ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ದೇವರ ಹೆಸರು—ಅದರ ಉಪಯೋಗ ಮತ್ತು ಅದರ ಅರ್ಥ

ದೇವರ ಹೆಸರು—ಅದರ ಉಪಯೋಗ ಮತ್ತು ಅದರ ಅರ್ಥ

ನಿಮ್ಮ ಬೈಬಲ್‌ ಪ್ರತಿಯಲ್ಲಿ ಕೀರ್ತನೆ 83:18 ನ್ನು ಹೇಗೆ ಭಾಷಾಂತರಿಸಲಾಗಿದೆ? ಸತ್ಯವೇದವು ಅದನ್ನು ಹೀಗೆ ಭಾಷಾಂತರಿಸುತ್ತದೆ: “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.” ಅನೇಕ ಬೈಬಲ್‌ ತರ್ಜುಮೆಗಳು ಇದಕ್ಕೆ ಹೋಲುವಂಥ ರೀತಿಯಲ್ಲಿ ಭಾಷಾಂತರಿಸಲ್ಪಟ್ಟಿವೆ. ಆದರೂ, ಅನೇಕ ಭಾಷಾಂತರಗಳು ಯೆಹೋವ ಎಂಬ ಹೆಸರನ್ನು ಉಪಯೋಗಿಸದೆ, ಅದರ ಸ್ಥಳದಲ್ಲಿ “ಕರ್ತನು” ಅಥವಾ “ನಿತ್ಯನು” ಎಂಬ ಬಿರುದುಗಳನ್ನು ಉಪಯೋಗಿಸುತ್ತವೆ. ಆದರೆ ಈ ವಚನದಲ್ಲಿ ಯಾವ ಪದವು ಸೇರಿರಬೇಕು? ಒಂದು ಬಿರುದೊ, ಯೆಹೋವ ಎಂಬ ಹೆಸರೊ?

ಹೀಬ್ರು ಅಕ್ಷರಗಳಲ್ಲಿ ದೇವರ ಹೆಸರು

ಈ ವಚನವು ಒಂದು ಹೆಸರಿನ ವಿಷಯದಲ್ಲಿ ಮಾತಾಡುತ್ತದೆ. ಬೈಬಲಿನ ಅಧಿಕಾಂಶ ಭಾಗವು ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿದೆಯೊ ಆ ಮೂಲ ಹೀಬ್ರುವಿನಲ್ಲಿ, ಇಲ್ಲಿ ಒಂದು ಅನನ್ಯವಾದ ವೈಯಕ್ತಿಕ ಹೆಸರು ತೋರಿಬರುತ್ತದೆ. ಅದನ್ನು ಹೀಬ್ರು ಅಕ್ಷರಗಳಲ್ಲಿ יהוה (YHWH, ವೈಏಚ್‌ಡಬ್ಲ್ಯೂಏಚ್‌) ಎಂದು ಬಿಡಿಸಿ ಬರೆಯಲಾಗಿದೆ. ಕನ್ನಡ ಭಾಷೆಯಲ್ಲಿ ಆ ಹೆಸರನ್ನು ಸಾಮಾನ್ಯವಾಗಿ “ಯೆಹೋವ” ಎಂದು ಭಾಷಾಂತರಿಸಲಾಗುತ್ತದೆ. ಆ ಹೆಸರು ಕೇವಲ ಒಂದು ಬೈಬಲ್‌ ವಚನದಲ್ಲಿ ಮಾತ್ರ ಕಂಡುಬರುತ್ತದೆಯೆ? ಇಲ್ಲ. ಹೀಬ್ರು ಶಾಸ್ತ್ರದ ಮೂಲ ಗ್ರಂಥಪಾಠದಲ್ಲಿ ಅದು ಸುಮಾರು 7,000 ಬಾರಿ ಕಂಡುಬರುತ್ತದೆ!

ದೇವರ ಹೆಸರು ಎಷ್ಟು ಪ್ರಾಮುಖ್ಯ? ಯೇಸು ಕ್ರಿಸ್ತನು ಕಲಿಸಿದ ಮಾದರಿ ಪ್ರಾರ್ಥನೆಯ ಕುರಿತು ಯೋಚಿಸಿರಿ. ಅದು, “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂದು ಆರಂಭಗೊಳ್ಳುತ್ತದೆ. (ಮತ್ತಾಯ 6:9, 10) ಸಮಯಾನಂತರ ಯೇಸು, “ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ” ಎಂದು ದೇವರಿಗೆ ಪ್ರಾರ್ಥಿಸಿದನು. ಅದಕ್ಕೆ ಉತ್ತರವಾಗಿ ದೇವರು ಸ್ವರ್ಗದಿಂದ, “ಮಹಿಮೆಪಡಿಸಿದ್ದೇನೆ, ತಿರಿಗಿ ಮಹಿಮೆಪಡಿಸುವೆನು,” ಎಂದು ಹೇಳಿದನು. (ಯೋಹಾನ 12:28) ಹೀಗೆ, ದೇವರ ಹೆಸರು ಅತಿ ಪರಮ ರೀತಿಯಲ್ಲಿ ಪ್ರಾಮುಖ್ಯವಾಗಿದೆ. ಹಾಗಿದ್ದರೆ, ಕೆಲವು ಮಂದಿ ಭಾಷಾಂತರಕಾರರು ತಾವು ಭಾಷಾಂತರಿಸಿದ ಬೈಬಲುಗಳಿಂದ ಈ ಹೆಸರನ್ನು ತೆಗೆದುಹಾಕಿ ಅದನ್ನು ಬೇರೆ ಬಿರುದುಗಳಿಂದ ಸ್ಥಾನಭರ್ತಿಮಾಡಿರುವುದೇಕೆ?

ಇದಕ್ಕೆ ಎರಡು ಮುಖ್ಯ ಕಾರಣಗಳಿವೆಯೆಂದು ತೋರಿಬರುತ್ತದೆ. ಒಂದನೆಯದಾಗಿ, ಅದನ್ನು ಉಚ್ಚರಿಸಿದ ಮೂಲರೂಪವು ಇಂದು ಅಜ್ಞಾತವಾಗಿರುವುದರಿಂದ ಆ ಹೆಸರನ್ನು ಉಪಯೋಗಿಸಬಾರದು ಎಂದು ಅನೇಕರು ವಾದಿಸುತ್ತಾರೆ. ಪುರಾತನ ಕಾಲದ ಹೀಬ್ರು ಭಾಷೆಯನ್ನು ಸ್ವರಾಕ್ಷರಗಳಿಲ್ಲದೆ ಬರೆಯಲಾಗುತ್ತಿತ್ತು. ಆದಕಾರಣ, ಬೈಬಲ್‌ ಕಾಲಗಳಲ್ಲಿ ಜನರು ವೈಏಚ್‌ಡಬ್ಲ್ಯೂಏಚ್‌ ಅನ್ನು ಹೇಗೆ ಉಚ್ಚರಿಸಿದರೆಂದು ಇಂದು ಯಾವನೂ ಸರಿಯಾಗಿ ಹೇಳಲಾರನು. ಆದರೆ ದೇವರ ಹೆಸರನ್ನು ಉಪಯೋಗಿಸುವುದರಿಂದ ಇದು ನಮ್ಮನ್ನು ತಡೆಯಬೇಕೆ? ಬೈಬಲ್‌ ಕಾಲಗಳಲ್ಲಿ ಯೇಸು ಎಂಬ ಹೆಸರನ್ನು ಜನರು ಯೆಷುವ ಇಲ್ಲವೆ ಪ್ರಾಯಶಃ ಯೆಹೋಶುವ ಎಂದು ಕರೆದಿರಬಹುದು. ಇದನ್ನು ಯಾವನೂ ನಿಖರವಾಗಿ ಹೇಳಸಾಧ್ಯವಿಲ್ಲ. ಆದರೂ, ಇಂದು ಜನರು ಲೋಕವ್ಯಾಪಕವಾಗಿ ಯೇಸು ಎಂಬ ಹೆಸರಿನ ವಿವಿಧ ರೂಪಗಳನ್ನು, ತಮ್ಮ ಭಾಷೆಯಲ್ಲಿ ಬಳಕೆಯಾಗಿರುವ ರೀತಿಯಲ್ಲಿ ಉಪಯೋಗಿಸುತ್ತಾರೆ. ಆ ಹೆಸರನ್ನು ಪ್ರಥಮ ಶತಮಾನದಲ್ಲಿ ಹೇಗೆ ಉಚ್ಚರಿಸುತ್ತಿದ್ದರೆಂಬುದು ತಮಗೆ ತಿಳಿದಿಲ್ಲವೆಂಬ ಕಾರಣಕ್ಕಾಗಿ ಅದನ್ನು ಉಪಯೋಗಿಸಲು ಅವರು ಹಿಂಜರಿಯುವುದಿಲ್ಲ. ತದ್ರೀತಿ, ನೀವು ವಿದೇಶಕ್ಕೆ ಪ್ರಯಾಣ ಬೆಳೆಸುವಲ್ಲಿ, ಬೇರೊಂದು ಭಾಷೆಯಲ್ಲಿ ನಿಮ್ಮ ಸ್ವಂತ ಹೆಸರು ವಿಚಿತ್ರವಾಗಿ ಧ್ವನಿಸುತ್ತದೆಂದು ಪ್ರಾಯಶಃ ಕಂಡುಹಿಡಿಯುವಿರಿ. ಆದುದರಿಂದ, ದೇವರ ಹೆಸರಿನ ಪುರಾತನಕಾಲದ ಉಚ್ಚಾರಣೆಯ ಕುರಿತಾದ ಅನಿಶ್ಚಿತತೆಯು ಅದನ್ನು ಉಪಯೋಗಿಸದಿರುವುದಕ್ಕೆ ಕಾರಣವಾಗಿರುವುದಿಲ್ಲ.

ದೇವರ ಹೆಸರನ್ನು ಬೈಬಲಿನಲ್ಲಿ ಸೇರಿಸದಿರುವುದಕ್ಕೆ ಹೆಚ್ಚಾಗಿ ಕೊಡಲಾಗುವ ಎರಡನೆಯ ಕಾರಣವು ಯೆಹೂದ್ಯರ ದೀರ್ಘಕಾಲದ ಒಂದು ಸಂಪ್ರದಾಯಕ್ಕೆ ಸಂಬಂಧಿಸಿದೆ. ಅವರಲ್ಲಿ ಅನೇಕರು ದೇವರ ಹೆಸರನ್ನು ಎಂದಿಗೂ ಉಚ್ಚರಿಸಲೇಬಾರದು ಎಂದು ನಂಬುತ್ತಾರೆ. ಈ ನಂಬಿಕೆಯು, “ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತುವವನನ್ನು ಶಿಕ್ಷಿಸದೆ ಬಿಡುವದಿಲ್ಲ” ಎಂಬ ಬೈಬಲ್‌ ನಿಯಮದ ತಪ್ಪಾದ ಅನ್ವಯದ ಮೇಲೆ ಆಧಾರಿತವಾಗಿದೆ ಎಂದು ವ್ಯಕ್ತವಾಗುತ್ತದೆ.—ವಿಮೋಚನಕಾಂಡ 20:7.

ಈ ನಿಯಮವು ದೇವರ ಹೆಸರಿನ ದುರುಪಯೋಗವನ್ನು ನಿಷೇಧಿಸುತ್ತದೆ. ಆದರೆ ಆತನ ಹೆಸರನ್ನು ಗೌರವಪೂರ್ಣವಾಗಿ ಉಪಯೋಗಿಸುವುದನ್ನು ಅದು ನಿಷೇಧಿಸುತ್ತದೊ? ನಿಶ್ಚಯವಾಗಿಯೂ ಇಲ್ಲ. ಹೀಬ್ರು ಬೈಬಲಿನ (“ಹಳೆಯ ಒಡಂಬಡಿಕೆ”) ಲೇಖಕರೆಲ್ಲರೂ ದೇವರು ಪುರಾತನಕಾಲದ ಇಸ್ರಾಯೇಲ್ಯರಿಗೆ ಕೊಟ್ಟಿದ್ದ ಧರ್ಮಶಾಸ್ತ್ರಕ್ಕನುಸಾರ ಜೀವಿಸುತ್ತಿದ್ದ ನಂಬಿಗಸ್ತ ಪುರುಷರಾಗಿದ್ದರು. ಆದರೂ ಅವರು ದೇವರ ಹೆಸರನ್ನು ಪದೇ ಪದೇ ಉಪಯೋಗಿಸಿದರು. ಉದಾಹರಣೆಗೆ, ಆರಾಧಕರ ಗುಂಪುಗಳು ಗಟ್ಟಿಯಾಗಿ ಹಾಡುತ್ತಿದ್ದ ಅನೇಕ ಕೀರ್ತನೆಗಳಲ್ಲಿ ಅವರು ಅದನ್ನು ಸೇರಿಸಿದರು. ಅಷ್ಟುಮಾತ್ರವಲ್ಲ, ತನ್ನ ಆರಾಧಕರು ಆ ಹೆಸರನ್ನೆತ್ತಿ ಕರೆಯುವಂತೆ ಸಹ ದೇವರು ಆದೇಶ ನೀಡಿದನು ಮತ್ತು ನಂಬಿಗಸ್ತರು ಇದಕ್ಕೆ ವಿಧೇಯರಾದರು. (ಯೋವೇಲ 2:32; ಅ. ಕೃತ್ಯಗಳು 2:21) ಆದಕಾರಣ, ಯೇಸು ನಿಶ್ಚಯವಾಗಿಯೂ ಮಾಡಿದಂತೆ, ದೇವರ ಹೆಸರನ್ನು ಗೌರವಪೂರ್ಣವಾಗಿ ಉಪಯೋಗಿಸಲು ಇಂದು ಕ್ರೈಸ್ತರು ಹಿಂಜರಿಯುವುದಿಲ್ಲ.—ಯೋಹಾನ 17:26.

ದೇವರ ಹೆಸರಿಗೆ ಬದಲಾಗಿ ಬಿರುದುಗಳನ್ನು ಹಾಕುವ ವಿಷಯದಲ್ಲಿ ಬೈಬಲ್‌ ಭಾಷಾಂತರಕಾರರು ಒಂದು ಗಂಭೀರವಾದ ತಪ್ಪನ್ನು ಮಾಡುತ್ತಾರೆ. ಇದನ್ನು ಮಾಡುವುದರಿಂದ ಅವರು ದೇವರು ಅತಿ ದೂರದಲ್ಲಿರುವವನು ಮತ್ತು ವ್ಯಕ್ತಿಸ್ವರೂಪವಿಲ್ಲದವನೆಂದು ತೋರುವಂತೆ ಮಾಡುತ್ತಾರೆ. ಆದರೆ ಬೈಬಲು ‘ಯೆಹೋವನ ಆಪ್ತಮಿತ್ರತ್ವವನ್ನು’ ಬೆಳೆಸಿಕೊಳ್ಳುವಂತೆ ಮಾನವರನ್ನು ಪ್ರೋತ್ಸಾಹಿಸುತ್ತದೆ. (ಕೀರ್ತನೆ 25:14) ನಿಮ್ಮ ಆಪ್ತಮಿತ್ರನೊಬ್ಬನ ಕುರಿತು ಯೋಚಿಸಿರಿ. ನಿಮ್ಮ ಮಿತ್ರನ ಹೆಸರೇ ನಿಮಗೆ ತಿಳಿಯದಿರುವಲ್ಲಿ ನೀವು ಅವನಿಗೆ ಎಷ್ಟು ಆಪ್ತರಾಗಿರುವಿರಿ? ತದ್ರೀತಿ, ದೇವರ ಹೆಸರು ಯೆಹೋವ ಎಂಬ ವಿಷಯದಲ್ಲಿ ಜನರು ಅಜ್ಞಾನದಲ್ಲಿ ಇಡಲ್ಪಡುವಾಗ, ಅವರು ದೇವರಿಗೆ ನಿಜವಾಗಿಯೂ ಹೇಗೆ ಆಪ್ತರಾಗಬಲ್ಲರು? ಅಲ್ಲದೆ, ಜನರು ದೇವರ ಹೆಸರನ್ನು ಬಳಸದಿರುವಾಗ ಅವರಿಗೆ ಆ ಹೆಸರಿನ ಅದ್ಭುತಕರ ಅರ್ಥದ ಕುರಿತಾದ ಜ್ಞಾನದ ಕೊರತೆಯೂ ಇರುತ್ತದೆ. ದೇವರ ಆ ಹೆಸರಿನ ಅರ್ಥವೇನು?

ದೇವರು ತಾನೇ ತನ್ನ ನಂಬಿಗಸ್ತ ಸೇವಕನಾದ ಮೋಶೆಗೆ ತನ್ನ ಹೆಸರಿನ ಅರ್ಥವನ್ನು ತಿಳಿಯಪಡಿಸಿದನು. ದೇವರ ಹೆಸರಿನ ಕುರಿತು ಮೋಶೆ ಕೇಳಿದಾಗ ಯೆಹೋವನು “ಇರುವಾತನೆಂಬವನು” ಎಂದು ಹೇಳಿದನು. (ವಿಮೋಚನಕಾಂಡ 3:14) ರಾಥರ್‌ಹ್ಯಾಮ್‌ ಭಾಷಾಂತರವು ಈ ಮಾತುಗಳನ್ನು, “ನಾನು ಏನೇ ಆಗಲು ಇಷ್ಟಪಟ್ಟರೂ ಹಾಗೆಯೇ ಆಗುವೆನು” ಎಂದು ಭಾಷಾಂತರಿಸುತ್ತದೆ. ಹೀಗೆ ತನ್ನ ಉದ್ದೇಶಗಳನ್ನು ನೆರವೇರಿಸಲು ಯಾವುದರ ಅಗತ್ಯವೇ ಇರಲಿ, ಯೆಹೋವನು ಹಾಗಾಗಿ ಪರಿಣಮಿಸಬಲ್ಲನು.

ನೀವೇನಾಗಲು ಬಯಸುತ್ತೀರೊ ಅದಾಗಲು ನಿಮಗೆ ಸಾಧ್ಯವಿದೆ ಎಂದು ಎಣಿಸಿರಿ. ನಿಮ್ಮ ಸ್ನೇಹಿತರಿಗಾಗಿ ನೀವೇನು ಮಾಡುವಿರಿ? ಅವರಲ್ಲಿ ಒಬ್ಬನು ತೀರ ಅಸ್ವಸ್ಥನಾಗುವಲ್ಲಿ, ನೀವು ಕುಶಲ ವೈದ್ಯರಾಗಿ ಅವನನ್ನು ಗುಣಪಡಿಸಬಲ್ಲಿರಿ. ಇನ್ನೊಬ್ಬನು ಆರ್ಥಿಕ ನಷ್ಟವನ್ನು ಅನುಭವಿಸುವಲ್ಲಿ, ನೀವು ಸಂಪತ್ತಿರುವ ದಾನಿಯಾಗಿ ಅವನ ಸಮಸ್ಯೆಯನ್ನು ನೀಗಿಸಬಲ್ಲಿರಿ. ಆದರೆ ಸತ್ಯ ವಿಷಯವೇನಂದರೆ, ನೀವೇನಾಗಬಲ್ಲಿರೊ ಅದರಲ್ಲಿ ನಿಮಗೆ ಪರಿಮಿತಿಯಿದೆ. ನಾವೆಲ್ಲರೂ ಹಾಗೆಯೇ. ಆದರೆ ಬೈಬಲನ್ನು ಅಧ್ಯಯನ ಮಾಡುವಾಗ, ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸಲು ಅಗತ್ಯವಿರುವ ಯಾವುದೇ ಪಾತ್ರವನ್ನು ವಹಿಸುವುದನ್ನು ನೋಡಿ ನೀವು ವಿಸ್ಮಯಪಡುವಿರಿ. ಮತ್ತು ತನ್ನನ್ನು ಪ್ರೀತಿಸುವವರ ಪರವಾಗಿ ತನ್ನ ಶಕ್ತಿಯನ್ನು ಉಪಯೋಗಿಸುವುದು ಆತನಿಗೆ ಇಷ್ಟಕರ. (2 ಪೂರ್ವಕಾಲವೃತ್ತಾಂತ 16:9) ಯೆಹೋವನ ವ್ಯಕ್ತಿತ್ವದ ಈ ಸುಂದರವಾದ ಮುಖಗಳು ಆತನ ಹೆಸರನ್ನು ಅರಿಯದವರಿಗೆ ಗ್ರಹಿಸಲಾಗುವುದಿಲ್ಲ.

ಯೆಹೋವ ಎಂಬ ಹೆಸರು ಬೈಬಲಿನಲ್ಲಿ ಬಳಸಲ್ಪಡಲೇಬೇಕೆಂಬುದು ವ್ಯಕ್ತ. ಅದರ ಅರ್ಥವನ್ನು ತಿಳಿದುಕೊಂಡಿರುವುದು ಮತ್ತು ನಮ್ಮ ಆರಾಧನೆಯಲ್ಲಿ ಅದನ್ನು ಧಾರಾಳವಾಗಿ ಉಪಯೋಗಿಸುವುದು, ನಾವು ನಮ್ಮ ಸ್ವರ್ಗೀಯ ಪಿತನಾದ ಯೆಹೋವನಿಗೆ ಹೆಚ್ಚು ಸಮೀಪವಾಗಲು ಪ್ರಬಲವಾದ ಸಹಾಯಕವಾಗಿದೆ. *

^ ಪ್ಯಾರ. 3 ದೇವರ ಹೆಸರು, ಅದರ ಅರ್ಥ ಮತ್ತು ಆತನ ಆರಾಧನೆಯಲ್ಲಿ ಅದನ್ನು ಏಕೆ ಉಪಯೋಗಿಸಬೇಕೆಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ ಸದಾಕಾಲವೂ ಬಾಳುವ ದೈವಿಕ ನಾಮ (ಇಂಗ್ಲಿಷ್‌) ಎಂಬ ಬ್ರೋಷರನ್ನು ನೋಡಿ.