ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೃತಜ್ಞತೆಯಿಂದ ಸ್ವೀಕರಿಸಿರಿ, ಹೃತ್ಪೂರ್ವಕವಾಗಿ ಕೊಡಿರಿ

ಕೃತಜ್ಞತೆಯಿಂದ ಸ್ವೀಕರಿಸಿರಿ, ಹೃತ್ಪೂರ್ವಕವಾಗಿ ಕೊಡಿರಿ

ಕೃತಜ್ಞತೆಯಿಂದ ಸ್ವೀಕರಿಸಿರಿ, ಹೃತ್ಪೂರ್ವಕವಾಗಿ ಕೊಡಿರಿ

ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯಾದ ಯೆಹೋವನಿಗೆ ನಮ್ಮ ಬಗ್ಗೆ ವೈಯಕ್ತಿಕ ಕಳಕಳಿ ಇದೆ. ಆತನು ತನ್ನೆಲ್ಲ ಸೇವಕರ ಬಗ್ಗೆ ಗಾಢವಾಗಿ ಚಿಂತಿಸುತ್ತಾನೆಂದು ಆತನ ವಾಕ್ಯ ನಮಗೆ ಆಶ್ವಾಸನೆ ಕೊಡುತ್ತದೆ. (1 ಪೇತ್ರ 5:7) ಯೆಹೋವನು ಈ ಚಿಂತೆಯನ್ನು ತೋರ್ಪಡಿಸುವ ಒಂದು ವಿಧ, ತನ್ನನ್ನು ನಂಬಿಗಸ್ತಿಕೆಯಿಂದ ಸೇವಿಸಲು ನಮಗೆ ವಿಭಿನ್ನ ಪ್ರಕಾರದ ನೆರವನ್ನು ನೀಡುತ್ತಿರುವುದೇ ಆಗಿದೆ. (ಯೆಶಾ. 48:17) ಸಂಕಟಕರ ಸಮಸ್ಯೆಗಳು ನಮಗೆ ಎದುರಾಗುವಾಗಲಂತೂ, ನಾವು ಆತನು ಲಭ್ಯಗೊಳಿಸಿರುವ ನೆರವಿನ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ಆತನು ಬಯಸುತ್ತಾನೆ. ಈ ಸತ್ಯವನ್ನು ಮೋಶೆಯ ಧರ್ಮಶಾಸ್ತ್ರವು ಚೆನ್ನಾಗಿ ಉದಾಹರಿಸುತ್ತದೆ.

ಧರ್ಮಶಾಸ್ತ್ರದ ಏರ್ಪಾಡಿನಡಿ, ಕಷ್ಟದಲ್ಲಿದ್ದವರಿಗೆ ಅಂದರೆ ಅನಾಥರು, ವಿಧವೆಯರು ಮತ್ತು ಪರದೇಶಿಗಳಿಗೆ ಯೆಹೋವನು ಪ್ರೀತಿಪೂರ್ವಕ ನೆರವನ್ನು ಒದಗಿಸಿದನು. (ಯಾಜ. 19:9, 10; ಧರ್ಮೋ. 14:29) ತನ್ನ ಸೇವಕರಲ್ಲಿ ಕೆಲವರಿಗೆ ತಮ್ಮ ಜೊತೆ ಆರಾಧಕರ ಸಹಾಯ ಬೇಕಾದೀತು ಎಂಬುದು ಆತನಿಗೆ ತಿಳಿದಿದೆ. (ಯಾಕೋ. 1:27) ಆದ್ದರಿಂದ ಯೆಹೋವನು ತನ್ನ ಸೇವಕರಿಗೆ ಸಹಾಯ ಕೊಡುವಂತೆ ಯಾರನ್ನು ಪ್ರಚೋದಿಸುತ್ತಾನೋ ಅವರಿಂದ ನೆರವನ್ನು ಪಡೆಯಲು ಯಾರೂ ಹಿಂದೆಮುಂದೆ ನೋಡಬಾರದು. ಹಾಗಿದ್ದರೂ, ಸಹಾಯವನ್ನು ಸ್ವೀಕರಿಸುವಾಗ ನಮ್ಮ ಮನೋಭಾವ ಯೋಗ್ಯವಾಗಿರಬೇಕು.

ಅದೇ ಸಮಯದಲ್ಲಿ, ಇತರರಿಗೆ ಕೊಡುವ ಅವಕಾಶವೂ ದೇವಜನರಿಗಿದೆ ಎಂಬುದನ್ನು ದೇವರ ವಾಕ್ಯ ಒತ್ತಿಹೇಳುತ್ತದೆ. ಯೇಸು ಯೆರೂಸಲೇಮಿನ ಆಲಯದಲ್ಲಿ ಗಮನಿಸಿದ ‘ಬಡ ವಿಧವೆಯನ್ನು’ ಜ್ಞಾಪಿಸಿಕೊಳ್ಳಿರಿ. (ಲೂಕ 21:1-4) ಆಕೆ, ಧರ್ಮಶಾಸ್ತ್ರದಲ್ಲಿ ವಿಧವೆಯರಿಗಾಗಿ ಯೆಹೋವನು ಮಾಡಿದ ಪ್ರೀತಿಪರ ಒದಗಿಸುವಿಕೆಗಳಿಂದ ಪ್ರಯೋಜನಪಡೆದಿರಬಹುದು. ಬಡವಳಾಗಿದ್ದರೂ ಆಕೆಯನ್ನು ಎಲ್ಲರೂ ನೆನಪಿಸಿಕೊಳ್ಳುವುದು, ಆಕೆ ಇತರರಿಂದ ಸಹಾಯ ತೆಗೆದುಕೊಂಡದ್ದಕ್ಕಾಗಿ ಅಲ್ಲ ಬದಲಾಗಿ ಕೊಟ್ಟದ್ದಕ್ಕಾಗಿಯೇ. ಕೊಡುವಂಥ ಮನೋಭಾವ ಇದ್ದದ್ದರಿಂದ ಆಕೆ ಸಂತೋಷಿತಳಾಗಿದ್ದಿರಬೇಕು ಏಕೆಂದರೆ ಯೇಸು ಹೇಳಿದ್ದು: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅ. ಕಾ. 20:35) ಈ ಸತ್ಯವನ್ನು ಮನಸ್ಸಿನಲ್ಲಿಟ್ಟು, ನಾವು ‘ಕೊಡುವುದನ್ನು ರೂಢಿಮಾಡಿಕೊಳ್ಳುವುದು’ ಮತ್ತು ಫಲಿತಾಂಶವಾಗಿ ಸಂತೋಷ ಪಡೆಯುವುದು ಹೇಗೆ?—ಲೂಕ 6:38.

“ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?”

ಕೀರ್ತನೆಗಾರನ ಮನಸ್ಸಿನಲ್ಲಿ ಈ ಪ್ರಶ್ನೆಯಿತ್ತು: “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” (ಕೀರ್ತ. 116:12) ಯೆಹೋವನಿಂದ ಅವನಿಗೆ ಯಾವ ಮಹೋಪಕಾರಗಳು ಆಗಿದ್ದವು? ಯೆಹೋವನು ಅವನನ್ನು “ಚಿಂತೆಯಲ್ಲಿಯೂ ಇಕ್ಕಟ್ಟಿನಲ್ಲಿಯೂ” ಪರಾಮರಿಸಿದ್ದನು. ಅಲ್ಲದೆ, ಅವನ ‘ಪ್ರಾಣವನ್ನೂ ಮರಣಕ್ಕೆ ತಪ್ಪಿಸಿದ್ದನು.’ ಇವೆಲ್ಲದಕ್ಕಾಗಿ ಯೆಹೋವನಿಗೆ ‘ಬದಲೇನಾದರೂ’ ಮಾಡಲೇಬೇಕೆಂದಿದ್ದನು. ಆದರೆ ಅವನು ಮಾಡುವುದಾದರೂ ಏನನ್ನು? ಅವನಂದದ್ದು: “ಯೆಹೋವನಿಗೆ ಹೊತ್ತ ಹರಕೆಗಳನ್ನು . . . ಸಲ್ಲಿಸುವೆನು.” (ಕೀರ್ತ. 116:3, 4, 9, 10-14) ತಾನು ಯೆಹೋವನಿಗೆ ಮಾಡಿದ್ದ ಎಲ್ಲ ಹರಕೆಗಳನ್ನೂ, ಆತನ ಸಂಬಂಧದಲ್ಲಿ ತನಗಿರುವ ಎಲ್ಲ ಕರ್ತವ್ಯಗಳನ್ನೂ ಪೂರೈಸುವ ದೃಢಸಂಕಲ್ಪ ಮಾಡಿದನು.

ನೀವು ಸಹ ಅದನ್ನೇ ಮಾಡಬಲ್ಲಿರಿ. ಹೇಗೆ? ಎಲ್ಲ ಸಮಯವೂ ದೇವರ ನಿಯಮಗಳಿಗೂ ಮೂಲತತ್ತ್ವಗಳಿಗೂ ಹೊಂದಿಕೊಂಡಿರುವ ಜೀವನಕ್ರಮವನ್ನು ಅನುಸರಿಸುವ ಮೂಲಕವೇ. ಹೀಗಿರುವುದರಿಂದ ನಿಮ್ಮ ಜೀವನದಲ್ಲಿ ಯೆಹೋವನ ಆರಾಧನೆಯೇ ಅತ್ಯಂತ ಪ್ರಮುಖ ವಿಷಯವಾಗಿರುವಂತೆ ನೋಡಿಕೊಳ್ಳಿ ಮತ್ತು ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ದೇವರಾತ್ಮವು ನಿಮ್ಮನ್ನು ಮಾರ್ಗದರ್ಶಿಸುವಂತೆ ಬಿಡಿ. (ಪ್ರಸಂ. 12:13; ಗಲಾ. 5:16-18) ಆದರೆ ವಾಸ್ತವದಲ್ಲಿ, ಯೆಹೋವನು ನಿಮಗಾಗಿ ಏನೇನು ಮಾಡಿದ್ದಾನೋ ಅದನ್ನು ನೀವಾತನಿಗೆ ಎಂದೂ ಪೂರ್ತಿಯಾಗಿ ಹಿಂದಿರುಗಿಸಲಾರಿರಿ. ಹಾಗಿದ್ದರೂ, ನೀವು ಆತನ ಸೇವೆಯಲ್ಲಿ ಹೃತ್ಪೂರ್ವಕವಾಗಿ ನಿಮ್ಮನ್ನೇ ನೀಡಿಕೊಳ್ಳುವುದನ್ನು ನೋಡಿ ನಿಶ್ಚಯವಾಗಿ ‘ಯೆಹೋವನ ಮನಸ್ಸು ಸಂತೋಷಪಡುತ್ತದೆ.’ (ಜ್ಞಾನೋ. 27:11) ಈ ರೀತಿಯಲ್ಲಿ ಯೆಹೋವನಿಗೆ ಹರ್ಷತರುವುದು ಎಂಥ ಮಹಾ ಸುಯೋಗ!

ಸಭೆಯ ಹಿತಕ್ಷೇಮಕ್ಕೆ ನೆರವಾಗಿ

ಕ್ರೈಸ್ತ ಸಭೆಯಿಂದ ಅನೇಕ ವಿಧಗಳಲ್ಲಿ ಪ್ರಯೋಜನಪಡೆದಿದ್ದೀರೆಂಬ ಮಾತನ್ನು ನೀವು ಖಂಡಿತ ಒಪ್ಪಿಕೊಳ್ಳುವಿರಿ. ಸಭೆಯ ಮೂಲಕ ಯೆಹೋವನು ಆಧ್ಯಾತ್ಮಿಕ ಆಹಾರವನ್ನು ಸಮೃದ್ಧವಾಗಿ ಒದಗಿಸಿದ್ದಾನೆ. ಧಾರ್ಮಿಕ ತಪ್ಪುಗಳು ಹಾಗೂ ಆಧ್ಯಾತ್ಮಿಕ ಕತ್ತಲೆಯಿಂದ ನಿಮ್ಮನ್ನು ಬಿಡುಗಡೆಮಾಡಿದ ಸತ್ಯ ನಿಮಗೆ ಸಿಕ್ಕಿದ್ದು ಸಭೆಯಲ್ಲೇ. (ಯೋಹಾ. 8:32) “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಏರ್ಪಡಿಸಿರುವ ಸಭಾ ಕೂಟಗಳು, ಸಮ್ಮೇಳನಗಳು ಹಾಗೂ ಅಧಿವೇಶನಗಳಲ್ಲಿ, ಕಷ್ಟಸಂಕಟಗಳಿಲ್ಲದ ಪರದೈಸ್‌ ಭೂಮಿಗೆ ನಡೆಸುವ ಜ್ಞಾನವನ್ನು ನೀವು ಪಡೆದುಕೊಂಡಿದ್ದೀರಿ. (ಮತ್ತಾ. 24:45-47) ದೇವರ ಸಭೆಯ ಮೂಲಕ ನೀವು ಈಗಾಗಲೇ ಪಡೆದಿರುವ ಮತ್ತು ಮುಂದೆ ಪಡೆಯಲಿರುವ ಮಹೋಪಕಾರಗಳನ್ನು ನಿಮ್ಮಿಂದ ಲೆಕ್ಕಿಸಲೂ ಸಾಧ್ಯವಾಗಲಿಕ್ಕಿಲ್ಲ ಅಲ್ಲವೇ? ಹೀಗಿರಲಾಗಿ ನೀವು ಸಭೆಗೆ ನಿಮ್ಮ ವತಿಯಿಂದ ಏನು ಕೊಡಬಲ್ಲಿರಿ?

ಅಪೊಸ್ತಲ ಪೌಲನು ಬರೆದದ್ದು: “ಇಡೀ ದೇಹವು, ಅಗತ್ಯವಿರುವುದನ್ನು ಒದಗಿಸುವಂಥ ಪ್ರತಿಯೊಂದು ಕೀಲಿನ ಮೂಲಕ ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು ಸಹಕರಿಸುವಂತೆ ಮಾಡಲ್ಪಟ್ಟಿದೆ ಮತ್ತು ಪ್ರತಿಯೊಂದು ಅಂಗವು ಸೂಕ್ತವಾದ ಪ್ರಮಾಣದಲ್ಲಿ ಅದರದರ ಕಾರ್ಯವನ್ನು ಮಾಡುವ ಮೂಲಕ ಪ್ರೀತಿಯಲ್ಲಿ ತನ್ನದೇ ಅಭಿವೃದ್ಧಿಗೋಸ್ಕರ ದೇಹದ ಬೆಳವಣಿಗೆಗೆ ನೆರವಾಗುತ್ತದೆ.” (ಎಫೆ. 4:15, 16) ಈ ವಚನವು ಪ್ರಮುಖವಾಗಿ ಅಭಿಷಿಕ್ತ ಕ್ರೈಸ್ತರ ಮಂಡಲಿಗೆ ಅನ್ವಯಿಸುತ್ತದಾದರೂ, ಅದರಲ್ಲಿರುವ ತತ್ತ್ವ ಇಂದು ಎಲ್ಲ ಕ್ರೈಸ್ತರಿಗೆ ಅನ್ವಯವಾಗುತ್ತದೆ. ಹೌದು, ಸಭೆಯ ಪ್ರತಿಯೊಬ್ಬ ಸದಸ್ಯನು ಅದರ ಹಿತಕ್ಷೇಮ ಹಾಗೂ ಬೆಳವಣಿಗೆಗೆ ನೆರವಾಗಬಲ್ಲನು. ಯಾವ ವಿಧಗಳಲ್ಲಿ?

ಒಂದು ವಿಧ, ಎಲ್ಲ ಸಮಯದಲ್ಲೂ ಇತರರಿಗೆ ಉತ್ತೇಜನ ಹಾಗೂ ಆಧ್ಯಾತ್ಮಿಕ ಚೈತನ್ಯದ ಚಿಲುಮೆಯಂತೆ ಇರುವ ಮೂಲಕವೇ. (ರೋಮ. 14:19) ಜೊತೆ ವಿಶ್ವಾಸಿಗಳೊಂದಿಗಿನ ನಮ್ಮ ನಡತೆಯಲ್ಲಿ ದೇವರಾತ್ಮದ ಫಲವನ್ನು ತೋರಿಸುವ ಮೂಲಕವೂ ನಾವು “ದೇಹದ ಬೆಳವಣಿಗೆಗೆ” ನೆರವಾಗಬಲ್ಲೆವು. (ಗಲಾ. 5:22, 23) ಇನ್ನೂ ಹೆಚ್ಚಾಗಿ ನಾವು, ‘ಎಲ್ಲರಿಗೂ ಒಳ್ಳೇದನ್ನು ಮಾಡಲು, ಅದರಲ್ಲೂ ವಿಶೇಷವಾಗಿ ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವವರಿಗೆ ಮಾಡಲು’ ಅವಕಾಶಗಳನ್ನು ಹುಡುಕಬೇಕು. (ಗಲಾ. 6:10; ಇಬ್ರಿ. 13:16) ಸಹೋದರ ಸಹೋದರಿಯರು, ಆಬಾಲವೃದ್ಧರು, ಹೀಗೆ ಸಭೆಯಲ್ಲಿರುವವರೆಲ್ಲರೂ ‘ಪ್ರೀತಿಯಿಂದ ದೇಹವನ್ನು ಅಭಿವೃದ್ಧಿಮಾಡುವುದರಲ್ಲಿ’ ಪಾಲ್ಗೊಳ್ಳಬಹುದು.

ಅಷ್ಟುಮಾತ್ರವಲ್ಲದೆ, ಸಭೆ ಪೂರೈಸುತ್ತಿರುವ ಜೀವರಕ್ಷಕ ಕೆಲಸದಲ್ಲಿ ನಮ್ಮ ಪ್ರತಿಭೆ, ಶಕ್ತಿ ಹಾಗೂ ಸಂಪನ್ಮೂಲಗಳನ್ನು ಬಳಸಬಲ್ಲೆವು. ಯೇಸು ಕ್ರಿಸ್ತನಂದದ್ದು: “ನೀವು ಉಚಿತವಾಗಿ ಹೊಂದಿದ್ದೀರಿ.” ಆದುದರಿಂದ ನಾವು ಹೇಗೆ ಪ್ರತಿಕ್ರಿಯಿಸಬೇಕು? ಅವನಂದದ್ದು: “ಉಚಿತವಾಗಿ ಕೊಡಿರಿ.” (ಮತ್ತಾ. 10:8) ಹೀಗಿರುವುದರಿಂದ ರಾಜ್ಯ-ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಪ್ರಮುಖ ಕೆಲಸದಲ್ಲಿ ಪಾಲ್ಗೊಳ್ಳಲು ಅತ್ಯಧಿಕವಾಗಿ ಶ್ರಮಿಸಿರಿ. (ಮತ್ತಾ. 24:14; 28:19, 20) ಇದನ್ನು ಮಾಡದಂತೆ ನಿಮ್ಮ ಸನ್ನಿವೇಶಗಳು ನಿರ್ಬಂಧಿಸುತ್ತಿವೆಯೋ? ಹಾಗಿರುವಲ್ಲಿ ಯೇಸು ವರ್ಣಿಸಿದ ಆ ಬಡ ವಿಧವೆಯನ್ನು ಜ್ಞಾಪಿಸಿಕೊಳ್ಳಿರಿ. ಅವಳು ಕೊಟ್ಟ ಕಾಣಿಕೆಯ ಮೌಲ್ಯ ತುಂಬ ಕಡಿಮೆಯಾಗಿತ್ತು. ಆದರೂ ಅವಳು ಬೇರೆಲ್ಲರಿಗಿಂತಲೂ ಹೆಚ್ಚನ್ನು ಕೊಟ್ಟಳೆಂದು ಯೇಸು ಹೇಳಿದನು. ಅವಳು ತನ್ನ ಪರಿಸ್ಥಿತಿಗನುಗುಣವಾಗಿ ತನ್ನಿಂದಾದುದ್ದೆಲ್ಲವನ್ನೂ ಕೊಟ್ಟಳು.—2 ಕೊರಿಂ. 8:1-5, 12.

ನೆರವನ್ನು ಯೋಗ್ಯ ಮನೋಭಾವದಿಂದ ಸ್ವೀಕರಿಸಿ

ಹಾಗಿದ್ದರೂ, ನೀವು ಕೆಲವೊಮ್ಮೆ ಸಭೆಯ ನೆರವನ್ನು ಪಡೆಯಬೇಕಾಗಬಹುದು. ಈ ವ್ಯವಸ್ಥೆಯು ಹೇರುವ ಒತ್ತಡಗಳನ್ನು ನಿಭಾಯಿಸಲು ನೀವು ಹೆಣಗಾಡುತ್ತಿರುವಾಗ ಸಭೆಯು ನೀಡುವ ನೆರವನ್ನು ಸ್ವೀಕರಿಸಲು ಹಿಂಜರಿಯಬೇಡಿ. ಯೆಹೋವನು “ಸಭೆಯನ್ನು ಪರಿಪಾಲಿಸುವುದಕ್ಕಾಗಿ” ಅರ್ಹರಾದ ಹಾಗೂ ಕಾಳಜಿಯುಳ್ಳ ಪುರುಷರನ್ನು ಒದಗಿಸಿದ್ದಾನೆ. ನೀವು ಕಷ್ಟಸಂಕಟಗಳನ್ನು ಅನುಭವಿಸುತ್ತಿರುವಾಗ ಇವರು ನಿಮಗೆ ಸಹಾಯಮಾಡುವರು. (ಅ. ಕಾ. 20:28) ಹಿರಿಯರು ಮತ್ತು ಸಭೆಯಲ್ಲಿರುವ ಇತರರು, ಕಷ್ಟದ ಸಮಯದಲ್ಲಿ ನಿಮಗೆ ಸಾಂತ್ವನ ನೀಡಲು, ಆಧಾರವಾಗಿರಲು ಮತ್ತು ಸಂರಕ್ಷಣೆ ಕೊಡಲು ಬಯಸುತ್ತಾರೆ.—ಗಲಾ. 6:2; 1 ಥೆಸ. 5:14.

ನಿಮಗೆ ಅಗತ್ಯವಿರುವ ನೆರವು ನೀಡಲ್ಪಡುವಾಗ, ಅದನ್ನು ಯೋಗ್ಯ ಮನೋಭಾವದಿಂದ ಸ್ವೀಕರಿಸಿರಿ. ನಿಮಗೆ ಕೊಡಲಾಗುವ ಬೆಂಬಲವನ್ನು ಸ್ವೀಕರಿಸುವಾಗ ಯಾವಾಗಲೂ ಕೃತಜ್ಞತಾಭಾವವಿರಲಿ. ಜೊತೆ ವಿಶ್ವಾಸಿಗಳು ಕೊಡುವ ಯಾವುದೇ ನೆರವನ್ನು ದೇವರ ಅಪಾತ್ರ ದಯೆಯ ಅಭಿವ್ಯಕ್ತಿಯಾಗಿ ಪರಿಗಣಿಸಿ. (1 ಪೇತ್ರ 4:10) ಹೀಗೆ ಮಾಡುವುದು ಪ್ರಾಮುಖ್ಯವೇಕೆ? ಏಕೆಂದರೆ, ಸಹಾಯ ಪಡೆದು ಕೃತಜ್ಞತೆ ತೋರಿಸದ ಲೋಕದ ಅನೇಕರಂತೆ ನಾವಿರಲು ಬಯಸುವುದಿಲ್ಲ.

ಸಮತೋಲನ ಮತ್ತು ನ್ಯಾಯಸಮ್ಮತತೆ ತೋರಿಸಿ

ಪೌಲನು ಫಿಲಿಪ್ಪಿ ಸಭೆಗೆ ಬರೆದ ಪತ್ರದಲ್ಲಿ ತಿಮೊಥೆಯನ ಬಗ್ಗೆ ಹೀಗಂದನು: “ಅವನ ಹಾಗೆ ನಿಮಗೆ ಸಂಬಂಧಿಸಿದ ವಿಷಯಗಳ ಕುರಿತು ಯಥಾರ್ಥವಾಗಿ ಚಿಂತಿಸುವ ಮನೋಭಾವವನ್ನು ತೋರಿಸುವವರು ನನ್ನ ಬಳಿ ಬೇರೆ ಯಾರೂ ಇಲ್ಲ.” ಆದರೆ ಮುಂದುವರಿಸುತ್ತಾ ಪೌಲನು ಹೇಳಿದ್ದು: “ಬೇರೆಲ್ಲರೂ ಕ್ರಿಸ್ತ ಯೇಸುವಿನ ಅಭಿರುಚಿಗಳ ಮೇಲೆ ಅಲ್ಲ, ತಮ್ಮ ಸ್ವಂತ ಅಭಿರುಚಿಗಳ ಮೇಲೆ ಮನಸ್ಸಿಟ್ಟವರಾಗಿದ್ದಾರೆ.” (ಫಿಲಿ. 2:20, 21) ಪೌಲನು ಗಮನಿಸಿದ ಈ ಗಂಭೀರ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು, ನಮ್ಮ “ಸ್ವಂತ ಅಭಿರುಚಿಗಳ” ಚಿಂತೆಯಲ್ಲೇ ಮುಳುಗಿರದಂತೆ ನಾವೇನು ಮಾಡಬಲ್ಲೆವು?

ನಮ್ಮ ಸಮಸ್ಯೆಗಳ ವಿಷಯದಲ್ಲಿ ನಮಗೆ ಸಹಾಯಮಾಡಲು ಸಭೆಯವರಿಂದ ಸಮಯ ಹಾಗೂ ಗಮನ ಕೇಳಿಕೊಳ್ಳುವಾಗ ನಾವೆಂದೂ ಬಲವಂತಮಾಡಬಾರದು. ಯಾಕೆ? ಸ್ವಲ್ಪ ಯೋಚಿಸಿ: ಸಹೋದರನೊಬ್ಬನು, ನಮ್ಮ ತುರ್ತುಪರಿಸ್ಥಿತಿಯಲ್ಲಿ ಸ್ವಲ್ಪ ಹಣಸಹಾಯ ಮಾಡಿದರೆ ನಾವು ಖಂಡಿತ ಆಭಾರಿಗಳಾಗಿರುವೆವು. ಆದರೆ ಅಂಥ ಸಹಾಯವನ್ನು ನಾವು ಅವನಿಂದ ಬಲವಂತವಾಗಿ ಕೇಳಿಕೊಳ್ಳಲಿಕ್ಕಾಗುತ್ತದೋ? ಖಂಡಿತ ಇಲ್ಲ. ಅದೇ ರೀತಿಯಲ್ಲಿ, ನಮ್ಮ ಪ್ರೀತಿಯ ಸಹೋದರರು ನೆರವನ್ನು ನೀಡಲು ಯಾವಾಗಲೂ ಸಿದ್ಧರಿರುವುದಾದರೂ, ಸಮಯದ ರೂಪದಲ್ಲಿ ಅವರ ಸಹಾಯ ಕೋರುವಾಗಲೂ ನಾವು ಸಮತೋಲನ ಹಾಗೂ ನ್ಯಾಯಸಮ್ಮತತೆಯನ್ನು ತೋರಿಸಬೇಕು. ಏಕೆಂದರೆ ನಮ್ಮ ಕಷ್ಟಕಾಲದಲ್ಲಿ ಜೊತೆ ವಿಶ್ವಾಸಿಗಳು ನಮಗೆ ಯಾವುದೇ ಸಹಾಯಮಾಡಿದರೂ ಅದನ್ನು ಸಂತೋಷದಿಂದ ಮಾಡಬೇಕೆಂಬುದೇ ನಮ್ಮ ಅಪೇಕ್ಷೆ.

ನಿಮ್ಮ ಕ್ರೈಸ್ತ ಸಹೋದರ ಸಹೋದರಿಯರು ನಿಮ್ಮ ನೆರವಿಗೆ ಓಡಿಬರಲು ಯಾವಾಗಲೂ ಸಿದ್ಧರಿರುವರೆಂಬ ಮಾತಲ್ಲಿ ಸಂಶಯವೇ ಇಲ್ಲ. ಹಾಗಿದ್ದರೂ, ಕೆಲವೊಮ್ಮೆ ಅವರಿಗೆ ನಿಮ್ಮೆಲ್ಲ ಅಗತ್ಯಗಳನ್ನು ಪೂರೈಸಲು ಆಗದೇ ಹೋಗಬಹುದು. ಹಾಗಾಗುವಲ್ಲಿ, ನಿಮಗೆದುರಾಗುವ ಯಾವುದೇ ಕಷ್ಟದಲ್ಲಿ, ಯೆಹೋವನು ಕೀರ್ತನೆಗಾರನನ್ನು ಪೋಷಿಸಿದಂತೆಯೇ ನಿಮ್ಮನ್ನೂ ಪೋಷಿಸುವನೆಂಬ ಭರವಸೆ ನಿಮಗಿರಲಿ.—ಕೀರ್ತ. 116:1, 2; ಫಿಲಿ. 4:10-13.

ಆದುದರಿಂದ ಯೆಹೋವನು ನಿಮಗಾಗಿ ಏರ್ಪಡಿಸುವ, ವಿಶೇಷವಾಗಿ ಕಷ್ಟಸಂಕಟಗಳ ಸಮಯದಲ್ಲಿ ಏರ್ಪಡಿಸುವ ಯಾವುದೇ ನೆರವನ್ನು ಕೃತಜ್ಞತೆಯಿಂದ ಹಿಂಜರಿಯದೆ ಸ್ವೀಕರಿಸಿರಿ. (ಕೀರ್ತ. 55:22) ನೀವದನ್ನು ಸ್ವೀಕರಿಸಬೇಕೆಂಬುದು ಆತನ ಅಪೇಕ್ಷೆ. ಅದೇ ಸಮಯದಲ್ಲಿ, ನೀವು ಸಹ “ಸಂತೋಷದಿಂದ ಕೊಡುವವ”ರಾಗಿರಬೇಕೆಂದು ಆತನು ಬಯಸುತ್ತಾನೆ. ಹೀಗಿರುವುದರಿಂದ ಸತ್ಯಾರಾಧನೆಯ ಬೆಂಬಲಕ್ಕಾಗಿ ನಿಮ್ಮ ಕೈಲಾದದ್ದನ್ನು ಕೊಡಲು ನಿಮ್ಮ “ಹೃದಯದಲ್ಲಿ ನಿರ್ಣಯಿಸಿ”ಕೊಳ್ಳಿ. (2 ಕೊರಿಂ. 9:6, 7) ಹೀಗೆ, ನೀವು ಕೃತಜ್ಞತೆಯಿಂದ ಸ್ವೀಕರಿಸಲು ಮತ್ತು ಹೃತ್ಪೂರ್ವಕವಾಗಿ ಕೊಡಲು ಶಕ್ತರಾಗಿರುವಿರಿ.

[ಪುಟ 31ರಲ್ಲಿರುವ ಚೌಕ/ಚಿತ್ರಗಳು]

“ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?”—ಕೀರ್ತ. 116:12

▪ ‘ಎಲ್ಲರಿಗೂ ಒಳ್ಳೇದನ್ನು ಮಾಡಲು’ ಅವಕಾಶಗಳನ್ನು ಹುಡುಕಿರಿ

▪ ಇತರರಿಗೆ ಉತ್ತೇಜನ ಹಾಗೂ ಆಧ್ಯಾತ್ಮಿಕ ಚೈತನ್ಯದ ಚಿಲುಮೆಯಂತಿರಿ

▪ ನಿಮ್ಮ ಪರಿಸ್ಥಿತಿಗನುಗುಣವಾಗಿ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಿರಿ