ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಪ್ತಾಹನ ಮಗಳಂತೆ ಆಗಲು ಬಯಸಿದೆ

ಯೆಪ್ತಾಹನ ಮಗಳಂತೆ ಆಗಲು ಬಯಸಿದೆ

ಯೆಪ್ತಾಹನ ಮಗಳಂತೆ ಆಗಲು ಬಯಸಿದೆ

ಜೊಯಾನ ಸೋನ್ಸ್‌ ಅವರು ಹೇಳಿದಂತೆ

ನಾನಿನ್ನೂ ಹದಿವಯಸ್ಸಿನವಳಾಗಿದ್ದಾಗ ನನ್ನಲ್ಲೊಂದು ಆಸೆ ಚಿಗುರಿತು. ನಾನು ಯೆಪ್ತಾಹನ ಮಗಳಂತೆ ಆಗಬೇಕೆಂದು. ಬಹುಮಟ್ಟಿಗೆ ಅವಳಂತೆಯೇ ಆದೆ. ಅದು ಹೇಗೆಂದು ವಿವರಿಸಲೇ?

ಇಸವಿ 1956. ಆ ವರ್ಷ ಮುಂಬೈಯಲ್ಲಿ ಯೆಹೋವನ ಸಾಕ್ಷಿಗಳ ಒಂದು ಅಧಿವೇಶನವಿತ್ತು. ಅದು ನಾನು ಹಾಜರಾದ ಮೊತ್ತಮೊದಲ ಸಮ್ಮೇಳನವಾಗಿತ್ತು. ಯೆಪ್ತಾಹನ ಮಗಳ ಬಗ್ಗೆ ಒಂದು ಭಾಷಣವನ್ನು ಕೇಳಿದ್ದು ಅಲ್ಲಿಯೇ. ಅದು ನನಗೆ ಸ್ಫೂರ್ತಿಯ ಸೆಲೆಯಾಯಿತು. ನನ್ನ ಬದುಕನ್ನೇ ಬದಲಾಯಿಸಿತು.

ನೀವು ಬೈಬಲಿನಲ್ಲಿ ಯೆಪ್ತಾಹನ ಮಗಳ ಬಗ್ಗೆ ಓದಿರಬಹುದು. ಬಹುಶಃ ಹದಿವಯಸ್ಸಿನವಳಾಗಿದ್ದ ಆಕೆ ತನ್ನ ತಂದೆಯ ಹರಕೆಯನ್ನು ಪೂರೈಸಲಿಕ್ಕೆಂದು ವಿವಾಹ ಆಗದಿರಲು ನಿರ್ಣಯಿಸಿದಳು. ಆಕೆ ಅವಿವಾಹಿತಳಾಗಿ ಯೆಹೋವ ದೇವರ ಗುಡಾರ ಅಥವಾ ಆರಾಧನಾ ಮಂದಿರದಲ್ಲಿ ಜೀವನಪೂರ್ತಿ ಸೇವೆಸಲ್ಲಿಸಿದಳು.—ನ್ಯಾಯಸ್ಥಾಪಕರು 11:28-40.

ಅವಳ ಹಾಗೇ ಆಗಲು ನನ್ನ ಮನಸ್ಸು ತುಂಬ ತುಡಿಯುತ್ತಿತ್ತು! ಆದರೆ ನನ್ನ ಮುಂದೆ ಬೆಟ್ಟದಂಥ ಸಮಸ್ಯೆಯೊಂದಿತ್ತು. ಆ ಕಾಲದಲ್ಲೆಲ್ಲ ಮದುವೆಯಾಗದೆ ಇರುವುದು ಭಾರತೀಯ ಸಂಸ್ಕೃತಿಗೆ ವ್ಯತಿರಿಕ್ತವಾಗಿತ್ತು.

ಕೌಟುಂಬಿಕ ಹಿನ್ನೆಲೆ

ನಾನು ಹುಟ್ಟಿದ್ದು ಕರ್ನಾಟಕದ ಕರಾವಳಿ ಪ್ರದೇಶವಾದ ಉಡುಪಿಯಲ್ಲಿ. ನನ್ನ ತಂದೆ ಬೆಂಜಮಿನ್‌ ಸೋನ್ಸ್‌. ತಾಯಿ ಮಾರ್ಸಲೀನಾ. ಆರು ಮಂದಿ ಮಕ್ಕಳಲ್ಲಿ ನಾನು ಐದನೆಯವಳು. ನಮ್ಮ ಮಾತೃಭಾಷೆ ತುಳು. ಸುಮಾರು 20 ಲಕ್ಷ ಜನರಾಡುವ ಭಾಷೆ ಅದು. ಆದರೆ ಉಡುಪಿಯಲ್ಲಿದ್ದ ಹೆಚ್ಚಿನವರಂತೆ ನಮ್ಮೆಲ್ಲರ ವಿದ್ಯಾಭ್ಯಾಸ ಕನ್ನಡದಲ್ಲಿ ನಡೆಯಿತು.

ಮದುವೆಯಾಗುವುದು, ಮಕ್ಕಳನ್ನು ಹಡೆಯುವುದು ನಮ್ಮ ಸಮಾಜದಲ್ಲಿ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು. ಎಷ್ಟರ ಮಟ್ಟಿಗೆಂದರೆ ತುಳು ಭಾಷೆಯಲ್ಲಿ “ಅವಿವಾಹಿತ ಸ್ಥಿತಿ,” “ಒಂಟಿತನ,” “ಮನೆ ನೆನಪು” ಇಂಥ ಪದಗಳನ್ನು ನಾನು ಕೇಳಿರಲೇ ಇಲ್ಲ. ಹೀಗೂ ಇರುತ್ತದೆಂದು ಯಾರಿಗೂ ತಿಳಿದಿರಲಿಲ್ಲವೇನೊ! ನಮ್ಮ ಕುಟುಂಬವನ್ನೇ ತೆಗೆದುಕೊಳ್ಳಿ. ಅಜ್ಜಅಜ್ಜಿ, ಅತ್ತೆಮಾವ, ದೊಡ್ಡಮ್ಮ, ಚಿಕ್ಕಮ್ಮ, ಅವರ ಮಕ್ಕಳು ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದೆವು!

ಸಾಮಾನ್ಯವಾಗಿ ತುಳುವರಲ್ಲಿ ಮಾತೃಪ್ರಧಾನ ಪದ್ಧತಿ ಇದೆ. ಕುಟುಂಬಗಳನ್ನು ಸ್ತ್ರೀ ಮೂಲದಿಂದ ಗುರುತಿಸುವ ಪರಿಪಾಠವಿದೆ. ಆಸ್ತಿಯಲ್ಲಿ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿಗೇ ದೊಡ್ಡ ಪಾಲು. ಕೆಲವೊಂದು ತುಳು ಸಮುದಾಯಗಳಲ್ಲಿ ಹೆಣ್ಣು ಮದುವೆಯಾದ ನಂತರ ತಾಯಿಮನೆಯಲ್ಲೇ ಇರುತ್ತಾಳೆ. ಆಕೆಯ ಗಂಡ ಅಲ್ಲಿ ಬಂದು ವಾಸಮಾಡುತ್ತಾನೆ.

ನಮ್ಮದು ಕ್ರಿಶ್ಚಿಯನ್‌ ಕುಟುಂಬ. ಚರ್ಚಿಗೆ ಹೋಗುತ್ತಿದ್ದೆವು. ಹಾಗಾಗಿ ಪ್ರತಿದಿನ ಸಂಜೆ ನನ್ನ ಅಜ್ಜಯ್ಯ ಎಲ್ಲರನ್ನೂ ಕೂರಿಸಿ ಪ್ರಾರ್ಥನೆ ಮಾಡುತ್ತಿದ್ದರು. ತುಳು ಬೈಬಲನ್ನು ಗಟ್ಟಿಯಾಗಿ ಓದುತ್ತಿದ್ದರು. ಹರಕುಮುರುಕಾಗಿದ್ದ ಅವರ ಬೈಬಲನ್ನು ತೆರೆದು ಓದುತ್ತಿದ್ದಾಗ, ರತ್ನಾಭರಣಗಳ ಪೆಟ್ಟಿಗೆ ತೆರೆದು ರತ್ನಗಳನ್ನು ಹಂಚುತ್ತಿದ್ದಂತೆ ಅನಿಸುತ್ತಿತ್ತು. ನಾವು ಸಂಭ್ರಮದಿಂದ ಹಿಗ್ಗುತ್ತಿದ್ದೆವು! ಅದರಲ್ಲೂ ಕೀರ್ತನೆ 23:1ರ “ಯೆಹೋವನು ನನಗೆ ಕುರುಬನು; ಕೊರತೆಪಡೆನು” (“ಯೆಹೋವೇ ಎನನ್‌ ಮೇಪುನಾಯೇ. ಎಂಕು ಕುಂದೆಲ್‌ ಉಪ್ಪಂದ್‌”) ಎಂಬ ಮಾತುಗಳು ನನ್ನ ಕುತೂಹಲ ಕೆರಳಿಸುತ್ತಿದ್ದವು. ‘ಇಲ್ಲಿ ತಿಳಿಸುವ ಯೆಹೋವನು ಯಾರು? ಆತನನ್ನು ಕುರುಬ ಅಂತ ಯಾಕೆ ಕರೆಯಲಾಗಿದೆ?’ ಎಂದು ಯೋಚಿಸುತ್ತಿದ್ದೆ.

ನನ್ನ ಕಣ್ಣುಗಳು ತೆರೆದವು

ಎರಡನೇ ಮಹಾಯುದ್ಧ ತಂದ ಆರ್ಥಿಕ ಕಷ್ಟಗಳಿಂದಾಗಿ ನಮ್ಮ ಕುಟುಂಬ ಉಡುಪಿಯಿಂದ ಮುಂಬೈಗೆ ಸ್ಥಳಾಂತರಿಸಿತು. ಅಲ್ಲಿ 1945ರಲ್ಲಿ ಇಬ್ಬರು ಯೆಹೋವನ ಸಾಕ್ಷಿಗಳು ನಮ್ಮ ಮನೆಗೆ ಬಂದು ತಂದೆಗೆ ಬೈಬಲಿನ ಕುರಿತ ಒಂದು ಕಿರುಪುಸ್ತಕ ಕೊಟ್ಟರು. ಮಳೆಹನಿಯನ್ನು ಒಣನೆಲ ತಕ್ಷಣ ಹೀರಿಬಿಡುವಂತೆ ಆ ಕಿರುಪುಸ್ತಕದಲ್ಲಿನ ಸಂದೇಶವನ್ನು ಅಪ್ಪ ಹೀರಿಬಿಟ್ಟರು. ಆ ಸಂದೇಶವನ್ನು ಅಲ್ಲಿದ್ದ ಕನ್ನಡಿಗರಿಗೆ ತಿಳಿಸಿದರು. ಹೀಗೆ ಮುಂಬೈಯಲ್ಲಿ ಒಂದು ಚಿಕ್ಕ ಅಧ್ಯಯನ ಗುಂಪು ಆರಂಭಗೊಂಡಿತು. ಇದು ಬೆಳೆದು 1950ರ ದಶಕದಷ್ಟಕ್ಕೆ ಪ್ರಥಮ ಕನ್ನಡ ಸಭೆಯಾಯಿತು.

ಮಕ್ಕಳಾದ ನಾವು ಬೈಬಲಿನ ಒಳ್ಳೇ ವಿದ್ಯಾರ್ಥಿಗಳೂ ಒಳ್ಳೇ ಬೋಧಕರೂ ಆಗುವ ನಿಟ್ಟಿನಲ್ಲಿ ಅಪ್ಪಅಮ್ಮ ತರಬೇತಿಕೊಟ್ಟರು. ಪ್ರತಿದಿನ ನಮ್ಮ ಜೊತೆ ಪ್ರಾರ್ಥನೆ, ಅಧ್ಯಯನ ಮಾಡಲು ಸಮಯ ಮಾಡಿಕೊಳ್ಳುತ್ತಿದ್ದರು. (ಧರ್ಮೋಪದೇಶಕಾಂಡ 6:6, 7; 2 ತಿಮೊಥೆಯ 3:14-16) ಒಂದು ದಿನ ನಾನು ಬೈಬಲ್‌ ಓದುತ್ತಿದ್ದಾಗ ನನ್ನ ಕಣ್ಣುಗಳು ತೆರೆದವು. ಯೆಹೋವನನ್ನು ಒಬ್ಬ ಕುರುಬನಿಗೆ ಯಾಕೆ ಹೋಲಿಸಲಾಗಿದೆ ಎಂದು ಗೊತ್ತಾಯಿತು. ಯಾಕೆಂದರೆ ಆತನು ತನ್ನ ಆರಾಧಕರನ್ನು ಮಾರ್ಗದರ್ಶಿಸಿ, ಪೋಷಿಸಿ, ಸಂರಕ್ಷಿಸುತ್ತಾನೆ.—ಕೀರ್ತನೆ 23:1-6; 83:18.

ಯೆಹೋವನು ನನ್ನ ಕೈಹಿಡಿದು ನಡೆಸಿದನು

1956ರಲ್ಲಿ ಮುಂಬೈಯಲ್ಲಿ ನಡೆದ ಆ ಅವಿಸ್ಮರಣೀಯ ಅಧಿವೇಶನದ ಸ್ವಲ್ಪ ಸಮಯದಲ್ಲೇ ದೀಕ್ಷಾಸ್ನಾನ ಪಡೆದೆ. ಆರು ತಿಂಗಳ ಬಳಿಕ ಪೂರ್ಣ ಸಮಯ ದೇವರ ಸೇವೆ ಮಾಡಲಾರಂಭಿಸಿದೆ. ಹೀಗೆ ನನ್ನ ಅಣ್ಣ ಪ್ರಭಾಕರನ ಮಾದರಿ ಅನುಸರಿಸಿದೆ. ಇತರರಿಗೆ ಬೈಬಲ್‌ ಸತ್ಯಗಳನ್ನು ತಿಳಿಸಲು ನನಗೆ ತುಂಬ ಮನಸ್ಸಿದ್ದರೂ ಮಾತಾಡಲು ಬಾಯಿ ತೆರೆದ ಕೂಡಲೇ ನನ್ನ ಗಂಟಲು ಆರಿಹೋಗುತ್ತಿತ್ತು, ತೊದಲುತ್ತಿದ್ದೆ, ಧ್ವನಿ ನಡುಗುತ್ತಿತ್ತು! ಒಳಗೊಳಗೇ ದುಃಖವಾಗುತ್ತಿತ್ತು. ಯೆಹೋವನ ಸಹಾಯ ಇಲ್ಲದೆ ಈ ಕೆಲಸ ಮಾಡಲಾರೆ ಎಂದು ಹೇಳಿಕೊಳ್ಳುತ್ತಿದ್ದೆ.

ಯೆಹೋವನ ಸಹಾಯ ನನಗೆ ಸಿಕ್ಕಿತು. ಕೆನಡದಿಂದ ಬಂದ ಹೋಮರ್‌ ಮತ್ತು ರೂತ್‌ ಮಕೇ ಎಂಬ ದಂಪತಿಯ ಮೂಲಕ. ಇವರು 1947ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಮಿಷನೆರಿ ಸ್ಕೂಲ್‌ಗೆ ಹಾಜರಾಗಿದ್ದರು. ಸಾರುವ ಕೆಲಸದಲ್ಲಿ ನಾನು ಒಡ್ಡೊಡ್ಡಾಗಿ ಮೊದಲ ಹೆಜ್ಜೆಗಳನ್ನಿಟ್ಟಾಗ ಇವರು ನನ್ನ ಕೈಹಿಡಿದು ನಡೆಸಿದರು. ರೂತ್‌ ನನ್ನೊಟ್ಟಿಗೆ ಪತ್ರಿಕೆಗಳ ನಿರೂಪಣೆಗಳನ್ನು ಅಭ್ಯಾಸಮಾಡುತ್ತಿದ್ದರು. ನನ್ನ ಹೆದರಿಕೆಯನ್ನು ಓಡಿಸುವುದು ಹೇಗೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಥರಥರ ನಡುಗುತ್ತಿದ್ದ ನನ್ನ ಕೈಗಳನ್ನು ಹಿಡಿದು, “ಚಿಂತೆ ಮಾಡಬೇಡಮ್ಮ, ಮುಂದಿನ ಮನೆಯಲ್ಲಿ ಮತ್ತೆ ಪ್ರಯತ್ನ ಮಾಡೋಣ” ಅನ್ನುತ್ತಿದ್ದರು. ಅವರ ಈ ಮಾತುಗಳು ನನ್ನಲ್ಲಿ ಭರವಸೆ ತುಂಬಿಸಿದವು, ಧೈರ್ಯ ಕೊಟ್ಟವು.

ಸಾರುವ ಕೆಲಸದಲ್ಲಿ ನನ್ನ ಜೊತೆಗಾರ್ತಿಯಾಗಿರಲು ಎಲೀಸಬೆತ್‌ ಚಕ್ರನಾರಾಯಣ್‌ ಎಂಬವರನ್ನು ನೇಮಿಸಲಾಯಿತು. ವಯಸ್ಸಿನಲ್ಲಿ ಅವರು ನನಗಿಂತ ತುಂಬ ದೊಡ್ಡವರು. ಅನುಭವೀ ಬೈಬಲ್‌ ಬೋಧಕಿ. ಅದನ್ನು ತಿಳಿದಾಕ್ಷಣ ‘ಈ ಸಹೋದರಿ ನನಗಿಂತ ತುಂಬ ದೊಡ್ಡವರು! ಅವರ ಜತೆ ಹೊಂದಿಕೊಂಡು ಹೋಗುವುದು ಹೇಗಪ್ಪಾ?’ ಎಂದನಿಸಿತು. ಆದರೆ ಅವರೇ ನನಗೆ ತಕ್ಕ ಜೊತೆಗಾರ್ತಿಯೆಂದು ಸಮಯಾನಂತರ ಮನವರಿಕೆ ಆಯಿತು.

“ನಾವೆಂದೂ ಒಬ್ಬಂಟಿಗರಲ್ಲ”

ನಮ್ಮನ್ನು ಮೊದಲು ಮುಂಬೈ ನಗರದಿಂದ ಸುಮಾರು 400 ಕಿ.ಮೀ. ದೂರದ ಔರಂಗಬಾದ್‌ ಎಂಬ ಐತಿಹಾಸಿಕ ನಗರಕ್ಕೆ ನೇಮಿಸಲಾಯಿತು. 10 ಲಕ್ಷದಷ್ಟು ಜನರಿದ್ದ ಆ ನಗರದಲ್ಲಿ ಯೆಹೋವನ ಸಾಕ್ಷಿಗಳೆಂದರೆ ಬರೇ ನಾವಿಬ್ಬರು! ಅಲ್ಲದೆ ಆ ನಗರದ ಮುಖ್ಯ ಭಾಷೆಯಾದ ಮರಾಠಿಯನ್ನು ನಾನು ಕಲಿಯಬೇಕಾಗಿತ್ತು. ಇದು ನನ್ನ ಮುಂದಿದ್ದ ಇನ್ನೊಂದು ಸವಾಲಾಗಿತ್ತು.

ಒಮ್ಮೊಮ್ಮೆ ನನ್ನನ್ನು ಒಂಟಿಭಾವನೆ ಮುತ್ತಿಕ್ಕುತ್ತಿತ್ತು. ತಾಯಿಯಿಲ್ಲದ ತಬ್ಬಲಿ ಹಾಗೆ ಅಳುತ್ತಿದ್ದೆ. ಆವಾಗೆಲ್ಲ ಎಲೀಸಬೆತರು ತಾಯಿಯಂತೆ ಸಮಾಧಾನ ಮಾಡುತ್ತಿದ್ದರು. “ಒಮ್ಮೊಮ್ಮೆ ನಾವು ಒಂಟಿಯಾಗಿದ್ದೇವೆಂದು ಅನಿಸಬಹುದು. ಆದರೆ ನಿಜವಾಗಿ ನಾವೆಂದೂ ಒಬ್ಬಂಟಿಗರಲ್ಲ. ಸ್ನೇಹಿತರು, ಕುಟುಂಬ ನಿನ್ನಿಂದ ದೂರವಿದ್ದರೂ ಯೆಹೋವನು ಯಾವಾಗಲೂ ನಿನ್ನ ಜೊತೆ ಇರುತ್ತಾನೆ. ಆತನನ್ನೇ ನಿನ್ನ ಸ್ನೇಹಿತನಾಗಿ ಮಾಡಿಕೊ. ಆಗ ನಿನ್ನ ಒಂಟಿತನ ಹೇಗೆ ಹಾರಿಹೋಗುತ್ತದೆ ನೋಡುವಿಯಂತೆ” ಎನ್ನುತ್ತಿದ್ದರು ಅವರು. ಅವರ ಆ ಬುದ್ಧಿವಾದವನ್ನು ಇವತ್ತಿನ ವರೆಗೂ ಹೃದಯದಲ್ಲಿ ಭದ್ರವಾಗಿಟ್ಟಿದ್ದೇನೆ.

ಪ್ರಯಾಣಕ್ಕೆ ನಮ್ಮ ಕೈಯಲ್ಲಿ ಹಣ ಇಲ್ಲದಿದ್ದಾಗ ದಿನಾಲೂ ಸುಮಾರು 20 ಕಿ.ಮೀ. ವರೆಗೆ ಬಿಸಿಲು-ಚಳಿ, ಧೂಳು-ಕೆಸರು ಎನ್ನದೆ ಸೇವೆಗೆ ನಡೆದುಕೊಂಡೇ ಹೋಗುತ್ತಿದ್ದೆವು. ಹೆಚ್ಚಾಗಿ ಬೇಸಗೆಕಾಲದಲ್ಲಿ ತಾಪಮಾನ 40° ಆಗಿರುತ್ತಿತ್ತು. ಮಳೆಗಾಲದಲ್ಲಿ ಸೇವಾ ಕ್ಷೇತ್ರದ ಕೆಲವು ಸ್ಥಳಗಳು ಹಲವು ತಿಂಗಳುಗಳ ವರೆಗೆ ಕೆಸರುಕೆಸರಾಗಿ ಇರುತ್ತಿದ್ದವು. ಇಂಥ ಹವಾಮಾನವನ್ನು ಹೇಗೂ ಸಹಿಸಿಕೊಂಡೆವು. ಆದರೆ ಜನರ ಆಚಾರ-ವಿಚಾರಗಳನ್ನು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟವೆನಿಸಿತು.

ಉದಾಹರಣೆಗೆ, ಸ್ತ್ರೀಯರು ಸಾರ್ವಜನಿಕ ಸ್ಥಳಗಳಲ್ಲಿ ಗಂಡಸರೊಂದಿಗೆ ಮಾತಾಡುವಂತಿರಲಿಲ್ಲ. ಸಂಬಂಧಿಕರಾಗಿದ್ದರೆ ಮಾತ್ರ ಮಾತಾಡುತ್ತಿದ್ದರು. ಸ್ತ್ರೀಯರು ಗಂಡಸರಿಗೆ ಬೋಧಿಸುತ್ತಿದ್ದದ್ದೇ ವಿರಳ. ಹಾಗಾಗಿ ಜನರು ನಮ್ಮನ್ನು ಅಪಹಾಸ್ಯಮಾಡುತ್ತಿದ್ದರು, ನಿಂದಿಸುತ್ತಿದ್ದರು. ಆರು ತಿಂಗಳ ವರೆಗೆ ಸಾಪ್ತಾಹಿಕ ಬೈಬಲ್‌ ಕೂಟಗಳಲ್ಲಿ ಹಾಜರಿದ್ದದ್ದು ನಾವಿಬ್ಬರೇ. ಸಮಯ ಸಂದಂತೆ ಆಸಕ್ತ ಜನರು ಬರತೊಡಗಿದರು. ಒಂದು ಚಿಕ್ಕ ಗುಂಪು ರೂಪುಗೊಂಡಿತು. ಕೆಲವರು ನಮ್ಮೊಟ್ಟಿಗೆ ಸಾರುವ ಕೆಲಸಕ್ಕೂ ಬರಲಾರಂಭಿಸಿದರು.

“ನಿನ್ನ ಕೌಶಲವನ್ನು ಉತ್ತಮಗೊಳಿಸುತ್ತಾ ಇರು”

ಸುಮಾರು ಎರಡೂವರೆ ವರ್ಷಗಳ ಬಳಿಕ ವಾಪಸ್‌ ಮುಂಬೈಗೆ ನೇಮಕಾತಿ ಪಡೆದೆವು. ಎಲೀಸಬೆತ್‌ ಪೂರ್ಣ ಸಮಯ ಸಾರುವ ಕೆಲಸ ಮುಂದುವರಿಸಿದರು. ಆದರೆ ನನಗೆ ಬೈಬಲ್‌ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸದಲ್ಲಿ ನನ್ನ ತಂದೆಯವರಿಗೆ ನೆರವಾಗುವಂತೆ ಹೇಳಲಾಯಿತು. ಏಕೆಂದರೆ ಅವರೊಬ್ಬರೇ ಆ ಕೆಲಸ ಮಾಡುತ್ತಿದ್ದರು. ಅವರಿಗೆ ಸಭೆಯಲ್ಲೂ ತುಂಬ ಜವಾಬ್ದಾರಿಗಳಿದ್ದುದರಿಂದ ತರ್ಜುಮೆ ಕೆಲಸದಲ್ಲಿ ನಾನು ಕೊಟ್ಟ ಸಹಾಯ ಅವರ ಭಾರವನ್ನು ಹಗುರಗೊಳಿಸಿತು.

1966ರಲ್ಲಿ ನನ್ನ ಹೆತ್ತವರು ನಮ್ಮ ಊರಾದ ಉಡುಪಿಗೆ ವಾಪಸ್‌ ಹೋದರು. ಮುಂಬೈಯಿಂದ ಹೊರಡುವ ಮುಂಚೆ ತಂದೆ ನನಗೆ ಹೇಳಿದ್ದು: “ನಿನ್ನ ಕೌಶಲವನ್ನು ಉತ್ತಮಗೊಳಿಸುತ್ತಾ ಇರು ಮಗಳೇ. ಸರಳವಾಗಿ, ಸ್ಪಷ್ಟವಾಗಿ ತರ್ಜುಮೆ ಮಾಡು. ಅತಿಯಾದ ಆತ್ಮವಿಶ್ವಾಸ ಬೇಡ. ನಮ್ರಳಾಗಿರು. ಯೆಹೋವನ ಮೇಲೆ ಭರವಸೆಯಿಡು.” (“ನಿಕ್ಕ್‌ ಉಪ್ಪುನ ಬುದ್ಧಿವಂತಿಗೆನ್‌ ಪರ್ತೆ ಮಲ್ಪೊಂದು ಉಪ್ಪುಲ ಮಗಾ. ಸುಲಭ ರೀತಿಡ್‌ ಸರಿಯಾದ್‌ ತರ್ಜಿಮೆ ಮಲ್ಪುಲ. ಮಲ್ಲಾದಿಗೆನ್‌ ಬುಡುದು ದೀನತೆಡ್‌ ಉಪ್ಪುಲ. ಯೆಹೋವನ ಮಿತ್ತೇ ಭರವಸ ದೀಲ.”) ಈ ಮಾತುಗಳು ಅವರು ನನಗೆ ಕೊಟ್ಟ ಕೊನೆಯ ಬುದ್ಧಿಮಾತುಗಳು. ಉಡುಪಿಗೆ ಹೋದ ಸ್ವಲ್ಪದರಲ್ಲೇ ಅವರು ತೀರಿಹೋದರು. ನಾನೀಗಲೂ ತರ್ಜುಮೆ ಕೆಲಸದಲ್ಲಿ ಅವರ ಆ ಬುದ್ಧಿಮಾತನ್ನು ಪಾಲಿಸಲು ಪ್ರಯತ್ನಿಸುತ್ತಿದ್ದೇನೆ.

“ನಿನಗೊಂದು ಆಸರೆ ಬೇಡ್ವಾ?”

ಮಕ್ಕಳನ್ನು ಬೇಗ ಮದುವೆಮಾಡಿಸಿ ಬಿಡುವುದು ಭಾರತೀಯ ಹೆತ್ತವರ ಸಂಪ್ರದಾಯ. ಮೊಮ್ಮಕ್ಕಳನ್ನು ನೋಡುವ ಆಸೆ ಅವರಿಗೆ. ಆದ್ದರಿಂದ ನಾನೂ ಮದುವೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಎಲ್ಲರೂ, “ನಿನಗೊಂದು ಆಸರೆ ಬೇಡ್ವಾ? ವಯಸ್ಸಾದಾಗ ನಿನ್ನನ್ನು ಯಾರು ನೋಡಿಕೊಳ್ತಾರೆ? ಒಂಟಿಯಾಗಿ ಹೇಗೆ ಜೀವಿಸಬಲ್ಲೆ?” ಎಂದು ನನ್ನನ್ನು ಕೇಳುತ್ತಿದ್ದರು.

ಒಮ್ಮೊಮ್ಮೆ ಇಂಥ ಮಾತು ಕೇಳಿ ಉಸಿರುಗಟ್ಟಿದಂತಾಗುತ್ತಿತ್ತು. ಬೇರೆಯವರ ಕಣ್ಮುಂದೆ ನನ್ನ ಭಾವನೆಗಳನ್ನು ಬಚ್ಚಿಡುತ್ತಿದ್ದೆ. ಆದರೆ ಯಾರೂ ಇಲ್ಲದಿದ್ದಾಗ ಯೆಹೋವನ ಮುಂದೆ ನನ್ನ ಹೃದಯ ಬಿಚ್ಚಿಡುತ್ತಿದ್ದೆ. ಅವಿವಾಹಿತೆ ಎಂಬ ಕಾರಣಕ್ಕೆ ಯೆಹೋವನು ನನ್ನನ್ನು ನ್ಯೂನತೆ ಉಳ್ಳವಳಾಗಿ ನೋಡುವುದಿಲ್ಲ ಎಂಬ ಸಂಗತಿ ನನ್ನ ಹೃದಯಕ್ಕೆ ತಂಪೆರೆಯುತ್ತಿತ್ತು. ವಿವಾಹವಾಗದೇ ದೇವರ ಕೆಲಸಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಯೆಪ್ತಾಹನ ಮಗಳು ಹಾಗೂ ಯೇಸುವಿನ ಬಗ್ಗೆ ಆಲೋಚಿಸುತ್ತಿದ್ದೆ. ಅಪಕರ್ಷಣೆಯಿಲ್ಲದೆ ದೇವರ ಸೇವೆಮಾಡುವ ನನ್ನ ಸಂಕಲ್ಪವನ್ನು ಈ ರೀತಿ ಗಟ್ಟಿಮಾಡುತ್ತಿದ್ದೆ.—ಯೋಹಾನ 4:34.

ಯೆಹೋವನು ಕೊಟ್ಟ ವರದಾನ

ಎಲೀಸಬೆತರೊಂದಿಗಿನ ನನ್ನ ಆಪ್ತ ಸ್ನೇಹ ಸುಮಾರು 50 ವರ್ಷಗಳದ್ದು. 2005ರಲ್ಲಿ ತಮ್ಮ 98ರ ಪ್ರಾಯದಲ್ಲಿ ಅವರು ತೀರಿಕೊಂಡರು. ವೃದ್ಧಾಪ್ಯದ ವರುಷಗಳಲ್ಲಿ ದೃಷ್ಟಿ ಮಬ್ಬಾಗಿ ಹೋದ ಕಾರಣ ಅವರಿಗೆ ಬೈಬಲನ್ನು ಓದಲಾಗುತ್ತಿರಲಿಲ್ಲ. ಆದರೆ ಪ್ರತಿದಿನ ದೇವರೊಂದಿಗೆ ಬಹಳ ಹೊತ್ತಿನ ವರೆಗೆ ಪ್ರಾರ್ಥಿಸುತ್ತಾ, ಆಪ್ತವಾಗಿ ಮಾತಾಡುತ್ತಿದ್ದರು. ಒಮ್ಮೊಮ್ಮೆ ಅವರ ಕೋಣೆಯಲ್ಲಿ ಅವರು ಯಾರೊಟ್ಟಿಗೊ ಬೈಬಲ್‌ ವಚನದ ಬಗ್ಗೆ ಚರ್ಚಿಸುತ್ತಿದ್ದಾರೆಂದು ನೆನಸುತ್ತಿದ್ದೆ. ಹೋಗಿ ನೋಡಿದರೆ, ಅವರು ಮಾತಾಡುತ್ತಿದ್ದದ್ದು ಯೆಹೋವನೊಂದಿಗೆ! ಯೆಹೋವನು ಅವರಿಗೆ ನೈಜ ವ್ಯಕ್ತಿಯಾಗಿದ್ದನು. ಆತನು ತನ್ನ ಮುಂದೆಯೇ ಇದ್ದಾನೊ ಎಂಬಂತೆ ಬದುಕಿದ್ದರು. ಯೆಪ್ತಾಹನ ಮಗಳಂತೆ ಅಚಲವಾಗಿ ದೇವರ ಸೇವೆ ಮಾಡಲು ಇದೇ ಕೀಲಿಕೈ ಎಂದು ಕಲಿತಿದ್ದೇನೆ. ನನ್ನ ಯೌವನದ ದಿನಗಳಲ್ಲಿ ಮತ್ತು ನನ್ನೊಳಗಿನ ಹೋರಾಟಗಳಲ್ಲಿ ನನಗೆ ಆಪ್ತ ಸಲಹೆಗಾರ್ತಿಯಂತಿರಲು ಈ ಹಿರಿಯ, ಪ್ರೌಢ ಸಹೋದರಿಯನ್ನು ಕೊಟ್ಟದ್ದಕ್ಕಾಗಿ ಯೆಹೋವನಿಗೆ ನಾನು ತುಂಬ ಆಭಾರಿ.—ಪ್ರಸಂಗಿ 4:9, 10.

ಯೆಪ್ತಾಹನ ಮಗಳಂತೆ ಯೆಹೋವನ ಸೇವೆ ಮಾಡುವುದರಿಂದ ನನಗೆ ಸಿಕ್ಕಿರುವ ಆಶೀರ್ವಾದಗಳೊ ಅಪಾರ! ಬೈಬಲ್‌ ಸಲಹೆಗಳನ್ನು ಪಾಲಿಸುವ ಮೂಲಕ ಹಾಗೂ ಅವಿವಾಹಿತಳಾಗಿ ಇರುವುದರಿಂದ ನನ್ನ ಜೀವನ ಸಾರ್ಥಕವೂ ಸಮೃದ್ಧವೂ ಆಗಿದೆ. “ಯಾವುದೇ ಅಪಕರ್ಷಣೆಯಿಲ್ಲದೆ ಸತತವಾಗಿ ಕರ್ತನ ಸೇವೆಮಾಡುವಂತೆ” ಸಾಧ್ಯವಾಗಿದೆ.—1 ಕೊರಿಂಥ 7:35. (w11-E 12/01)

[ಪುಟ 28ರಲ್ಲಿರುವ ಚಿತ್ರ]

1950ರ ದಶಕದಲ್ಲಿ ಅಪ್ಪ ಮುಂಬೈಯಲ್ಲಿ ಭಾಷಣ ನೀಡುತ್ತಿದ್ದಾಗ

[ಪುಟ 28ರಲ್ಲಿರುವ ಚಿತ್ರ]

ಎಲೀಸಬೆತ್‌ ತೀರಿಕೊಳ್ಳುವ ಕೆಲವು ವರ್ಷ ಮುಂಚೆ

[ಪುಟ 29ರಲ್ಲಿರುವ ಚಿತ್ರ]

1960ರಲ್ಲಿ ಸಾರ್ವಜನಿಕ ಭಾಷಣದ ಬಗ್ಗೆ ಜಾಹೀರಾತು ಕೊಡುತ್ತಿರುವುದು, ಮುಂಬೈ

[ಪುಟ 29ರಲ್ಲಿರುವ ಚಿತ್ರ]

ಜೊತೆತರ್ಜುಮೆಗಾರರ ಸಂಗಡ