ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅರಣ್ಯಕಾಂಡ ಪುಸ್ತಕದ ಮುಖ್ಯಾಂಶಗಳು

ಅರಣ್ಯಕಾಂಡ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಅರಣ್ಯಕಾಂಡ ಪುಸ್ತಕದ ಮುಖ್ಯಾಂಶಗಳು

ಐಗುಪ್ತದಿಂದ ವಿಮೋಚಿಸಲ್ಪಟ್ಟ ನಂತರ ಇಸ್ರಾಯೇಲ್ಯರು ಒಂದು ಜನಾಂಗವಾಗಿ ಸಂಘಟಿಸಲ್ಪಟ್ಟರು. ತದನಂತರ ಸ್ವಲ್ಪದರಲ್ಲೇ ಅವರು ವಾಗ್ದತ್ತ ದೇಶವನ್ನು ಪ್ರವೇಶಿಸುವ ಸಾಧ್ಯತೆಯಿತ್ತು, ಆದರೆ ಇದು ಸಂಭವಿಸಲಿಲ್ಲ. ಅದಕ್ಕೆ ಬದಲಾಗಿ, ಅವರು “ಘೋರವಾದ ಮಹಾರಣ್ಯ”ದಲ್ಲಿ ನಾಲ್ಕು ದಶಕಗಳ ವರೆಗೆ ಅಲೆದಾಡಬೇಕಾಯಿತು! (ಧರ್ಮೋಪದೇಶಕಾಂಡ 8:​15, 16) ಏಕೆ? ಬೈಬಲಿನ ಅರಣ್ಯಕಾಂಡ ಪುಸ್ತಕದಲ್ಲಿರುವ ಐತಿಹಾಸಿಕ ವೃತ್ತಾಂತವು ಏನು ಸಂಭವಿಸಿತು ಎಂಬುದನ್ನು ನಮಗೆ ತಿಳಿಸುತ್ತದೆ. ಇದು, ಯೆಹೋವ ದೇವರಿಗೆ ವಿಧೇಯರಾಗುವ ಮತ್ತು ಆತನ ಪ್ರತಿನಿಧಿಗಳನ್ನು ಗೌರವಿಸುವ ಆವಶ್ಯಕತೆಯನ್ನು ನಮ್ಮ ಮನಸ್ಸುಗಳ ಮೇಲೆ ಅಚ್ಚೊತ್ತಬೇಕು.

ಅರಣ್ಯದಲ್ಲಿದ್ದಾಗ ಮೋವಾಬ್‌ ಬೈಲಿನಲ್ಲಿ ಮೋಶೆಯಿಂದ ಬರೆಯಲ್ಪಟ್ಟ ಅರಣ್ಯಕಾಂಡ ಪುಸ್ತಕವು, ಸಾ.ಶ.ಪೂ. 1512ರಿಂದ ಸಾ.ಶ.ಪೂ. 1473ರ ವರೆಗಿನ 38 ವರ್ಷಗಳು ಮತ್ತು 9 ತಿಂಗಳುಗಳ ಕಾಲಾವಧಿಯನ್ನು ಆವರಿಸುತ್ತದೆ. (ಅರಣ್ಯಕಾಂಡ 1:1; ಧರ್ಮೋಪದೇಶಕಾಂಡ 1:⁠4) ಈ ವೃತ್ತಾಂತವು ಮೂರು ಭಾಗಗಳಾಗಿ ವಿಭಾಗಿಸಲ್ಪಟ್ಟಿದೆ. ಮೊದಲನೆಯ ಭಾಗವು ಸೀನಾಯಿಬೆಟ್ಟದಲ್ಲಿ ನಡೆದ ಘಟನೆಗಳನ್ನು ತಿಳಿಸುತ್ತದೆ. ಎರಡನೆಯ ಭಾಗವು, ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆದಾಡುತ್ತಿದ್ದಾಗ ಏನು ಸಂಭವಿಸಿತೋ ಅದನ್ನು ಆವರಿಸುತ್ತದೆ. ಮತ್ತು ಕೊನೆಯ ಭಾಗವು ಮೋವಾಬ್‌ ಬೈಲಿನಲ್ಲಿ ನಡೆದ ಘಟನೆಗಳನ್ನು ಪರಿಗಣಿಸುತ್ತದೆ. ನೀವು ಈ ವೃತ್ತಾಂತವನ್ನು ಓದುತ್ತಿರುವಾಗ, ಸ್ವತಃ ಹೀಗೆ ಕೇಳಿಕೊಳ್ಳಲು ಬಯಸಬಹುದು: ‘ಈ ಘಟನೆಗಳು ನನಗೆ ಯಾವ ಪಾಠಗಳನ್ನು ಕಲಿಸುತ್ತವೆ? ಇಂದು ನನಗೆ ಪ್ರಯೋಜನದಾಯಕವಾಗಿರುವ ಮೂಲತತ್ತ್ವಗಳು ಈ ಪುಸ್ತಕದಲ್ಲಿವೆಯೋ?’

ಸೀನಾಯಿಬೆಟ್ಟದಲ್ಲಿ

(ಅರಣ್ಯಕಾಂಡ 1:​1–10:⁠10)

ಎರಡು ಖಾನೇಷುಮಾರಿಗಳಲ್ಲಿ ಮೊದಲನೆಯದ್ದು, ಇಸ್ರಾಯೇಲ್ಯರು ಇನ್ನೂ ಸೀನಾಯಿಬೆಟ್ಟದ ತಪ್ಪಲಲ್ಲಿ ಇದ್ದಾಗಲೇ ನಡೆಸಲ್ಪಟ್ಟಿತು. ಲೇವಿಕುಲದವರನ್ನು ಬಿಟ್ಟು, ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳ ಪುರುಷರ ಒಟ್ಟು ಸಂಖ್ಯೆಯು 6,03,550 ಆಗಿತ್ತು. ಈ ಖಾನೇಷುಮಾರಿಯು ಮಿಲಿಟರಿ ಉದ್ದೇಶಕ್ಕಾಗಿ ನಡೆಸಲ್ಪಟ್ಟಿತ್ತು ಎಂಬುದು ಸುವ್ಯಕ್ತ. ಸ್ತ್ರೀಯರು, ಮಕ್ಕಳು, ಲೇವಿಕುಲದವರನ್ನೂ ಸೇರಿಸಿ ಇಡೀ ಪಾಳೆಯದಲ್ಲಿದ್ದವರ ಸಂಖ್ಯೆ 30 ಲಕ್ಷಕ್ಕೂ ಮೀರಿತ್ತು.

ಖಾನೇಷುಮಾರಿಯ ಬಳಿಕ ಇಸ್ರಾಯೇಲ್ಯರಿಗೆ, ಶಿಸ್ತುಬದ್ಧ ಏರ್ಪಾಡಿನಲ್ಲಿ ನಡೆಯುವುದರ ಬಗ್ಗೆ ಸೂಚನೆಗಳು, ಲೇವಿಕುಲದವರ ಕರ್ತವ್ಯಗಳು ಹಾಗೂ ದೇವದರ್ಶನದ ಗುಡಾರದಲ್ಲಿನ ಸೇವೆಯ ಕುರಿತಾದ ವಿವರಗಳು, ಪ್ರತ್ಯೇಕಿಸಿಕೊಳ್ಳುವಿಕೆಯ ಆಜ್ಞೆಗಳು, ವ್ಯಭಿಚಾರಸಂಶಯವಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ನಿಯಮಗಳು, ನಾಜೀರರ ವ್ರತಗಳ ಕುರಿತಾದ ಮಾಹಿತಿಯು ನೀಡಲ್ಪಟ್ಟಿತು. ಏಳನೆಯ ಅಧ್ಯಾಯವು, ಯಜ್ಞವೇದಿಯ ಪ್ರತಿಷ್ಠಾಪನೆಯ ಸಂಬಂಧದಲ್ಲಿ ಕುಲಗಳ ಪ್ರಧಾನಪುರುಷರಿಂದ ಮಾಡಲ್ಪಡುವ ಯಜ್ಞಗಳ ಕುರಿತಾದ ಮಾಹಿತಿಯನ್ನು ಒಳಗೂಡಿದೆ, ಮತ್ತು 9ನೆಯ ಅಧ್ಯಾಯವು ಪಸ್ಕಹಬ್ಬದ ಆಚರಣೆಯ ಕುರಿತು ಚರ್ಚಿಸುತ್ತದೆ. ಈ ಜನಾಂಗಕ್ಕೆ, ಪಾಳೆಯವನ್ನು ಹೂಡುವ ಹಾಗೂ ಮುಂದಕ್ಕೆ ಪ್ರಯಾಣಿಸಲು ಹೊರಡುವ ವಿಷಯದಲ್ಲಿಯೂ ಸೂಚನೆಗಳನ್ನು ನೀಡಲಾಗಿತ್ತು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

2:​1, 2​—⁠ಅರಣ್ಯದಲ್ಲಿ ಮೂರು ಕುಲದ ವಿಭಾಗಗಳು ಯಾವುದರ ಹತ್ತಿರ ಇಳಿದುಕೊಳ್ಳಬೇಕಾಗಿತ್ತೋ ಆ ‘ಗೋತ್ರಧ್ವಜಗಳು’ ಏನಾಗಿದ್ದವು? ಈ ಗೋತ್ರಧ್ವಜಗಳು ಏನಾಗಿದ್ದವು ಎಂಬುದರ ಕುರಿತು ಬೈಬಲು ವಿವರಣೆಯನ್ನು ನೀಡುವುದಿಲ್ಲ. ಆದರೂ, ಇವು ಪವಿತ್ರ ಸಂಕೇತಗಳಾಗಿರಲಿಲ್ಲ ಅಥವಾ ಇವುಗಳಿಗೆ ಯಾವುದೇ ಧಾರ್ಮಿಕ ವಿಶೇಷಾರ್ಥವಿರಲಿಲ್ಲ. ಈ ಗೋತ್ರಧ್ವಜಗಳನ್ನು ಒಂದು ಪ್ರಾಯೋಗಿಕ ಉದ್ದೇಶಕ್ಕಾಗಿ, ಅಂದರೆ ಪಾಳೆಯದಲ್ಲಿ ತನಗೆ ನೇಮಿಸಲ್ಪಟ್ಟಿರುವ ಸ್ಥಳವನ್ನು ಕಂಡುಕೊಳ್ಳುವಂತೆ ವ್ಯಕ್ತಿಯೊಬ್ಬನಿಗೆ ಸಹಾಯಮಾಡಲಿಕ್ಕಾಗಿ ಉಪಯೋಗಿಸಲಾಗುತ್ತಿತ್ತು.

5:​27​—⁠ವ್ಯಭಿಚಾರ ಗೈದಿರುವಂಥ ಒಬ್ಬ ಪತ್ನಿಯ ‘ತೊಡೆಗಳು ಕ್ಷೀಣವಾಗಿ ಹೋಗುವವು’ ಎಂಬುದರ ಅರ್ಥವೇನು? ಇಲ್ಲಿ ‘ತೊಡೆಗಳು’ ಎಂಬ ಪದವು ಸಂತಾನೋತ್ಪತ್ತಿಯ ಅವಯವಗಳನ್ನು ಸೂಚಿಸಲಿಕ್ಕಾಗಿ ಉಪಯೋಗಿಸಲ್ಪಟ್ಟಿದೆ. (ಆದಿಕಾಂಡ 46:26) ಅವು ‘ಕ್ಷೀಣವಾಗಿ ಹೋಗುವುದು,’ ಈ ಅವಯವಗಳು ಅವನತಿಹೊಂದಿ ಗರ್ಭಧಾರಣೆಯು ಅಸಾಧ್ಯವಾಗುವುದನ್ನು ಸೂಚಿಸುತ್ತದೆ.

ನಮಗಾಗಿರುವ ಪಾಠಗಳು:

6:​1-7. ನಾಜೀರರು ಸ್ವನಿರಾಕರಣೆಯನ್ನು ಮಾಡುತ್ತಾ, ದ್ರಾಕ್ಷೇ ಹಣ್ಣಿನಿಂದ ಮಾಡಿದ ಯಾವ ಪಾನವನ್ನೂ ಮತ್ತೇರಿಸುವಂತಹ ಯಾವುದೇ ಮದ್ಯವನ್ನೂ ಕುಡಿಯಬಾರದಾಗಿತ್ತು. ಅವರು ತಮ್ಮ ತಲೆಯ ಕೂದಲನ್ನು ಕತ್ತರಿಸದೆ ಬಿಡಬೇಕಾಗಿತ್ತು. ಇದು, ತಮ್ಮ ಗಂಡಂದಿರಿಗೆ ಅಥವಾ ತಂದೆಗಳಿಗೆ ಸ್ತ್ರೀಯರು ಹೇಗೆ ಅಧೀನರಾಗಿದ್ದಾರೋ ಅದೇ ರೀತಿಯಲ್ಲಿ ಯೆಹೋವನಿಗೆ ನಾಜೀರರು ಸಲ್ಲಿಸುವ ಅಧೀನತೆಯ ಸಂಕೇತವಾಗಿತ್ತು. ಯಾವುದೇ ಮೃತ ಶರೀರವನ್ನು​—⁠ಅದು ಒಬ್ಬ ಸಮೀಪ ಬಂಧುವಿನದ್ದಾಗಿದ್ದರೂ​—⁠ಮುಟ್ಟದಿರುವ ಮೂಲಕ ನಾಜೀರರು ಪವಿತ್ರರಾಗಿ ಉಳಿಯಬೇಕಿತ್ತು. ಸ್ವನಿರಾಕರಣೆ ಮತ್ತು ಯೆಹೋವನಿಗೆ ಹಾಗೂ ಆತನ ಏರ್ಪಾಡಿಗೆ ಅಧೀನತೆಯನ್ನು ತೋರಿಸುತ್ತಾ, ಇಂದಿನ ಪೂರ್ಣ ಸಮಯದ ಸೇವಕರು ಸ್ವತ್ಯಾಗದ ಮನೋಭಾವವನ್ನು ತೋರಿಸುತ್ತಾರೆ. ಕೆಲವು ನೇಮಕಗಳು ಬಹು ದೂರದ ದೇಶವೊಂದಕ್ಕೆ ಸ್ಥಳಾಂತರಿಸುವುದನ್ನು ಒಳಗೂಡಿರಬಹುದು, ಮತ್ತು ಇದು ಕುಟುಂಬದ ಒಬ್ಬ ಆಪ್ತ ಸದಸ್ಯನ ಶವಸಂಸ್ಕಾರಕ್ಕಾಗಿ ಮನೆಗೆ ಹಿಂದಿರುಗುವುದನ್ನು ಕಷ್ಟಕರವಾದದ್ದಾಗಿ ಅಥವಾ ಅಸಾಧ್ಯವಾದದ್ದಾಗಿಯೂ ಮಾಡಬಹುದು.

8:​25, 26. ಸಮರ್ಥ ವ್ಯಕ್ತಿಗಳು ಲೇವಿಯರ ಸ್ಥಾನಗಳನ್ನು ತುಂಬಸಾಧ್ಯವಾಗುವಂತೆ, ಮತ್ತು ವೃದ್ಧ ಲೇವಿಯರ ವಯಸ್ಸಿಗೆ ಪರಿಗಣನೆಯನ್ನು ತೋರಿಸುತ್ತಾ, ಕಡ್ಡಾಯ ಸೇವೆಯಿಂದ ಇಂಥವರಿಗೆ ನಿವೃತ್ತಿಯನ್ನು ನೀಡುವಂತೆ ಆಜ್ಞೆಯು ಕೊಡಲ್ಪಟ್ಟಿತ್ತು. ಆದರೂ, ಅವರು ಇತರ ಲೇವಿಯರಿಗೆ ಸಹಾಯವನ್ನು ಮಾಡಲು ತಾವಾಗಿಯೇ ಮುಂದೆಬರಸಾಧ್ಯವಿತ್ತು. ಇಂದು ಒಬ್ಬ ರಾಜ್ಯ ಘೋಷಕನಾಗಿರುವುದರಿಂದ ಯಾವುದೇ ರೀತಿಯ ನಿವೃತ್ತಿಯು ದೊರಕುವುದಿಲ್ಲವಾದರೂ, ಈ ನಿಯಮದ ಹಿಂದಿರುವ ಮೂಲತತ್ತ್ವವು ಒಂದು ಅಮೂಲ್ಯವಾದ ಪಾಠವನ್ನು ಕಲಿಸುತ್ತದೆ. ವಯಸ್ಸಾದ ಕಾರಣ ಕ್ರೈಸ್ತನೊಬ್ಬನು ನಿರ್ದಿಷ್ಟ ಕರ್ತವ್ಯಗಳನ್ನು ಪೂರೈಸಲು ಅಸಮರ್ಥನಾಗಿರುವಲ್ಲಿ, ತಾನು ನಿರ್ವಹಿಸಲು ಸಾಧ್ಯವಿರುವಂಥ ರೀತಿಯ ಸೇವಾ ಕ್ಷೇತ್ರದಲ್ಲಿ ಅವನು ಒಳಗೂಡಬಹುದು.

ಅರಣ್ಯದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ

(ಅರಣ್ಯಕಾಂಡ 10:​11–21:⁠35)

ದೇವದರ್ಶನದ ಗುಡಾರದ ಮೇಲಿನ ಮೇಘವು ಕ್ರಮೇಣ ಮೇಲಕ್ಕೆ ಎದ್ದಾಗ, ಇಸ್ರಾಯೇಲ್ಯರು ತಮ್ಮ ಅರಣ್ಯ ಪ್ರಯಾಣವನ್ನು ಆರಂಭಿಸಿದರು; ಈ ಪ್ರಯಾಣವು 38 ವರ್ಷಗಳು ಹಾಗೂ ಒಂದು ಅಥವಾ ಎರಡು ತಿಂಗಳುಗಳ ನಂತರ ಅವರನ್ನು ಮೋವಾಬ್‌ನ ಮರುಭೂಮಿ ಬೈಲಿಗೆ ತರಲಿತ್ತು. ಅವರ ಪ್ರಯಾಣ ಮಾರ್ಗವನ್ನು, ಯೆಹೋವನ ಸಾಕ್ಷಿಗಳಿಂದ ಪ್ರಕಾಶನ ಮಾಡಲ್ಪಟ್ಟ ‘ಒಳ್ಳೆಯ ದೇಶವನ್ನು ನೋಡಿ’ ಬ್ರೋಷರಿನ 9ನೆಯ ಪುಟದಲ್ಲಿರುವ ಭೂಪಟದಲ್ಲಿ ನೋಡುವುದನ್ನು ನೀವು ಪ್ರಯೋಜನದಾಯಕವಾಗಿ ಕಂಡುಕೊಳ್ಳಬಹುದು.

ಪಾರಾನ್‌ ಅರಣ್ಯದಲ್ಲಿ, ಕಾದೇಶಿಗೆ ಹೋಗುವ ಮಾರ್ಗದಲ್ಲಿ, ಕಡಿಮೆಪಕ್ಷ ಮೂರು ಗುಣುಗುಟ್ಟುವಿಕೆಯ ಘಟನೆಗಳು ನಡೆದವು. ಜನರಲ್ಲಿ ಕೆಲವರನ್ನು ಸುಟ್ಟುಬಿಡಲಿಕ್ಕಾಗಿ ಯೆಹೋವನು ಬೆಂಕಿಯನ್ನು ಕಳುಹಿಸಿದಾಗ, ಮೊದಲನೆಯ ಗುಣುಗುಟ್ಟುವಿಕೆಯು ದಮನಗೊಳಿಸಲ್ಪಟ್ಟಿತು. ತದನಂತರ ಇಸ್ರಾಯೇಲ್ಯರು ಮಾಂಸಕ್ಕಾಗಿ ಮೊರೆಯಿಟ್ಟರು, ಮತ್ತು ಯೆಹೋವನು ಲಾವಕ್ಕಿಯನ್ನು ಒದಗಿಸಿದನು. ಮಿರ್ಯಾಮಳೂ ಆರೋನನೂ ಸೇರಿಕೊಂಡು ಮೋಶೆಯ ವಿರುದ್ಧ ಗುಣುಗುಟ್ಟಿದಾಗ, ಇದರ ಫಲಿತಾಂಶವಾಗಿ ಮಿರ್ಯಾಮಳು ತಾತ್ಕಾಲಿಕವಾಗಿ ತೊನ್ನಿಗೆ ಗುರಿಯಾದಳು.

ಕಾದೇಶಿನಲ್ಲಿ ಪಾಳೆಯ ಹೂಡಿದಾಗ, ವಾಗ್ದತ್ತ ದೇಶವನ್ನು ಸಂಚರಿಸಿ ನೋಡುವುದಕ್ಕಾಗಿ ಮೋಶೆ 12 ಮಂದಿ ಪುರುಷರನ್ನು ಕಳುಹಿಸಿದನು. 40 ದಿನಗಳ ಬಳಿಕ ಅವರು ಹಿಂದಿರುಗಿದರು. ಗೂಢಚಾರರಲ್ಲಿ ಹತ್ತು ಮಂದಿ ತಂದ ಕೆಟ್ಟ ವರದಿಯನ್ನು ನಂಬಿದ ಜನರು, ಮೋಶೆ, ಆರೋನ, ಹಾಗೂ ನಂಬಿಗಸ್ತ ಗೂಢಚಾರರಾಗಿದ್ದ ಯೆಹೋಶುವ ಮತ್ತು ಕಾಲೇಬರನ್ನು ಕಲ್ಲೆಸೆದು ಕೊಲ್ಲಲು ಬಯಸಿದರು. ಯೆಹೋವನು ಈ ಜನರ ಮೇಲೆ ವ್ಯಾಧಿಯನ್ನು ತರುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದನಾದರೂ, ಮೋಶೆಯು ಅವರ ಪರವಾಗಿ ಮಧ್ಯಸ್ತಿಕೆ ವಹಿಸಿದನು ಮತ್ತು ಇದರಿಂದಾಗಿ ಅವರು 40 ವರ್ಷಗಳ ವರೆಗೆ ಅಂದರೆ ಖಾನೇಷುಮಾರಿಯಲ್ಲಿ ಲೆಕ್ಕಮಾಡಲ್ಪಟ್ಟವರು ಸಾಯುವ ತನಕ ಅರಣ್ಯದಲ್ಲಿ ಅಲೆಮಾರಿಗಳಾಗಿರುವರು ಎಂದು ದೇವರು ಪ್ರಕಟಿಸಿದನು.

ಯೆಹೋವನು ಇನ್ನೂ ಹೆಚ್ಚಿನ ನಿಬಂಧನೆಗಳನ್ನು ಕೊಟ್ಟನು. ಕೋರಹ ಹಾಗೂ ಇನ್ನಿತರರು ಮೋಶೆ ಮತ್ತು ಆರೋನರ ವಿರುದ್ಧ ದಂಗೆಯೆದ್ದರು, ಆದರೆ ಆ ದಂಗೆಕೋರರು ಬೆಂಕಿಯಿಂದ ದಹಿಸಲ್ಪಟ್ಟರು ಮತ್ತು ಕೆಲವರನ್ನು ಭೂಮಿಯು ಬಾಯ್ದೆರೆದು ಕಬಳಿಸಿತು. ಮರುದಿನ ಇಡೀ ಇಸ್ರಾಯೇಲ್‌ ಜನಾಂಗವು ಮೋಶೆ ಮತ್ತು ಆರೋನರ ವಿರುದ್ಧ ಗುಣುಗುಟ್ಟಿತು. ಇದರ ಫಲಿತಾಂಶವಾಗಿ, 14,700 ಮಂದಿ ಯೆಹೋವನಿಂದ ಬರಮಾಡಲ್ಪಟ್ಟ ಘೋರವ್ಯಾಧಿಯಿಂದ ಹತರಾದರು. ತಾನು ಆಯ್ಕೆಮಾಡಿದ ಮಹಾ ಯಾಜಕನ ಕುರಿತು ಇತರರಿಗೆ ತಿಳಿಯಪಡಿಸಲಿಕ್ಕಾಗಿ ದೇವರು ಆರೋನನ ಕೋಲನ್ನು ಚಿಗುರಿಸಿದನು. ತದನಂತರ ಯೆಹೋವನು ಲೇವಿಯರ ಕರ್ತವ್ಯಗಳು ಹಾಗೂ ಜನರ ಶುದ್ಧೀಕರಣದ ಕುರಿತು ಇನ್ನೂ ಹೆಚ್ಚಿನ ನಿಯಮಗಳನ್ನು ಕೊಟ್ಟನು. ಕೆಂದಾಕಳಿನ ಬೂದಿಯ ಉಪಯೋಗವು, ಯೇಸುವಿನ ಯಜ್ಞದ ಮೂಲಕ ನಡೆಯುವ ಶುದ್ಧೀಕರಣವನ್ನು ಮುನ್ಸೂಚಿಸುತ್ತಿತ್ತು.​—⁠ಇಬ್ರಿಯ 9:13, 14.

ಇಸ್ರಾಯೇಲ್ಯರು ಕಾದೇಶಿಗೆ ಹಿಂದಿರುಗಿದರು, ಮತ್ತು ಅಲ್ಲಿ ಮಿರ್ಯಾಮಳು ಮೃತಪಟ್ಟಳು. ಪುನಃ ಸರ್ವಸಮೂಹದವರು ಮೋಶೆ ಮತ್ತು ಆರೋನರ ವಿರುದ್ಧ ಗುಣುಗುಟ್ಟಿದರು. ಇದಕ್ಕೆ ಕಾರಣವೇನು? ನೀರಿನ ಕೊರತೆಯೇ. ಅದ್ಭುತಕರವಾದ ರೀತಿಯಲ್ಲಿ ನೀರು ಒದಗಿಸಲ್ಪಟ್ಟಾಗ, ಮೋಶೆ ಮತ್ತು ಆರೋನರು ಯೆಹೋವನ ನಾಮವನ್ನು ಪವಿತ್ರೀಕರಿಸಲು ತಪ್ಪಿದ್ದರಿಂದ, ವಾಗ್ದತ್ತ ದೇಶವನ್ನು ಪ್ರವೇಶಿಸುವ ಸುಯೋಗವು ಅವರಿಗೆ ಸಿಗಲಿಲ್ಲ. ಇಸ್ರಾಯೇಲ್ಯರು ಕಾದೇಶಿನಿಂದ ಹೊರಟರು, ಮತ್ತು ಹೋರ್‌ ಎಂಬ ಬೆಟ್ಟದಲ್ಲಿ ಆರೋನನು ಮೃತಪಟ್ಟನು. ಎದೋಮ್ಯರ ದೇಶವನ್ನು ದಾಟಿಹೋಗುತ್ತಿರುವಾಗ ಇಸ್ರಾಯೇಲ್ಯರು ತುಂಬ ದಣಿದುಹೋಗಿದ್ದರು ಮತ್ತು ದೇವರ ಹಾಗೂ ಮೋಶೆಯ ವಿರುದ್ಧ ಮಾತಾಡಿದರು. ಅವರನ್ನು ಶಿಕ್ಷಿಸಲಿಕ್ಕಾಗಿ ಯೆಹೋವನು ವಿಷಸರ್ಪಗಳನ್ನು ಕಳುಹಿಸಿದನು. ಪುನಃ ಮೋಶೆಯು ಅವರ ಪರವಾಗಿ ಮಧ್ಯಸ್ತಿಕೆ ವಹಿಸಿದನು, ಮತ್ತು ಆಗ ದೇವರು ಮೋಶೆಗೆ ಒಂದು ತಾಮ್ರದ ಸರ್ಪವನ್ನು ಮಾಡಿಸಿ, ಅದನ್ನು ಧ್ವಜಸ್ತಂಭದ ಮೇಲೆ ಇರಿಸುವಂತೆ ಮತ್ತು ವಿಷಸರ್ಪಗಳಿಂದ ಗಾಯಗೊಂಡವರು ಅದನ್ನು ಲಕ್ಷ್ಯವಿಟ್ಟು ನೋಡುವ ಮೂಲಕ ತಮ್ಮನ್ನು ಗುಣಪಡಿಸಿಕೊಳ್ಳುವಂತೆ ಸೂಚನೆ ನೀಡಿದನು. ಆ ಸರ್ಪವು, ನಮ್ಮ ನಿತ್ಯ ಪ್ರಯೋಜನಕ್ಕಾಗಿ ಯೇಸು ಕ್ರಿಸ್ತನು ಶೂಲಕ್ಕೇರಿಸಲ್ಪಡುವುದನ್ನು ಮುನ್‌ಚಿತ್ರಿಸಿತು. (ಯೋಹಾನ 3:​14, 15) ಇಸ್ರಾಯೇಲ್ಯರು ಸೀಹೋನ್‌ ಮತ್ತು ಓಗ್‌ ಎಂಬ ಅಮೋರಿಯರ ಅರಸರನ್ನು ಸೋಲಿಸಿ, ಅವರ ದೇಶಗಳನ್ನು ಸ್ವಾಧೀನಪಡಿಸಿಕೊಂಡರು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

12:1​—⁠ಮಿರ್ಯಾಮಳೂ ಆರೋನನೂ ಮೋಶೆಗೆ ವಿರೋಧವಾಗಿ ಮಾತಾಡಿದ್ದೇಕೆ? ಅವರು ಹೀಗೆ ಮಾಡಲು ನಿಜವಾದ ಕಾರಣವು, ಹೆಚ್ಚಿನ ಅಧಿಕಾರಕ್ಕಾಗಿದ್ದ ಮಿರ್ಯಾಮಳ ಆಸೆಯೇ ಆಗಿತ್ತು ಎಂಬುದು ಸುವ್ಯಕ್ತ. ಮೋಶೆಯ ಹೆಂಡತಿಯಾಗಿದ್ದ ಚಿಪ್ಪೋರಳು ಅರಣ್ಯದಲ್ಲಿ ಅವನನ್ನು ಜೊತೆಗೂಡಿದಾಗ, ಪಾಳೆಯದಲ್ಲಿ ಯಾರೂ ತನ್ನನ್ನು ಇನ್ನೆಂದೂ ಒಬ್ಬ ಗಣ್ಯ ವ್ಯಕ್ತಿಯಾಗಿ ಪರಿಗಣಿಸುವುದಿಲ್ಲವೇನೊ ಎಂದು ಮಿರ್ಯಾಮಳು ಭಯಪಟ್ಟಿದ್ದಿರಬಹುದು.​—⁠ವಿಮೋಚನಕಾಂಡ 18:​1-5.

12:​9-11​—⁠ಮಿರ್ಯಾಮಳಿಗೆ ಮಾತ್ರ ತೊನ್ನುಹತ್ತಿತೇಕೆ? ಅವಳೇ ಮೋಶೆಯ ವಿರುದ್ಧ ದೂರುವ ಚಿತಾವಣೆ ನಡೆಸಿ, ಆರೋನನೂ ತನ್ನ ಜೊತೆಗೂಡುವಂತೆ ಒಡಂಬಡಿಸಿರುವುದು ಸಂಭವನೀಯ. ತನ್ನ ತಪ್ಪನ್ನು ಅರಿಕೆಮಾಡಿಕೊಳ್ಳುವ ಮೂಲಕ ಆರೋನನು ಸರಿಯಾದ ಮನೋಭಾವವನ್ನು ತೋರಿಸಿದನು.

21:​14, 15​—⁠ಇಲ್ಲಿ ತಿಳಿಸಲ್ಪಟ್ಟಿರುವ ಗ್ರಂಥವು ಯಾವುದಾಗಿದೆ? ಬೈಬಲ್‌ ಬರಹಗಾರರು ವಿಷಯವಸ್ತುವಿನ ಮೂಲವಾಗಿ ಉಪಯೋಗಿಸಿದಂಥ ಬೇರೆ ಬೇರೆ ಗ್ರಂಥಗಳನ್ನು ಶಾಸ್ತ್ರವಚನಗಳು ಸೂಚಿಸುತ್ತವೆ. (ಯೆಹೋಶುವ 10:12, 13; 1 ಅರಸುಗಳು 11:41; 14:19, 29) “ಯೆಹೋವವಿಜಯ ಎಂಬ ಗ್ರಂಥ” ಅಥವಾ “ಯೆಹೋವನ ಯುದ್ಧಗಳು ಎಂಬ ಗ್ರಂಥ” (ಪರಿಶುದ್ಧ ಬೈಬಲ್‌ *)ವು ಅಂಥ ಒಂದು ಬರಹವಾಗಿತ್ತು. ಇದು ಯೆಹೋವನ ಜನರ ಯುದ್ಧಗಳ ಕುರಿತಾದ ಒಂದು ಐತಿಹಾಸಿಕ ವೃತ್ತಾಂತವನ್ನು ಒಳಗೂಡಿತ್ತು.

ನಮಗಾಗಿರುವ ಪಾಠಗಳು:

11:​27-29. ಇತರರು ಯೆಹೋವನ ಸೇವೆಯಲ್ಲಿ ಸುಯೋಗಗಳನ್ನು ಪಡೆದುಕೊಳ್ಳುವಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬ ವಿಷಯದಲ್ಲಿ ಮೋಶೆಯು ಅತ್ಯುತ್ತಮ ಮಾದರಿಯನ್ನು ಇಟ್ಟಿದ್ದಾನೆ. ಈರ್ಷ್ಯೆಯಿಂದ ಸ್ವತಃ ತನಗಾಗಿ ಘನತೆಯನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುವುದಕ್ಕೆ ಬದಲಾಗಿ, ಎಲ್ದಾದ್‌ ಮೇದಾದರು ಪ್ರವಾದಿಗಳೋಪಾದಿ ಕಾರ್ಯನಡಿಸಲು ಆರಂಭಿಸಿದಾಗ ಮೋಶೆಯು ಸಂತೋಷಗೊಂಡನು.

12:​2, 9, 10; 16:​1-3, 12-14, 31-35, 41, 46-50. ತನ್ನ ಆರಾಧಕರು ದೇವದತ್ತ ಅಧಿಕಾರಕ್ಕೆ ಗೌರವವನ್ನು ತೋರಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆ.

14:24. ಕೆಟ್ಟದ್ದನ್ನು ಮಾಡುವುದರ ಕಡೆಗಿನ ಲೌಕಿಕ ಒತ್ತಡಗಳನ್ನು ಪ್ರತಿರೋಧಿಸಲಿಕ್ಕಾಗಿರುವ ಒಂದು ಕೀಲಿ ಕೈ, ಭಿನ್ನವಾದ ‘ಮನಸ್ಸನ್ನು’ ಅಥವಾ ಮನೋಭಾವವನ್ನು ಬೆಳೆಸಿಕೊಳ್ಳುವುದೇ ಆಗಿದೆ. ಇದು ಲೋಕದ ಮನೋಭಾವಕ್ಕಿಂತ ತೀರ ಭಿನ್ನವಾದದ್ದಾಗಿರಬೇಕು.

15:​37-41. ಇಸ್ರಾಯೇಲ್ಯರ ವಸ್ತ್ರಗಳ ಮೂಲೆಗಳಲ್ಲಿರುವ ಅಪೂರ್ವ ಗೊಂಡೆಗಳು, ಅವರು ದೇವರ ಆರಾಧನೆಗಾಗಿ ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗಲಿಕ್ಕಾಗಿ ಮೀಸಲಾಗಿಡಲ್ಪಟ್ಟಿರುವ ಜನರಾಗಿದ್ದರು ಎಂಬುದನ್ನು ಜ್ಞಾಪಕ ಹುಟ್ಟಿಸಲಿಕ್ಕಾಗಿದ್ದವು. ನಾವು ಸಹ ದೇವರ ಮಟ್ಟಗಳಿಗನುಸಾರ ಜೀವಿಸುತ್ತಾ, ಲೋಕದಿಂದ ಭಿನ್ನರಾಗಿ ಎದ್ದುಕಾಣಬೇಕಲ್ಲವೊ?

ಮೋವಾಬ್‌ ಬೈಲಿನಲ್ಲಿ

(ಅರಣ್ಯಕಾಂಡ 22:​1–36:13)

ಮೋವಾಬ್‌ನ ಮರುಭೂಮಿ ಬೈಲಿನಲ್ಲಿ ಇಸ್ರಾಯೇಲ್ಯರು ಡೇರೆಗಳನ್ನು ಹಾಕಿಕೊಂಡಿದ್ದಾಗ, ಮೋವಾಬ್ಯರು ಅವರನ್ನು ನೋಡಿ ಸಹಿಸಲಾರದಷ್ಟು ಹೆದರಿಕೆಯುಳ್ಳವರಾದರು. ಆದುದರಿಂದ, ಮೋವಾಬ್ಯರ ಅರಸನಾಗಿದ್ದ ಬಾಲಾಕನು ಇಸ್ರಾಯೇಲ್ಯರನ್ನು ಶಪಿಸಲಿಕ್ಕಾಗಿ ಬಿಳಾಮನನ್ನು ಉಪಯೋಗಿಸಿಕೊಳ್ಳುತ್ತಾನೆ. ಆದರೆ ಬಿಳಾಮನು ಇಸ್ರಾಯೇಲ್ಯರನ್ನು ಆಶೀರ್ವದಿಸುವಂತೆ ಯೆಹೋವನು ಒತ್ತಾಯಿಸಿದನು. ತದನಂತರ ಇಸ್ರಾಯೇಲ್ಯ ಪುರುಷರನ್ನು ಅನೈತಿಕತೆ ಹಾಗೂ ವಿಗ್ರಹಾರಾಧನೆಗೆ ಸೆಳೆಯಲಿಕ್ಕಾಗಿ ಮೋವಾಬ್ಯ ಹಾಗೂ ಮಿದ್ಯಾನ್ಯ ಸ್ತ್ರೀಯರನ್ನು ಉಪಯೋಗಿಸಲಾಯಿತು. ಇದರ ಫಲಿತಾಂಶವಾಗಿ, ಯೆಹೋವನು 24,000 ಮಂದಿ ತಪ್ಪಿತಸ್ಥರನ್ನು ಹತಿಸಿದನು. ಯೆಹೋವನ ವಿರುದ್ಧ ಪ್ರತಿಸ್ಪರ್ಧೆಯನ್ನು ತಾಳಿಕೊಳ್ಳಲಾರೆನು ಎಂಬುದನ್ನು ಫೀನೆಹಾಸನು ರುಜುಪಡಿಸಿದಾಗ, ಬರಮಾಡಲ್ಪಟ್ಟ ವ್ಯಾಧಿಯು ಕೊನೆಗೂ ನಿಂತುಹೋಯಿತು.

ಎರಡನೆಯ ಖಾನೇಷುಮಾರಿಯು, ಮೊದಲ ಖಾನೇಷುಮಾರಿಯಲ್ಲಿ ಲೆಕ್ಕಿಸಲ್ಪಟ್ಟ ಪುರುಷರಲ್ಲಿ ಯೆಹೋಶುವ ಮತ್ತು ಕಾಲೇಬರನ್ನು ಬಿಟ್ಟು ಇನ್ಯಾರೂ ಬದುಕಿಲ್ಲ ಎಂಬುದನ್ನು ಪ್ರಕಟಪಡಿಸಿತು. ಯೆಹೋಶುವನನ್ನು ಮೋಶೆಯ ಉತ್ತರಾಧಿಕಾರಿಯನ್ನಾಗಿ ನೇಮಿಸಲಾಯಿತು. ಬೇರೆ ಬೇರೆ ಯಜ್ಞಗಳ ಕುರಿತಾದ ಕಾರ್ಯಾವಳಿಗಳು ಮತ್ತು ಹರಕೆಮಾಡಿಕೊಳ್ಳುವುದರ ಕುರಿತಾದ ಸೂಚನೆಗಳು ಇಸ್ರಾಯೇಲ್ಯರಿಗೆ ಕೊಡಲ್ಪಟ್ಟವು. ಇಸ್ರಾಯೇಲ್ಯರು ಮಿದ್ಯಾನ್ಯರ ಮೇಲೆ ಮುಯ್ಯಿತೀರಿಸಿಕೊಂಡರು. ರೂಬೇನ್‌, ಗಾದ್‌, ಮತ್ತು ಮನಸ್ಸೆಯ ಕುಲದವರಲ್ಲಿ ಅರ್ಧ ಮಂದಿ ಯೊರ್ದನ್‌ ಹೊಳೆಯ ಮೂಡಣ ದಿಕ್ಕಿನಲ್ಲಿ ಸ್ವಾಸ್ತ್ಯವನ್ನು ಪಡೆದುಕೊಂಡರು. ಯೊರ್ದನ್‌ ಹೊಳೆಯನ್ನು ದಾಟುವ ಹಾಗೂ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲ್ಯರಿಗೆ ಸೂಚನೆಗಳು ಕೊಡಲ್ಪಟ್ಟವು. ಕಾನಾನ್‌ ದೇಶದ ಮೇರೆಗಳು ಸಹ ಸವಿವರವಾದ ರೀತಿಯಲ್ಲಿ ತಿಳಿಸಲ್ಪಟ್ಟವು. ಚೀಟುಹಾಕುವ ಮೂಲಕ ಆಯಾ ಕುಲಕ್ಕೆ ಸ್ವಾಸ್ತ್ಯವು ನಿರ್ಧರಿಸಲ್ಪಡಲಿಕ್ಕಿತ್ತು. ಲೇವಿಯರಿಗೆ 48 ಪಟ್ಟಣಗಳು ನೇಮಿಸಲ್ಪಟ್ಟವು ಮತ್ತು ಇವುಗಳಲ್ಲಿ 6, ಆಶ್ರಯನಗರಗಳಾಗಿ ಕಾರ್ಯನಡಿಸಲಿದ್ದವು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

22:​20-22​—⁠ಯೆಹೋವನು ಬಿಳಾಮನ ವಿರುದ್ಧ ಕೋಪಗೊಂಡದ್ದೇಕೆ? ಪ್ರವಾದಿಯಾದ ಬಿಳಾಮನು ಇಸ್ರಾಯೇಲ್ಯರನ್ನು ಶಪಿಸಬಾರದು ಎಂದು ಯೆಹೋವನು ಅವನಿಗೆ ಹೇಳಿದ್ದನು. (ಅರಣ್ಯಕಾಂಡ 22:12) ಆದರೂ, ಆ ಪ್ರವಾದಿಯು ಇಸ್ರಾಯೇಲ್ಯರನ್ನು ಶಪಿಸುವ ಉದ್ದೇಶದಿಂದ ಬಾಲಾಕನ ಜನರೊಂದಿಗೆ ಹೋದನು. ಬಿಳಾಮನು ಮೋವಾಬ್ಯರ ಅರಸನನ್ನು ಮೆಚ್ಚಿಸಲು ಹಾಗೂ ಅವನಿಂದ ಬಹುಮಾನವನ್ನು ಪಡೆದುಕೊಳ್ಳಲು ಬಯಸಿದನು. (2 ಪೇತ್ರ 2:15, 16; ಯೂದ 11) ಇಸ್ರಾಯೇಲ್ಯರನ್ನು ಶಪಿಸುವುದಕ್ಕೆ ಬದಲಾಗಿ ಅವರನ್ನು ಆಶೀರ್ವದಿಸುವಂತೆ ಬಿಳಾಮನು ಒತ್ತಾಯಿಸಲ್ಪಟ್ಟಾಗಲೂ, ಇಸ್ರಾಯೇಲ್ಯ ಪುರುಷರನ್ನು ಸೆಳೆಯಲಿಕ್ಕಾಗಿ ಬಾಳನ ಆರಾಧಕರಾಗಿದ್ದ ಸ್ತ್ರೀಯರನ್ನು ಉಪಯೋಗಿಸುವಂತೆ ಸೂಚಿಸುವ ಮೂಲಕ ಅವನು ಅರಸನ ಅನುಗ್ರಹವನ್ನು ಪಡೆದುಕೊಳ್ಳಲು ಪ್ರಯತ್ನಿಸಿದನು. (ಅರಣ್ಯಕಾಂಡ 31:​15, 16) ಹೀಗೆ, ಬಿಳಾಮನ ವಿರುದ್ಧ ಯೆಹೋವನು ಕೋಪಗೊಳ್ಳಲು ಪ್ರವಾದಿಯ ನಿರ್ಲಜ್ಜೆಯ ಲೋಭವೇ ಕಾರಣವಾಗಿತ್ತು.

30:​6-8​—⁠ಕ್ರೈಸ್ತ ಪುರುಷನೊಬ್ಬನು ತನ್ನ ಹೆಂಡತಿಯ ಹರಕೆಗಳನ್ನು ರದ್ದುಪಡಿಸಸಾಧ್ಯವಿದೆಯೊ? ಹರಕೆಗಳ ವಿಷಯದಲ್ಲಿ ಹೇಳುವುದಾದರೆ, ಈಗ ಯೆಹೋವನು ತನ್ನ ಆರಾಧಕರೊಂದಿಗೆ ವೈಯಕ್ತಿಕವಾಗಿ ವ್ಯವಹರಿಸುತ್ತಾನೆ. ಉದಾಹರಣೆಗೆ, ಯೆಹೋವನಿಗೆ ಮಾಡಲ್ಪಡುವ ಸಮರ್ಪಣೆಯು ಒಂದು ವೈಯಕ್ತಿಕ ಹರಕೆಯಾಗಿದೆ. (ಗಲಾತ್ಯ 6:⁠5) ಇಂಥ ಹರಕೆಯನ್ನು ಬದಿಗೊತ್ತಲು ಅಥವಾ ರದ್ದುಪಡಿಸಲು ಗಂಡನಿಗೆ ಯಾವುದೇ ಅಧಿಕಾರವಿಲ್ಲ. ಆದರೂ, ದೇವರ ವಾಕ್ಯದೊಂದಿಗೆ ಅಥವಾ ಗಂಡನ ಕಡೆಗಿನ ತನ್ನ ಕರ್ತವ್ಯಗಳೊಂದಿಗೆ ಘರ್ಷಿಸುವಂಥ ಯಾವುದೇ ಹರಕೆಯನ್ನು ಪತ್ನಿಯು ಮಾಡಿಕೊಳ್ಳಬಾರದು.

ನಮಗಾಗಿರುವ ಪಾಠಗಳು:

25:11. ಯೆಹೋವನ ಆರಾಧನೆಗಾಗಿ ಹುರುಪನ್ನು ತೋರಿಸುವುದರಲ್ಲಿ ಫೀನೆಹಾಸನು ನಮಗೋಸ್ಕರ ಎಂಥ ಅತ್ಯುತ್ತಮ ಮಾದರಿಯನ್ನು ಇಟ್ಟಿದ್ದಾನೆ! ಸಭೆಯನ್ನು ಶುದ್ಧವಾಗಿರಿಸುವ ಬಯಕೆಯು, ಗಂಭೀರವಾದ ಅನೈತಿಕತೆಯ ಯಾವುದೇ ಸಂಗತಿಯನ್ನು ಕ್ರೈಸ್ತ ಹಿರಿಯರಿಗೆ ವರದಿಸುವಂತೆ ನಮ್ಮನ್ನು ಪ್ರಚೋದಿಸಬೇಕಲ್ಲವೋ?

35:​9-29. ಆಕಸ್ಮಿಕವಾಗಿ ಮನುಷ್ಯಹತ್ಯೆಮಾಡಿರುವ ವ್ಯಕ್ತಿಯೊಬ್ಬನು ತನ್ನ ಮನೆಯನ್ನು ಬಿಟ್ಟು, ನಿರ್ದಿಷ್ಟ ಕಾಲಾವಧಿಯ ವರೆಗೆ ಆಶ್ರಯನಗರಕ್ಕೆ ಪಲಾಯನಗೈಯುವ ಸಂಗತಿಯು, ಜೀವವು ಪವಿತ್ರವಾದದ್ದಾಗಿದೆ ಮತ್ತು ನಾವು ಅದಕ್ಕೆ ಗೌರವವನ್ನು ತೋರಿಸಬೇಕು ಎಂಬ ಪಾಠವನ್ನು ಕಲಿಸುತ್ತದೆ.

35:33. ಮುಗ್ಧ ಜನರ ರಕ್ತವು ಸುರಿಸಲ್ಪಟ್ಟು ಅಪವಿತ್ರಗೊಂಡಿರುವ ದೇಶಕ್ಕೆ, ಯಾರು ಆ ರಕ್ತವನ್ನು ಹರಿಸುತ್ತಾರೋ ಅವರ ರಕ್ತದಿಂದ ಮಾತ್ರ ಪ್ರಾಯಶ್ಚಿತ್ತವಿರಸಾಧ್ಯವಿದೆ. ಈ ಭೂಮಿಯು ಪರದೈಸಾಗಿ ರೂಪಾಂತರಿಸಲ್ಪಡುವುದಕ್ಕೆ ಮುಂಚೆ ಯೆಹೋವನು ದುಷ್ಟರನ್ನು ನಾಶಮಾಡುವುದು ಎಷ್ಟು ಸೂಕ್ತವಾದದ್ದಾಗಿದೆ!​—⁠ಜ್ಞಾನೋಕ್ತಿ 2:21, 22; ದಾನಿಯೇಲ 2:⁠44.

ದೇವರ ವಾಕ್ಯವು ಕಾರ್ಯಸಾಧಕವಾದದ್ದು

ನಾವು ಯೆಹೋವನಿಗೆ ಮತ್ತು ಆತನ ಜನರ ನಡುವೆ ಜವಾಬ್ದಾರಿಯುತ ಸ್ಥಾನಗಳಲ್ಲಿ ಇಡಲ್ಪಟ್ಟಿರುವವರಿಗೆ ಗೌರವವನ್ನು ತೋರಿಸಬೇಕು. ಅರಣ್ಯಕಾಂಡ ಪುಸ್ತಕವು ಈ ಸತ್ಯಾಂಶವನ್ನು ನಿಜವಾಗಿಯೂ ಒತ್ತಿಹೇಳುತ್ತದೆ. ಇಂದು ಸಭೆಯಲ್ಲಿ ಶಾಂತಿ ಹಾಗೂ ಐಕ್ಯಭಾವವನ್ನು ಕಾಪಾಡಿಕೊಳ್ಳಲು ಇದು ಎಷ್ಟು ಪ್ರಾಮುಖ್ಯವಾದ ಪಾಠವಾಗಿದೆ!

ಅರಣ್ಯಕಾಂಡದಲ್ಲಿ ಕೊಡಲ್ಪಟ್ಟಿರುವ ಘಟನೆಗಳು, ಯಾರು ತಮ್ಮ ಆಧ್ಯಾತ್ಮಿಕತೆಯನ್ನು ಅಲಕ್ಷಿಸುತ್ತಾರೋ ಅವರು, ಗುಣುಗುಟ್ಟುವಿಕೆ, ಅನೈತಿಕತೆ, ಮತ್ತು ವಿಗ್ರಹಾರಾಧನೆಗಳಂಥ ತಪ್ಪುಗೈಯುವಿಕೆಗೆ ಸುಲಭವಾಗಿ ಬಲಿಬೀಳಸಾಧ್ಯವಿದೆ ಎಂಬುದನ್ನು ತೋರಿಸುತ್ತವೆ. ಬೈಬಲಿನ ಈ ಪುಸ್ತಕದಲ್ಲಿರುವ ಮಾದರಿಗಳು ಹಾಗೂ ಪಾಠಗಳಲ್ಲಿ ಕೆಲವನ್ನು, ಯೆಹೋವನ ಸಾಕ್ಷಿಗಳ ಸಭೆಗಳಲ್ಲಿನ ಸೇವಾ ಕೂಟದಲ್ಲಿ ಸ್ಥಳಿಕ ಅಗತ್ಯಗಳ ಭಾಗಗಳಿಗೆ ಆಧಾರವಾಗಿ ಉಪಯೋಗಿಸಸಾಧ್ಯವಿದೆ. ನಿಜವಾಗಿಯೂ ‘ದೇವರ ವಾಕ್ಯವು ಸಜೀವವಾಗಿದೆ’ ಮತ್ತು ನಮ್ಮ ಜೀವನದಲ್ಲಿ ‘ಕಾರ್ಯಸಾಧಕವಾಗಿದೆ.’​—⁠ಇಬ್ರಿಯ 4:⁠12.

[ಪಾದಟಿಪ್ಪಣಿ]

^ ಪ್ಯಾರ. 25 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 24, 25ರಲ್ಲಿರುವ ಚಿತ್ರ]

ದೇವದರ್ಶನದ ಗುಡಾರದ ಮೇಲಿನ ಅದ್ಭುತಕರ ಮೇಘದ ಸಹಾಯದಿಂದ ಯೆಹೋವನು, ಇಸ್ರಾಯೇಲ್ಯರು ಯಾವಾಗ ಪಾಳೆಯ ಹೂಡಬೇಕು ಹಾಗೂ ಯಾವಾಗ ಹೊರಡಬೇಕೆಂಬುದರ ಕುರಿತು ನಿರ್ದೇಶನಕೊಟ್ಟನು

[ಪುಟ 26ರಲ್ಲಿರುವ ಚಿತ್ರಗಳು]

ಯೆಹೋವನು ನಮ್ಮ ವಿಧೇಯತೆಗೆ ಅರ್ಹನಾಗಿದ್ದಾನೆ ಮತ್ತು ತನ್ನ ಪ್ರತಿನಿಧಿಗಳನ್ನು ನಾವು ಗೌರವಿಸುವಂತೆ ನಿರೀಕ್ಷಿಸುತ್ತಾನೆ