ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಯೌವನದಲ್ಲಿ ಅವರು ಮಾಡಿದ ನಿರ್ಣಯದ ಬಗ್ಗೆ ವಿಷಾದವಿರಲಿಲ್ಲ

ಯೌವನದಲ್ಲಿ ಅವರು ಮಾಡಿದ ನಿರ್ಣಯದ ಬಗ್ಗೆ ವಿಷಾದವಿರಲಿಲ್ಲ

ನನ್ನ ಅಜ್ಜಿಯ ಅಣ್ಣ ನಿಕೊಲೈ ಡುಬವಿನ್‌ಸ್ಕಿಯವರು ತಮ್ಮ ಜೀವನದ ಕೊನೇ ವರ್ಷಗಳಲ್ಲಿದ್ದಾಗ ತಮ್ಮ ಅನುಭವಗಳ ಬಗ್ಗೆ ಬರೆದಿಟ್ಟಿದ್ದರು. ಯೆಹೋವನಿಗಾಗಿ ಮುಡಿಪಾಗಿರಿಸಿದ ಅವರ ಬದುಕಿನ ಸುಖ-ದುಃಖದ ಅನುಭವಗಳು ಅದರಲ್ಲಿವೆ. ಹಿಂದೊಮ್ಮೆ ಸೋವಿಯಟ್‌ ಯೂನಿಯನ್‌ ಆಗಿದ್ದ ಪ್ರದೇಶದಲ್ಲಿ ನಿಷೇಧದ ಅಡಿಯಲ್ಲೇ ಅವರು ಜೀವನದ ಹೆಚ್ಚಿನ ಭಾಗವನ್ನು ಕಳೆದಿದ್ದರು. ಎಂಥದ್ದೇ ಸವಾಲುಗಳು, ಕಷ್ಟಗಳು ಎದುರಾದರೂ ತಮ್ಮ ನಂಬಿಗಸ್ತಿಕೆ ಮಾತ್ರ ಬಿಟ್ಟುಕೊಡಲಿಲ್ಲ. ಜೀವನದ ಬಗ್ಗೆ ಅವರಿಗೆ ಎಲ್ಲಿಲ್ಲದ ಉತ್ಸಾಹ. ಯುವ ಜನರು ತಮ್ಮ ಕಥೆಯನ್ನು ಕೇಳಬೇಕು ಎನ್ನುವುದು ಅವರ ಆಸೆಯಾಗಿತ್ತು. ಹಾಗಾಗಿ ನಾನು ಅವರ ಬದುಕಿನ ಕೆಲವು ಮುಖ್ಯ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇನೆ. 1926ರಲ್ಲಿ ಪಡ್ವಿರಿಫ್‌ಕ ಎಂಬ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಇವರು ಹುಟ್ಟಿದರು. ಯುಕ್ರೇನ್‍ನ ಚೆರ್ನಿವಿಟ್ಸಿ ಒಬ್ಲಾಸ್ಟ್‌ ಎಂಬಲ್ಲಿ ಈ ಹಳ್ಳಿ ಇದೆ.

ನಿಕೊಲೈ ತಾತನಿಗೆ ಸತ್ಯ ಸಿಕ್ಕಿದ್ದು

ತಾತ ಹೀಗೆ ಬರೆದಿಟ್ಟಿದ್ದಾರೆ: “1941ರಲ್ಲಿ ಒಂದು ದಿನ ದ ಹಾರ್ಪ್‌ ಆಫ್‌ ಗಾಡ್, ದ ಡಿವೈನ್‌ ಪ್ಲ್ಯಾನ್‌ ಆಫ್‌ ದಿ ಏಜಸ್‌, ಕೆಲವು ಕಾವಲಿನಬುರುಜು ಪತ್ರಿಕೆಗಳು ಮತ್ತು ತುಂಬ ಕಿರುಪುಸ್ತಿಕೆಗಳನ್ನು ನನ್ನ ಅಣ್ಣ ಐವಾನ್‌ ಮನೆಗೆ ತಂದ. ನಾನು ಅವೆಲ್ಲವನ್ನು ಓದಿ ಮುಗಿಸಿದೆ. ಲೋಕದ ಸಮಸ್ಯೆಗಳಿಗೆ ದೇವರಲ್ಲ, ಪಿಶಾಚನು ಕಾರಣ ಎಂದು ಕಲಿತು ನನಗೆ ತುಂಬ ಆಶ್ಚರ್ಯವಾಯಿತು. ಈ ಪ್ರಕಾಶನಗಳ ಜೊತೆಗೆ ಬೈಬಲಿನ ಸುವಾರ್ತಾ ಪುಸ್ತಕಗಳನ್ನು ಸಹ ಓದಿದಾಗ ನನಗೆ ಸತ್ಯ ಸಿಕ್ಕಿದೆ ಎಂಬ ಅರಿವಾಯಿತು. ತುಂಬ ಹುರುಪಿನಿಂದ ನಾನು ರಾಜ್ಯದ ನಿರೀಕ್ಷೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುತ್ತಿದ್ದೆ. ಈ ಪ್ರಕಾಶನಗಳ ಅಧ್ಯಯನ ಮಾಡುತ್ತಾ ಹೋದಂತೆ ನನಗೆ ಸತ್ಯದ ತಿಳಿವಳಿಕೆ ಹೆಚ್ಚುತ್ತಾ ಹೋಯಿತು ಮತ್ತು ಯೆಹೋವನ ಸೇವಕನಾಗಬೇಕು ಎಂಬ ಬಲವಾದ ಆಸೆ ಬೆಳೆಯಲು ಆರಂಭವಾಯಿತು.

“ನನ್ನ ನಂಬಿಕೆಗಳಿಂದಾಗಿ ತುಂಬ ಕಷ್ಟ ಅನುಭವಿಸಲಿಕ್ಕಿದೆ ಎಂದು ನಾನು ಅರ್ಥ ಮಾಡಿಕೊಂಡೆ. ಅದು ಯುದ್ಧದ ಸಮಯವಾಗಿತ್ತು. ನಾನು ಯಾರನ್ನೂ ಕೊಲ್ಲಬಾರದೆಂಬ ತೀರ್ಮಾನ ಮಾಡಿದೆ. ಮುಂದೆ ಬರಲಿರುವ ನಂಬಿಕೆಯ ಪರೀಕ್ಷೆಗಳನ್ನು ಎದುರಿಸಲು ನನ್ನನ್ನೇ ತಯಾರಿಸಿಕೊಳ್ಳಲು ಮತ್ತಾಯ 10:28 ಮತ್ತು 26:52 ರಂಥ ವಚನಗಳನ್ನು ಬಾಯಿಪಾಠ ಮಾಡಿದೆ. ಸಾವು ಬಂದರೂ ಸರಿಯೇ ಯಾವತ್ತೂ ಯೆಹೋವನಿಗೆ ಅಪನಂಬಿಗಸ್ತನಾಗುವುದಿಲ್ಲ ಎಂಬ ದೃಢ ತೀರ್ಮಾನ ಮಾಡಿದೆ!

“1944ರಲ್ಲಿ ನನಗೆ 18 ವರ್ಷವಾದಾಗ ಮಿಲಿಟರಿಗೆ ಸೇರಲು ಕರೆಬಂತು. ಇದೇ ಮೊದಲ ಬಾರಿಗೆ ನಾನು ಜೊತೆ ವಿಶ್ವಾಸಿಗಳೊಟ್ಟಿಗೆ ಇದ್ದೆ. ನನ್ನಂತೆ 18 ವರ್ಷ ತುಂಬಿದ್ದ ಯುವ ಸಹೋದರರನ್ನು ಒತ್ತಾಯದಿಂದ ಮಿಲಿಟರಿಗೆ ಭರ್ತಿ ಮಾಡಲಿಕ್ಕಾಗಿ ಒಂದು ಜಾಗದಲ್ಲಿ ಒಟ್ಟು ಸೇರಿಸಲಾಗಿತ್ತು. ಯಾವುದೇ ರೀತಿಯಲ್ಲಿ ಯುದ್ಧದಲ್ಲಿ ಭಾಗವಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ನಾವು ಖಡಾಖಂಡಿತವಾಗಿ ಹೇಳಿದೆವು. ಇದನ್ನು ಕೇಳಿ ಕೋಪ ಬಂದ ಮಿಲಿಟರಿ ಅಧಿಕಾರಿಗಳು ನಿಮ್ಮನ್ನು ಉಪವಾಸ ಹಾಕುತ್ತೇವೆ, ಕಂದಕಗಳನ್ನು ತೋಡಲು ಕಳುಹಿಸುತ್ತೇವೆ ಅಥವಾ ಗುಂಡಿಕ್ಕಿ ಕೊಲ್ಲುತ್ತೇವೆ ಎಂದು ಹೆದರಿಸಿದರು. ಆದರೆ ‘ನಾವೀಗ ನಿಮ್ಮ ಕೈಯಲ್ಲಿದ್ದೇವೆ. ನೀವು ನಮಗೇನೇ ಮಾಡಿದರೂ “ನರಹತ್ಯ ಮಾಡಬಾರದು” ಎಂಬ ದೇವರ ಆಜ್ಞೆಯನ್ನು ಮಾತ್ರ ಮೀರುವುದಿಲ್ಲ’ ಎಂದು ಕಿಂಚಿತ್ತೂ ಭಯವಿಲ್ಲದೆ ಹೇಳಿದೆವು.—ವಿಮೋ. 20:13.

“ನೆನಸಿದಂತೆ ನನ್ನನ್ನು ಮತ್ತು ಇಬ್ಬರು ಸಹೋದರರನ್ನು ಬೆಲರೂಸ್‌ಗೆ ಗದ್ದೆಗಳಲ್ಲಿ ಕೆಲಸ ಮಾಡಲು ಮತ್ತು ಮುರಿದ ಮನೆಗಳನ್ನು ರಿಪೇರಿ ಮಾಡಲು ಕಳುಹಿಸಲಾಯಿತು. ಮಿನ್‌ಸ್ಕ್‌ ನಗರದ ಹೊರವಲಯದಲ್ಲಿ ಯುದ್ಧದ ಭಯಾನಕ ಪರಿಣಾಮಗಳನ್ನು ನೋಡಿದ್ದು ನನಗಿನ್ನೂ ನೆನಪಿದೆ. ರಸ್ತೆಗಳ ಎರಡು ಬದಿಯಲ್ಲಿ ಸಾಲಾಗಿ ನಿಂತಿದ್ದ ಮರಗಳು ಸುಟ್ಟು ಕರಕಲಾಗಿದ್ದವು. ಹೆಣಗಳು, ಕುದುರೆಗಳ ಉಬ್ಬಿಹೋಗಿದ್ದ ಶವಗಳು ಕಾಡಿನಲ್ಲಿ, ಹಳ್ಳಗಳಲ್ಲಿ ಬಿದ್ದಿದ್ದವು. ಖಾಲಿ ಬಂಡಿಗಳು, ಅಸ್ತ್ರಗಳು ಮತ್ತು ಒಡೆದು ಹೋದ ವಿಮಾನದ ಚೂರುಗಳನ್ನು ನೋಡಿದೆ. ದೇವರ ಆಜ್ಞೆಗಳನ್ನು ಮೀರಿದ್ದರ ಪರಿಣಾಮಗಳು ನನ್ನ ಕಣ್ಮುಂದೆಯೇ ಇತ್ತು.

“1945ರಲ್ಲಿ ಯುದ್ಧ ಮುಗಿಯಿತು. ಆದರೆ ನಾವು ಸೇನೆಗೆ ಸೇರದಿದ್ದ ಕಾರಣ ನಮಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಮೊದಲ ಮೂರು ವರ್ಷ ನಮಗೆ ಕೂಟಗಳಾಗಲಿ, ಆಧ್ಯಾತ್ಮಿಕ ಆಹಾರವಾಗಲಿ ಇರಲಿಲ್ಲ. ಪತ್ರಗಳ ಮೂಲಕ ಕೆಲವು ಸಹೋದರಿಯರನ್ನು ನಾವು ಸಂಪರ್ಕಿಸಿದೆವು. ಆದರೆ ಅವರನ್ನೂ ಸೆರೆಹಿಡಿದು 25 ವರ್ಷ ಶ್ರಮಶಿಬಿರಕ್ಕೆ ಕಳುಹಿಸಲಾಯಿತು.

“ನಮಗೆ ವಿಧಿಸಿದ್ದ ಶಿಕ್ಷೆಯ ಅವಧಿ ಮುಗಿಯುವ ಮುಂಚೆಯೇ 1950ರಲ್ಲಿ ನಮ್ಮ ಬಿಡುಗಡೆ ಆಯಿತು. ನಾನು ಜೈಲಿನಲ್ಲಿದ್ದಾಗ ನನ್ನ ಅಮ್ಮ ಮತ್ತು ತಂಗಿ ಮರಿಯ ಯೆಹೋವನ ಸಾಕ್ಷಿಗಳಾದರು. ಅಣ್ಣಂದಿರು ಇನ್ನೂ ಸಾಕ್ಷಿಗಳಾಗಿರಲಿಲ್ಲ. ಆದರೆ ಬೈಬಲ್‌ ಕಲಿಯುತ್ತಿದ್ದರು. ನಾನು ಯಾವಾಗಲೂ ಸಾರುತ್ತಾ ಇರುತ್ತಿದ್ದದರಿಂದ ಸೋವಿಯಟ್‌ ಭದ್ರತಾ ಏಜೆನ್ಸಿಯವರು ಪುನಃ ನನ್ನನ್ನು ಜೈಲಿಗೆ ಹಾಕಬೇಕೆಂದಿದ್ದರು. ಹಾಗಾಗಿ ಸಾರುವ ಕೆಲಸದ ಉಸ್ತುವಾರಿ ವಹಿಸುತ್ತಿದ್ದ ಸಹೋದರರು ಇನ್ನು ಮುಂದೆ ನಾನು ಗುಪ್ತವಾಗಿ ಸಾಹಿತ್ಯ ತಯಾರಿಸುವ ಕೆಲಸದಲ್ಲಿ ಸಹಾಯ ಮಾಡಬೇಕೆಂದು ಹೇಳಿದರು. ನನಗಾಗ 24 ವರ್ಷ.”

ಸಾಹಿತ್ಯ ತಯಾರಿಸುವುದು

“‘ರಾಜ್ಯದ ಕೆಲಸಕ್ಕೆ ಭೂಮಿ ಮೇಲೆ ನಿಷೇಧ ಬಂದರೆ ಏನಂತೆ, ಅದನ್ನು ಭೂಮಿಯಡಿ ಇದ್ದು ಮಾಡುತ್ತೇವೆ’ ಎಂಬ ಮಾತು ಸಾಕ್ಷಿಗಳಲ್ಲಿ ತುಂಬ ಜನಪ್ರಿಯವಾಗಿತ್ತು. (ಜ್ಞಾನೋ. 28:28) ಈ ಸಮಯದಷ್ಟಕ್ಕೆ ನಮ್ಮ ಸಾಹಿತ್ಯದ ಹೆಚ್ಚಿನ ಮುದ್ರಣ ಕೆಲಸ ನೆಲದಡಿ ರಹಸ್ಯವಾಗಿ ಕೆಲವು ಕಡೆಗಳಲ್ಲಿ ನಡೆಯುತ್ತಿತ್ತು. ನನ್ನ ಅಣ್ಣ ಡಿಮಿಟ್ರಿಯವರ ಮನೆಯ ಅಡಿಯಲ್ಲಿದ್ದ ಒಂದು ನೆಲಗೂಡಿನಲ್ಲಿ ನನ್ನ ಮೊದಲ ‘ಕಛೇರಿ’ ಇತ್ತು. ಕೆಲವು ಸಲ ಹೆಚ್ಚು ಕಡಿಮೆ 2 ವಾರಗಳ ವರೆಗೆ ನಾನು ಅಲ್ಲಿಂದ ಹೊರಗೇ ಬರುತ್ತಿರಲಿಲ್ಲ. ಆಮ್ಲಜನಕ ಇಲ್ಲದೆ ಸೀಮೆಎಣ್ಣೆಯ ದೀಪ ಆರಿ ಹೋದರೆ, ಶುದ್ಧ ಗಾಳಿ ಪುನಃ ಕೋಣೆಯಲ್ಲೆಲ್ಲಾ ತುಂಬುವ ವರೆಗೆ ನಾನು ಅಲ್ಲೇ ಮಲಗಿ ಕಾಯುತ್ತಿದ್ದೆ.

ನಿಕೊಲೈ ತಾತ ಸಾಹಿತ್ಯದ ನಕಲು ಪ್ರತಿಗಳನ್ನು ತಯಾರಿಸುತ್ತಿದ್ದ ಮನೆಯ ರಹಸ್ಯವಾದ ನೆಲಗೂಡಿನ ರೇಖಾಚಿತ್ರ

“ನನ್ನ ಜೊತೆ ಕೆಲಸ ಮಾಡುತ್ತಿದ್ದ ಒಬ್ಬ ಸಹೋದರ ನನಗೆ ‘ನಿಕೊಲೈ ನಿನಗೆ ದೀಕ್ಷಾಸ್ನಾನ ಆಗಿದೆಯಾ?’ ಎಂದು ಕೇಳಿದರು. 11 ವರ್ಷಗಳಿಂದ ನಾನು ಯೆಹೋವನ ಸೇವೆ ಮಾಡುತ್ತಿದ್ದರೂ ನನಗೆ ದೀಕ್ಷಾಸ್ನಾನ ಆಗಿರಲಿಲ್ಲ. ಆದ್ದರಿಂದ ಅದೇ ರಾತ್ರಿ ಆ ಸಹೋದರರು ನನ್ನ ಜೊತೆ ಈ ವಿಷಯದ ಬಗ್ಗೆ ಚರ್ಚಿಸಿದರು ಮತ್ತು ಕೆರೆಯೊಂದರಲ್ಲಿ ನನ್ನ ದೀಕ್ಷಾಸ್ನಾನ ಆಯಿತು. ನನಗಾಗ 26 ವರ್ಷ. ಮೂರು ವರ್ಷಗಳಾದ ಮೇಲೆ ನನಗೆ ಹೆಚ್ಚಿನ ಜವಾಬ್ದಾರಿಗಳು ಬಂದವು. ನಾನು ಕಂಟ್ರಿ ಕಮಿಟಿಯ ಸದಸ್ಯನಾದೆ. ಆ ಸಮಯದಲ್ಲಿ, ಯಾರು ಜೈಲಿನ ಹೊರಗಿದ್ದರೊ ಅವರಿಗೆ ಸದ್ಯಕ್ಕೆ ಜೈಲಿನಲ್ಲಿದ್ದ ಸಹೋದರರ ಸ್ಥಾನವನ್ನು ಕೊಡಲಾಗುತ್ತಿತ್ತು. ಹೀಗೆ ರಾಜ್ಯದ ಕೆಲಸ ಮುಂದುವರಿಯಿತು.”

ನೆಲಗೂಡಲ್ಲಿ ಕೆಲಸ ಮಾಡುವಾಗ ಎದುರಾದ ತೊಂದರೆಗಳು

“ನೆಲದಡಿಯಲ್ಲಿ ಮುದ್ರಣ ಕೆಲಸ ಮಾಡುವುದು ಜೈಲು ವಾಸಕ್ಕಿಂತ ಕಷ್ಟವಾಗಿತ್ತು! ಗುಪ್ತ ಪೊಲೀಸ್‌ ದಳದ (ಕೆ.ಜಿ.ಬಿ) ಕಣ್ಣಿಗೆ ಬೀಳದಂತೆ ನಾನು ಜಾಗ್ರತೆ ವಹಿಸಬೇಕಿತ್ತು. ಇದರಿಂದಾಗಿ 7 ವರ್ಷಗಳ ವರೆಗೆ ನನಗೆ ಕೂಟಗಳಿಗೆ ಹೋಗಲಿಕ್ಕಾಗಲಿಲ್ಲ. ನನ್ನ ಆಧ್ಯಾತ್ಮಿಕತೆಯನ್ನು ನಾನೇ ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ನನ್ನ ಕುಟುಂಬದವರನ್ನು ಭೇಟಿಯಾಗುತ್ತಿದ್ದದ್ದು ಅವರನ್ನು ನೋಡಲು ಹೋದಾಗ ಮಾತ್ರ. ಅದೂ ಅಪರೂಪಕ್ಕೊಮ್ಮೆ. ಹಾಗಿದ್ದರೂ ಅವರೇನು ಬೇಜಾರು ಮಾಡಿಕೊಳ್ಳದೆ ನನ್ನ ಸನ್ನಿವೇಶವನ್ನು ಅರ್ಥ ಮಾಡಿಕೊಂಡು ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ಯಾವಾಗಲೂ ಒತ್ತಡ ಇರುತ್ತಿತ್ತು ಮತ್ತು ನಾನು ತುಂಬ ಜಾಗ್ರತೆ ವಹಿಸಬೇಕಿತ್ತು. ಇವೆಲ್ಲ ನನ್ನ ಶಕ್ತಿಯನ್ನು ಹೀರಿಬಿಡುತ್ತಿತ್ತು. ನಮಗೆ ಎಂಥ ಸನ್ನಿವೇಶ ಎದುರಾದರೂ ಅದಕ್ಕೆ ನಾವು ತಯಾರಿರಬೇಕಿತ್ತು. ಉದಾಹರಣೆಗೆ ಒಂದು ದಿನ ಸಾಯಂಕಾಲ ಇಬ್ಬರು ಪೊಲೀಸರು ನಾನಿದ್ದ ಮನೆಗೆ ಬಂದರು. ನಾನು ಮನೆಯ ಇನ್ನೊಂದು ಬದಿಯಲ್ಲಿದ್ದ ಕಿಟಕಿಯಿಂದ ಹಾರಿ ಕಾಡಿನೊಳಗೆ ಓಡಿ ಹೋದೆ. ಕಾಡು ದಾಟಿ ಗದ್ದೆಯೊಳಗೆ ಓಡುತ್ತಿದ್ದಾಗ ನನಗೆ ಸಿಳ್ಳು ಹೊಡೆಯುವ ಶಬ್ದ ಕೇಳಿಸಿತು. ಆದರೆ ಅದು ವಿಚಿತ್ರವಾಗಿತ್ತು. ಬಂದೂಕಿನ ಸದ್ದು ನನ್ನ ಕಿವಿಗೆ ಬಿದ್ದಾಗಲೇ ನನಗೆ ಗೊತ್ತಾಗಿದ್ದು ಆ ಶಬ್ದ ಬಂದೂಕಿನಿಂದ ಹೊರಡುತ್ತಿದ್ದ ಗುಂಡುಗಳದ್ದು ಎಂದು! ನನ್ನನ್ನು ಹಿಂದಟ್ಟಿಕೊಂಡು ಬಂದವರಲ್ಲಿ ಒಬ್ಬನು ಕುದುರೆ ಮೇಲೆ ಕೂತು ಗುಂಡುಗಳು ಖಾಲಿಯಾಗುವ ತನಕ ಬಿಡದೆ ನನ್ನ ಕಡೆಗೆ ಗುಂಡು ಹಾರಿಸಿದ. ಅವುಗಳಲ್ಲಿ ಒಂದು ಗುಂಡು ನನ್ನ ಕೈಗೆ ತಾಗಿತು. 5 ಕಿ.ಮೀ.ನಷ್ಟು ದೂರ ನನ್ನನ್ನು ಅಟ್ಟಿಸಿಕೊಂಡು ಬಂದರು. ನಂತರ ನಾನು ಕಾಡಿನೊಳಗೆ ಅಡಗಿ ಅವರಿಂದ ತಪ್ಪಿಸಿಕೊಂಡೆ. ನನ್ನ ಕಡೆಗೆ 32 ಗುಂಡುಗಳನ್ನು ಹಾರಿಸಲಾಗಿತ್ತು ಎಂದು ಮುಂದಕ್ಕೆ ನ್ಯಾಯಾಲಯದಲ್ಲಿ ನನ್ನ ವಿಚಾರಣೆ ನಡೆದಾಗ ಗೊತ್ತಾಯಿತು!

“ನಾನು ನೆಲದಡಿ ಇದ್ದುಕೊಂಡು ಕೆಲಸ ಮಾಡುತ್ತಿದ್ದೇನೆಂದು ನನ್ನನ್ನು ನೋಡಿಯೇ ಹೇಳಬಹುದಿತ್ತು. ಏಕೆಂದರೆ ನಾನು ಪೂರ್ತಿ ಬಿಳಿಚಿ ಹೋಗಿದ್ದೆ. ಹಾಗಾಗಿ ನನ್ನಿಂದ ಆಗುವಷ್ಟು ಹೆಚ್ಚು ಸಮಯ ಬಿಸಿಲಲ್ಲಿ ಇರುತ್ತಿದ್ದೆ. ನೆಲದಡಿಯ ಜೀವನ ನನ್ನ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಿತು. ಒಮ್ಮೆ ನನಗೆ ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವ ಆಗುತ್ತಿತ್ತು. ಇದರಿಂದಾಗಿ ನಾನು ಇತರ ಸಹೋದರರ ಜೊತೆ ಹಾಜರಾಗಬೇಕಿದ್ದ ಮುಖ್ಯವಾದ ಕೂಟಕ್ಕೂ ಹೋಗಲು ಆಗಲಿಲ್ಲ.”

ನಿಕೊಲೈ ತಾತನ ದಸ್ತಗಿರಿ

ಮೊರ್ಡ್‌ವಿನಿಯ ದೇಶದಲ್ಲಿನ ಶ್ರಮಶಿಬಿರದಲ್ಲಿ, 1963

“ಜನವರಿ 26, 1957ರಂದು ನನ್ನನ್ನು ದಸ್ತಗಿರಿ ಮಾಡಲಾಯಿತು. 6 ತಿಂಗಳ ನಂತರ ಯುಕ್ರೇನ್‍ನ ಸರ್ವೋಚ್ಛ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿತು. ಗುಂಡು ಹಾರಿಸುವ ದಳವು ನನ್ನನ್ನು ಕೊಲ್ಲಬೇಕೆಂಬ ನಿರ್ಣಯ ಮಾಡಲಾಗಿತ್ತು. ಆದರೆ ಯುಕ್ರೇನ್‌ ದೇಶದಲ್ಲಿ ಮರಣ ಶಿಕ್ಷೆಯನ್ನು ತೆಗೆದು ಹಾಕಲಾಗಿದ್ದರಿಂದ ನನಗೆ 25 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ನಮ್ಮಲ್ಲಿ 8 ಮಂದಿಗೆ ಶ್ರಮಶಿಬಿರಗಳಲ್ಲಿ ದುಡಿಯುವ ಶಿಕ್ಷೆ ವಿಧಿಸಲಾಯಿತು. ನಮ್ಮೆಲ್ಲರಿಗೂ ಸೇರಿ 130 ವರ್ಷ ಶಿಕ್ಷೆ ಸಿಕ್ಕಿತು. ಮೊರ್ಡ್‌ವಿನಿಯ ದೇಶದಲ್ಲಿದ್ದ ಶ್ರಮಶಿಬಿರಗಳಿಗೆ ನಮ್ಮನ್ನು ಕಳುಹಿಸಲಾಯಿತು. ಅಲ್ಲಿ ಸುಮಾರು 500 ಮಂದಿ ಸಾಕ್ಷಿಗಳಿದ್ದರು. ಯಾರಿಗೂ ಗೊತ್ತಾಗದ ಹಾಗೆ ನಾವು ಒಟ್ಟು ಸೇರಿ ಕಾವಲಿನಬುರುಜು ಅಧ್ಯಯನ ಮಾಡುತ್ತಿದ್ದೆವು. ನಮ್ಮ ಪತ್ರಿಕೆಗಳನ್ನು ಜಪ್ತಿ ಮಾಡಿ ಅವನ್ನು ಪರಿಶೀಲಿಸಿದ ನಂತರ ಸೆರೆಮನೆಯ ಒಬ್ಬ ಕಾವಲುಗಾರ ಹೀಗಂದ: ‘ನೀವಿದನ್ನು ಓದುತ್ತಾ ಇದ್ದರೆ ನಿಮ್ಮನ್ನು ಯಾರೂ ಬಗ್ಗಿಸಲು ಆಗುವುದಿಲ್ಲ!’ ನಾವು ಯಾವಾಗಲೂ ಇಡೀ ದಿನದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೆವು. ಅನೇಕ ಸಲ, ಕೊಡಲಾದ ಕೆಲಸಕ್ಕಿಂತ ಜಾಸ್ತಿಯೇ ಮಾಡುತ್ತಿದ್ದೆವು. ಹಾಗಿದ್ದರೂ ಶ್ರಮಶಿಬಿರದ ಕಮಾಂಡರ್‌ ಹೀಗೆ ತಲೆಚಚ್ಚಿಕೊಳ್ಳುತ್ತಿದ್ದ: ‘ನೀವಿಲ್ಲಿ ಮಾಡುವ ಕೆಲಸವೇನು ನಮಗೆ ಮುಖ್ಯವಲ್ಲ. ನಮಗೆ ಬೇಕಾಗಿರುವುದು ದೇಶಕ್ಕಾಗಿ ನಿಮ್ಮ ನಿಷ್ಠೆ ಮತ್ತು ಬೆಂಬಲ.’”

“ನಾವು ಯಾವಾಗಲೂ ಇಡೀ ದಿನದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೆವು. ಅನೇಕ ಸಲ, ಕೊಡಲಾದ ಕೆಲಸಕ್ಕಿಂತ ಜಾಸ್ತಿಯೇ ಮಾಡುತ್ತಿದ್ದೆವು”

ಎಂದೂ ಮಾಸದ ಸಮಗ್ರತೆ

ವಿಲಿಕಿಯ ಲುಕಿನಲ್ಲಿರುವ ರಾಜ್ಯ ಸಭಾಗೃಹ

1967ರಲ್ಲಿ ಶ್ರಮಶಿಬಿರದಿಂದ ಬಿಡುಗಡೆಯಾದ ಮೇಲೆ ನಿಕೊಲೈ ತಾತ ಎಸ್ಟೋನಿಯ ಮತ್ತು ರಷ್ಯದ ಸೆಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಸಭೆಗಳನ್ನು ಸಂಘಟಿಸುವುದರಲ್ಲಿ ಸಹಾಯ ಮಾಡಿದರು. 1957ರಲ್ಲಿ ಮಾಡಲಾದ ತೀರ್ಪನ್ನು 1991ರ ಆರಂಭದಲ್ಲಿ ರದ್ದುಗೊಳಿಸಲಾಯಿತು. ಏಕೆಂದರೆ ಅಪರಾಧ ಮಾಡಲಾಗಿದೆ ಎಂದು ಯಾವುದೇ ಪುರಾವೆ ಇರಲಿಲ್ಲ. ಅದೇ ಸಮಯದಲ್ಲಿ ಯಾರೊಂದಿಗೆ ಅಧಿಕಾರಿಗಳು ಕ್ರೂರವಾಗಿ ನಡಕೊಂಡಿದ್ದರೊ ಆ ಸಾಕ್ಷಿಗಳನ್ನು ಸಹ ಬಿಡುಗಡೆ ಮಾಡಲಾಯಿತು. 1996ರಲ್ಲಿ ನಿಕೊಲೈ ತಾತ ಪ್ಸಕೊಫ್‌ ಒಬ್ಲಾಸ್ಟ್‌ನಲ್ಲಿರುವ ವಿಲಿಕಿಯ ಲುಕಿ ಎಂಬ ನಗರಕ್ಕೆ ಸ್ಥಳಾಂತರಿಸಿದರು. ಇದು ಸೆಂಟ್‌ ಪೀಟರ್ಸ್‌ಬರ್ಗ್‌ನಿಂದ 500 ಕಿ.ಮೀ. ದೂರದಲ್ಲಿದೆ. ಅಲ್ಲಿ ಅವರೊಂದು ಚಿಕ್ಕ ಮನೆಯನ್ನು ಖರೀದಿಸಿದರು. 2003ರಲ್ಲಿ ಅದೇ ಜಾಗದಲ್ಲಿ ರಾಜ್ಯ ಸಭಾಗೃಹವನ್ನೂ ಕಟ್ಟಿಸಲಾಯಿತು. ಇಂದು ಅಲ್ಲಿ ಚೆನ್ನಾಗಿ ಅಭಿವೃದ್ಧಿಯಾಗುತ್ತಿರುವ 2 ಸಭೆಗಳು ಸೇರಿಬರುತ್ತವೆ.

ನಾನು ಮತ್ತು ನನ್ನ ಗಂಡ ರಷ್ಯದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಸೇವೆ ಮಾಡುತ್ತಿದ್ದೇವೆ. ನಿಕೊಲೈ ತಾತ ಸಾಯುವುದಕ್ಕೆ ಸ್ವಲ್ಪ ತಿಂಗಳು ಮುಂಚೆ ಮಾರ್ಚ್ 2011ರಲ್ಲಿ ನಮ್ಮನ್ನು ಕೊನೇ ಬಾರಿ ಭೇಟಿಯಾದರು. “ಈಗಿನ ಸನ್ನಿವೇಶಗಳನ್ನು ನೋಡುವಾಗ ಒಂದರ್ಥದಲ್ಲಿ ಏಳನೆಯ ದಿನದಂದು ಯೆರಿಕೋವನ್ನು ಸುತ್ತುವ ಸಮಯ ಶುರುವಾಗಿದೆ ಎಂದು ನನಗೆ ತೋರುತ್ತದೆ” ಎಂದು ಅವರು ಹೇಳಿದಾಗ ಅವರ ಕಣ್ಣುಗಳಲ್ಲಿ ಒಂದು ರೀತಿಯ ಹೊಳಪಿತ್ತು. (ಯೆಹೋ. 6:15) ಅವರಾಡಿದ ಆ ಮಾತುಗಳು ನಮ್ಮ ಮನಸ್ಪರ್ಶಿಸಿದವು. ನಿಕೊಲೈ ತಾತ ಕೊನೆಯುಸಿರೆಳೆಯುವಾಗ ಅವರಿಗೆ 85 ವರ್ಷ. ಕಷ್ಟಗಳಿದ್ದರೂ ಅವರ ಜೀವನದ ಬಗ್ಗೆ ಹೀಗಂದರು: “ಯುವ ಪ್ರಾಯದಲ್ಲಿ ಯೆಹೋವನ ಸೇವೆ ಮಾಡಲು ನಾನು ತೀರ್ಮಾನ ಮಾಡಿದ್ದಕ್ಕೆ ತುಂಬ ಸಂತೋಷಪಡುತ್ತೇನೆ. ಯಾವತ್ತೂ ಅದರ ಬಗ್ಗೆ ನನಗೆ ವಿಷಾದವಿಲ್ಲ.”