ಏಕೆಂದರೆ ಆತನು ‘ಸಂತೋಷದ ದೇವರು’ ಎನ್ನುತ್ತದೆ ಬೈಬಲ್‌. (1 ತಿಮೊಥೆಯ 1:11; ಕೀರ್ತನೆ 1:1-3) ಮಾತ್ರವಲ್ಲ, ಆತನ ಮೆಚ್ಚಿಗೆಯನ್ನು ಯಾರು ಪಡೆಯುತ್ತಾರೋ ಅವರನ್ನು ಆತನು ಆಶೀರ್ವದಿಸುತ್ತಾನೆ. (ಜ್ಞಾನೋಕ್ತಿ 10:22) ಆದರೆ ಇಂದು ಆ ಆಶೀರ್ವಾದ ಬರುವುದು ಐಹಿಕ ಸಮೃದ್ಧಿಯ ರೂಪದಲ್ಲಿ ಮಾತ್ರವೋ? ಈ ಪ್ರಶ್ನೆಗೆ ಉತ್ತರ, ದೇವರ ಉದ್ದೇಶಕ್ಕನುಸಾರ ನಾವು ಯಾವ ಸಮಯದಲ್ಲಿ ಜೀವಿಸುತ್ತಿದ್ದೇವೆ ಎಂದು ತಿಳಿಯುವಾಗ ದೊರೆಯುತ್ತದೆ.

ಇದು ಧನಿಕರಾಗುವ ಸಮಯವೋ?

ಹಿಂದಿನ ಕಾಲದಲ್ಲಿ ಯೆಹೋವ ದೇವರು ತನ್ನ ಕೆಲವು ಸೇವಕರನ್ನು ಐಹಿಕ ಸಂಪತ್ತುಗಳ ಸಮೃದ್ಧಿಯಿಂದ ಆಶೀರ್ವದಿಸಿದನು. ಅವರಲ್ಲಿ ಕೆಲವರು ಪೂರ್ವಜ ಯೋಬ, ರಾಜ ಸೊಲೊಮೋನರೇ ಮುಂತಾದವರು. (1 ಅರಸುಗಳು 10:23; ಯೋಬ 42:12) ದೇವರ ಇತರ ಅನೇಕ ಸೇವಕರು ಬಡವರೂ ಆಗಿದ್ದರು. ಸ್ನಾನಿಕನಾದ ಯೋಹಾನ, ಯೇಸು ಕ್ರಿಸ್ತ ಮುಂತಾದವರು. (ಮಾರ್ಕ 1:6; ಲೂಕ 9:58) ಹಾಗೇಕೆ? ಏಕೆಂದರೆ ದೇವರು ತನ್ನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಸಮಯಕ್ಕನುಸಾರ ತನ್ನ ಸೇವಕರೊಂದಿಗೆ ವ್ಯವಹರಿಸುತ್ತಾನೆಂದು ಬೈಬಲ್‌ ತಿಳಿಸುತ್ತದೆ. (ಪ್ರಸಂಗಿ 3:1) ಈ ಮೂಲತತ್ತ್ವವು ನಮಗಿಂದು ಹೇಗೆ ಅನ್ವಯಿಸುತ್ತದೆ?

ನಾವಿಂದು ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ’ ಅಥವಾ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂದು ಬೈಬಲ್‌ ಪ್ರವಾದನೆಯು ತಿಳಿಸುತ್ತದೆ. ಈ ಯುಗವು ಯುದ್ಧ, ರೋಗ, ಕ್ಷಾಮ, ಭೂಕಂಪ, ಮನುಷ್ಯರಲ್ಲಿ ಒಡಕು ಮುಂತಾದ ಕೆಟ್ಟ ಪರಿಸ್ಥಿತಿಗಳಿಂದ ತುಂಬಿಹೋಗಿದೆ. ವಿಶೇಷವಾಗಿ ಇಸವಿ 1914ರಿಂದ ಹಿಂದೆಂದಿಗಿಂತಲೂ ಹೆಚ್ಚಾಗಿ ಇವು ಮಾನವಕುಲವನ್ನು ಬಾಧಿಸಿವೆ. (ಮತ್ತಾಯ 24:3; 2 ತಿಮೊಥೆಯ 3:1-5; ಲೂಕ 21:10, 11; ಪ್ರಕಟನೆ 6:3-8) ಒಟ್ಟಿನಲ್ಲಿ ಈ ಲೋಕವು ಇನ್ನೇನು ಮುಳುಗಿ ಹೋಗಲಿರುವ ಹಡಗಿನಂತಿದೆ! ಈ ನೋಟದಲ್ಲಿ, ದೇವರು ತನ್ನ ಸೇವಕರಲ್ಲಿ ಪ್ರತಿಯೊಬ್ಬರನ್ನು ಐಶ್ವರ್ಯದಿಂದ ಆಶೀರ್ವದಿಸುವುದು ಯುಕ್ತವೆನಿಸುವುದೋ? ಅಥವಾ ನಮಗೆ ಬೇರೇನಾದರೂ ಆದ್ಯತೆಗಳನ್ನು ಆತನು ಇಟ್ಟಿದ್ದಾನೋ?

ಯೇಸು ಕ್ರಿಸ್ತನು ನಮ್ಮ ದಿನಗಳನ್ನು ನೋಹನ ದಿನಗಳಿಗೆ ಹೋಲಿಸಿದನು. ಅವನಂದದ್ದು: “ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯೊಳಗೆ ಪ್ರವೇಶಿಸುವ ದಿನದ ವರೆಗೆ ಜನರು ಊಟಮಾಡುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಸ್ತ್ರೀಯರನ್ನು ಮದುವೆಮಾಡಿಕೊಡುತ್ತಾ ಇದ್ದರು; ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ. ಹಾಗೆಯೇ ಮನುಷ್ಯಕುಮಾರನ ಸಾನ್ನಿಧ್ಯವೂ ಇರುವುದು.” (ಮತ್ತಾಯ 24:37-39) ಯೇಸು ನಮ್ಮ ದಿನಗಳನ್ನು ಲೋಟನ ದಿನಗಳಿಗೂ ಹೋಲಿಸಿದನು. ಸೊದೋಮ್‌ ಗೊಮೋರ ಸೀಮೆಯಲ್ಲಿ ಲೋಟನ ನೆರೆಹೊರೆಯವರು ‘ಊಟಮಾಡುತ್ತಾ ಕುಡಿಯುತ್ತಾ ಕೊಳ್ಳುತ್ತಾ ಮಾರುತ್ತಾ ನೆಡುತ್ತಾ ಕಟ್ಟುತ್ತಾ ಇದ್ದರು.’ “ಆದರೆ ಲೋಟನು ಸೊದೋಮಿನಿಂದ ಹೊರಟುಹೋದ ದಿವಸದಲ್ಲಿ ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು” ಎಂದನು ಯೇಸು. ಅವನು ಮತ್ತೂ ಅಂದದ್ದು: “ಮನುಷ್ಯಕುಮಾರನು ಪ್ರಕಟವಾಗಲಿರುವ ದಿನದಲ್ಲಿಯೂ ಹಾಗೆಯೇ ಇರುವುದು.”—ಲೂಕ 17:28-30.

ಊಟಮಾಡುವುದು, ಕುಡಿಯುವುದು, ಮದುವೆಯಾಗುವುದು, ಕೊಳ್ಳುವುದು, ಮಾರುವುದರಲ್ಲಿ ಏನೂ ತಪ್ಪಿಲ್ಲ ನಿಶ್ಚಯ. ಆದರೆ ಸಮಯದ ತುರ್ತಿನ ಕುರಿತು ಗಮನ ಕೊಡದಷ್ಟರ ಮಟ್ಟಿಗೆ ಅಂಥಾ ವಿಷಯಗಳಲ್ಲೇ ತೀರಾ ಮೈಮರೆತಿರುವುದು ಅಪಾಯಕರ ಎಂದು ಅದು ಸೂಚಿಸುತ್ತದೆ. ನಿಮ್ಮನ್ನೇ ಕೇಳಿಕೊಳ್ಳಿ: ‘ನಮ್ಮ ಬದುಕನ್ನು ಅಪಕರ್ಷಿಸುವ ಐಶ್ವರ್ಯ ಮುಂತಾದ ವಿಷಯಗಳಿಂದ ತಾನೇ ದೇವರು ನಮ್ಮನ್ನು ಆಶೀರ್ವದಿಸುವಂತಿದ್ದರೆ ಅದನ್ನು ದೇವಾನುಗ್ರಹವೆಂದು ಹೇಳಬಹುದೋ?’ * ಖಂಡಿತ ಇಲ್ಲ, ಬದಲಾಗಿ ದೇವರು ನಮಗೆ ದೊಡ್ಡ ಅಪಕಾರಮಾಡಿದಂತೆ ಅದಿರದೇ? ಪ್ರೀತಿಸ್ವರೂಪಿಯಾದ ನಮ್ಮ ದೇವರ ಮಾರ್ಗವು ಆ ರೀತಿಯದ್ದಲ್ಲ.—1 ತಿಮೊಥೆಯ 6:17; 1 ಯೋಹಾನ 4:8.

ಜೀವರಕ್ಷಣೆಯ ಸಮಯ!

ಮಾನವ ಇತಿಹಾಸದ ಈ ಸಂದಿಗ್ಧ ಕಾಲದಲ್ಲಿ ದೇವಜನರಿಗೆ ಒಂದು ತುರ್ತಿನ ಕೆಲಸವನ್ನು ಮಾಡಲಿಕ್ಕಿದೆ. ಯೇಸು ಅಂದದ್ದು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” (ಮತ್ತಾಯ 24:14) ಯೆಹೋವನ ಸಾಕ್ಷಿಗಳು ಈ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಆದುದರಿಂದ ಅವರು ದೇವರ ರಾಜ್ಯದ ಕುರಿತು ಮತ್ತು ನಿತ್ಯಜೀವಕ್ಕಾಗಿ ದೇವರು ನಮ್ಮಿಂದ ಅಪೇಕ್ಷಿಸುವ ವಿಷಯಗಳನ್ನು ಕಲಿಯುವಂತೆ ತಮ್ಮ ನೆರೆಯವರನ್ನು ಉತ್ತೇಜಿಸುತ್ತಾರೆ.—ಯೋಹಾನ 17:3.

ಆದರೂ ದೇವರು ತನ್ನ ನಂಬಿಗಸ್ತ ಸೇವಕರು ವೈರಾಗ್ಯ ಜೀವನವನ್ನು ನಡೆಸುವಂತೆ ಅಪೇಕ್ಷಿಸುವುದಿಲ್ಲ. ಬದಲಾಗಿ ಅವರು ತಮ್ಮ ಜೀವಿತದ ಆವಶ್ಯಕತೆಗಳಲ್ಲಿ ತೃಪ್ತರಾಗಿದ್ದು ತನ್ನ ಸೇವೆಗೆ ಆದ್ಯತೆ ಕೊಡುವಂತೆ ಆತನು ಬಯಸುತ್ತಾನೆ. (ಮತ್ತಾಯ 6:33) ಪ್ರತಿಫಲವಾಗಿ ಆತನು ಅವರ ಐಹಿಕ ಅಗತ್ಯಗಳನ್ನು ಪೂರೈಸುವ ಭರವಸೆಕೊಟ್ಟಿದ್ದಾನೆ. ಇಬ್ರಿಯ 13:5 ಹೇಳುವುದು: “ನೀವು ನಿಮಗಿರುವವುಗಳಲ್ಲಿಯೇ ತೃಪ್ತರಾಗಿರುವಾಗ ನಿಮ್ಮ ಜೀವನ ರೀತಿಯು ಹಣದ ಪ್ರೇಮದಿಂದ ಮುಕ್ತವಾಗಿರಲಿ. ಏಕೆಂದರೆ ‘ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ’ ಎಂದು ಆತನು ಹೇಳಿದ್ದಾನೆ.”

ದೇವರು ಈ ಮಾತುಗಳನ್ನು ಸತ್ಯವೆಂದು ಮಹತ್ತರವಾಗಿ ತೋರಿಸಿಕೊಡುವನು. ಸತ್ಯಾರಾಧಕರ ಒಂದು ಮಹಾ ಸಮೂಹವನ್ನು ಈ ಸದ್ಯದ ವ್ಯವಸ್ಥೆಯ ಅಂತ್ಯದಿಂದ ಪಾರುಗೊಳಿಸಿ, ಶಾಂತಿ ಮತ್ತು ನಿಜ ಸಮೃದ್ಧಿಯ ಹೊಸ ಲೋಕದೊಳಗೆ ನಡಿಸುವಾಗ ಇದು ನೆರವೇರುವುದು. (ಪ್ರಕಟನೆ 7:9, 14) ಯೇಸು ಅಂದದ್ದು: “ನಾನಾದರೋ ಅವುಗಳಿಗೆ [ತನ್ನ ನಂಬಿಗಸ್ತ ಹಿಂಬಾಲಕರಿಗೆ] ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು.” (ಯೋಹಾನ 10:10, BSI) ಆ ‘ಸಮೃದ್ಧಿ ಜೀವವು’ ಈಗಿನ ಐಹಿಕ ಸಮೃದ್ಧಿಯ ಜೀವನವಲ್ಲ, ಬದಲಾಗಿ ದೇವರ ರಾಜ್ಯದಾಳಿಕೆಯ ಕೆಳಗಿನ ಪರದೈಸದಲ್ಲಿ ಅನಂತ ಜೀವನವಾಗಿದೆ.—ಲೂಕ 23:43.

ಐಶ್ವರ್ಯವು ದೇವರ ವರದಾನ ಎಂದೆನ್ನುವ ತತ್ತ್ವದಿಂದ ಮೋಸಹೋಗಬೇಡಿ. ವಾಸ್ತವದಲ್ಲಿ ಅದು ಅಪಕರ್ಷಣೆಯೇ ಹೊರತು ಬೇರೇನಲ್ಲ. ಬದಲಾಗಿ ಯೇಸುವಿನ ಈ ಪ್ರೀತಿಪೂರ್ವಕವಾದ ಹಾಗೂ ತುರ್ತಿನ ಬುದ್ಧಿವಾದಕ್ಕೆ ಗಮನಕೊಡಿ: “ನಿಮ್ಮ ಹೃದಯಗಳು ಎಂದಿಗೂ ಅತಿಯಾದ ಭೋಜನ, ವಿಪರೀತವಾದ ಕುಡಿತ ಮತ್ತು ಜೀವನದ ಚಿಂತೆಗಳ ಭಾರದಿಂದ ಕುಗ್ಗಿಹೋಗದಂತೆ ಮತ್ತು ಆ ದಿನವು ಥಟ್ಟನೆ ಉರ್ಲಿನಂತೆ ನಿಮ್ಮ ಮೇಲೆ ಎರಗಿ ಬರದಿರುವಂತೆ ನಿಮಗೆ ಗಮನಕೊಟ್ಟುಕೊಳ್ಳಿರಿ.”—ಲೂಕ 21:34, 35. (g 5/09)

[ಪಾದಟಿಪ್ಪಣಿ]

^ ಮೊದಲನೇ ಶತಮಾನದಲ್ಲಿದ್ದಂತೆ ಇಂದು ಸಹ ಕೆಲವು ನಂಬಿಗಸ್ತ ಕ್ರೈಸ್ತರು ಐಶ್ವರ್ಯವಂತರಾಗಿದ್ದಾರೆ. ಆದರೂ ಅವರು ತಮ್ಮ ಐಶ್ವರ್ಯದಲ್ಲಿ ನಂಬಿಕೆಯಿಡದಂತೆ ಹಾಗೂ ಅದರಿಂದ ಅಪಕರ್ಷಿತರಾಗದಂತೆ ದೇವರು ಅವರನ್ನು ಎಚ್ಚರಿಸುತ್ತಾನೆ. (ಜ್ಞಾನೋಕ್ತಿ 11:28; ಮಾರ್ಕ 10:25; ಪ್ರಕಟನೆ 3:17) ಧನಿಕರಾಗಿರಲಿ ಬಡವರಾಗಿರಲಿ ದೇವರ ಚಿತ್ತವನ್ನು ಮಾಡುವುದಕ್ಕೆ ನಾವೆಲ್ಲರೂ ಆದ್ಯತೆ ಕೊಡಬೇಕು.—ಲೂಕ 12:31.

ನೀವೇನು ಹೇಳುತ್ತೀರಿ?

◼ ಇದೀಗ ಯಾವುದಕ್ಕೆ ನೇಮಿತ ಸಮಯವಾಗಿದೆ?—ಮತ್ತಾಯ 24:14.

◼ ಬೈಬಲ್‌ನಲ್ಲಿರುವ ಯಾವ ವ್ಯಕ್ತಿಗಳ ಕಾಲವನ್ನು ನಮ್ಮ ಸಮಯಕ್ಕೆ ಯೇಸು ಹೋಲಿಸಿದನು?—ಮತ್ತಾಯ 24:37-39; ಲೂಕ 17:28-30.

◼ ನಿತ್ಯಜೀವ ಪಡೆಯಬೇಕಾದರೆ ನಾವು ಏನನ್ನು ವರ್ಜಿಸಲೇಬೇಕು?ಲೂಕ 21:34.

[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]

ಐಶ್ವರ್ಯವು ದೇವರ ವರದಾನ ಎಂದೆನ್ನುವ ತತ್ತ್ವವು ವಾಸ್ತವದಲ್ಲಿ ಅಪಕರ್ಷಣೆಯೇ ಹೊರತು ಬೇರೇನಲ್ಲ