ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಲಹೆ 2 ದೇಹದ ಮೂಲಭೂತ ಅಗತ್ಯಗಳನ್ನು ಪೂರೈಸಿ

ಸಲಹೆ 2 ದೇಹದ ಮೂಲಭೂತ ಅಗತ್ಯಗಳನ್ನು ಪೂರೈಸಿ

ಸಲಹೆ 2 ದೇಹದ ಮೂಲಭೂತ ಅಗತ್ಯಗಳನ್ನು ಪೂರೈಸಿ

“ಯಾವನೂ ಎಂದೂ ಸ್ವಶರೀರವನ್ನು ದ್ವೇಷಿಸಿದ್ದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ.”—ಎಫೆಸ 5:29. ದೇಹದ ಮೂಲಭೂತ ಅಗತ್ಯಗಳನ್ನು ನೀವು ಪೂರೈಸಿದರೆ ನಿಮ್ಮ ಆರೋಗ್ಯದಲ್ಲಿ ಮಹತ್ತರ ಬದಲಾವಣೆಯನ್ನು ಕಾಣಬಲ್ಲಿರಿ.

ಸಾಕಷ್ಟು ವಿಶ್ರಾಂತಿ ಪಡೆಯಿರಿ. “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ [ವಿಶ್ರಾಂತಿಯ, NW] ಸೇರೆಯೇ ಲೇಸು.” (ಪ್ರಸಂಗಿ 4:6) ಇಂದಿನ ಆಧುನಿಕ ಜೀವನಶೈಲಿಯ ಬೇಡಿಕೆಗಳು, ಅಪಕರ್ಷಣೆಗಳು ಜನರ ನಿದ್ರಾ ಸಮಯವನ್ನು ಅಪಹರಿಸಿ ಬಿಟ್ಟಿವೆ. ಆದರೆ ಒಳ್ಳೇ ಆರೋಗ್ಯಕ್ಕೆ ನಿದ್ದೆ ಬಹಳ ಮುಖ್ಯ. ಅಧ್ಯಯನಗಳು ತೋರಿಸುವಂತೆ, ನಿದ್ದೆಮಾಡುವಾಗ ನಮ್ಮ ದೇಹ ಮತ್ತು ಮಿದುಳು ತಮ್ಮನ್ನು ಸರಿಪಡಿಸಿಕೊಳ್ಳುತ್ತವೆ. ಇದರಿಂದ ನಮ್ಮ ಜ್ಞಾಪಕ ಶಕ್ತಿ ಹಾಗೂ ಮನಃಸ್ಥಿತಿ ಚೆನ್ನಾಗಿರುತ್ತದೆ.

ನಿದ್ದೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೋಂಕು, ಮಧುಮೇಹ, ಲಕ್ವ, ಹೃದ್ರೋಗ, ಕ್ಯಾನ್ಸರ್‌, ಬೊಜ್ಜು ಮೈ, ಖಿನ್ನತೆ, ಬಹುಶಃ ಅಲ್‌ಜೈಮರ್ಸ್‌ ರೋಗದ ಅಪಾಯವನ್ನೂ ಕಡಿಮೆ ಮಾಡುತ್ತದೆ. ನಿದ್ದೆ ನಮ್ಮ ನೈಸರ್ಗಿಕ “ಸುರಕ್ಷಾ ಸಾಧನ.” ಮಿಠಾಯಿ, ಕ್ಯಾಫೀನ್‌ ಅಥವಾ ಇತರ ಉತ್ತೇಜಕಗಳನ್ನು ಸೇವಿಸಿ ನಿದ್ದೆ ಓಡಿಸಲು ಯತ್ನಿಸಬೇಡಿ. ಬದಲಾಗಿ ನಿದ್ದೆ ಬಂದಾಗ ನಿದ್ದೆಮಾಡಿ. ಚೆನ್ನಾಗಿ ತೋರಲು, ಚುರುಕಾಗಿರಲು ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಅಧಿಕಾಂಶ ವಯಸ್ಕರಿಗೆ ಪ್ರತಿ ರಾತ್ರಿ 7-8 ಗಂಟೆ ನಿದ್ದೆ ಬೇಕು. ಯುವಜನರಿಗೆ ಅದಕ್ಕಿಂತಲೂ ಹೆಚ್ಚು ನಿದ್ದೆ ಅಗತ್ಯ. ಸರಿಯಾಗಿ ನಿದ್ದೆ ಮಾಡದ ಹದಿಹರೆಯದವರು ಮಾನಸಿಕ ತೊಂದರೆಗಳಿಗೆ ತುತ್ತಾಗುವುದು ಹೆಚ್ಚು; ವಾಹನ ಚಲಾಯಿಸುವಾಗ ತೂಕಡಿಸುವ ಅಪಾಯವೂ ಹೆಚ್ಚು.

ನಮಗೆ ನಿದ್ದೆಯ ಅತಿ ಅಗತ್ಯವಿರುವುದು ಕಾಯಿಲೆ ಬಿದ್ದಾಗ. ಎಂದಿಗಿಂತ ಸ್ವಲ್ಪ ಜಾಸ್ತಿ ನಿದ್ದೆಮಾಡುವುದರಿಂದ ಮತ್ತು ಪಾನೀಯಗಳನ್ನು ಹೆಚ್ಚು ಸೇವಿಸುವುದರಿಂದ ನೆಗಡಿಯಂಥ ಕೆಲವು ಕಾಯಿಲೆಗಳಿಂದ ಬೇಗನೆ ಗುಣಮುಖರಾಗಬಲ್ಲೆವು.

ನಿಮ್ಮ ಹಲ್ಲುಗಳ ಕಾಳಜಿವಹಿಸಿ. ಊಟವಾದ ಬಳಿಕ ವಿಶೇಷವಾಗಿ ರಾತ್ರಿ ಮಲಗುವ ಮುಂಚೆ ಹಲ್ಲುಜ್ಜುವ, ದಂತರೇಷ್ಮೆಯಿಂದ ಹಲ್ಲಿನ ಸಂದುಗಳನ್ನು ಶುಚಿಗೊಳಿಸುವ (ಫ್ಲಾಸ್ಸಿಂಗ್‌) ಮೂಲಕ ದಂತಕ್ಷಯ, ವಸಡು ರೋಗಗಳಿಂದ ಸಂರಕ್ಷಣೆ ಸಿಗುವುದು ಹಾಗೂ ಹಲ್ಲುದುರುವ ಪರಿಸ್ಥಿತಿ ಬಾರದು. ನಮ್ಮ ಸ್ವಂತ ಹಲ್ಲುಗಳಿಲ್ಲದಿದ್ದಲ್ಲಿ ನಾವು ತಿನ್ನುವ ಆಹಾರದ ಪೂರ್ಣ ಪ್ರಯೋಜನ ದೊರೆಯದು. ಆನೆಗಳು ಸಾಯುವುದು ಮುದಿಪ್ರಾಯದ ಕಾರಣದಿಂದಲ್ಲ, ಬದಲಿಗೆ ಅವುಗಳ ಹಲ್ಲುಗಳು ಸವೆದು ಹೋದ ನಂತರ ಏನನ್ನೂ ಸರಿಯಾಗಿ ಜಗಿದು ತಿನ್ನಲಾಗದೆ ಹಸಿವಿನಿಂದ ಕ್ರಮೇಣ ಸಾಯುತ್ತವಂತೆ. ಊಟವಾದ ಮೇಲೆ ಹಲ್ಲುಜ್ಜಲು ಮತ್ತು ಫ್ಲಾಸ್ಸಿಂಗ್‌ ಮಾಡಲು ಕಲಿಸಲ್ಪಟ್ಟ ಮಕ್ಕಳು ತಮ್ಮ ಎಳೇ ಪ್ರಾಯದಲ್ಲಿ ಮಾತ್ರವಲ್ಲ ಜೀವನದುದ್ದಕ್ಕೂ ಆರೋಗ್ಯದಿಂದಿರುವರು.

ಡಾಕ್ಟರ್‌ ಹತ್ತಿರ ಹೋಗಿ. ಕೆಲವು ಕಾಯಿಲೆಗಳಿಗೆ ವೃತ್ತಿಪರ ವೈದ್ಯಕೀಯ ನೆರವು ಅವಶ್ಯ. ಅಸ್ವಸ್ಥತೆಯನ್ನು ಆರಂಭದಲ್ಲೇ ತಪಾಸಣೆಮಾಡಿ ಪತ್ತೆಹಚ್ಚಿದರೆ ಒಳ್ಳೇದು, ಖರ್ಚೂ ಕಡಿಮೆಯಾಗುವುದು. ನಿಮಗೆ ಹುಷಾರಿಲ್ಲದಿದ್ದರೆ ಬರೇ ರೋಗಲಕ್ಷಣಗಳನ್ನು ಗುಣಪಡಿಸುವ ಬದಲು ಡಾಕ್ಟರರ ಸಹಾಯದಿಂದ ಮೂಲಕಾರಣವನ್ನು ಕಂಡುಹಿಡಿದು ನಿವಾರಿಸಿಕೊಳ್ಳಿ.

ಗರ್ಭಿಣಿಯರು ವೃತ್ತಿಪರ ವೈದ್ಯಕೀಯ ಆರೈಕೆಯಿಂದಾಗಿ ಗಂಭೀರ ಸಮಸ್ಯೆಗಳನ್ನು ತಡೆಯುವಂತೆಯೇ ನಾವು ಅಧಿಕೃತ ಆರೋಗ್ಯಾರೈಕೆ ಕೊಡುವವರಿಂದ ನಿಯತ ತಪಾಸಣೆಮಾಡಿಸುವುದು ಅನೇಕ ಗಂಭೀರ ಸಮಸ್ಯೆಗಳನ್ನು ತಡೆಗಟ್ಟಬಲ್ಲದು. * ಆದರೂ ನೆನಪಿಡಿ ವೈದ್ಯರು ಪವಾಡಗಳನ್ನು ಮಾಡಲಾರರು. ಭವಿಷ್ಯದಲ್ಲಿ ದೇವರು ‘ಎಲ್ಲವನ್ನು ಹೊಸದು ಮಾಡುವ’ ಸಮಯದಲ್ಲಿ ಮಾತ್ರ ನಮ್ಮೆಲ್ಲ ಕಾಯಿಲೆಗಳು ಸಂಪೂರ್ಣ ವಾಸಿಯಾಗುವವು.—ಪ್ರಕಟನೆ 21:4, 5. (g11-E 03)

[ಪಾದಟಿಪ್ಪಣಿ]

^ ಜುಲೈ-ಸೆಪ್ಟೆಂಬರ್‌ 2010ರ ಎಚ್ಚರ! ಪತ್ರಿಕೆಯ “ಆರೋಗ್ಯವಂತ ತಾಯಿ ಆರೋಗ್ಯವಂತ ಮಗು” ಲೇಖನ ನೋಡಿ.