ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾಕಿದೆ ಇಷ್ಟೊಂದು ಕಷ್ಟ?

ಯಾಕಿದೆ ಇಷ್ಟೊಂದು ಕಷ್ಟ?

ಯಾಕಿದೆ ಇಷ್ಟೊಂದು ಕಷ್ಟ?

ಈ ಪ್ರಶ್ನೆಗೆ ಉತ್ತರ ತಿಳಿದಿದೆ ಎಂದು ಹೇಳುವ ಧರ್ಮಗುರುಗಳು, ಮನುಷ್ಯನಿಗೆ ಬರುವ ಕಷ್ಟವೆಲ್ಲ ದೇವರ ಶಿಕ್ಷೆಯೆಂದು ಬೋಧಿಸುತ್ತಾರೆ. ಉದಾಹರಣೆಗೆ ಹೇಟೀಯಲ್ಲಾದ ಭೂಕಂಪ ದೇವರ ಸಂದೇಶವಾಗಿತ್ತು ಎಂದು ಅಲ್ಲಿನ ಪಾದ್ರಿಯೊಬ್ಬನು ತನ್ನ ಚರ್ಚ್‌ ಸದಸ್ಯರಿಗೆ ಹೇಳಿದನು. ಇತರರು ಈ ವಿಷಯವನ್ನು ಇಷ್ಟು ಖಡಾಖಂಡಿತವಾಗಿ ಹೇಳುವುದಿಲ್ಲ. ಅಮೆರಿಕದಲ್ಲಿ ಧರ್ಮದ ಕುರಿತು ವಿಶ್ಲೇಷಿಸುವ ಸಹಾಯಕ ಪ್ರೊಫೆಸರರೊಬ್ಬರಿಗನುಸಾರ ಅನೇಕ ಜನರ ಅನಿಸಿಕೆ ಇದು: “ಇಂಥ ವಿಪತ್ತುಗಳನ್ನು ದೇವರು ಯಾಕೆ ತರುತ್ತಾನೆ ಎಂಬ ಮರ್ಮ ಬಿಡಿಸುವುದು ನಮ್ಮ ಕೆಲಸವಲ್ಲ. ನಮ್ಮ ಕೆಲಸ ದೇವರಲ್ಲಿ ನಂಬಿಕೆಯಿಡುವುದು ಅಷ್ಟೇ.”

ಹಾಗಾದರೆ ಕಷ್ಟಕಾರ್ಪಣ್ಯಗಳನ್ನು ದೇವರು ತರುತ್ತಾನಾ? ಇಲ್ಲ ಎಂಬುದು ಬೈಬಲಿನ ಸ್ಪಷ್ಟ ಉತ್ತರ. ಮಾನವರು ನಾನಾ ಕಷ್ಟಗಳಿಗೆ ತುತ್ತಾಗಬೇಕು ಎಂಬುದು ಯೆಹೋವ ದೇವರ ಉದ್ದೇಶವಾಗಿರಲಿಲ್ಲ. ಆದರೆ ಮೊಟ್ಟಮೊದಲ ಮಾನವ ಜೋಡಿ ದೇವರ ಆಳ್ವಿಕೆಗೆ ತಿರುಗಿಬಿದ್ದರು. ಯಾವುದು ಸರಿ ಯಾವುದು ತಪ್ಪು ಎಂದು ತಾವೇ ನಿರ್ಧರಿಸುವ ಆಯ್ಕೆ ಮಾಡಿದರು. ಮಾಡಿದ್ದುಣ್ಣೋ ಮಾರಾಯ ಅನ್ನೋ ಮಾತು ಅವರ ವಿಷಯದಲ್ಲಿ ಸತ್ಯವಾಯಿತು. ಅವರ ಆಯ್ಕೆಯ ಕಹಿ ಪರಿಣಾಮವನ್ನೇ ನಾವಿಂದು ಅನುಭವಿಸುತ್ತಿದ್ದೇವೆ ವಿನಃ ನಮ್ಮ ಕಷ್ಟಗಳು ದೇವರಿಂದ ಬಂದಿಲ್ಲ. ಬೈಬಲ್‌ ಹೇಳುವುದು: “ಪರೀಕ್ಷೆಗೆ ಒಳಪಡುವಾಗ, ‘ನಾನು ದೇವರಿಂದ ಪರೀಕ್ಷಿಸಲ್ಪಡುತ್ತಿದ್ದೇನೆ’ ಎಂದು ಯಾವನೂ ಹೇಳದಿರಲಿ. ಏಕೆಂದರೆ ಕೆಟ್ಟ ಸಂಗತಿಗಳಿಂದ ದೇವರನ್ನು ಪರೀಕ್ಷಿಸಲು ಸಾಧ್ಯವೂ ಇಲ್ಲ, ಆತನು ತಾನೇ ಯಾರನ್ನೂ ಪರೀಕ್ಷಿಸುವುದೂ ಇಲ್ಲ.” (ಯಾಕೋಬ 1:13) ಕಷ್ಟ ಯಾರ ಮೇಲಾದರೂ ಎರಗಬಹುದು. ದೇವರ ಅನುಗ್ರಹ ಪಡೆದವರನ್ನೂ ಅದು ಬಿಡುವುದಿಲ್ಲ. ಉದಾಹರಣೆಗೆ:

● ಪ್ರವಾದಿ ಎಲೀಷನಿಗೆ ಮಾರಣಾಂತಿಕ ರೋಗವಿತ್ತು.—2 ಅರಸುಗಳು 13:14.

● ಕ್ರಿಸ್ತನ ಶಿಷ್ಯನಾದ ಪೌಲ ‘ತಾನು ಹಸಿದವನೂ ಬಾಯಾರಿದವನೂ ಸಾಕಷ್ಟು ಬಟ್ಟೆಯಿಲ್ಲದವನೂ ಗುದ್ದುತಿನ್ನುವವನೂ ಮನೆಯಿಲ್ಲದವನೂ ಆಗಿದ್ದೆ’ ಎಂದನು.—1 ಕೊರಿಂಥ 4:11.

● ಕ್ರೈಸ್ತನಾಗಿದ್ದ ಎಪಫ್ರೊದೀತನು ಅಸ್ವಸ್ಥತೆ ಮತ್ತು ಖಿನ್ನತೆಯನ್ನು ಅನುಭವಿಸಿದ್ದನು.—ಫಿಲಿಪ್ಪಿ 2:25, 26.

ಈ ಮೂರು ಮಂದಿಯ ಕಷ್ಟಗಳು ಅವರ ಪಾಪಗಳಿಗೆ ದೇವರು ಕೊಟ್ಟ ಶಿಕ್ಷೆ ಎಂದು ಬೈಬಲ್‌ ಎಲ್ಲೂ ಹೇಳುವುದಿಲ್ಲ. ದೇವರು ಕಷ್ಟಗಳಿಗೆ ಕಾರಣನಲ್ಲ ಎಂದು ಹೇಳುವ ಬೈಬಲ್‌ ಅದಕ್ಕೆ ಕಾರಣವಾಗಿರುವ ಮೂರು ಮುಖ್ಯ ಅಂಶಗಳಿಗೆ ಕೈತೋರಿಸುತ್ತದೆ. (g11-E 07)

ವೈಯಕ್ತಿಕ ಆಯ್ಕೆಗಳು

“ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು.” (ಗಲಾತ್ಯ 6:7) ಒಬ್ಬನು ಧೂಮಪಾನ ಮಾಡಿದರೆ, ಅಜಾಗ್ರತೆಯಿಂದ ಗಾಡಿ ಓಡಿಸಿದರೆ, ತನ್ನ ಸಂಪಾದನೆಯನ್ನು ಪೋಲುಮಾಡಿದರೆ ಅದು ಅವನ ಆಯ್ಕೆ. ಇವುಗಳಿಂದಾಗುವ ಕಷ್ಟನಷ್ಟಗಳಿಗೆ ಅವನೇ ಕಾರಣ.

ಕೆಲವೊಮ್ಮೆ ಬೇರೆಯವರ ಸ್ವಾರ್ಥಪರ ಆಯ್ಕೆಯಿಂದಾಗಿಯೂ ನಾವು ಕಷ್ಟ ಅನುಭವಿಸಬೇಕಾಗುತ್ತದೆ. ನಾಜಿಗಳ ಕ್ರೌರ್ಯದಿಂದ ಹಿಡಿದು ಮಕ್ಕಳನ್ನು ತಮ್ಮ ತೃಷೆ ತಣಿಸಲು ಕೆಡಿಸುವುದರ ತನಕ ಮಾನವನ ದುಷ್ಟತನ ಎಲ್ಲೆಮೀರಿ ಹೋಗಿದೆ. ತಮ್ಮ ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸುತ್ತಾ ಕೆಲವರು ಮಾಡುವ ಆಯ್ಕೆಯಿಂದ ಬೇರೆಯವರು ನೋವುಣ್ಣುತ್ತಾರೆ.

ಅನಿರೀಕ್ಷಿತ ಘಟನೆಗಳು

ಒಂದನೇ ಶತಮಾನದಲ್ಲಿ ಯೆರೂಸಲೇಮ್‌ ಪಟ್ಟಣದ ಒಂದು ದೊಡ್ಡ ಬುರುಜು ಕುಸಿದುಬಿದ್ದು 18 ಮಂದಿ ಸಾವಿಗೆ ಶರಣಾದರು. ಆ ಅಮಾಯಕರ ಬಗ್ಗೆ ಯೇಸು ಹೇಳಿದ್ದು: “ಸತ್ತ ಆ ಹದಿನೆಂಟು ಮಂದಿ, ಯೆರೂಸಲೇಮಿನಲ್ಲಿ ವಾಸಿಸುತ್ತಿರುವ ಇತರ ಎಲ್ಲರಿಗಿಂತ ಹೆಚ್ಚು ಪಾಪಿಗಳಾಗಿ ಕಂಡುಬಂದರೆಂದು ನೀವು ಭಾವಿಸುತ್ತೀರೊ? ಇಲ್ಲ!” (ಲೂಕ 13:4, 5) ಈ ಜನರ ಸಾವು ದೇವರ ಶಿಕ್ಷೆಯಾಗಿರಲಿಲ್ಲ ಎಂದು ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. “ಅನಿರೀಕ್ಷಿತ ಘಟನೆಯಿಂದ ಯಾರೂ ತಪ್ಪಿಸಿಕೊಳ್ಳಸಾಧ್ಯವಿಲ್ಲ” ಎಂಬ ಬೈಬಲಿನ ಮಾತೂ ಅವನಿಗೆ ತಿಳಿದಿತ್ತು. (ಪ್ರಸಂಗಿ 9:11, NW) ಅನಿರೀಕ್ಷಿತ ಘಟನೆಗಳಿಗೆ ಸಿಲುಕಿ ಎಷ್ಟೋ ಮಂದಿ ಸಾವಿಗೀಡಾಗುತ್ತಾರೆ. ಮಾನವನ ನಿರ್ಲಕ್ಷ್ಯದಿಂದಲೂ ಕೆಲವೊಮ್ಮೆ ಇಂಥ ದುರಂತಗಳಾಗುತ್ತವೆ. ಉದಾಹರಣೆಗೆ, ಎಚ್ಚರಿಕೆಗಳನ್ನು ಜನರು ಕಿವಿಗೆ ಹಾಕಿಕೊಳ್ಳದಿದ್ದಾಗ ಮತ್ತು ಪ್ರತಿಕೂಲ ವಾತಾವರಣವನ್ನು ತಡೆದುನಿಲ್ಲುವ ಅಥವಾ ಭೂಕಂಪ ನಿರೋಧಕ ಕಟ್ಟಡಗಳನ್ನು ಕಟ್ಟದಿರುವಾಗ ಸಾವುನೋವುಗಳು ಅಧಿಕವಾಗುತ್ತವೆ. ಇಂಥ ಸಂದರ್ಭಗಳಲ್ಲಿ ಅನಿರೀಕ್ಷಿತ ಘಟನೆಗಳು ಹೆಚ್ಚು ಜನರನ್ನು ಬಾಧಿಸುತ್ತವೆ, ಹೆಚ್ಚು ನೋವಿಗೆ ಕಾರಣವಾಗುತ್ತವೆ.

“ಈ ಲೋಕದ ಅಧಿಪತಿ”

“ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎನ್ನುತ್ತದೆ ಬೈಬಲ್‌. (ಯೋಹಾನ 12:31; 1 ಯೋಹಾನ 5:19) ಬಲಿಷ್ಠನಾದ ಆ “ಕೆಡುಕ” ಅದೃಶ್ಯ ಜೀವಿಯಾದ ಸೈತಾನ. ಅವನು “ವಾಯುಮಂಡಲದಲ್ಲಿ ಅಧಿಕಾರ ನಡೆಸುವ ಅಧಿಪತಿ” ಎನ್ನುತ್ತದೆ ಬೈಬಲ್‌. ಈ “ವಾಯುಮಂಡಲ” ನಮ್ಮ ಸುತ್ತಲೂ ಹಬ್ಬಿರುವ ಯೋಚನಾಧಾಟಿ. ಇದು ‘ಅವಿಧೇಯತೆಯ ಪುತ್ರರಲ್ಲಿ ಈಗ ಕಾರ್ಯನಡೆಸುತ್ತಿದೆ.’ ಜನರು ದೇವರ ವಿರುದ್ಧ ದಂಗೆಯೇಳುವಂತೆ ಮಾಡಲು ಸೈತಾನನು ಇದನ್ನು ಬಳಸುತ್ತಾನೆ. (ಎಫೆಸ 2:2) ಜನಾಂಗೀಯ ಹತ್ಯೆ, ಮುಗ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂಥ ಅಮಾನವೀಯ ಕೃತ್ಯಗಳಲ್ಲಿ ಪಿಶಾಚನ ಕೈವಾಡವಿರುವುದರಲ್ಲಿ ಸಂಶಯವೇ ಇಲ್ಲ.

ಆದರೆ ನಮ್ಮ ಕಷ್ಟಕಾರ್ಪಣ್ಯಗಳನ್ನು ನೋಡಿ ದೇವರ ಮನಸ್ಸು ಕರಗುವುದಿಲ್ಲವೇ? ಇದೆಲ್ಲವನ್ನು ಕೊನೆಗಾಣಿಸಲು ಏನನ್ನಾದರೂ ಮಾಡಬಲ್ಲನೇ? ಮಾಡುವನೇ?