ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

“ಇಲ್ಲ ಅಂದ್ರೆ ಇಲ್ಲ, ಅಷ್ಟೆ. . . ”

“ಇಲ್ಲ ಅಂದ್ರೆ ಇಲ್ಲ, ಅಷ್ಟೆ. . . ”

ಸಮಸ್ಯೆ

ಮಕ್ಕಳು ಏನಾದ್ರೂ ಕೇಳಿದಾಗ ನೀವದಕ್ಕೆ ಒಪ್ಪದೇ ಇದ್ದರೆ ಅವರು ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ‘ಯಾಕೆ?’ ಅಂತ ಕೇಳೇ ಕೇಳುತ್ತಾರೆ. ಹಠ ಹಿಡಿದು, ಅತ್ತು ರಂಪ ಮಾಡಿ ನಿಮ್ಮ ತಲೆ ಚಿಟ್ಟುಹಿಡಿಯೋ ಥರ ಮಾಡ್ತಾರೆ. ನೀವೆಷ್ಟೇ ಹೇಳಿದ್ರೂ ಸುಮ್ಮನಾಗದಿದ್ದಾಗ ಕೊನೆಗೆ ನೀವೇ ಸುಸ್ತಾಗಿ, ‘ಏನ್‌ ಬೇಕಾದ್ರೂ ಮಾಡ್ಕೋ ಹೋಗು’ ಎಂದು ಹೇಳಬಹುದು. ಹೀಗೆ ಮೊದಲು ಒಪ್ಪದೇ ಇದ್ದ ನೀವೇ ಕೊನೆಗೂ ಒಪ್ಪಿಗೆ ಕೊಡೋ ಹಾಗೆ ಮಾಡಿ, ನಿಮ್ಮ ಮಗ * ತನ್ನ ಹಠ ಸಾಧಿಸಬಹುದು.

ಮಕ್ಕಳು ಹಠ ಹಿಡಿದಾಗ ‘ಇವರನ್ನು ಹೇಗಪ್ಪಾ ಸುಧಾರಿಸೋದು’ ಅಂತ ಚಿಂತೆ ಕಾಡಿದೆಯಾ? ಇದಕ್ಕೆ ಪರಿಹಾರ ಇದೆ. ಅದನ್ನು ತಿಳಿದುಕೊಳ್ಳುವ ಮೊದಲು ನೀವು ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳನ್ನು ನೋಡೋಣ.

ಇದನ್ನು ನೆನಪಿನಲ್ಲಿಡಿ

ಮಕ್ಕಳ ಮೇಲೆ ಪ್ರೀತಿ ಇಲ್ಲ ಅಂತಲ್ಲ. ಹೆತ್ತವರು ತಮ್ಮ ಮಕ್ಕಳ ಮಾತಿಗೆ ಒಪ್ಪದೇ ಇದ್ದರೆ ಅವರಿಗೆ ಮಕ್ಕಳ ಮೇಲೆ ಪ್ರೀತಿ ಇಲ್ಲ ಎಂದು ಕೆಲವರು ಹೇಳುತ್ತಾರೆ. ‘ನೀವು ನಿಮ್ಮ ಮಕ್ಕಳಿಗೆ ನೇರವಾಗಿ ‘ಇಲ್ಲ’ ಅಥವಾ ‘ಬೇಡ’ ಎಂದು ಹೇಳೋ ಬದಲು ಅವರಿಗೆ ಅದರ ಕಾರಣ ತಿಳಿಸಬೇಕು, ವಿಷಯವನ್ನು ಅವರಿಗೆ ವಿವರಿಸಬೇಕು, ಕೆಲವೊಮ್ಮೆ ಮಣಿಯಬೇಕು. ಆದರೆ ಕಡ್ಡಿಮುರಿದ ಹಾಗೆ ‘ಇಲ್ಲ’ ಅಂತ ಮಾತ್ರ ಹೇಳ್ಬೇಡಿ, ಮಕ್ಕಳು ನೊಂದುಕೊಳ್ತಾರೆ’ ಅಂತ ಅವರು ಹೇಳುತ್ತಾರೆ.

“ಇಲ್ಲ” ಅಥವಾ “ಬೇಡ” ಎಂದು ಹೇಳಿದರೆ ಮಕ್ಕಳಿಗೆ ದುಃಖವಾಗುತ್ತದೆ ಎನ್ನುವುದು ನಿಜ. ಆದರೆ ನೀವು ಈ ರೀತಿ ಹೇಳುವುದರಿಂದ ಅವರಿಗೆ ಒಂದು ಒಳ್ಳೇ ಪಾಠವನ್ನು ಕಲಿಸುತ್ತೀರಿ. ‘ಜೀವನದಲ್ಲಿ ಎಲ್ಲಾ ನಾವಂದುಕೊಂಡ ಹಾಗೆ ಆಗಲ್ಲ, ಎಲ್ಲದ್ದಕ್ಕೂ ಮಿತಿ ಇದೆ. ಅದಕ್ಕೆ ತಕ್ಕ ಹಾಗೆ ನಾವು ಜೀವನ ನಡೆಸಬೇಕು’ ಅಂತ ಮಕ್ಕಳು ತಿಳಿದುಕೊಳ್ಳುತ್ತಾರೆ. ಅವರು ಹಠ ಮಾಡ್ತಿದ್ದಾರಲ್ಲಾ ಅಂತ ಮಣಿಯುವುದಾದರೆ ಮುಂದೆ ನೀವು ಏನೇ ಹೇಳಿದರೂ ಅವರು ಹಠ ಸಾಧಿಸಬಹುದು ಮಾತ್ರವಲ್ಲ ಅವರು ನಿಮ್ಮನ್ನು ಹಗುರವಾಗಿ ನೋಡಬಹುದು. ಕ್ರಮೇಣ ಅವರು ನಿಮ್ಮ ಪ್ರತಿ ಮಾತಿಗೂ ಕೋಪ ಮಾಡಿಕೊಳ್ಳಬಹುದು. ಹಠ ಹಿಡಿದಾಗೆಲ್ಲಾ ಮಣಿಯುವಂಥ ಹೆತ್ತವರನ್ನು ಯಾವ ಮಗು ತಾನೇ ಗೌರವಿಸುತ್ತದೆ?

ಈಗ “ಇಲ್ಲ” ಅಥವಾ “ಬೇಡ” ಎಂದು ಹೇಳಿದರೆ, ಮುಂದೆ ಪ್ರಯೋಜನವಾಗುವುದು ನಿಮ್ಮ ಮಕ್ಕಳಿಗೇನೇ. ನೀವು “ಇಲ್ಲ” ಅಥವಾ “ಬೇಡ” ಎಂದು ಹೇಳುವುದರಿಂದ ನಿಮ್ಮ ಮಗ ತನ್ನ ಆಸೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದನ್ನು ಕಲಿಯುತ್ತಾನೆ ಅಲ್ಲದೆ ಇದರಿಂದ ತನಗೇ ಪ್ರಯೋಜನವಾಗುತ್ತದೆ ಎಂದು ತಿಳಿದುಕೊಳ್ಳುತ್ತಾನೆ. ಅವನಿದನ್ನು ಅರ್ಥಮಾಡಿಕೊಳ್ಳುವುದರಿಂದ ದೊಡ್ಡವನಾದ ಮೇಲೆ ಒಂದುವೇಳೆ ಡ್ರಗ್ಸ್‌ ತೆಗೆದುಕೊಳ್ಳುವ ಅಥವಾ ವಿವಾಹಕ್ಕೂ ಮುಂಚೆ ಸೆಕ್ಸ್‌ನಲ್ಲಿ ಒಳಗೂಡುವ ಒತ್ತಡ ಬಂದರೂ ಅದನ್ನು ಎದುರಿಸುತ್ತಾನೆ.

ಈಗ ನೀವು ‘ಇಲ್ಲ’ ಎಂದು ಹೇಳಿದರೆ, ಮುಂದೆ ನಿಮ್ಮ ಮಗ ಒಬ್ಬ ಒಳ್ಳೆಯ ವ್ಯಕ್ತಿಯಾಗಲು ಅದು ಸಹಾಯ ಮಾಡುತ್ತದೆ. “ನಮಗೆ [ದೊಡ್ಡವರಿಗೆ] ಬಯಸಿದ್ದೆಲ್ಲಾ ಸಿಗುವುದಿಲ್ಲ. ಅದೇ ನಿಜ. ಆದರೆ ನಮ್ಮ ಮಕ್ಕಳು ಹಠ ಮಾಡಿದಾಗೆಲ್ಲಾ ಅವರು ಬಯಸಿದ್ದು ನಾವು ಕೊಡುವುದಾದರೆ ಜೀವನದಲ್ಲಿ ತಾವು ಬಯಸಿದ್ದೆಲ್ಲಾ ಸಿಗುತ್ತದೆ ಅಂತ ಅವರು ಅಂದುಕೊಳ್ಳುತ್ತಾರೆ. ಇದರಿಂದ ಅವರಿಗೆ ತೊಂದರೆನೇ ಹೊರತು ಕಿಂಚಿತ್ತೂ ಪ್ರಯೋಜನ ಇಲ್ಲ” ಎಂದು ಡಾ. ಡೇವಿಡ್ ವೋಲ್ಶ್ ಹೇಳುತ್ತಾರೆ. *

ಇದಕ್ಕೇನು ಪರಿಹಾರ?

ಅತಿಯಾಗಿ ಮುದ್ದು ಮಾಡಬೇಡಿ. ನಿಮ್ಮ ಮಗನು ಪ್ರತಿಭಾನ್ವಿತ, ಪ್ರಬುದ್ಧ, ಯಶಸ್ವೀ ವ್ಯಕ್ತಿಯಾಗಬೇಕೆಂದು ಬಯಸುತ್ತೀರಲ್ವೇ? ಆದರೆ ನೀವು ಅವನು ಕೇಳೋದೆಲ್ಲಾ ಕೊಡುತ್ತಾ ಹೋದರೆ ನಿಮ್ಮ ಆಸೆ ನೆರವೇರಲ್ಲ. ಬಾಲ್ಯದಿಂದ “ಕೋಮಲವಾಗಿ ಸಾಕಿದರೆ ತರುವಾಯ ಅವನು ಎದುರುಬೀಳುವನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 29:21) ಹಾಗೆ ಆಗಬಾರದೆಂದರೆ ‘ಇಲ್ಲ’ ಅಥವಾ ‘ಬೇಡ’ ಎಂದು ದೃಢವಾಗಿ ಹೇಳಿ. ಹೀಗೆ ಹೇಳುವುದರಿಂದ ನೀವು ಅವನಿಗೆ ನೋವು ಮಾಡಲ್ಲ, ಬದಲಿಗೆ ಉತ್ತಮ ಶಿಸ್ತನ್ನು ಕಲಿಸುತ್ತೀರಿ. ಮುಂದೆ ಈ ಶಿಸ್ತೇ ಅವನ ಕೈ ಹಿಡಿಯುತ್ತದೆ.—ಬೈಬಲ್‌ ತತ್ವ: ಜ್ಞಾನೋಕ್ತಿ 19:18.

ನಿರ್ಣಯಿಸುವ ಅಧಿಕಾರ ನಿಮಗಿದೆ ಎಂದು ತೋರಿಸಿ. ಮಕ್ಕಳು ನಿಮಗಿಂತ ದೊಡ್ಡವರಲ್ಲ, ನೀವು ನಿಮ್ಮ ಮಕ್ಕಳಿಗಿಂತ ದೊಡ್ಡವರು. ಆದ್ದರಿಂದ ನೀವು “ಇಲ್ಲ” ಎಂದಾಗಲೆಲ್ಲಾ ಅವರಿಗೆ ಕಾರಣ ಕೊಡಬೇಕೆಂದೇನಿಲ್ಲ. ಮಕ್ಕಳು ದೊಡ್ಡವರಾದಾಗ ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ . . . ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಳ್ಳುವುದು’ ಪ್ರಾಮುಖ್ಯ. (ಇಬ್ರಿಯ 5:14) ಆದ್ದರಿಂದ ಅಂಥ ಮಕ್ಕಳಿಗೆ ಕಾರಣವನ್ನು ತಿಳಿಸಿ ಅರ್ಥಮಾಡಿಸುವುದರಲ್ಲಿ ತಪ್ಪಿಲ್ಲ. ಆದರೆ ನಿಮ್ಮ ಚಿಕ್ಕ ಪ್ರಾಯದ ಮಕ್ಕಳು ವಾದ ಮಾಡೋದಾದ್ರೆ ನೀವು ಅವರ ಪ್ರತಿಯೊಂದು ಮಾತಿಗೂ ಉತ್ತರ ಕೊಡುತ್ತಾ ಇರಬೇಡಿ. ನೀವು ಮಕ್ಕಳನ್ನು ಒಪ್ಪಿಸಲು ಪ್ರಯತ್ನಿಸುತ್ತಾ ಇದ್ದರೆ ನಿಮ್ಮ ನಿರ್ಣಯ ದೃಢವಾಗಿಲ್ಲ ಎಂದು ಮಕ್ಕಳಿಗೆ ಅನಿಸುತ್ತದೆ ಮತ್ತು ಹೇಗಾದರೂ ಮಾಡಿ ನಿಮ್ಮನ್ನು ಒಪ್ಪಿಸಬಹುದು ಅಂತ ಅಂದುಕೊಳ್ಳುತ್ತಾರೆ.—ಬೈಬಲ್‌ ತತ್ವ: ಎಫೆಸ 6:1.

ನಿಮ್ಮ ನಿರ್ಣಯವನ್ನು ಬದಲಾಯಿಸುತ್ತಿರಬೇಡಿ. ಕಾಡಿಸಿ, ಪೀಡಿಸಿ ಹೇಗಾದರೂ ಮಾಡಿ ಮಕ್ಕಳು ನಿಮ್ಮ ದೃಢ ತೀರ್ಮಾನವನ್ನು ಮುರಿಯಲು ಪ್ರಯತ್ನಿಸಬಹುದು. ಆಗ ನೀವೇನು ಮಾಡಬಹುದು? ‘ಇಲ್ಲ ಅಂದ್ರೆ ಇಲ್ಲ ಅಷ್ಟೆ, ನೋಡು, ನನ್ನತ್ರ ನಿನ್ನ ಹಠ ತೋರಿಸ್ಬೇಡ. ಇದೆಲ್ಲಾ ನನ್ನತ್ರ ನಡಿಯಲ್ಲ’ ಎಂದು ದೃಢವಾಗಿ ಉತ್ತರಿಸುವಂತೆ ಲವಿಂಗ್‌ ವಿದೌಟ್‌ ಸ್ಪಾಯ್ಲಿ೦ಗ್‌ ಎಂಬ ಪುಸ್ತಕ ತಿಳಿಸುತ್ತದೆ. ಮೊದಮೊದಲು ಮಕ್ಕಳೊಂದಿಗೆ ಈ ರೀತಿ ದೃಢವಾಗಿ ಮಾತಾಡಲು ನಿಮಗೆ ಕಷ್ಟ ಆಗಬಹುದು, ನೀವು ಹಾಗೆ ಮಾತಾಡುವಾಗ ಮಕ್ಕಳು ಅತ್ತು ರಂಪ ಮಾಡಬಹುದು. ಏನೇ ಮಾಡಿದರೂ ನೀವು ನಿಮ್ಮ ನಿರ್ಣಯವನ್ನು ಬದಲಾಯಿಸುವುದಿಲ್ಲ ಎಂದು ಮಕ್ಕಳಿಗೆ ತಿಳಿದುಬಂದಾಗ ಕ್ರಮೇಣ ಅವರು ಹಠ ಮಾಡುವುದನ್ನು ಕಡಿಮೆ ಮಾಡುತ್ತಾರೆ.—ಬೈಬಲ್‌ ತತ್ವ: ಯಾಕೋಬ 5:12.

ನಿಮಗೆ ಅಧಿಕಾರ ಇದೆ ಎಂದು ತೋರಿಸುವ ಉದ್ದೇಶದಿಂದ ಮಕ್ಕಳು ಕೇಳಿದ್ದಕ್ಕೆ “ಇಲ್ಲ” ಎಂದು ಹೇಳಬೇಡಿ

ಅತಿಯಾಗಿ ಕಟ್ಟುನಿಟ್ಟು ಮಾಡಬೇಡಿ. ನಿಮಗೆ ಅಧಿಕಾರ ಇದೆ ಎಂದು ತೋರಿಸುವ ಉದ್ದೇಶದಿಂದ ಮಕ್ಕಳು ಕೇಳಿದ್ದಕ್ಕೆ “ಇಲ್ಲ” ಎಂದು ಹೇಳಬೇಡಿ. ಬದಲಿಗೆ “ನ್ಯಾಯಸಮ್ಮತತೆ” ತೋರಿಸಿ. (ಫಿಲಿಪ್ಪಿ 4:5) ಪ್ರತಿಯೊಂದಕ್ಕೂ ‘ಇಲ್ಲ’ ಎಂದು ಹೇಳಬೇಡಿ. ನ್ಯಾಯವಾದ ವಿಷಯಗಳಿಗೆ ಒಪ್ಪಿಗೆ ಕೊಡಿ. ಆದರೆ ಮಕ್ಕಳು ಹಠ ಮಾಡಿ ಒಪ್ಪಿಗೆ ಪಡೆಯಲಿಕ್ಕೆ ಬಿಡಬೇಡಿ.—ಬೈಬಲ್‌ ತತ್ವ: ಕೊಲೊಸ್ಸೆ 3:21. ▪ (g14-E 08)

^ ಪ್ಯಾರ. 4 ಈ ಲೇಖನದಲ್ಲಿ ಮಗ ಎಂಬ ಪದವನ್ನು ಬಳಸಿರುವುದಾದರೂ ಇಲ್ಲಿ ನೀಡಲಾಗಿರುವ ಸಲಹೆಗಳು ಮಗಳಿಗೂ ಅನ್ವಯವಾಗುತ್ತವೆ

^ ಪ್ಯಾರ. 10 ಈ ಮಾಹಿತಿ ನೋ: ವೈ ಕಿಡ್ಸ್‌—ಆಫ್‌ ಆಲ್‌ ಏಜಸ್‌—ನೀಡ್ ಟು ಹಿಯರ್‌ ಇಟ್‌ ಆ್ಯಂಡ್ ವೇಸ್‌ ಪೇರೆಂಟ್ಸ್‌ ಕ್ಯಾನ್‌ ಸೇ ಇಟ್‌ ಎಂಬ ಪುಸ್ತಕದಲ್ಲಿದೆ.