ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 97

ಕೊರ್ನೇಲ್ಯನು ಪವಿತ್ರಾತ್ಮವನ್ನು ಪಡೆದನು

ಕೊರ್ನೇಲ್ಯನು ಪವಿತ್ರಾತ್ಮವನ್ನು ಪಡೆದನು

ಕೈಸರೈಯದಲ್ಲಿ ಒಬ್ಬ ಪ್ರಮುಖ ರೋಮನ್‌ ಸೈನ್ಯಾಧಿಕಾರಿಯಿದ್ದನು. ಅವನ ಹೆಸರು ಕೊರ್ನೇಲ್ಯ. ಅವನು ಯೆಹೂದ್ಯನಲ್ಲದಿದ್ದರೂ ಯೆಹೂದ್ಯರು ಅವನನ್ನು ತುಂಬಾ ಗೌರವಿಸುತ್ತಿದ್ದರು. ಅವನು ಬಡ ಜನರಿಗೆ ಮತ್ತು ಕಷ್ಟದಲ್ಲಿರುವವರಿಗೆ ಉದಾರವಾಗಿ ಸಹಾಯ ಮಾಡುತ್ತಿದ್ದನು. ಕೊರ್ನೇಲ್ಯನು ಯೆಹೋವನ ಮೇಲೆ ನಂಬಿಕೆಯಿಟ್ಟಿದ್ದನು ಮತ್ತು ಯಾವಾಗಲೂ ಪ್ರಾರ್ಥಿಸುತ್ತಿದ್ದನು. ಒಂದು ದಿನ, ದೇವದೂತನೊಬ್ಬ ಕೊರ್ನೇಲ್ಯನಿಗೆ ಕಾಣಿಸಿಕೊಂಡು, ‘ದೇವರು ನಿನ್ನ ಪ್ರಾರ್ಥನೆಗಳನ್ನು ಕೇಳಿದ್ದಾನೆ. ನೀನು ಯೊಪ್ಪದಲ್ಲಿರುವ ಪೇತ್ರನ ಹತ್ತಿರ ನಿನ್ನ ಸೇವಕರನ್ನು ಕಳುಹಿಸಿ ಅವನನ್ನು ನಿನ್ನ ಬಳಿಗೆ ಬರುವಂತೆ ಹೇಳು’ ಎಂದನು. ತಕ್ಷಣ, ಕೊರ್ನೇಲ್ಯನು ಮೂವರು ಸೇವಕರನ್ನು ಯೊಪ್ಪಕ್ಕೆ ಕಳುಹಿಸಿದನು. ಅದು ದಕ್ಷಿಣದಲ್ಲಿ 50 ಕಿಲೊಮೀಟರ್‌ ದೂರದಲ್ಲಿತ್ತು.

ಅದೇ ವೇಳೆ ಯೊಪ್ಪದಲ್ಲಿ, ಪೇತ್ರನು ಒಂದು ದರ್ಶನವನ್ನು ನೋಡಿದನು. ಅದರಲ್ಲಿ ಯೆಹೂದ್ಯರಿಗೆ ತಿನ್ನಬಾರದೆಂದು ಹೇಳಿದ ಪ್ರಾಣಿಗಳನ್ನು ಕಂಡನು ಮತ್ತು ಅದನ್ನು ತಿನ್ನುವಂತೆ ಅವನಿಗೆ ಹೇಳಲಾಯಿತು. ಅದಕ್ಕೆ ಪೇತ್ರನು, ‘ನಾನು ಎಂದೂ ಅಶುದ್ಧವಾದ ಪ್ರಾಣಿಯನ್ನು ತಿಂದವನಲ್ಲ’ ಎಂದನು. ಆಗ ಆ ವಾಣಿಯು ಅವನಿಗೆ, ‘ಈ ಪ್ರಾಣಿಗಳನ್ನು ಅಶುದ್ಧವೆಂದು ಹೇಳಬೇಡ. ದೇವರು ಇವುಗಳನ್ನು ಶುದ್ಧೀಕರಿಸಿದ್ದಾನೆ’ ಎಂದಿತು. ಅಲ್ಲದೆ, ‘ಮನೆಯ ಬಾಗಿಲ ಹತ್ತಿರ ಮೂವರು ಪುರುಷರು ನಿಂತಿದ್ದಾರೆ. ನೀನು ಅವರ ಜೊತೆ ಹೋಗು’ ಎಂದೂ ಹೇಳಿತು. ಪೇತ್ರನು ಮನೆಯ ಬಾಗಿಲ ಹತ್ತಿರ ಹೋಗಿ, ಅವರು ಬಂದಿರುವುದು ಏಕೆಂದು ಕೇಳಿದನು. ಅದಕ್ಕೆ ಅವರು, ‘ರೋಮನ್‌ ಸೈನ್ಯಾಧಿಕಾರಿಯಾದ ಕೊರ್ನೇಲ್ಯನು ನಮ್ಮನ್ನು ಕಳುಹಿಸಿದ್ದಾನೆ. ನೀನು ಕೈಸರೈಯದಲ್ಲಿರುವ ಅವನ ಮನೆಗೆ ಬರಬೇಕು’ ಎಂದರು. ಆ ರಾತ್ರಿ ತನ್ನ ಮನೆಯಲ್ಲಿ ಉಳಿದುಕೊಳ್ಳುವಂತೆ ಪೇತ್ರನು ಅವರಿಗೆ ಹೇಳಿದನು. ಮರುದಿನ, ಯೊಪ್ಪದಲ್ಲಿದ್ದ ಕೆಲವು ಸಹೋದರರನ್ನು ಕರೆದುಕೊಂಡು ಪೇತ್ರನು ಆ ಪುರುಷರೊಂದಿಗೆ ಕೈಸರೈಯಕ್ಕೆ ಹೋದನು.

ಪೇತ್ರನನ್ನು ನೋಡಿದಾಗ ಕೊರ್ನೇಲ್ಯನು ಅವನ ಕಾಲಿಗೆ ಬಿದ್ದನು. ಆಗ ಪೇತ್ರನು, ‘ಏಳು! ನಾನು ಸಹ ನಿನ್ನ ಹಾಗೇ ಒಬ್ಬ ಮನುಷ್ಯನು. ಯೆಹೂದ್ಯರು ಅನ್ಯರ ಮನೆಗೆ ಹೋಗದಿದ್ದರೂ ನಾನು ನಿನ್ನ ಮನೆಗೆ ಬರುವಂತೆ ದೇವರು ನನಗೆ ಹೇಳಿದನು. ದಯವಿಟ್ಟು ನನ್ನನ್ನು ಯಾಕೆ ಕರೆಸಿದೆ ಹೇಳು’ ಎಂದನು.

ಅದಕ್ಕೆ ಕೊರ್ನೇಲ್ಯನು, ‘ನಾಲ್ಕು ದಿನಗಳ ಹಿಂದೆ ನಾನು ಪ್ರಾರ್ಥಿಸುತ್ತಿದ್ದಾಗ ದೇವದೂತನೊಬ್ಬ ನನಗೆ ಕಾಣಿಸಿಕೊಂಡು ನಿನ್ನನ್ನು ಕರೆಸುವಂತೆ ಹೇಳಿದನು. ದಯವಿಟ್ಟು ಯೆಹೋವನ ಬಗ್ಗೆ ನಮಗೆ ಕಲಿಸು’ ಎಂದನು. ಆಗ ಪೇತ್ರನು, ‘ದೇವರು ಪಕ್ಷಪಾತಿಯಲ್ಲ ಎಂಬುದು ನನಗೆ ಈಗ ಗೊತ್ತಾಯಿತು. ಆತನನ್ನು ಆರಾಧಿಸಲು ಇಷ್ಟಪಡುವ ಯಾರನ್ನಾದರೂ ಆತನು ಸ್ವೀಕರಿಸುತ್ತಾನೆ’ ಎಂದನು. ಪೇತ್ರನು ಯೇಸುವಿನ ಬಗ್ಗೆ ಅನೇಕ ವಿಷಯಗಳನ್ನು ಅವರಿಗೆ ಕಲಿಸಿದನು. ನಂತರ, ಕೊರ್ನೇಲ್ಯನ ಮೇಲೆ ಮತ್ತು ಅವನೊಂದಿಗೆ ಇದ್ದ ಜನರ ಮೇಲೆ ಪವಿತ್ರಾತ್ಮವು ಬಂತು. ಆಗ, ಎಲ್ಲರೂ ದೀಕ್ಷಾಸ್ನಾನ ಪಡೆದುಕೊಂಡರು.

“ಆದರೆ ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.”—ಅಪೊಸ್ತಲರ ಕಾರ್ಯಗಳು 10:35