ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಿರಿ

ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಿರಿ

ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಿರಿ

“ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ.”​—⁠ಕೊಲೊ. 3:⁠13.

ನಿಮ್ಮ ಉತ್ತರವೇನು?

ಕ್ಷಮಿಸುವ ಸಿದ್ಧಮನಸ್ಸು ನಮಗಿರಬೇಕು ಏಕೆ?

ಇತರರನ್ನು ಕ್ಷಮಿಸುವುದು ಅಗತ್ಯವೆಂದು ಯೇಸು ದೃಷ್ಟಾಂತದ ಮೂಲಕ ಹೇಗೆ ಒತ್ತಿಹೇಳಿದನು?

ನಾವು ಇತರರನ್ನು ಉದಾರವಾಗಿ ಕ್ಷಮಿಸುವುದರಿಂದ ಯಾವ ಪ್ರಯೋಜನಗಳಿವೆ?

1, 2. ಇತರರನ್ನು ಕ್ಷಮಿಸುವಷ್ಟು ಉದಾರ ಮನಸ್ಸು ನಿಮಗಿದೆಯಾ ಎಂದು ಪರೀಕ್ಷಿಸುವುದು ತಕ್ಕದ್ದೇಕೆ?

ಯೆಹೋವನು ಪಾಪವನ್ನು ಹೇಗೆ ವೀಕ್ಷಿಸುತ್ತಾನೆ, ನಾವು ಪಾಪಮಾಡಿದಾಗ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವುದನ್ನು ಬೈಬಲ್‌ ತೋರಿಸಿಕೊಡುತ್ತದೆ. ಮಾತ್ರವಲ್ಲ ನಮ್ಮನ್ನು ಕ್ಷಮಿಸಲು ಆತನಿಗಿರುವ ಸಿದ್ಧಮನಸ್ಸನ್ನೂ ಎತ್ತಿತೋರಿಸುತ್ತದೆ. ಹಿಂದಿನ ಲೇಖನದಲ್ಲಿ ದಾವೀದ ಮತ್ತು ಮನಸ್ಸೆಯನ್ನು ಯೆಹೋವನು ಕ್ಷಮಿಸಲು ಕಾರಣವೇನೆಂದು ನಾವು ತಿಳಿದೆವು. ಅವರಿಬ್ಬರೂ ತಾವು ಮಾಡಿದ ಪಾಪಕ್ಕಾಗಿ ತೀರಾ ನೊಂದುಕೊಂಡರು. ಯೆಹೋವನಿಗೆ ಅದನ್ನು ನಿವೇದನೆ ಮಾಡಿಕೊಂಡರು. ಮನದಾಳದಿಂದ ಪಶ್ಚಾತ್ತಾಪಪಟ್ಟರು. ಅಂಥ ಪಾಪವನ್ನು ಪುನರಾವರ್ತಿಸದಿರಲು ನಿಶ್ಚಯಿಸಿದರು. ಹಾಗಾಗಿ ಯೆಹೋವನು ಪುನಃ ಅವರಿಗೆ ಅನುಗ್ರಹ ತೋರಿದನು.

2 ಯೆಹೋವನಂತೆ ನಮಗೂ ಇತರರನ್ನು ಕ್ಷಮಿಸಲು ಸಿದ್ಧಮನಸ್ಸಿದೆಯೇ ಎಂದು ಪರಿಶೀಲಿಸೋಣ. ಮನಸ್ಸೆ ಮಾಡಿದ ದುಷ್ಕೃತ್ಯಗಳಿಗೆ ನಿಮ್ಮ ಸಂಬಂಧಿಕರೊಬ್ಬರು ಬಲಿಪಶುವಾಗಿದ್ದರೆ ನಿಮಗೆ ಹೇಗನಿಸುತ್ತಿತ್ತು? ಅವನನ್ನು ಕ್ಷಮಿಸುತ್ತಿದ್ದಿರೋ? ಹೀಗೆ ಕೇಳಿಕೊಳ್ಳುವುದು ಇಂದು ಪ್ರಾಮುಖ್ಯವಾಗಿದೆ. ನಾವು ಜೀವಿಸುತ್ತಿರುವ ಈ ಜಗತ್ತಿನಲ್ಲೂ ನಿಯಮರಾಹಿತ್ಯ, ಹಿಂಸಾತ್ಮಕ, ಸ್ವಾರ್ಥ ಮನೋಭಾವವೇ ತುಂಬಿದೆ. ಹಾಗಾಗಿ ನಾವು ಅನ್ಯಾಯಕ್ಕೊಳಗಾಗಬಹುದು. ಕ್ರೈಸ್ತರಾದ ನಾವು ಕ್ಷಮಿಸುವ ಮನೋಭಾವವನ್ನು ಏಕೆ ಬೆಳೆಸಿಕೊಳ್ಳಬೇಕು? ನಿಮ್ಮೊಂದಿಗೆ ಅಥವಾ ನಿಮ್ಮ ನೆಚ್ಚಿನವರೊಂದಿಗೆ ಯಾರಾದರೂ ಅನ್ಯಾಯವಾಗಿ, ನಿಷ್ಠುರವಾಗಿ ವರ್ತಿಸುವಲ್ಲಿ ನಿಮ್ಮ ಭಾವನೆಗಳನ್ನು ಅಂಕೆಯಲ್ಲಿಡಲು ಯಾವುದು ಸಹಾಯ ಮಾಡಬಲ್ಲದು? ಅಂಥ ಸಂದರ್ಭದಲ್ಲಿ ಯೆಹೋವನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಪ್ರತಿಕ್ರಿಯಿಸಲು ಮತ್ತು ಮನದಾಳದಿಂದ ಕ್ಷಮಿಸಲು ಯಾವುದು ನೆರವಾಗುತ್ತದೆ?

ಯಾಕೆ ಕ್ಷಮಿಸಬೇಕು?

3-5. (1) ಇತರರನ್ನು ಕ್ಷಮಿಸುವ ಅಗತ್ಯವನ್ನು ಒತ್ತಿಹೇಳಲು ಯೇಸು ಯಾವ ದೃಷ್ಟಾಂತ ಕೊಟ್ಟನು? (2) ಮತ್ತಾಯ 18:​21-35ರಲ್ಲಿರುವ ದೃಷ್ಟಾಂತದಲ್ಲಿ ಯಾವ ಅಂಶವನ್ನು ಒತ್ತಿಹೇಳಲಾಗಿದೆ?

3 ಕ್ರೈಸ್ತ ಸಭೆಯವರಾಗಿರಲಿ ಹೊರಗಿನವರೇ ಆಗಿರಲಿ ನಮ್ಮ ಮನನೋಯಿಸಿದರೆ ಅವರನ್ನು ಮನಸಾರೆ ಕ್ಷಮಿಸುವ ಸದ್ಗುಣ ನಮ್ಮಲ್ಲಿರಬೇಕು. ಆಗ ಮಾತ್ರ ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ, ಪರರೊಂದಿಗೆ ಮುಖ್ಯವಾಗಿ ಯೆಹೋವನೊಂದಿಗೆ ಸಾರವತ್ತಾದ ಶಾಂತಿ ಸಂಬಂಧವನ್ನು ಕಾಪಾಡಿಕೊಳ್ಳುವೆವು. ಇತರರು ಎಷ್ಟೇ ಬಾರಿ ಮನನೋಯಿಸಿದರೂ ಕ್ರೈಸ್ತರಾದ ನಾವು ಅವರನ್ನು ಕ್ಷಮಿಸಲೇಬೇಕೆಂದು ಬೈಬಲ್‌ ತೋರಿಸುತ್ತದೆ. ಕ್ಷಮಿಸುವ ಗುಣ ನಮ್ಮಲ್ಲಿರುವುದು ಏಕೆ ಅಗತ್ಯವೆಂದು ಒತ್ತಿಹೇಳಲು ಯೇಸು ದೃಷ್ಟಾಂತವೊಂದನ್ನು ಹೇಳಿದನು.

4 ಒಬ್ಬ ಆಳು ತನ್ನ ಯಜಮಾನನಿಗೆ ದೊಡ್ಡ ಮೊತ್ತದ ಸಾಲ ತೀರಿಸಬೇಕಿತ್ತು. ಅದು ಆರು ಕೋಟಿ ದಿನಗಳ ಕೂಲಿಯಷ್ಟಾಗಿತ್ತು! ಯಜಮಾನನು ಆ ಆಳಿನ ಮೇಲೆ ಕನಿಕರಪಟ್ಟು ಅಷ್ಟೂ ಸಾಲವನ್ನು ಮನ್ನಾಮಾಡಿದನು. ಆದರೆ ಆ ಆಳು ಹೊರಗೆ ಹೋದಾಗ ತನಗೆ ಕೇವಲ 100 ದಿನಗಳ ಕೂಲಿಯಷ್ಟು ಸಾಲ ತೀರಿಸಬೇಕಿದ್ದ ಜೊತೆ ಆಳನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕುತ್ತಾ ತನ್ನ ಹಣಕ್ಕಾಗಿ ತಗಾದೆ ಮಾಡಿದನು. ಆ ಆಳು ಎಷ್ಟೇ ಬೇಡಿಕೊಂಡರೂ ಕನಿಕರಿಸದೆ ಸೆರೆಮನೆಗೆ ಹಾಕಿಸಿದನು. ವಿಷಯ ತಿಳಿದ ಯಜಮಾನನು ಕೋಪಗೊಂಡನು. ದೊಡ್ಡ ಮೊತ್ತದ ಸಾಲ ತೀರಿಸಬೇಕಿದ್ದವನಿಗೆ “ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೆ ಆಳಿನ ಮೇಲೆ ಕರುಣೆ ತೋರಿಸಬೇಕಿತ್ತಲ್ಲವೆ?” ಎಂದು ಗದರಿ ಕೇಳಿದನು. ಬಳಿಕ “ಕ್ರೋಧಭರಿತನಾದ ಯಜಮಾನನು ಸಾಲವನ್ನೆಲ್ಲ ತೀರಿಸುವ ತನಕ ಅವನನ್ನು ಸೆರೆಯವರ ಕೈಗೆ ಒಪ್ಪಿಸಿದನು.”​—⁠ಮತ್ತಾ. 18:​21-34.

5 ಈ ದೃಷ್ಟಾಂತದ ಮೂಲಕ ಯೇಸು ಯಾವ ಅಂಶವನ್ನು ಒತ್ತಿಹೇಳಿದನು? ದೃಷ್ಟಾಂತದ ಕೊನೆಯಲ್ಲಿ ಉತ್ತರವಿದೆ: “ತದ್ರೀತಿಯಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನನ್ನು ಹೃದಯಪೂರ್ವಕವಾಗಿ ಕ್ಷಮಿಸದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆಯು ಸಹ ನಿಮಗೆ ಹಾಗೆಯೇ ಮಾಡುವನು.” (ಮತ್ತಾ. 18:35) ಅಪರಿಪೂರ್ಣರಾದ ನಾವು ನಮ್ಮ ಜೀವಮಾನದಲ್ಲಿ ಮಾಡುವ ಪಾಪಗಳು ಎಷ್ಟಿರುತ್ತವೆಂದರೆ ಯೆಹೋವನ ಮಟ್ಟಗಳನ್ನು ಪರಿಪೂರ್ಣವಾಗಿ ಪಾಲಿಸಲು ನಮ್ಮಿಂದ ಸಾಧ್ಯವೇ ಇಲ್ಲವೆಂದು ಅವು ತೋರಿಸುತ್ತವೆ. ಹಾಗಿದ್ದರೂ ಯೆಹೋವನು ನಮ್ಮನ್ನು ಕ್ಷಮಿಸಲು ಸಿದ್ಧನಿದ್ದಾನೆ. ಎಷ್ಟರ ಮಟ್ಟಿಗೆಂದರೆ ಆ ಪಾಪಗಳನ್ನು ನಾವು ಮಾಡಿಯೇ ಇಲ್ಲವೇನೋ ಎಂಬಂತೆ ಸಂಪೂರ್ಣವಾಗಿ ಅಳಿಸಿಹಾಕುತ್ತಾನೆ. ಆದ್ದರಿಂದಲೇ ಯೆಹೋವನ ಸ್ನೇಹಿತರಾಗಲು ಬಯಸುವವರು ಇತರರ ಕುಂದುಕೊರತೆಗಳನ್ನು ಕ್ಷಮಿಸುವ ಹಂಗಿನಲ್ಲಿದ್ದಾರೆ. ಈ ಅಂಶವನ್ನೇ ಯೇಸು ಪರ್ವತ ಪ್ರಸಂಗದಲ್ಲಿ ಹೇಳಿದನು: “ನೀವು ಜನರ ಅಪರಾಧಗಳನ್ನು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು; ಆದರೆ ನೀವು ಜನರ ಅಪರಾಧಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವುದಿಲ್ಲ.”​—⁠ಮತ್ತಾ. 6:​14, 15.

6. ಇತರರನ್ನು ಕ್ಷಮಿಸುವುದು ಯಾವಾಗಲೂ ಸುಲಭವಲ್ಲ ಏಕೆ?

6 ‘ಇದೆಲ್ಲಾ ಕೇಳಲಿಕ್ಕಷ್ಟೇ ಚೆನ್ನಾಗಿದೆ. ಆದರೆ ಮಾಡೋದು ಹೇಳಿದಷ್ಟು ಸುಲಭ ಅಲ್ಲ’ ಎಂದು ನೀವನ್ನಬಹುದು. ನಿಜ, ಅದು ಕಷ್ಟವೇ. ಏಕೆಂದರೆ ಯಾರಾದರೂ ನೋಯಿಸಿದಾಗ ನಮ್ಮ ಭಾವನೆಗಳಿಗೆ ಪೆಟ್ಟಾಗುತ್ತದೆ. ಇದರಿಂದಾಗಿ ನಮಗೆ ಕೋಪಬರಬಹುದು, ದ್ರೋಹಬಗೆದರೆಂದು ಅನಿಸಬಹುದು. ಅವರಿಗೆ ಶಿಕ್ಷೆಯಾಗಲೇಬೇಕೆಂದು ಹಪಹಪಿಸಬಹುದು. ‘ಮಾಡಿದ್ದಕ್ಕೆ ಸರಿಯಾಗಿ ನಾನೂ ಮಾಡುತ್ತೇನೆ’ ಎಂದು ಕುದಿಯಬಹುದು. ಇನ್ನು ಕೆಲವರು ‘ನಾನು ಯಾವತ್ತೂ ಅವರನ್ನು ಕ್ಷಮಿಸಲ್ಲ’ ಎನ್ನಬಹುದು. ನಿಮಗೂ ಹಾಗನಿಸುತ್ತದಾ? ಹಾಗಾದರೆ ನೆನಪಿಡಿ, ನಾವು ಇತರರನ್ನು ಮನಸಾರೆ ಕ್ಷಮಿಸವವರಾಗಿರಬೇಕು ಎನ್ನುವುದೇ ಯೆಹೋವನ ಅಪೇಕ್ಷೆ. ಈ ಗುಣವನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು?

ಕಹಿಭಾವನೆಗೆ ಕಾರಣ ಪತ್ತೆಹಚ್ಚಿ

7, 8. ನಿರ್ದಯವಾಗಿ ನಿಮ್ಮನ್ನು ಉಪಚರಿಸಿದವರನ್ನು ಕ್ಷಮಿಸಲು ಯಾವುದು ಸಹಾಯ ಮಾಡಬಲ್ಲದು?

7 ಕೆಲವೊಮ್ಮೆ ನಿಜವಾಗಲೂ ಬೇರೆಯವರು ನಮ್ಮನ್ನು ನೋಯಿಸಿರಬಹುದು. ಇನ್ನೂ ಕೆಲವೊಮ್ಮೆ ನಾವೇ ಏನೇನೋ ಯೋಚಿಸಿ ಬೇರೆಯವರು ನೋಯಿಸಿದರೆಂದು ಅಂದುಕೊಂಡಿರಬಹುದು. ಏನೇ ಆಗಿರಲಿ ಅಂಥ ಸಂದರ್ಭದಲ್ಲಿ ಅತಿಯಾಗಿ ಪ್ರತಿವರ್ತಿಸುವ ಸಾಧ್ಯತೆ ಹೆಚ್ಚು. ಒಬ್ಬ ತರುಣನು ಕೋಪ ಬಂದಾಗ ಹೇಗೆ ಪ್ರತಿಕ್ರಿಯಿಸಿದನೆಂದು ಗಮನಿಸಿ: “ಕೋಪ ನೆತ್ತಿಗೇರಿದಾಗ ‘ಇನ್ಯಾವತ್ತೂ ಈ ಮನೆಯೊಳಗೆ ಕಾಲಿಡಲ್ಲ’ ಎಂದು ಹೇಳಿ ಹೊರಟುಬಿಟ್ಟೆ. ದಾರಿಯಲ್ಲಿ ನಡೆಯುತ್ತಾ ಹೋದೆ. ಮೈಸೋಕುತ್ತಿದ್ದ ಎಳೆ ಬಿಸಿಲು ಹಿತತಂದಿತು. ಪ್ರಕೃತಿಯ ನೀರವತೆ, ಸೌಂದರ್ಯ ನನ್ನ ಮನಸ್ಸನ್ನು ಹಗುರಮಾಡಿತು. ಮೆಲ್ಲ ಮೆಲ್ಲನೆ ಕೋಪ ಕರಗಿಹೋಯಿತು. ಸಿಟ್ಟಿನಿಂದ ನಾನು ಹೇಳಿದ ಮಾತಿಗೆ ನನಗೇ ಬೇಸರವಾಯಿತು. ಕಾಲು ಮತ್ತೆ ಮನೆ ದಾರಿಹಿಡಿಯಿತು.” ಈ ಅನುಭವ ತೋರಿಸುವಂತೆ ಕೋಪ ತಣ್ಣಗಾಗಲು ಸಮಯ ಕೊಟ್ಟರೆ ಶಾಂತವಾಗಿ ಯೋಚಿಸಲು ನಿಮ್ಮಿಂದಾಗುವುದು. ಹೀಗೆ ಮಾಡಿದರೆ, ನೀವು ಕೋಪ ಬಂದಾಗ ಮಾಡಿದ್ದಕ್ಕಾಗಿ ನಂತರ ಪರಿತಪಿಸುವ ಅಗತ್ಯ ಬರುವುದಿಲ್ಲ.​—⁠ಕೀರ್ತ. 4:4; ಜ್ಞಾನೋ. 14:29; ಯಾಕೋ. 1:​19, 20.

8 ಆದರೆ ನಕಾರಾತ್ಮಕ ಭಾವನೆಗಳು ಇನ್ನೂ ಮನಸ್ಸಲ್ಲಿ ಉಳಿದುಬಿಟ್ಟರೆ ಆಗೇನು? ನಿಮಗೆ ನೋವಾಗಿರಲು ನಿಜ ಕಾರಣವೇನೆಂದು ಪತ್ತೆಹಚ್ಚಿ. ನಿಮಗೆ ಅನ್ಯಾಯವಾಗಿದೆಯೆಂದು ಅನಿಸುತ್ತದಾ? ನಿಮ್ಮೊಂದಿಗೆ ಅವರು ಒರಟಾಗಿ ವರ್ತಿಸಿದರಾ? ಅಥವಾ ನಿಮ್ಮನ್ನು ನೋಯಿಸಲಿಕ್ಕೆಂದೇ ಹಾಗೆ ಮಾಡಿದರೆಂದು ನಿಮಗನಿಸುತ್ತದಾ? ಆ ವ್ಯಕ್ತಿ ಮಾಡಿದ್ದು ನಿಜಕ್ಕೂ ತುಂಬ ಕೆಟ್ಟದ್ದಾಗಿತ್ತಾ? ಹೀಗೆ ನಿಜ ಕಾರಣ ಅರಿತರೆ ಕಹಿಭಾವನೆಯನ್ನು ಮನಸ್ಸಿನಿಂದ ತೆಗೆಯಲು ಯಾವ ಬೈಬಲ್‌ ಮೂಲತತ್ವ ಸಹಾಯ ಮಾಡುವುದೆಂದು ಕಂಡುಕೊಳ್ಳಲು ಸಾಧ್ಯ. ಆಗ ನೀವು ಯೆಹೋವನು ಮೆಚ್ಚುವಂಥ ರೀತಿಯಲ್ಲಿ ಪ್ರತಿವರ್ತಿಸುವಿರಿ. (ಜ್ಞಾನೋಕ್ತಿ 15:28; 17:27 ಓದಿ.) ನಿಮ್ಮ ಭಾವನೆಗಳಿಗಿಂತ ನಿಜತ್ವಗಳನ್ನು ಜಾಗ್ರತೆಯಿಂದ ಪರಿಗಣಿಸುವಲ್ಲಿ ಮನಸಾರೆ ಕ್ಷಮಿಸಲು ಕಲಿತುಕೊಳ್ಳುವಿರಿ. ಕಷ್ಟವಾದರೂ ಹೀಗೆ ಮಾಡುವುದರಿಂದ ದೇವರ ವಾಕ್ಯವು ನಿಮ್ಮ “ಹೃದಯದ ಆಲೋಚನೆಗಳನ್ನೂ ಸಂಕಲ್ಪಗಳನ್ನೂ” ಪರೀಕ್ಷಿಸುವಂತೆ ಬಿಟ್ಟುಕೊಡುತ್ತೀರಿ. ಮಾತ್ರವಲ್ಲ ಯೆಹೋವನಂತೆ ಕ್ಷಮಾಶೀಲರಾಗಿರಲು ಬೈಬಲ್‌ ನಿಮಗೆ ಸಹಾಯ ಮಾಡುವುದು.​—⁠ಇಬ್ರಿ. 4:⁠12.

ನಿಮ್ಮನ್ನು ನೋಯಿಸಲಿಕ್ಕೆಂದೇ ಮಾಡಿದರೆಂದು ನೆನಸಬೇಡಿ

9, 10. (1) ನಿಮ್ಮನ್ನು ಬೇರೆಯವರು ನೋಯಿಸಿದ್ದಾರೆಂದು ಅನಿಸಿದಾಗ ನೀವು ಹೇಗೆ ಪ್ರತಿಕ್ರಿಯಿಸುವ ಸಾಧ್ಯತೆಯಿದೆ? (2) ಸಕಾರಾತ್ಮಕ ಮತ್ತು ಕ್ಷಮಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ನಿಮಗೆ ಹೇಗೆ ಪ್ರಯೋಜನ ತರುತ್ತದೆ?

9 ಅನೇಕ ಸನ್ನಿವೇಶಗಳು ನಮಗೆ ಸಿಟ್ಟುಬರುವಂತೆ ಮಾಡಬಹುದು. ಉದಾಹರಣೆಗೆ ನೀವು ವಾಹನ ಚಲಾಯಿಸುತ್ತಿರುವಾಗ ಒಂದು ಕಾರು ನಿಮ್ಮ ವಾಹನವನ್ನು ಸ್ವಲ್ಪ ಉಜ್ಜಿಕೊಂಡು ಹೋಗುತ್ತದೆ. ನೀವು ಆಗ ಏನು ಮಾಡುತ್ತೀರಾ? ಹೆಚ್ಚಾಗಿ ಇಂಥ ಸಂದರ್ಭಗಳಲ್ಲಿ ಒಬ್ಬನು ಇನ್ನೊಬ್ಬ ಚಾಲಕನ ಮೇಲೆ ಹಲ್ಲೆ ಮಾಡಿರುವ ಅನೇಕ ಪ್ರಕರಣಗಳ ಕುರಿತು ನೀವು ಓದಿರಬಹುದು. ಆದರೆ ಕ್ರೈಸ್ತರಾದ ನೀವು ಹಾಗೆ ಮಾಡಲು ಬಯಸುವುದಿಲ್ಲ ಖಂಡಿತ.

10 ಯಾಕೆ ಹಾಗಾಯಿತೆಂದು ಒಂದು ಕ್ಷಣ ಯೋಚಿಸುವುದು ಅತಿರೇಕವಾಗಿ ಪ್ರತಿಕ್ರಿಯಿಸದಂತೆ ತಡೆಯುವುದು. ನಡೆದದ್ದಕ್ಕೆ ಒಂದುವೇಳೆ ನೀವೂ ಕಾರಣವಾಗಿರಬಹುದು. ನಿಮ್ಮ ಗಮನ ಬೇರೆ ಕಡೆ ತಿರುಗಿದ್ದರಿಂದ ಹಾಗಾಗಿದ್ದಿರಬಹುದು. ಅಥವಾ ನಿಮ್ಮ ವಾಹನಕ್ಕೆ ಡಿಕ್ಕಿ ಹೊಡೆದವನ ಕಾರ್‌ನಲ್ಲಿ ಏನಾದರೂ ಯಾಂತ್ರಿಕ ದೋಷ ಇದ್ದಿರಬಹುದು. ಈ ಉದಾಹರಣೆಯಿಂದ ಒಂದು ಮುಖ್ಯ ವಿಷಯವನ್ನು ಕಲಿಯುತ್ತೇವೆ. ಅದೇನೆಂದರೆ ನಾವು ಅರ್ಥಮಾಡಿಕೊಳ್ಳುವವರೂ ವಿಶಾಲ ಮನಸ್ಸಿನವರೂ ಕ್ಷಮಿಸಲು ಸಿದ್ಧರೂ ಆಗಿರುವುದಾದರೆ ಕೋಪ, ಹತಾಶೆ, ಇತರ ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡಬಹುದು. “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ” ಎನ್ನುತ್ತದೆ ಪ್ರಸಂಗಿ 7:⁠9. ಹಾಗಾಗಿ ಯಾರಾದರೂ ನೋಯಿಸಿದಲ್ಲಿ ನಿಮ್ಮನ್ನು ಕಿರಿಕಿರಿಗೊಳಿಸಲೆಂದೇ ಹಾಗೆ ಮಾಡಿದರೆಂದು ನೆನಸಬೇಡಿ. ಹೆಚ್ಚಿನ ಸಂದರ್ಭಗಳಲ್ಲಿ ನಿಜ ಕಾರಣ ಬೇರೆಯೇ ಆಗಿರುತ್ತದೆ. ಅಪರಿಪೂರ್ಣತೆಯಿಂದಲೋ ಅಪಾರ್ಥದಿಂದಲೋ ಹಾಗಾಗಿರಬಹುದಷ್ಟೆ. ಯಾರಾದರೂ ನಿರ್ದಯವಾಗಿ ಮಾತಾಡಿದರು ಅಥವಾ ನಡೆದುಕೊಂಡರು ಎಂದು ಅನಿಸಿದರೆ ಅದಕ್ಕಿರುವ ಕಾರಣ ಪೂರ್ತಿಯಾಗಿ ನಿಮಗೆ ತಿಳಿದಿರಲಿಕ್ಕಿಲ್ಲ ಎಂದು ನೆನಪಿಡಿ. ಪ್ರೀತಿಯಿಂದ ಕ್ಷಮಿಸುವವರಾಗಿರ್ರಿ. ಹೀಗೆ ಮಾಡಿದಾಗ ನಿಮಗೆ ಸಂತೋಷ ಖಂಡಿತ ಲಭಿಸುವುದು.​—⁠1 ಪೇತ್ರ 4:8 ಓದಿ.

‘ನಿಮ್ಮ ಶಾಂತಿಯು ನಿಮಗೆ ಹಿಂದಿರುಗಲಿ’

11. ಸುವಾರ್ತೆಗೆ ಜನರ ಪ್ರತಿಕ್ರಿಯೆ ಹೇಗೆಯೇ ಇರಲಿ ನಾವು ಹೇಗೆ ಪ್ರತಿಕ್ರಿಯಿಸಬೇಕು?

11 ನೀವು ಕ್ಷೇತ್ರ ಸೇವೆಯಲ್ಲಿರುವಾಗ ಯಾರಾದರೂ ಒರಟಾಗಿ ವರ್ತಿಸಿದರೆ ಹೇಗೆ ಸ್ವನಿಯಂತ್ರಣ ತೋರಿಸಬಲ್ಲಿರಿ? ಯೇಸು 70 ಮಂದಿಯನ್ನು ಸಾರಲು ಕಳುಹಿಸಿದಾಗ ಏನಂದನೋ ಅದು ನಮಗೂ ಪ್ರಯೋಜನಕಾರಿ. ಪ್ರತಿ ಮನೆಗೆ ಹೋಗುವಾಗ ಶಾಂತಿಯನ್ನು ಹಾರೈಸುವಂತೆ ಯೇಸು ಹೇಳಿದನು. “ಶಾಂತಿಪಾತ್ರನು ಅಲ್ಲಿರುವುದಾದರೆ ನಿಮ್ಮ ಶಾಂತಿಯು ಅವನ ಮೇಲೆ ನೆಲೆಸುವುದು. ಇಲ್ಲದಿದ್ದರೆ ಅದು ನಿಮಗೆ ಹಿಂದಿರುಗುವುದು.” (ಲೂಕ 10:​1, 5, 6) ಜನರು ಸುವಾರ್ತೆಗೆ ಒಳ್ಳೇ ಪ್ರತಿಕ್ರಿಯೆ ತೋರಿಸಿದಾಗ ಅದು ಅವರಿಗೆ ತರುವ ಪ್ರಯೋಜನವನ್ನು ನೆನಸಿ ಖಂಡಿತ ನಮಗೆ ಸಂತೋಷವಾಗುತ್ತದೆ. ಆದರೆ ಕೆಲವೊಮ್ಮೆ ಜನರು ಶಾಂತಿಶೀಲರಾಗಿರುವುದಿಲ್ಲ. ಆಗ ನಾವು ಸಿಟ್ಟು ಮಾಡಿಕೊಳ್ಳಬಹುದೇ? ಯೇಸು ಹೇಳಿದಂತೆ ಆಗಲೂ ನಿಮ್ಮಲ್ಲಿ ಶಾಂತಿ ನೆಲಸಿರಬೇಕು. ಮನೆಯವರ ಪ್ರತಿಕ್ರಿಯೆ ಹೇಗೆಯೇ ಇರಲಿ ಪ್ರತಿ ಮನೆ ಬಾಗಿಲಿನಿಂದ ಹೊರಡುವಾಗ ಮನದಲ್ಲಿ ಶಾಂತಿಯಿರಬೇಕು. ಒಂದುವೇಳೆ ನಾವು ಸಿಟ್ಟುಮಾಡಿಕೊಳ್ಳುವಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲಾರೆವು.

12. ಎಫೆಸ 4:​31, 32ರಲ್ಲಿರುವ ಪೌಲನ ಮಾತುಗಳಿಗನುಸಾರ ನಾವು ಯಾವ ರೀತಿ ನಡೆದುಕೊಳ್ಳಬೇಕು?

12 ಕ್ರೈಸ್ತ ಸೇವೆಯಲ್ಲಿ ಮಾತ್ರವಲ್ಲ ಎಲ್ಲ ಸಂದರ್ಭಗಳಲ್ಲೂ ಶಾಂತಿಶೀಲರಾಗಿರಲು ಶ್ರಮಿಸಿ. ಕ್ಷಮಿಸಲು ಸಿದ್ಧಮನಸ್ಸು ನಿಮಗಿರಬೇಕು ಎನ್ನುವಾಗ ಅದರರ್ಥ ಬೇರೆಯವರ ತಪ್ಪು ವರ್ತನೆಯನ್ನು ಸರಿಯೆಂದು ಒಪ್ಪಿಕೊಳ್ಳಬೇಕೆಂದಾಗಲಿ ಅಥವಾ ಅದರಿಂದ ಯಾರಿಗೂ ನೋವೇ ಆಗೋದಿಲ್ಲ ಎಂಬ ಅಭಿಪ್ರಾಯ ಮೂಡಿಸಬೇಕೆಂದಾಗಲಿ ಅಲ್ಲ. ಬದಲಾಗಿ ಬೇರೆಯವರ ತಪ್ಪು ವರ್ತನೆಯಿಂದ ಉಂಟಾಗಿರುವ ಕಹಿಭಾವನೆಯು ಮನಸ್ಸಿನಲ್ಲಿ ನೆಲೆಯೂರುವಂತೆ ಬಿಡಬಾರದು ಮತ್ತು ನಿಮ್ಮ ಮನದ ಶಾಂತಿಯನ್ನು ಕಳಕೊಳ್ಳಬಾರದು ಎಂದಾಗಿದೆ. ಕೆಲವರು ನಕಾರಾತ್ಮಕ ಘಟನೆಗಳನ್ನು ಜಗಿ ಜಗಿಯುತ್ತಾ ನನ್ನನ್ನು ಎಷ್ಟು ಕೆಟ್ಟದಾಗಿ ಉಪಚರಿಸಿದರು ಎಂದು ಮೆಲುಕುಹಾಕುತ್ತಾ ದುಃಖವನ್ನೇ ಉಂಡಿದ್ದಾರೆ. ಹೀಗೆ ಬೇರೆಯವರ ವರ್ತನೆಯು ತಮ್ಮ ಸಂತೋಷವನ್ನು ಅಪಹರಿಸುವಂತೆ ಬಿಟ್ಟಿದ್ದಾರೆ. ಅಂಥ ಯೋಚನೆಗಳು ನಿಮ್ಮನ್ನು ನಿಯಂತ್ರಿಸದಿರಲಿ. ಮನಸ್ತಾಪವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಸಂತೋಷ ನಿಮ್ಮಿಂದ ಕಣ್ಮರೆಯಾಗುವುದು. ಆದ್ದರಿಂದ ವಿಷಯವನ್ನು ಅಲ್ಲಿಗೆ ಬಿಟ್ಟು ಕ್ಷಮಿಸಿಬಿಡಿ!​—⁠ಎಫೆಸ 4:​31, 32 ಓದಿ.

ಯೆಹೋವನು ಮೆಚ್ಚುವಂಥ ರೀತಿಯಲ್ಲಿ ಪ್ರತಿಕ್ರಿಯಿಸಿ

13. (1) ಕ್ರೈಸ್ತನೊಬ್ಬನು ತನ್ನ ವೈರಿಯ “ತಲೆಯ ಮೇಲೆ ಕೆಂಡವನ್ನು” ಹೇರುವುದು ಹೇಗೆ? (2) ನಿರ್ದಯವಾಗಿ ನಡೆದುಕೊಳ್ಳುವವರಿಗೆ ನಾವು ಸೌಜನ್ಯದಿಂದ ಪ್ರತಿಕ್ರಿಯಿಸುವಾಗ ಏನಾಗಬಹುದು?

13 ಕೆಲವೊಮ್ಮೆ ಹೊರಗಿನವರು ನಮ್ಮೊಡನೆ ನಿರ್ದಯವಾಗಿ ವರ್ತಿಸಬಹುದು. ಆದರೆ ಅಂಥ ಸಮಯದಲ್ಲಿ ನೀವು ತೋರಿಸುವ ಪ್ರತಿವರ್ತನೆಯ ಮೂಲಕ ಬೈಬಲ್‌ ವಿಷಯಗಳಲ್ಲಿ ಅವರ ಆಸಕ್ತಿಯನ್ನು ಕೆರಳಿಸಬಲ್ಲಿರಿ. ಅಪೊಸ್ತಲ ಪೌಲ ಹೇಳಿದ್ದು: “ ‘ನಿನ್ನ ವೈರಿಯು ಹಸಿದಿರುವುದಾದರೆ ಅವನಿಗೆ ಊಟಕ್ಕೆ ಕೊಡು; ಅವನು ಬಾಯಾರಿದ್ದರೆ ಅವನಿಗೆ ಏನನ್ನಾದರೂ ಕುಡಿಯಲು ಕೊಡು; ಹೀಗೆ ಮಾಡುವ ಮೂಲಕ ನೀನು ಅವನ ತಲೆಯ ಮೇಲೆ ಕೆಂಡವನ್ನು ಹೇರಿದಂತಾಗುವುದು.’ ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು.” (ರೋಮ. 12:​20, 21) ಜನರು ಸಿಟ್ಟಿನಿಂದ ವರ್ತಿಸುವಾಗಲೂ ನೀವು ಸೌಜನ್ಯದಿಂದ ಪ್ರತಿಕ್ರಿಯಿಸುವಾಗ ಕಲ್ಲಿನಂಥ ಮನಸ್ಸನ್ನೂ ಕರಗಿಸಬಲ್ಲಿರಿ. ಬಳಿಕ ಅವರು ಒಳ್ಳೇದಾಗಿ ದಯೆಯಿಂದ ವರ್ತಿಸಲು ತೊಡಗಿಯಾರು. ನಿಮ್ಮನ್ನು ಕೆಟ್ಟದಾಗಿ ಉಪಚರಿಸುವ ವ್ಯಕ್ತಿಯನ್ನು ನೀವು ಅರ್ಥಮಾಡಿಕೊಂಡು ಪರಾನುಭೂತಿ ತೋರಿಸುವಾಗ ಅವನಿಗೆ ಬೈಬಲಿನಲ್ಲಿ ಆಸಕ್ತಿ ಬೆಳೆಯುವಂತೆ ಮಾಡಬಲ್ಲಿರಿ. ಅವನು ಆಸಕ್ತಿ ತೋರಿಸಲಿ ತೋರಿಸದಿರಲಿ ನಿಮ್ಮ ಉತ್ತಮ ನಡತೆಯ ಕುರಿತು ಅವನು ಯೋಚಿಸುವಂತೆ ಮಾಡಬಲ್ಲಿರಿ.​—⁠1 ಪೇತ್ರ 2:12; 3:⁠16.

14. ಒಬ್ಬ ವ್ಯಕ್ತಿ ನಮ್ಮನ್ನು ಎಷ್ಟೇ ಕೆಟ್ಟದಾಗಿ ಉಪಚರಿಸಲಿ ನಾವೇಕೆ ಕಹಿಭಾವನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು?

14 ಆದರೆ ಕೆಲವು ಜನರೊಂದಿಗೆ ನಾವು ಸಹವಾಸ ಮಾಡಲೇಬಾರದು. ಪಾಪಮಾಡಿ ಪಶ್ಚಾತ್ತಾಪಪಡದೆ ಸಭೆಯಿಂದ ಬಹಿಷ್ಕಾರವಾದವರೂ ಇಂಥವರಲ್ಲಿ ಸೇರಿದ್ದಾರೆ. ಬಹಿಷ್ಕೃತ ವ್ಯಕ್ತಿಯಿಂದ ನಿಮಗೆ ನೋವಾಗಿದ್ದರೆ ಆ ವ್ಯಕ್ತಿ ಪಶ್ಚಾತ್ತಾಪಪಟ್ಟು ಹಿಂದೆ ಬಂದಾಗಲೂ ಸಹ ಕ್ಷಮಿಸುವುದು ತೀರ ಕಷ್ಟವಾಗಬಹುದು. ಏಕೆಂದರೆ ಅವರಿಂದ ನಿಮ್ಮ ಮನಸ್ಸಿಗಾದ ಗಾಯ ಮಾಸಲು ಸಮಯ ಹಿಡಿಯುತ್ತದೆ. ಅಂಥ ಸಂದರ್ಭದಲ್ಲಿ ಪಶ್ಚಾತ್ತಾಪಪಟ್ಟಿರುವ ಆ ವ್ಯಕ್ತಿಯನ್ನು ಕ್ಷಮಿಸುವ ಮನಸ್ಸು ಕೊಡುವಂತೆ ಯೆಹೋವನಲ್ಲಿ ಪ್ರಾರ್ಥಿಸಿರಿ. ಆ ವ್ಯಕ್ತಿಯ ಮನಸ್ಸಿನೊಳಗೆ ಏನಿದೆಯೆಂದು ನಿಮಗೆ ಗೊತ್ತಿಲ್ಲವಲ್ಲಾ. ಅದು ಯೆಹೋವನಿಗೆ ಮಾತ್ರ ಗೊತ್ತಿದೆ. ಒಬ್ಬನ ಅಂತರಾಳವನ್ನು ಯೆಹೋವನು ಪರೀಕ್ಷಿಸುತ್ತಾನೆ. ಮಾತ್ರವಲ್ಲ ಪಾಪ ಮಾಡಿದ ವ್ಯಕ್ತಿಯ ವಿಷಯದಲ್ಲಿ ಯೆಹೋವನು ತಾಳ್ಮೆಯಿಂದಿರುತ್ತಾನೆ. (ಕೀರ್ತ. 7:9; ಜ್ಞಾನೋ. 17:⁠3) ಆದ್ದರಿಂದಲೇ ಬೈಬಲ್‌ ನಮಗೆ ಹೀಗೆ ಹೇಳುತ್ತದೆ: “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿ. ಎಲ್ಲರ ದೃಷ್ಟಿಯಲ್ಲಿ ಒಳ್ಳೇದಾಗಿರುವುದನ್ನೇ ಮಾಡಿರಿ. ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ. ಪ್ರಿಯರೇ ನೀವು ಮುಯ್ಯಿಗೆ ಮುಯ್ಯಿ ತೀರಿಸದೆ ದೇವರ ಕ್ರೋಧಕ್ಕೆ ಎಡೆಮಾಡಿಕೊಡಿರಿ; ‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆ’ ಎಂದು ಬರೆದಿದೆ.” (ರೋಮ. 12:​17-19) ಇನ್ನೊಬ್ಬರ ಕುರಿತು ಸರಿಯಾಗಿ ತೀರ್ಪು ಮಾಡುವ ಸಾಮರ್ಥ್ಯ ನಮ್ಮಲ್ಲಿದೆಯೇ? ಖಂಡಿತ ಇಲ್ಲ! (ಮತ್ತಾ. 7:​1, 2) ಆದರೆ ಯೆಹೋವನು ನ್ಯಾಯವಾಗಿ ತೀರ್ಪುಮಾಡಲು ಶಕ್ತನು ಎಂಬ ಭರವಸೆ ನಮಗಿರಲಿ.

15. ಒಬ್ಬರ ಮೇಲೆ ನಮಗಿರುವ ಕೋಪ ಕಡಿಮೆಯಾಗಲು ಯಾವುದು ಸಹಾಯ ಮಾಡುತ್ತದೆ?

15 ನಿಮಗೆ ಅನ್ಯಾಯ ಮಾಡಲಾಗಿದೆ ಎಂದು ಅನಿಸುವಲ್ಲಿ ಮತ್ತು ತಪ್ಪಿತಸ್ಥನು ಪಶ್ಚಾತ್ತಾಪಪಟ್ಟ ಬಳಿಕವೂ ಅವನನ್ನು ಕ್ಷಮಿಸಲು ಕಷ್ಟವಾಗುವಲ್ಲಿ ನೆನಪಿಡಿ, ಆ ವ್ಯಕ್ತಿ ಕೂಡ ಒಂದು ರೀತಿಯಲ್ಲಿ ಕಷ್ಟ ಅನುಭವಿಸುತ್ತಿದ್ದಾನೆ. ಏಕೆಂದರೆ ನಮ್ಮಂತೆ ಅವನು ಕೂಡ ಅಪರಿಪೂರ್ಣನಾಗಿದ್ದಾನೆ. (ರೋಮ. 3:23) ಅಪರಿಪೂರ್ಣ ಮನುಷ್ಯರೆಲ್ಲರಿಗೂ ಯೆಹೋವನು ಕರುಣೆ ತೋರಿಸುತ್ತಾನೆ. ಆದ್ದರಿಂದ ನಮ್ಮನ್ನು ನೋಯಿಸಿದ ವ್ಯಕ್ತಿಗಾಗಿ ನಾವು ಪ್ರಾರ್ಥಿಸಬೇಕು. ಆ ವ್ಯಕ್ತಿಗಾಗಿ ಪ್ರಾರ್ಥಿಸುತ್ತಿರುವಲ್ಲಿ ಅವನ ಮೇಲೆ ನಮಗಿರುವ ಕೋಪ ಕಡಿಮೆಯಾಗುತ್ತದೆ. ನಮ್ಮನ್ನು ಕೆಟ್ಟದಾಗಿ ಉಪಚರಿಸಿದವರ ಬಗ್ಗೆ ಮನಸ್ಸಿನಲ್ಲಿ ಯಾವಾಗಲೂ ಕಹಿಭಾವನೆ ತಳೆದಿರಬಾರದೆಂದು ಯೇಸು ಸ್ಪಷ್ಟವಾಗಿ ತಿಳಿಸಿದನು. ಅವನು ಅಂದದ್ದು; “ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ.”​—⁠ಮತ್ತಾ. 5:⁠44.

16, 17. (1) ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪಪಟ್ಟಿದ್ದಾನೆಂದು ಸಭಾ ಹಿರಿಯರು ನಿರ್ಣಯಿಸುವಲ್ಲಿ ನೀವು ಹೇಗೆ ಪ್ರತಿಕ್ರಿಯಿಸಬೇಕು? (2) ಏಕೆ?

16 ಗಂಭೀರ ಪಾಪಗೈದ ವ್ಯಕ್ತಿ ಪಶ್ಚಾತ್ತಾಪಪಟ್ಟಿದ್ದಾನೋ ಇಲ್ಲವೋ ಎಂದು ನಿರ್ಣಯಿಸುವ ಜವಾಬ್ದಾರಿಯನ್ನು ಯೆಹೋವನು ಕ್ರೈಸ್ತ ಹಿರಿಯರಿಗೆ ಕೊಟ್ಟಿದ್ದಾನೆ. ಒಂದು ಸನ್ನಿವೇಶದ ಬಗ್ಗೆ ದೇವರಿಗಿರುವಷ್ಟು ಪೂರ್ಣ ಒಳನೋಟ ಈ ಸಹೋದರರಿಗೆ ಇಲ್ಲವಾದರೂ ಅವರು ಪವಿತ್ರಾತ್ಮದ ಸಹಾಯದೊಂದಿಗೆ ದೇವರ ವಾಕ್ಯದ ಮಾರ್ಗದರ್ಶನಕ್ಕೆ ಹೊಂದಿಕೆಯಲ್ಲಿ ನಿರ್ಣಯ ಮಾಡುತ್ತಾರೆ. ಹಾಗಾಗಿ ಇಂಥ ಪ್ರಕರಣಗಳಲ್ಲಿ ಅವರು ಯೆಹೋವನ ಸಹಾಯ ಯಾಚಿಸಿ ನಂತರ ತಕ್ಕೊಳ್ಳುವ ನಿರ್ಣಯವು ಆ ವಿಷಯದ ಬಗ್ಗೆ ಯೆಹೋವನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.​—⁠ಮತ್ತಾ. 18:⁠18.

17 ಇಂತಹ ಸಮಯದಲ್ಲಿ ನಮ್ಮ ನಿಷ್ಠೆ ತೋರಿಬರುತ್ತದೆ. ಒಬ್ಬ ವ್ಯಕ್ತಿ ಪಶ್ಚಾತ್ತಾಪಪಟ್ಟಿದ್ದಾನೆಂದು ಹಿರಿಯರು ನಿರ್ಣಯಿಸುವಲ್ಲಿ ಆ ವ್ಯಕ್ತಿಯ ಕಡೆಗೆ ನಿಮ್ಮ ಮನೋಭಾವ ಹೇಗಿರುತ್ತದೆ? ಅವನನ್ನು ಕ್ಷಮಿಸಿ ಪುನಃ ಪ್ರೀತಿಯನ್ನು ತೋರಿಸುವಿರಾ? (2 ಕೊರಿಂ. 2:​5-8) ಪುನಃಸ್ಥಾಪಿಸಲ್ಪಟ್ಟ ವ್ಯಕ್ತಿಯು ಹಿಂದೆ ಮಾಡಿದ ಪಾಪ ವೈಯಕ್ತಿಕವಾಗಿ ನಿಮ್ಮನ್ನು ಬಾಧಿಸಿದ್ದರೆ ಅಥವಾ ಅದರಿಂದ ನಿಮ್ಮ ಸಂಬಂಧಿಕರು ಬಾಧಿಸಲ್ಪಟ್ಟಿದ್ದರೆ ಅವನನ್ನು ಕ್ಷಮಿಸುವುದು ಅಷ್ಟು ಸುಲಭವಲ್ಲ. ಹಾಗಿದ್ದರೂ ಯೆಹೋವನಲ್ಲಿ ಮತ್ತು ಆತನು ಸಭೆಯ ಮೂಲಕ ವಿಷಯಗಳನ್ನು ನಿರ್ವಹಿಸುವ ವಿಧದಲ್ಲಿ ನಿಮಗೆ ಭರವಸೆಯಿದ್ದರೆ ಸರಿಯಾದುದ್ದನ್ನೇ ಮಾಡುವಿರಿ. ಉದಾರವಾಗಿ ಕ್ಷಮಿಸುವ ಮನಸ್ಸು ನಿಮಗಿದೆ ಎಂದು ತೋರಿಸಿಕೊಡುವಿರಿ.​—⁠ಜ್ಞಾನೋ. 3:​5, 6.

18. ಉದಾರವಾಗಿ ಕ್ಷಮಿಸುವುದರಿಂದ ನೀವು ಯಾವ ಪ್ರಯೋಜನಗಳನ್ನು ಪಡೆಯುವಿರಿ?

18 ಕ್ಷಮಿಸಲು ಸಿದ್ಧರಾಗಿರುವುದರಿಂದ ಸಿಗುವ ಪ್ರಯೋಜನಗಳನ್ನು ಮಾನಸಿಕ ಆರೋಗ್ಯದ ಪರಿಣತರು ಗಣ್ಯಮಾಡುತ್ತಾರೆ. ಕ್ಷಮಾಗುಣ ತೋರಿಸದೆ ಕಹಿ ಭಾವನೆಗಳನ್ನು ಅದುಮಿಡುವುದಾದರೆ, ಶಕ್ತಿಗುಂದಿಸುವ ಭಾವನೆಗಳು ಮನದಲ್ಲಿ ಬೇರುಬಿಡುವಂತೆ ಅನುಮತಿಸುವುದಾದರೆ ಅದು ಮುರಿದ ಸಂಬಂಧ, ಒತ್ತಡ, ಸಂವಾದ ತಡೆ, ಅನಾರೋಗ್ಯಕ್ಕೆ ದಾರಿಮಾಡಿಕೊಡುತ್ತದೆ. ಆದರೆ ಕ್ಷಮಾಗುಣವು ಇದೆಲ್ಲದರಿಂದ ನಮ್ಮನ್ನು ಮುಕ್ತಗೊಳಿಸುತ್ತದೆ. ಸಾರವತ್ತಾದ ಸಂತೋಷದ ಸಂಬಂಧಗಳನ್ನು ಬೆಸೆಯುತ್ತದೆ. ಮುಖ್ಯವಾಗಿ ಸ್ವರ್ಗದಲ್ಲಿರುವ ನಮ್ಮ ತಂದೆಯಾದ ಯೆಹೋವನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲು ಸಹಾಯಮಾಡುತ್ತದೆ.​—⁠ಕೊಲೊಸ್ಸೆ 3:​12-14 ಓದಿ.

[ಅಧ್ಯಯನ ಪ್ರಶ್ನೆಗಳು]

[ಪುಟ 27ರಲ್ಲಿರುವ ಚಿತ್ರ]

ಈ ದೃಷ್ಟಾಂತದ ಮೂಲಕ ಯೇಸು ಯಾವ ಪ್ರಮುಖ ಅಂಶವನ್ನು ಒತ್ತಿಹೇಳಿದನು?

[ಪುಟ 30ರಲ್ಲಿರುವ ಚಿತ್ರ]

ಕ್ರೈಸ್ತರು ಒಬ್ಬರನ್ನೊಬ್ಬರು ಕ್ಷಮಿಸುವುದು ಅತ್ಯಗತ್ಯ