ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ

ದೇವರು ಇದ್ದಾನಾ? ಇರುವುದಾದರೆ ನಮಗೇನು ಪ್ರಯೋಜನ?

ದೇವರು ಇದ್ದಾನಾ? ಇರುವುದಾದರೆ ನಮಗೇನು ಪ್ರಯೋಜನ?

‘ದೇವರು ಇದ್ದಾನಾ?’ ಅಂತ ಕೆಲವರಿಗೆ ಕೇಳಿದರೆ, ಅದು ಉತ್ತರ ಇಲ್ಲದ ಪ್ರಶ್ನೆ ಅಥವಾ ತಲೆ ಬುಡ ಇಲ್ಲದಿರುವ ಪ್ರಶ್ನೆ ಅಂತ ಹೇಳುತ್ತಾರೆ. ಫ್ರಾನ್ಸ್‌ನಲ್ಲಿ ಹುಟ್ಟಿ ಬೆಳೆದ ಎರ್ವಾ ಎಂಬ ವ್ಯಕ್ತಿ “ನಾನು ‘ದೇವರೇ ಇಲ್ಲ’ ಅಥವಾ ದೇವರ ಬಗ್ಗೆ ತಿಳಿದುಕೊಳ್ಳೋಕೆ ಆಗಲ್ಲ ಅಂತ ಹೇಳುವುದಿಲ್ಲ. ಹಾಗಂತ ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ ಅಂತಾನೂ ಹೇಳಲ್ಲ. ದೇವರ ಸಹಾಯ ಇಲ್ಲದೇನೂ ಚೆನ್ನಾಗಿರಬಹುದು ಅನ್ನೋದು ನನ್ನ ಅಭಿಪ್ರಾಯ” ಎಂದು ಹೇಳುತ್ತಾನೆ.

ಇನ್ನು ಕೆಲವರು, ಅಮೆರಿಕಾದ ಜಾನ್‌ ಥರ ಯೋಚಿಸುತ್ತಾರೆ. ಅವನು ಹೇಳುವುದು: “ನನ್ನ ಹೆತ್ತವರಿಗೆ ದೇವರಲ್ಲಿ ನಂಬಿಕೆನೇ ಇರಲಿಲ್ಲ. ಹಾಗಾಗಿ ‘ದೇವರು ಇದ್ದಾನಾ ಇಲ್ವಾ’ ಅಂತ ನನಗೆ ಗೊತ್ತಿರಲಿಲ್ಲ. ಆದರೆ ಆಗಾಗ ಈ ಪ್ರಶ್ನೆ ಬಗ್ಗೆ ಯೋಚಿಸುತ್ತಿದ್ದೆ.”

‘ದೇವರು ಇದ್ದಾನಾ? ದೇವರು ಇರುವುದು ನಿಜವೇ ಆಗಿದ್ದರೆ ನಮ್ಮ ಜೀವನಕ್ಕೆ ಇನ್ನೂ ಹೆಚ್ಚಿನ ಅರ್ಥ ಸಿಗುತ್ತಾ?’ ಎಂಬ ಪ್ರಶ್ನೆಗಳು ನಿಮಗೆ ಬಂದಿವೆಯಾ? ಕೆಲವೊಂದು ನಿಜಾಂಶಗಳನ್ನು ಗಮನಿಸಿದಾಗ ಸೃಷ್ಟಿಕರ್ತನೊಬ್ಬನು ಇದ್ದಾನೆ ಅಂತ ನಿಮಗೆ ಅನಿಸಿರಬಹುದು. ಉದಾಹರಣೆಗೆ, ಭೂಮಿಯಲ್ಲಿ ನಾವು ಜೀವಿಸಲು ಹೇಳಿ ಮಾಡಿಸಿದಂಥ ಪರಿಸರ ಇದೆ ಎಂಬ ವೈಜ್ಞಾನಿಕ ಆಧಾರಗಳನ್ನು ಗಮನಿಸಿದಾಗ ಅಥವಾ ನಿರ್ಜೀವ ವಸ್ತುವಿನಿಂದ ಜೀವ ಬರಲು ಸಾಧ್ಯವಿಲ್ಲ ಎನ್ನುವುದಕ್ಕಿರುವ ಆಧಾರಗಳನ್ನು ನೋಡುವಾಗ ಸೃಷ್ಟಿಕರ್ತ ಇರಲೇಬೇಕು ಅಂತ ನಿಮಗೆ ಅನಿಸಿರಬಹುದು.—“ಪುರಾವೆಗಳನ್ನು ಪರೀಕ್ಷಿಸಿ” ಎಂಬ ಚೌಕ ನೋಡಿ.

ನಿಧಿ ಪತ್ತೆ ಹಚ್ಚಲು ಸೂಚನಾ ಫಲಕಗಳು ಸಹಾಯ ಮಾಡುತ್ತವೆ. ಅದೇ ರೀತಿ, ‘ದೇವರಿದ್ದಾನೆ’ ಎಂದು ಪತ್ತೆ ಹಚ್ಚಲು ಮೇಲೆ ತಿಳಿಸಲಾಗಿರುವ ಆಧಾರಗಳು ಸಹಾಯ ಮಾಡುತ್ತವೆ. ಇದರರ್ಥ ‘ದೇವರಿದ್ದಾನೆ’ ಅನ್ನುವುದನ್ನು ತಿಳಿದುಕೊಂಡರೆ ನಮಗೆ ನಿಧಿ ಸಿಕ್ಕಿದ ಹಾಗೆ. ಯಾಕೆಂದರೆ ಅದರಿಂದ ನಮಗೆ ತುಂಬ ಪ್ರಯೋಜನಗಳಾಗುತ್ತವೆ. ಅಂಥ 4 ಪ್ರಯೋಜನಗಳನ್ನು ಮುಂದೆ ನೋಡೋಣ.

1. ಜೀವನಕ್ಕೆ ಅರ್ಥ ಸಿಗುತ್ತದೆ

ಹುಟ್ಟು, ಸಾವು ಅನ್ನೋದಷ್ಟೇ ಅಲ್ಲದೆ ಜೀವನಕ್ಕೆ ಬೇರೆ ಉದ್ದೇಶ ಇದೆಯಾ? ಇರುವುದಾದರೆ ಅದರ ಬಗ್ಗೆ ಮತ್ತು ಅದು ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಅನ್ನೋದರ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತೇವೆ ಅಲ್ಲವೆ? ಒಂದುವೇಳೆ, ದೇವರಿದ್ದೂ ಆತನ ಬಗ್ಗೆ ನಾವು ತಿಳಿದುಕೊಳ್ಳದಿದ್ದರೆ, ನಮ್ಮ ಜೀವನ ಗೊತ್ತುಗುರಿ ಇಲ್ಲದಂತಾಗುತ್ತದೆ.

ದೇವರೇ ಎಲ್ಲವನ್ನು ಸೃಷ್ಟಿಸಿದ್ದು ಎನ್ನುತ್ತದೆ ಬೈಬಲ್‌. (ಪ್ರಕಟನೆ 4:11) ಈ ವಿಷಯ ತಿಳಿದುಕೊಂಡರೆ ನಮ್ಮ ಜೀವನಕ್ಕೆ ಅರ್ಥ ಸಿಗುತ್ತದೆ. ಅದು ಹೇಗೆಂದು ಯೋಚಿಸುತ್ತಿದ್ದೀರಾ? ಇದರ ಬಗ್ಗೆ ಸ್ವತಃ ಬೈಬಲ್‌ ಏನು ಹೇಳುತ್ತೆ ಅಂತ ನೋಡೋಣ.

ಭೂಮಿಯಲ್ಲಿರುವ ಬೇರೆ ಜೀವಿಗಳಿಗಿಂತ ಮಾನವರು ತುಂಬ ಭಿನ್ನವಾಗಿದ್ದಾರೆ. ದೇವರು ನಮ್ಮನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದ್ದಾನೆ ಎನ್ನುತ್ತದೆ ಬೈಬಲ್‌. ಇದರರ್ಥ ಆತನಲ್ಲಿರುವ ಗುಣಗಳನ್ನು ತೋರಿಸುವ ಸಾಮರ್ಥ್ಯ ನಮಗೂ ಇದೆ. (ಆದಿಕಾಂಡ 1:27) ಮನುಷ್ಯರು ದೇವರ ಸ್ನೇಹಿತರಾಗಲು ಸಾಧ್ಯ ಅಂತ ಸಹ ಬೈಬಲ್‌ ತಿಳಿಸುತ್ತದೆ. (ಯಾಕೋಬ 2:23) ನಾವು ದೇವರ ಸ್ನೇಹಿತರಾದರೆ ಮಾತ್ರ ನಮ್ಮ ಜೀವನಕ್ಕೆ ನಿಜ ಅರ್ಥ ಸಿಗುತ್ತದೆ.

ಹಾಗಾದರೆ ನಾವು ಹೇಗೆ ದೇವರ ಸ್ನೇಹಿತರಾಗಬಹುದು? ನಮ್ಮ ಅನಿಸಿಕೆಗಳನ್ನು ಆತನ ಹತ್ತಿರ ಹೇಳಿಕೊಳ್ಳುವ ಮೂಲಕ. ‘ನನ್ನ ಸ್ನೇಹಿತರು ಮಾತಾಡುವಾಗ ನಾನು ಕಿವಿಗೊಟ್ಟು, ಅವರಿಗೆ ಸಹಾಯ ಮಾಡುತ್ತೇನೆ’ ಅಂತ ಸ್ವತಃ ದೇವರೇ ಮಾತು ಕೊಟ್ಟಿದ್ದಾನೆ. (ಕೀರ್ತನೆ 91:15) ದೇವರ ಸ್ನೇಹಿತರಾಗುವುದರಿಂದ ಆತನ ಆಲೋಚನೆಗಳನ್ನು ಚೆನ್ನಾಗಿ ತಿಳಿದುಕೊಳ್ಳಬಹುದು. ಇದರಿಂದ, ಜೀವನದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ.

ಒಂದುವೇಳೆ, ದೇವರಿದ್ದೂ ಆತನ ಬಗ್ಗೆ ನಾವು ತಿಳಿದುಕೊಳ್ಳದಿದ್ದರೆ, ನಮ್ಮ ಜೀವನ ಗೊತ್ತುಗುರಿ ಇಲ್ಲದಂತಾಗುತ್ತದೆ

2. ಮನಸ್ಸಿಗೆ ನೆಮ್ಮದಿ ಸಿಗುತ್ತದೆ

ಲೋಕದಲ್ಲಿ ಇರುವ ಕಷ್ಟ, ನರಳಾಟ ನೋಡಿ ಕೆಲವರಿಗೆ ‘ದೇವರಿದ್ದಾನೆ’ ಎನ್ನುವುದನ್ನು ನಂಬಲು ಕಷ್ಟವಾಗುತ್ತದೆ. ‘ಒಬ್ಬ ಶಕ್ತಿಶಾಲಿ ಸೃಷ್ಟಿಕರ್ತ ನಿಜವಾಗಲೂ ಇದ್ದರೆ ಕಷ್ಟಗಳನ್ನು ಏಕೆ ಹೀಗೆಯೇ ಬಿಟ್ಟಿದ್ದಾನೆ?’ ಎಂದವರು ಕೇಳುತ್ತಾರೆ.

ಇದಕ್ಕೆ ನೆಮ್ಮದಿ ತರುವಂಥ ಉತ್ತರವನ್ನು ಬೈಬಲ್‌ ಕೊಡುತ್ತದೆ. ಅದೇನೆಂದರೆ, ಮನುಷ್ಯರು ಕಷ್ಟ ಪಡಬೇಕು, ಸಾಯಬೇಕು ಎಂಬ ಉದ್ದೇಶ ದೇವರಿಗಿರಲಿಲ್ಲ. ಮನುಷ್ಯನನ್ನು ಸೃಷ್ಟಿಸಿದ ಸಮಯದಲ್ಲೂ, ಅವರಿಗೆ ಯಾವುದೇ ಕಷ್ಟಗಳು ಇರಲಿಲ್ಲ. (ಆದಿಕಾಂಡ 2:7-9, 15-17) ಇದನ್ನೆಲ್ಲಾ ನಂಬಲು ಕಷ್ಟ ಆಗುತ್ತಿದೆಯಾ? ಕಟ್ಟು ಕಥೆ ಅನಿಸುತ್ತಿದೆಯಾ? ಒಂದಂತೂ ನಿಜ, ದೇವರಿಗೆ ಎಲ್ಲವನ್ನು ಮಾಡುವ ಶಕ್ತಿಯಿದೆ ಮತ್ತು ನಮ್ಮ ಮೇಲೆ ಅಪಾರ ಪ್ರೀತಿಯಿದೆ. ಹಾಗಂದ ಮೇಲೆ ನಾವು ‘ಯಾವಾಗಲೂ ಸಂತೋಷವಾಗಿರಬೇಕು, ಕಷ್ಟ ಪಡಬಾರದು’ ಅಂತ ಆತನು ಬಯಸುವುದೂ ನಿಜ ತಾನೇ?

ಹಾಗಾದರೆ, ಮನುಷ್ಯರು ಏಕೆ ಇಷ್ಟೊಂದು ಕಷ್ಟ ಪಡುತ್ತಿದ್ದಾರೆ? ದೇವರು ಮನುಷ್ಯರನ್ನು ರೋಬೋಟ್‌ಗಳಂತೆ ಸೃಷ್ಟಿ ಮಾಡಲಿಲ್ಲ, ‘ನಾನು ಹೇಳಿದ ಹಾಗೆಯೇ ನಡೆದುಕೊಳ್ಳಬೇಕು’ ಅಂತ ಬಲವಂತಾನೂ ಮಾಡಲಿಲ್ಲ. ಬದಲಿಗೆ ಆಯ್ಕೆ ಅಥವಾ ನಿರ್ಣಯ ಮಾಡುವ ಸಾಮರ್ಥ್ಯವನ್ನು ಅವರಿಗೆ ಕೊಟ್ಟನು. ಆದರೆ ಮೊದಲ ಮನುಷ್ಯರಾದ ಆದಾಮ, ಹವ್ವ ಇಬ್ಬರೂ ದೇವರ ಮಾರ್ಗದರ್ಶನವನ್ನು ತಿರಸ್ಕರಿಸಿದರು. ಜೊತೆಗೆ, ಸ್ವಾರ್ಥದಿಂದ ತಮಗೆ ಇಷ್ಟ ಬಂದಂತೆ ನಡೆದುಕೊಂಡರು. ಹೀಗೆ ಅವರು, ದೇವರು ಕೊಟ್ಟ ಸಾಮರ್ಥ್ಯವನ್ನು ದುರುಪಯೋಗಿಸಿದರು. (ಆದಿಕಾಂಡ 3:1-6, 22-24) ಅವರಿಬ್ಬರು ಮಾಡಿದ ತಪ್ಪಿನ ಪರಿಣಾಮವನ್ನು ನಾವು ಅನುಭವಿಸುತ್ತಾ ಇದ್ದೇವೆ.

ಮನುಷ್ಯರು ಕಷ್ಟಪಡಬೇಕೆಂಬ ಉದ್ದೇಶ ದೇವರಿಗೆ ಇಲ್ಲ. ಈ ವಿಷಯ ನಮ್ಮ ಮನಸ್ಸಿಗೆ ನೆಮ್ಮದಿ ತರುತ್ತದೇನೋ ನಿಜ. ಆದರೆ ನೆಮ್ಮದಿ ಒಂದೇ ಸಾಕಾ? ಪರಿಹಾರಾನೂ ಬೇಕು ತಾನೆ? ಅದರ ಬಗ್ಗೆ ಮುಂದೆ ನೋಡೋಣ.

3. ಭವಿಷ್ಯದ ಬಗ್ಗೆ ಭರವಸೆ ಕೊಡುತ್ತದೆ

ಮೊದಲ ಮನುಷ್ಯರು ತನ್ನ ಮಾತಿನಂತೆ ನಡೆಯದಿದ್ದಾಗ, ಮುಂದೆ ಒಂದು ದಿನ ತನ್ನ ಉದ್ದೇಶವನ್ನು ನೆರವೇರಿಸುತ್ತೇನೆ ಎಂದು ದೇವರೇ ಮಾತು ಕೊಟ್ಟನು. ಆತನು ಸರ್ವಶಕ್ತನಾಗಿರುವುದರಿಂದ ಯಾವುದೂ ಸಹ ಆತನ ಉದ್ದೇಶವನ್ನು ತಡೆಯಲು ಸಾಧ್ಯವಿಲ್ಲ. (ಯೆಶಾಯ 55:11) ಮೊದಲ ಮನುಷ್ಯರ ತಪ್ಪಿನಿಂದಾದ ಎಲ್ಲ ಕೆಟ್ಟ ಪರಿಣಾಮಗಳನ್ನು ದೇವರು ಅತಿ ಶೀಘ್ರದಲ್ಲೇ ಸಂಪೂರ್ಣವಾಗಿ ನಿರ್ನಾಮ ಮಾಡುವನು. ನಂತರ ಭೂಮಿಗಾಗಿ ಮತ್ತು ಎಲ್ಲ ಮನುಷ್ಯರಿಗಾಗಿದ್ದ ತನ್ನ ಉದ್ದೇಶವನ್ನು ನೆರವೇರಿಸುವನು.

ದೇವರ ಉದ್ದೇಶ ನೆರವೇರುವುದರಿಂದ ನಮಗೇನು ಪ್ರಯೋಜನ? ನಮ್ಮ ಭವಿಷ್ಯದ ಬಗ್ಗೆ ದೇವರು ಕೊಟ್ಟಿರುವ ಅನೇಕ ಆಶ್ವಾಸನೆಗಳು ಬೈಬಲಿನಲ್ಲಿವೆ. ಅವುಗಳಲ್ಲಿ ಎರಡನ್ನು ಈಗ ನೋಡೋಣ.

  • ಎಲ್ಲೆಲ್ಲೂ ಶಾಂತಿ! ಇನ್ನಿರದು ದುಷ್ಟತನ! “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:10, 11.

  • ಸಾವು-ನೋವೇ ಇರೋದಿಲ್ಲ! “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”—ಯೆಶಾಯ 25:8.

ಬೈಬಲಿನಲ್ಲಿರುವ ಈ ಆಶ್ವಾಸನೆಗಳನ್ನು ನಾವೇಕೆ ನಂಬಬೇಕು? ಏಕೆಂದರೆ, ಬೈಬಲಿನಲ್ಲಿರುವ ಎಷ್ಟೋ ವಿಷಯಗಳು ಈಗಾಗಲೇ ನೆರವೇರಿವೆ. ಆದ್ದರಿಂದ ದೇವರು ನಮ್ಮ ಕಷ್ಟಗಳನ್ನು ಮುಂದೆ ಒಂದು ದಿನ ತೆಗೆಯುತ್ತಾನೆ ಅಂತ ನಂಬಬಹುದು. ಅಲ್ಲಿಯವರೆಗೆ ಈ ಕಷ್ಟಗಳನ್ನು ನಿಭಾಯಿಸಿಕೊಂಡು ಹೋಗುವುದು ಹೇಗೆ? ಇದಕ್ಕೂ ದೇವರು ಸಹಾಯ ಮಾಡುತ್ತಾನೆ. ಅದು ಹೇಗೆಂದು ಮುಂದೆ ನೋಡೋಣ.

4. ಸಮಸ್ಯೆ ನಿಭಾಯಿಸಲು ಮತ್ತು ನಿರ್ಣಯ ಮಾಡಲು ಸಹಾಯ ಸಿಗುತ್ತದೆ

ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಒಳ್ಳೆಯ ನಿರ್ಣಯಗಳನ್ನು ಮಾಡಲು ದೇವರು ನಮಗೆ ಸಹಾಯ ಮಾಡುತ್ತಾನೆ. ನಿರ್ಣಯಗಳು ಚಿಕ್ಕ-ಪುಟ್ಟದ್ದಾಗಿರಬಹುದು ಅಥವಾ ಜೀವನವನ್ನೇ ಬದಲಾಯಿಸುವಷ್ಟು ದೊಡ್ಡದ್ದಾಗಿರಬಹುದು. ಈ ಎಲ್ಲ ಸಮಯದಲ್ಲಿ ನಮ್ಮನ್ನು ಸೃಷ್ಟಿಸಿದ ದೇವರ ವಿವೇಕಯುತ ಮಾರ್ಗದರ್ಶನದ ಮುಂದೆ ಮನುಷ್ಯರ ಮಾರ್ಗದರ್ಶನ ಏನೇನೂ ಅಲ್ಲ. ಕಾರಣ, ಹಿಂದೆ ಏನೆಲ್ಲ ನಡೆದಿದೆ ಮತ್ತು ಮುಂದೆ ಏನೆಲ್ಲ ನಡೆಯಲಿದೆ ಎಂದು ದೇವರಿಗೆ ಚೆನ್ನಾಗಿ ತಿಳಿದಿದೆ. ಜೊತೆಗೆ, ಆತನೇ ನಮ್ಮ ಸೃಷ್ಟಿಕರ್ತನಾಗಿದ್ದಾನೆ. ಆದ್ದರಿಂದ ನಮಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಆತನಿಗೆ ಚೆನ್ನಾಗಿ ಗೊತ್ತಿದೆ.

ಬೈಬಲನ್ನು ಅನೇಕ ಮನುಷ್ಯರು ಬರೆದಿರುವುದಾದರೂ ಅದನ್ನು ಬರೆಸಿರುವುದು ಯೆಹೋವ ದೇವರು. ಆದ್ದರಿಂದ ಬೈಬಲಿನಲ್ಲಿರುವುದೆಲ್ಲ ಯೆಹೋವ ದೇವರ ಆಲೋಚನೆಗಳೇ. ಬೈಬಲಿನಲ್ಲಿ ದೇವರು ನಮಗೆ ಹೀಗೆ ಹೇಳುತ್ತಾನೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಯೆಶಾಯ 48:17, 18.

ದೇವರಿಗೆ ಅಪಾರ ಶಕ್ತಿಯಿದೆ ಮತ್ತು ನಮಗೋಸ್ಕರ ಆ ಶಕ್ತಿಯನ್ನು ಉಪಯೋಗಿಸುವ ಮನಸ್ಸು ಆತನಿಗಿದೆ. ಆದ್ದರಿಂದ ‘ಸ್ವರ್ಗದಲ್ಲಿರುವ ತಂದೆಯು ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನು ಕೊಡುತ್ತಾನೆ’ ಎಂದು ಬೈಬಲ್‌ ಹೇಳುತ್ತದೆ. (ಲೂಕ 11:13) ದೇವರ ಶಕ್ತಿಯಾಗಿರುವ ಈ ಪವಿತ್ರಾತ್ಮವು ನಮ್ಮನ್ನು ಮಾರ್ಗದರ್ಶಿಸುತ್ತದೆ ಮತ್ತು ಬಲಪಡಿಸುತ್ತದೆ.

ಹಾಗಾದರೆ ದೇವರಿಂದ ನಾವು ಹೇಗೆ ಸಹಾಯ ಪಡೆದುಕೊಳ್ಳಬಹುದು? ‘ದೇವರಲ್ಲಿ ಸಹಾಯ ಕೇಳಿಕೊಳ್ಳುವವನು ದೇವರಿದ್ದಾನೆ ಎಂದೂ ಆತನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದೂ ನಂಬಬೇಕು’ ಅಂತ ಬೈಬಲ್‌ ಹೇಳುತ್ತದೆ. (ಇಬ್ರಿಯ 11:6) ‘ದೇವರಿದ್ದಾನೆ’ ಎಂಬ ನಂಬಿಕೆ ನಿಮಗೆ ಬರಬೇಕೆಂದರೆ ಅದಕ್ಕಿರುವ ಆಧಾರಗಳನ್ನು ನೀವೇ ಹುಡುಕಬೇಕು.

ದೇವರ ಬಗ್ಗೆ ತಿಳಿದುಕೊಳ್ಳಿ

ದೇವರ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದಾದರೂ ಆತನ ಬಗ್ಗೆ ತಿಳಿದುಕೊಂಡರೆ ನೀವು ಖಂಡಿತವಾಗಿ ಪ್ರಯೋಜನ ಪಡೆಯುವಿರಿ. ಅಮೆರಿಕದಲ್ಲಿ ವಾಸಿಸುತ್ತಿರುವ ಚೀನಾದ ಸ್ಯೂಜಿನ್‌ ಸೀಯಾವು ಎಂಬ ವ್ಯಕ್ತಿಯ ಉದಾಹರಣೆ ಗಮನಿಸಿ. ಅವನು ಹೇಳುವುದು: “ನಾನು ವಿಕಾಸವಾದವನ್ನು ನಂಬುತ್ತಿದ್ದೆ. ಆದರೂ ಬೈಬಲ್‌ ಕಲಿಯಬೇಕೆಂಬ ಆಸೆ ಇತ್ತು. ಹಾಗಾಗಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಪ್ರಾರಂಭಿಸಿದೆ. ಆದರೆ ನನ್ನ ವಿದ್ಯಾಭ್ಯಾಸದ ಕೊನೆಯ ವರ್ಷದಲ್ಲಿ, ಓದಲು ತುಂಬ ಇರುತ್ತಿದ್ದರಿಂದ ಬೈಬಲ್‌ ಅಧ್ಯಯನಕ್ಕೆ ಹೆಚ್ಚು ಸಮಯ ಸಿಗುತ್ತಿರಲಿಲ್ಲ, ಜೀವನದಲ್ಲಿ ಸಂತೋಷ ಕಳೆದುಕೊಂಡ ಹಾಗನಿಸುತ್ತಿತ್ತು. ಯಾವಾಗ ಬೈಬಲ್‌ ಅಧ್ಯಯನ ಮಾಡಲು ಹೆಚ್ಚು ಸಮಯ ಮಾಡಿಕೊಂಡೆನೋ ಆಗ ನನ್ನ ಮನಸ್ಸಿಗೆ ನೆಮ್ಮದಿ ಸಿಕ್ಕಿತು.”

ನಮ್ಮೆಲ್ಲರನ್ನು ಸೃಷ್ಟಿಸಿದ ಯೆಹೋವ ದೇವರ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಲು ನೀವು ಇಷ್ಟಪಡುತ್ತೀರೋ? ಹಾಗಾದರೆ ಸಮಯ ಮಾಡಿಕೊಂಡು ಆತನ ಬಗ್ಗೆ ತಿಳಿದುಕೊಳ್ಳಿ. ▪ (g15-E 03)