ಪೇತ್ರ ಬರೆದ ಎರಡನೇ ಪತ 3:1-18

  • ಗೇಲಿ ಮಾಡುವವರು ನಾಶನವನ್ನ ಗಮನಿಸಲ್ಲ (1-7)

  • ಯೆಹೋವ ತಡ ಮಾಡಲ್ಲ (8-10)

  • ನಿಮ್ಮ ನಡತೆ ಹೇಗಿರಬೇಕು ಯೋಚನೆ ಮಾಡಿ (11-16)

    • ಹೊಸ ಆಕಾಶ ಮತ್ತು ಹೊಸ ಭೂಮಿ (13)

  • ದಾರಿತಪ್ಪಬೇಡಿ (17, 18)

3  ಪ್ರೀತಿಯ ಸಹೋದರರೇ, ಇದು ನಾನು ನಿಮಗೆ ಬರಿತಾ ಇರೋ ಎರಡ್ನೇ ಪತ್ರ. ಮೊದಲ್ನೇ ಪತ್ರದ ತರಾನೇ ಈ ಪತ್ರದಲ್ಲೂ ಸ್ವಲ್ಪ ವಿಷ್ಯಗಳನ್ನ ನೆನಪು ಹುಟ್ಟಿಸ್ತಾ ಇದ್ದೀನಿ.+ ಇದ್ರಿಂದ ನಿಮಗೆ ಸರಿಯಾಗಿ ಯೋಚ್ನೆ ಮಾಡೋಕೆ ಆಗುತ್ತೆ.  ಪವಿತ್ರ ಪ್ರವಾದಿಗಳು ಈ ಮುಂಚೆ ಹೇಳಿದ ಮಾತುಗಳನ್ನ ನೆನಪಿಸ್ಕೊಳ್ಳಿ. ರಕ್ಷಕನಾದ ಪ್ರಭು ನಿಮಗೆ ಅಪೊಸ್ತಲರಿಂದ ಕೊಟ್ಟ ಆಜ್ಞೆಗಳನ್ನ ನೆನಪು ಮಾಡ್ಕೊಳ್ಳಿ.  ಜನ್ರು ಕೊನೇ ದಿನಗಳಲ್ಲಿ ಒಳ್ಳೇ ವಿಷ್ಯಗಳನ್ನ ನೋಡಿ ನಗ್ತಾರೆ. ಅವರು ಇಷ್ಟ ಬಂದ ಹಾಗೆ ನಡಿತಾರೆ, ಕೆಟ್ಟ ವಿಷ್ಯಗಳನ್ನೇ ಮಾಡ್ತಾರೆ. ಇದನ್ನ ನೀವು ಮೊದ್ಲು ತಿಳ್ಕೊಳ್ಳಿ.+  ಅವರು ನಿಮಗೆ “ಕ್ರಿಸ್ತನು ಮತ್ತೆ ಬರ್ತಿನಿ ಅಂತ ಮಾತು ಕೊಟ್ಟಿದ್ದನು. ಏನಾಯ್ತು?+ ನಮ್ಮ ತಾತಮುತ್ತಾತನ ಕಾಲದಲ್ಲಿ ಹೇಗಿತ್ತೋ ಈಗ್ಲೂ ಪರಿಸ್ಥಿತಿ ಹಾಗೇ ಇದೆ. ದೇವರು ಮನುಷ್ಯರನ್ನ ಸೃಷ್ಟಿ ಮಾಡಿದಾಗಿಂದ ಏನೂ ಬದಲಾಗಿಲ್ಲ. ಎಲ್ಲ ಹಾಗೇ ಇದೆ” ಅಂತ ಹೇಳ್ತಾರೆ.+  ದೇವರ ಮಾತಿಂದಾಗಿ ಆಕಾಶ ತುಂಬ ಸಮಯದಿಂದ ಇದೆ ಮತ್ತು ಭೂಮಿ ನೀರೊಳಗಿಂದ ಬಂದು ನೀರಿನ ಮಧ್ಯ ನಿಂತಿದೆ ಅನ್ನೋ ವಿಷ್ಯನಾ ಅವರು ಬೇಕುಬೇಕಂತಾನೇ ಮರೆತುಬಿಡ್ತಾರೆ.+  ಆ ವಿಷ್ಯಗಳಿಂದಾನೇ ಇಡೀ ಭೂಮಿಯಲ್ಲಿ ನೀರು ತುಂಬ್ಕೊಂಡು ಆಗಿನ ಲೋಕ ನಾಶ ಆಯ್ತು.+  ದೇವರ ಮಾತಿಂದಾನೇ ಈಗಿರೋ ಆಕಾಶ ಮತ್ತು ಭೂಮಿಯನ್ನ ಬೆಂಕಿಯಿಂದ ನಾಶ ಮಾಡೋಕೆ ಇಡಲಾಗಿದೆ. ಆದ್ರೆ ದೇವರ ಮೇಲೆ ಭಕ್ತಿ ಇಲ್ಲದಿರೋ ಮನುಷ್ಯರಿಗೆ ತೀರ್ಪಾಗೋ ದಿನದ ತನಕ, ಅವರು ನಾಶ ಆಗೋ ತನಕ ಅವು ಹಾಗೇ ಇರುತ್ತೆ.+  ಹಾಗಿದ್ರೂ ಪ್ರೀತಿಯ ಸಹೋದರರೇ, ಈ ಒಂದು ವಿಷ್ಯ ಮಾತ್ರ ಮರಿಬೇಡಿ. ಯೆಹೋವನಿಗೆ* ಒಂದು ದಿನ ಸಾವಿರ ವರ್ಷ ತರ, ಸಾವಿರ ವರ್ಷ ಒಂದು ದಿನದ ತರ.+  ಕೆಲವರು ಅಂದ್ಕೊಳ್ಳೋ ಹಾಗೆ ಯೆಹೋವ* ಕೊಟ್ಟಿರೋ ಮಾತನ್ನ ನಿಜ ಮಾಡೋಕೆ ತಡ ಮಾಡ್ತಿಲ್ಲ.+ ಯಾರೂ ನಾಶ ಆಗಬಾರದು ಅಂತ ದೇವರು ತಾಳ್ಮೆಯಿಂದ ಕಾಯ್ತಾ ಇದ್ದಾನೆ. ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ.+ 10  ಆದ್ರೆ ಯೆಹೋವನ* ದಿನ+ ಕಳ್ಳನ ತರ ಬರುತ್ತೆ.+ ಆಗ ಆಕಾಶ ಮಾಯ ಆಗುತ್ತೆ.+ ಆಕಾಶ ಮತ್ತು ಭೂಮಿಯಲ್ಲಿರೋ ವಸ್ತುಗಳು ಬಿಸಿಗೆ ಕರಗಿ ಹೋಗುತ್ತೆ. ಭೂಮಿ ಮತ್ತು ಅದ್ರಲ್ಲಿ ನಡಿಯೋ ಕೆಲಸಗಳೆಲ್ಲ ಬಟ್ಟ ಬಯಲಾಗುತ್ತೆ.+ 11  ಇದೆಲ್ಲ ಹೀಗೆ ಕರಗಿ ಹೋಗೋದ್ರಿಂದ ನಿಮ್ಮ ನಡತೆ ಹೇಗಿರಬೇಕು, ಏನು ಮಾಡಬೇಕು ಅನ್ನೋದಕ್ಕೆ ಗಮನ ಕೊಡಿ. ನೀವು ಪವಿತ್ರರಾಗಿ ನಡ್ಕೊಬೇಕು. ನಿಮಗೆ ದೇವರ ಮೇಲೆ ಭಕ್ತಿ ಇದೆ ಅಂತ ತೋರಿಸೋ ಕೆಲಸಗಳನ್ನ ಮಾಡಬೇಕು. 12  ಅಷ್ಟೇ ಅಲ್ಲ ಯೆಹೋವನ* ದಿನ+ ಬರುತ್ತೆ* ಅನ್ನೋದನ್ನ ಮನಸ್ಸಲ್ಲಿಟ್ಟು ಕಾಯ್ತಾ ಇರಿ. ಆ ದಿನದಲ್ಲಿ ಆಕಾಶ ಬೆಂಕಿಯಿಂದ ನಾಶ ಆಗುತ್ತೆ.+ ಆಕಾಶ ಮತ್ತು ಭೂಮಿ ಯಾವುದ್ರಿಂದ ಸೃಷ್ಟಿ ಆಯ್ತೋ ಆ ವಸ್ತುಗಳು ಬಿಸಿಗೆ ಕರಗಿ ಹೋಗುತ್ತೆ. 13  ದೇವರು ಮಾತು ಕೊಟ್ಟಿರೋ ಪ್ರಕಾರ ನಾವು ಹೊಸ ಆಕಾಶಕ್ಕಾಗಿ, ಹೊಸ ಭೂಮಿಗಾಗಿ ಕಾಯ್ತಾ ಇದ್ದೀವಿ.+ ಅಲ್ಲಿ ನೀತಿವಂತರು ಮಾತ್ರ ಇರ್ತಾರೆ.+ 14  ಪ್ರೀತಿಯ ಸಹೋದರ ಸಹೋದರಿಯರೇ, ನೀವು ಈ ಎಲ್ಲ ವಿಷ್ಯಕ್ಕೋಸ್ಕರ ಕಾಯ್ತಾ ಇದ್ದೀರ. ಹಾಗಾಗಿ ದೇವರ ಮುಂದೆ ಶುದ್ಧರಾಗಿ ಇರೋಕೆ ಆದಷ್ಟು ಪ್ರಯತ್ನ ಮಾಡಿ. ಕೆಟ್ಟ ಗುಣಗಳನ್ನೆಲ್ಲ ಬಿಟ್ಟುಬಿಡಿ. ದೇವರ ಜೊತೆ ಒಳ್ಳೇ ಸಂಬಂಧ ಕಾಪಾಡ್ಕೊಳ್ಳಿ.+ 15  ನಮ್ಮ ಪ್ರಭುವಿನ ತಾಳ್ಮೆಯನ್ನ ರಕ್ಷಣೆ ಅಂತ ಅಂದ್ಕೊಳ್ಳಿ. ನಮ್ಮ ಪ್ರೀತಿಯ ಸಹೋದರ ಪೌಲನೂ ದೇವರು ಅವನಿಗೆ ಕೊಟ್ಟ ವಿವೇಕದಿಂದ ಈ ವಿಷ್ಯಗಳನ್ನ ಬರೆದ.+ 16  ಪೌಲ ತನ್ನ ಎಲ್ಲ ಪತ್ರಗಳಲ್ಲಿ ಈ ವಿಷ್ಯಗಳ ಬಗ್ಗೆ ಹೇಳಿದ್ದಾನೆ. ಆದ್ರೂ ಅವುಗಳಲ್ಲಿ ಇರೋ ಸ್ವಲ್ಪ ವಿಷ್ಯಗಳು ಅರ್ಥ ಮಾಡ್ಕೊಳ್ಳೋಕೆ ಕಷ್ಟ. ಅದನ್ನ ಅರ್ಥ ಮಾಡ್ಕೊಳ್ಳೋಕೆ ಆಗ್ದೇ ಇರುವವರು, ಕಮ್ಮಿ ನಂಬಿಕೆ ಇರುವವರು ಪವಿತ್ರ ಗ್ರಂಥದ ಬೇರೆ ಭಾಗಗಳನ್ನ ತಿರುಚಿ ಮಾತಾಡ್ತಾರೆ. ಹೀಗೆ ಮಾಡಿ ಅವ್ರ ಮೇಲೆ ಅವ್ರೇ ನಾಶನ ತಂದ್ಕೊಳ್ತಾರೆ. 17  ಹಾಗಾಗಿ ಪ್ರೀತಿಯ ಸಹೋದರ ಸಹೋದರಿಯರೇ, ಈ ವಿಷ್ಯಗಳನ್ನ ನೀವು ಮೊದ್ಲೇ ತಿಳ್ಕೊಂಡಿದ್ದೀರ. ಅದಕ್ಕೇ ಅವ್ರ ಸುಳ್ಳು ಬೋಧನೆಗಳ ಹಿಂದೆ ಹೋಗಿ ಕೆಟ್ಟ ಜನ್ರ ತರ ದಾರಿ ತಪ್ಪಬೇಡಿ. ಅವ್ರ ಜೊತೆ ಹೋದ್ರೆ ಅವರು ನಿಮ್ಮ ನಂಬಿಕೆಯನ್ನ ಅಲ್ಲಾಡಿಸಿ ಬಿಡ್ತಾರೆ. ಹಾಗಾಗಿ ಎಚ್ಚರವಾಗಿರಿ.+ 18  ನಮ್ಮ ಪ್ರಭು, ರಕ್ಷಕ ಆಗಿರೋ ಯೇಸು ಕ್ರಿಸ್ತನ ಅಪಾರ ಕೃಪೆ ಮತ್ತು ಆತನ ಬಗ್ಗೆ ಜ್ಞಾನ ನಿಮಗೆ ಜಾಸ್ತಿ ಸಿಗೋ ತರ ಜೀವನ ಮಾಡಿ. ಆತನಿಗೆ ಈಗ್ಲೂ ಯಾವಾಗ್ಲೂ ಮಹಿಮೆ ಸಿಗ್ತಾ ಇರಲಿ.

ಪಾದಟಿಪ್ಪಣಿ

ಅಕ್ಷ. “ಮತ್ತೆ ಬರೋ ಕಾಲ.”