ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಹಾರದ ಸುರಕ್ಷತೆಗೆ ಪಾಲಿಸಬೇಕಾದ 7 ಹೆಜ್ಜೆಗಳು

ಆಹಾರದ ಸುರಕ್ಷತೆಗೆ ಪಾಲಿಸಬೇಕಾದ 7 ಹೆಜ್ಜೆಗಳು

 ತಿನ್ನುವುದರ ಬಗ್ಗೆ ಎಚ್ಚರಿಕೆ ವಹಿಸೋದು ಪ್ರಾಮುಖ್ಯನಾ

 ‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಮಾತಿನ ಪ್ರಕಾರ ನಾವು ಏನು ತಿನ್ನುತ್ತೇವೋ ಹಾಗೇ ನಮ್ಮ ಆರೋಗ್ಯನೂ ಇರುತ್ತೆ. ನಮಗೆ ಸುರಕ್ಷಿತ ಮತ್ತು ಪೌಷ್ಠಿಕವಾದ ಆಹಾರ ತಿನ್ನೋ ರೂಢಿ ಇದ್ರೆ, ಒಳ್ಳೇ ಆರೋಗ್ಯನ ಕಾಪಾಡ್ಕೊಳ್ತೀವಿ. ಒಂದುವೇಳೆ ಹೀಗೆ ಮಾಡದೆ ಇದ್ರೆ ಗಂಭೀರವಾದ ಕಾಯಿಲೆಗಳಿಗೆ ತುತ್ತಾಗ್ತೀವಿ. ತಕ್ಷಣ ನಮಗೆ ಕಾಯಿಲೆ ಬರದೆ ಇರಬಹುದು, ಆದ್ರೆ ಖಂಡಿತ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇದು ಹೇಗಿರುತ್ತೆ ಅಂದ್ರೆ ಕಡಿಮೆ ಗುಣಮಟ್ಟದ ಪೆಟ್ರೋಲ್‌ನ ಗಾಡಿಗೆ ಹಾಕಿದ್ರೆ ಆ ಕ್ಷಣಕ್ಕೆ ಗಾಡಿ ಓಡುತ್ತೆ ಆದ್ರೆ ಮುಂದೆ ಪ್ರಾಬ್ಲಂ ಕೊಡುತ್ತೆ. ಹಾಗೆ ಒಳ್ಳೇ ಆಹಾರ ರೂಢಿ ಇಲ್ಲದಿದ್ರೆ ಮುಂದೊಂದು ದಿನ ನಾವು ಕಾಯಿಲೆ ಬೀಳ್ತೀವಿ.—ಗಲಾತ್ಯ 6:7.

 ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ‘ಪ್ರಪಂಚದ ಪ್ರತಿಯೊಂದು ದೇಶ ಒಂದಲ್ಲ ಒಂದು ರೀತಿಯಲ್ಲಿ ಪೌಷ್ಠಿಕ ಆಹಾರದ ಕೊರತೆಯಿಂದ ತೊಂದರೆ ಅನುಭವಿಸ್ತಾ ಇದೆ.” ಬರೀ ಪೌಷ್ಠಿಕ ಆಹಾರದ ಕೊರತೆ ಮಾತ್ರ ಅಲ್ಲ, ಅದ್ರ ಜೊತೆ ದೇಹದ ತೂಕದಲ್ಲಿ ಏರಿಳಿತ ಮತ್ತು ಭಾರೀ ಬೊಜ್ಜಿನಂತ ಸಮಸ್ಯೆಗಳಿಂದ ಜನ ನರಳ್ತಿದ್ದಾರೆ. ಆರೋಗ್ಯಕರವಾದ ಊಟ ಮತ್ತು ಪಾನೀಯಗಳನ್ನ ತಗೊಳ್ಳೋ ರೂಢಿ ನಮಗಿಲ್ಲದಿದ್ರೆ ಸುಲಭವಾಗಿ ಹೃದಯಕ್ಕೆ ಸಂಬಂಧಪಟ್ಟ ರೋಗಗಳು, ಲಕ್ವ, ಸಕ್ಕರೆ ಕಾಯಿಲೆ, ಕ್ಯಾನ್ಸರ್‌ನಂಥ ಕಾಯಿಲೆಗಳಿಗೆ ತುತ್ತಾಗ್ತೀವಿ. ಒಂದು ಅಧ್ಯಯನದ ಪ್ರಕಾರ, 2017 ರಲ್ಲಿ ಪೌಷ್ಠಿಕ ಆಹಾರದ ಕೊರತೆಯಿಂದ ಸುಮಾರು 1ಕೋಟಿ 10 ಲಕ್ಷ ಜನ್ರು ಸತ್ತುಹೋದ್ರು. ಒಂದು ದಿನದಲ್ಲಿ ಸಾವಿರಕ್ಕಿಂತಲೂ ಹೆಚ್ಚು ಜನ್ರು ಅಶುದ್ಧವಾದ ಆಹಾರನ ತಿಂದು ಸಾಯ್ತಿದ್ದಾರೆ ಮತ್ತು ಕೋಟ್ಯಾಂತರ ಜನ ಕಾಯಿಲೆ ಬೀಳ್ತಿದ್ದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಕಂಡು ಹಿಡಿದಿದೆ.

 ಆರೋಗ್ಯಕರ ಆಹಾರ ತಿನ್ನೋ ರೂಢಿ ಯಾಕೆ ಅಷ್ಟು ಮುಖ್ಯ ಅಂತ ತಿಳ್ಕೊಳೋಕೆ ಬೈಬಲ್‌ ತತ್ವಗಳು ನಮ್ಗೆ ಸಹಾಯ ಮಾಡುತ್ತೆ. ಅಲ್ಲಿ ಹೇಳುತ್ತೆ ”ಜೀವದ ಮೂಲ” ದೇವರು ಅಂತ. (ಕೀರ್ತನೆ 36:9) ಜೀವ ದೇವರು ನಮಗೆ ಕೊಟ್ಟಿರೊ ಉಡುಗೊರೆ ಆಗಿರೋದ್ರಿಂದ ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯನ ಚೆನ್ನಾಗಿ ನೋಡಿಕೊಳ್ಳೋ ಮೂಲಕ ನಾವು ದೇವರಿಗೆ ಥ್ಯಾಂಕ್ಸ್‌ ಹೇಳಬಹುದು. ನಮ್ಮ ಆರೋಗ್ಯನ ಕಾಪಾಡಿಕೊಳ್ಳಲು ಏನು ಮಾಡಬಹುದು?

 ಆಹಾರದ ಸುರಕ್ಷತೆಗೆ 4 ಸಲಹೆಗಳು

 1. ಶುದ್ಧತೆಗೆ ಗಮನ ಕೊಡಿ.

 ಯಾಕೆ ಗಮನ ಕೊಡಬೇಕು ಗೊತ್ತಾ? ಅಶುದ್ಧವಾದ ಆಹಾರ ತಿನ್ನೋದ್ರಿಂದ ಮತ್ತು ನೀರು ಕುಡಿಯೋದ್ರಿಂದ ಹಾನಿಕರ ಕೀಟಾಣುಗಳು a ನಮ್ಮ ದೇಹದ ಒಳಗೆ ಸೇರುತ್ತೆ. ಇದ್ರಿಂದ ನಾವು ಕಾಯಿಲೆ ಬೀಳ್ತಿವಿ.

 ಆರೋಗ್ಯ ತಜ್ಞರ ಸಲಹೆ:

  •   ಅಡಿಗೆ ಮಾಡೋಕೂ ಮುಂಚೆ ಸೋಪು ಮತ್ತು ನೀರಿನಿಂದ ನಿಮ್ಮ ಕೈಗಳನ್ನ ಚೆನ್ನಾಗಿ ತೊಳೆದುಕೊಳ್ಳಿ. b ಕೊನೇ ಪಕ್ಷ 20 ಸೆಕೆಂಡ್‌ ಆದ್ರೂ ನಿಮ್ಮ ಕೈಗಳನ್ನ ಚೆನ್ನಾಗಿ ಉಜ್ಜಿ ತೊಳೆಯಿರಿ. ಕೈಗಳ ಹಿಂಭಾಗ, ಬೆರಳುಗಳ ಮಧ್ಯೆ, ಉಗುರುಗಳನ್ನೆಲ್ಲಾ ಚೆನ್ನಾಗಿ ಉಜ್ಜಿ ತೊಳೆಯಿರಿ. ತೊಳೆದ ಮೇಲೆ ಕೈಗಳನ್ನ ಒಣಗಿಸಿ.

  •   ತರಕಾರಿ ಕತ್ತರಿಸೋ ಮಣೆ, ಪಾತ್ರೆಗಳು ಮತ್ತು ಅಡುಗೆಗೆ ಬಳಸುವಂಥ ವಸ್ತುಗಳನ್ನ ಸೋಪು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಿರಿ. ಬೇಯಿಸುವಂಥ ತರಕಾರಿಗಳು ಮತ್ತು ಬೇಯಿಸದ ತರಕಾರಿಗಳನ್ನ ಕತ್ತರಿಸೋಕೆ ಒಂದೇ ಮಣೆ ಉಪಯೋಗಿಸ್ಬೇಡಿ, ಉಪಯೋಗಿಸೋದಾದ್ರೆ ತೊಳೆದು ಉಪಯೋಗಿಸಿ.

  •   ಎಲ್ಲಾ ತರಕಾರಿ ಮತ್ತು ಹಣ್ಣುಗಳನ್ನ ಚೆನ್ನಾಗಿ ತೊಳೆಯಿರಿ. ಯಾಕಂದ್ರೆ ಕೆಲವು ಸಲ ಹಣ್ಣು ತರಕಾರಿಗಳನ್ನ ಕಲುಷಿತ ನೀರಿನಿಂದ ಬೆಳೆಸಿರ್ತಾರೆ. ಅದ್ರಲ್ಲಿರೋ ಕೀಟಾಣುಗಳನ್ನ ತೆಗೆಯೋಕೆ ಉಪ್ಪು ಮತ್ತು ತರಕಾರಿಗಳನ್ನ ತೊಳೆಯೋ ಲಿಕ್ವಿಡ್‌ನಿಂದ ಚೆನ್ನಾಗಿ ತೊಳೆಯಿರಿ.

 2. ಹಸಿ ಮತ್ತು ಬೇಯಿಸಿದ ಆಹಾರ ಪದಾರ್ಥಗಳನ್ನ ಬೇರೆ ಬೇರೆ ಇಡಿ.

 ಯಾಕೆ ಇಡಬೇಕು ಗೊತ್ತಾ? ಹಸಿ ಮಾಂಸದಲ್ಲಿ ಕೀಟಾಣುಗಳು ಇರೋದ್ರಿಂದ ಅದರ ಜೊತೆ ಬೇಯಿಸಿದ ಆಹಾರ ಪದಾರ್ಥನ ಇಡೋದಾದ್ರೆ ಕೀಟಾಣುಗಳು ಅದಕ್ಕೂ ಅಂಟಿಕೊಳ್ಳುತ್ತವೆ.

 ಆರೋಗ್ಯ ತಜ್ಞರ ಸಲಹೆ:

  •   ಹಸಿ(ಉದಾ: ಮಾಂಸ) ಮತ್ತು ಬೇಯಿಸಿದ ಆಹಾರ ಪದಾರ್ಥಗಳನ್ನ ಮಾರುಕಟ್ಟೆಯಿಂದ ತರುವಾಗ ಮತ್ತು ಶೇಖರಿಸಿ ಇಡುವಾಗ ಬೇರೆ ಬೇರೆ ಇಡಿ.

  •   ಮಾಂಸನ ಕತ್ತರಿಸಿದ ಮೇಲೆ ನಿಮ್ಮ ಕೈ, ಚಾಕು, ಮಣೆನ ತಕ್ಷಣ ಸೋಪಿಂದ ತೊಳೆಯಿರಿ. ಆಮೇಲೆ ಬೇರೆ ಕೆಲಸಕ್ಕೆ ಉಪಯೋಗಿಸಿ.

 3. ಆಹಾರನ ಚೆನ್ನಾಗಿ ಬೇಯಿಸಿ ತಿನ್ನಿ.

 ಯಾಕೆ ಬೇಯಿಸಬೇಕು ಗೊತ್ತಾ? ಚೆನ್ನಾಗಿ ಬೇಯಿಸಿದಾಗ ಮಾತ್ರ ಅದ್ರಲ್ಲಿರೋ ಹಾನಿಕರ ಕೀಟಾಣುಗಳು ಸತ್ತು ಹೋಗುತ್ತವೆ.

 ಆರೋಗ್ಯ ತಜ್ಞರ ಸಲಹೆ:

  •   ಆಹಾರನ ಚೆನ್ನಾಗಿ ಬೇಯಿಸಿ ತಿನ್ನಿ. ಮಾಂಸ ಒಳಗೆಲ್ಲ ಬೆಂದಿರೊ ತರ ನೋಡಿಕೊಳ್ಳಿ. ಕಡಿಮೆ ಪಕ್ಷ 30 ಸೆಕೆಂಡುಗಳ ವರೆಗೆ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬೇಯಿಸಬೇಕು.

  •   ಸೂಪನ್ನ ಚೆನ್ನಾಗಿ ಕುದಿಸಬೇಕು.

  •   ಫ್ರಿಜ್‌ನಲ್ಲಿರೋ ಊಟನಾ ಬಿಸಿ ಮಾಡಿ ತಿನ್ನೋದಾದ್ರೆ ಆವಿ ಬರೋವರೆಗೂ ಬಿಸಿ ಮಾಡಬೇಕು.

 4. ಆಹಾರ ಪದಾರ್ಥನ ಸರಿಯಾದ ಉಷ್ಣಾಂಶದಲ್ಲಿ ಶೇಖರಿಸಿಡಿ.

 ಯಾಕೆ? ಆಹಾರ ಪದಾರ್ಥಗಳನ್ನ 5 ರಿಂದ 60 ಡಿಗ್ರಿ ಸೆಲ್ಸಿಯಸ್‌ನಲ್ಲಿ 20 ನಿಮಿಷಗಳು ಇಟ್ಟರೆ ಅದ್ರಲ್ಲಿ ಬ್ಯಾಕ್ಟೀರಿಯಗಳು ಜಾಸ್ತಿಯಾಗುತ್ತೆ. ಹಸಿ ಮಾಂಸನ ಸರಿಯಾದ ಉಷ್ಣಾಂಶದಲ್ಲಿ ಶೇಖರಿಸಿ ಇಡದಿದ್ರೆ ಅದರಲ್ಲಿ ಬ್ಯಾಕ್ಟೀರಿಯಗಳು ವಿಷಕಾರಿ ಅಂಶಗಳನ್ನ ಉತ್ಪಾದಿಸುತ್ತವೆ. ಇಂಥ ಮಾಂಸನ ಎಷ್ಟೇ ಚೆನ್ನಾಗಿ ಬೇಯಿಸಿದ್ರೂ ಅದರಲ್ಲಿರೋ ವಿಷದ ಅಂಶ ಹೋಗಲ್ಲ.

 ಆರೋಗ್ಯ ತಜ್ಞರ ಸಲಹೆ:

  •   ಆಹಾರ ಪದಾರ್ಥ ತುಂಬ ಬಿಸಿ ಅಥವಾ ತುಂಬ ತಣ್ಣಗೆ ಇದ್ದಾಗ ಅದ್ರಲ್ಲಿ ಬ್ಯಾಕ್ಟೀರಿಯ ಬೆಳೆಯಲ್ಲ. ಬೆಚ್ಚಗಿನ ವಾತಾವರಣದಲ್ಲಿ ಕೀಟಾಣುಗಳು ತುಂಬ ಬೇಗ ಬೆಳೆಯುತ್ತವೆ.

  •   ರೂಮ್‌ ಟೆಂಪರೇಚರ್‌ನಲ್ಲಿ ಆಹಾರವನ್ನ 2 ಗಂಟೆಗಿಂತ ಹೆಚ್ಚು ಸಮಯ ಇಡಬೇಡಿ ಅಥವಾ ರೂಮ್‌ ಟೆಂಪರೇಟರ್‌ 32 ಡಿಗ್ರಿ ಸೆಲ್ಸಿಯಸ್‌ಗಿಂತ ಜಾಸ್ತಿ ಇದ್ರೆ ಆಹಾರವನ್ನ 1 ಗಂಟೆಗಿಂತ ಹೆಚ್ಚು ಸಮಯ ಇಡಬೇಡಿ.

  •   ಬಿಸಿ ಬಿಸಿ ಊಟ ಮಾಡಿ.

 ಆರೋಗ್ಯಕರ ಆಹಾರಕ್ಕೆ 3 ಸಲಹೆಗಳು

 1. ಪ್ರತಿದಿನ ಬೇರೆ ಬೇರೆ ತರದ ಹಣ್ಣು ತರಕಾರಿಗಳನ್ನ ತಿನ್ನಿ.

 ವಿಟಮಿನ್‌ಗಳು, ಖನಿಜಗಳು ಮತ್ತು ಆರೋಗ್ಯಕ್ಕೆ ಬೇಕಾದ ಬೇರೆ ಪೋಷಕಾಂಶಗಳು ಹೆಚ್ಚಾಗಿ ಸಿಗೋದು ಹಣ್ಣು ಮತ್ತು ತರಕಾರಿಗಳಿಂದಾನೇ. ವಿಶ್ವ ಆರೋಗ್ಯ ಸಂಸ್ಥೆ ಹೇಳೋ ಪ್ರಕಾರ ನಾವು ಪ್ರತಿದಿನ ತಿನ್ನೋ ಊಟದಲ್ಲಿ 400 ಗ್ರಾಂ ಹಣ್ಣು ಮತ್ತು ತರಕಾರಿಗಳು ಇರಬೇಕು. ಇದರಲ್ಲಿ ಆಲೂಗೆಡ್ಡೆ ಮತ್ತು ಬೇರೆ ಗೆಡ್ಡೆಗೆಣಸುಗಳು ಸೇರಿಲ್ಲ.

 2. ಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳನ್ನ ಮಿತವಾಗಿ ತಿನ್ನಿ.

 ಎಣ್ಣೆಯಲ್ಲಿ ಕರಿದ, ಸಂಸ್ಕರಿಸಿದ (ಆಹಾರ ಪದಾರ್ಥಗಳು ಕೆಡದಿರಲು ಕೆಮಿಕಲ್‌ಗಳನ್ನ ಉಪಯೋಗಿಸಿರ್ತಾರೆ) ಆಹಾರ ಪದಾರ್ಥಗಳನ್ನ ಮತ್ತು ಬೇಕರಿ ತಿಂಡಿ ತಿನಿಸುಗಳನ್ನ ತಿನ್ನೋದು ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತೆ. ಸಾಧ್ಯವಾದಷ್ಟು ಅಪೂರಿತ (ಅನ್‌ಸ್ಯಾಚುರೇಟೆಡ್‌) ಕೊಬ್ಬಿನ ಎಣ್ಣೆ c ಬಳಸಿ. ಇವು ವನಸ್ಪತಿಯಂತ ಪೂರಿತ (ಸ್ಯಾಚುರೇಟೆಡ್‌) ಕೊಬ್ಬಿಗಿಂತ ಒಳ್ಳೇದು.

 3. ಉಪ್ಪು ಮತ್ತು ಸಕ್ಕರೆನ ಮಿತವಾಗಿ ಬಳಸಿ.

 ವಯಸ್ಕರು ಒಂದು ದಿನದಲ್ಲಿ 1 ಟೀ ಸ್ಪೂನಿಗಿಂತ ಜಾಸ್ತಿ ಉಪ್ಪನ್ನ ತಿನ್ನಬಾರದು. ಕಾಫಿ, ಟೀ, ಊಟ ಎಲ್ಲಾ ಸೇರಿ ಒಂದು ದಿನದಲ್ಲಿ 12 ಟೀ ಸ್ಪೂನಿಗಿಂತ ಜಾಸ್ತಿ ಸಕ್ಕರೆ d ತಿನ್ನಬಾರದು ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತೆ. ಸಂಸ್ಕರಿತ ಆಹಾರ ಮತ್ತು ಪಾನೀಯಗಳಲ್ಲಿ ಸಕ್ಕರೆ ಅಂಶ ತುಂಬ ಜಾಸ್ತಿ ಇರುತ್ತೆ. ಉದಾಹರಣೆಗೆ, 355 ಮಿಲಿ ಲೀಟರ್‌ ಸಾಫ್ಟ್‌ ಡ್ರಿಂಕಲ್ಲಿ 50 ಮಿಲಿ ಲೀಟರ್‌ ಅಂದರೆ 10 ಟೀ ಸ್ಪೂನ್‌ನಷ್ಟು ಸಕ್ಕರೆ ಇರುತ್ತೆ. ಸಾಫ್ಟ್‌ ಡ್ರಿಂಕಲ್ಲಿ ತುಂಬ ಕ್ಯಾಲೋರಿ ಇರೋದ್ರಿಂದ ದೇಹಕ್ಕೆ ಯಾವುದೇ ಪೌಷ್ಠಿಕಾಂಶ ಸಿಗಲ್ಲ.

 ಬೈಬಲ್‌ ಹೇಳೋದು: “ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ, ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ ಅನುಭವಿಸ್ತಾನೆ.” (ಜ್ಞಾನೋಕ್ತಿ 22:3) ಹಾಗಾಗಿ ಜಾಣರಾಗಿ ಒಳ್ಳೇ ಆಹಾರ ರೂಢಿನ ಬೆಳೆಸಿಕೊಂಡ್ರೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತೆ. ನಿಮಗೆ ಜೀವ ಕೊಟ್ಟ ದೇವರಿಗೂ ಗೌರವ ಕೊಟ್ಟಂತೆ ಆಗುತ್ತೆ.

 ಜನರಿಗಿರೋ ತಪ್ಪಭಿಪ್ರಾಯಗಳು

 ತಪ್ಪಭಿಪ್ರಾಯ: ಘಮಘಮ ಅಂತ, ರುಚಿಯಾಗಿದ್ದು, ನೋಡಲು ಚೆನ್ನಾಗಿದ್ರೆ ಸಾಕು, ಅಂಥ ಆಹಾರ ಆರೋಗ್ಯಕ್ಕೆ ಒಳ್ಳೇದು.

 ನಿಜ: 1 ಲೀಟರ್‌ ನೀರಿನಲ್ಲಿ 10 ಬಿಲಿಯನ್‌ ಬ್ಯಾಕ್ಟೀರಿಯಗಳು ಇದ್ರೆ ಆ ನೀರು ನಮ್ಮ ಕಣ್ಣಿಗೆ ಕಲುಷಿತವಾಗಿ ಕಾಣುತ್ತೆ. ಆದ್ರೆ ನಮ್ಮ ಆರೋಗ್ಯ ಹಾಳಾಗಲು ಬರೀ 15 ರಿಂದ 20 ಬ್ಯಾಕ್ಟೀರಿಯಗಳು ಅದರಲ್ಲಿ ಇದ್ರೆ ಸಾಕು. ಆದ್ದರಿಂದ ನಾವು ತಿನ್ನೋ ಊಟ, ಕುಡಿಯೋ ನೀರಿನ ವಿಷ್ಯದಲ್ಲಿ ಎಚ್ಚರವಾಗಿರಬೇಕು. ಆಹಾರ ಪದಾರ್ಥಗಳನ್ನ ಸರಿಯಾದ ಉಷ್ಣಾಂಶದಲ್ಲಿ ಶೇಖರಿಸಿಟ್ಟು ಹಾಳಾಗೋಕೂ ಮುಂಚೆ ಅದನ್ನ ತಿನ್ನಬೇಕು.

 ತಪ್ಪಭಿಪ್ರಾಯ: ನೊಣಗಳಿಂದ ಆಹಾರ ಹಾಳಾಗಲ್ಲ.

 ನಿಜ: ನೊಣಗಳು ಗಲೀಜಲ್ಲೇ ಬೆಳೆದು ಮೊಟ್ಟೆಯಿಟ್ಟು ಮರಿ ಮಾಡೋದ್ರಿಂದ ಅವುಗಳ ಕಾಲಲ್ಲಿ ಕೋಟಿಗಟ್ಟಲೇ ಕೀಟಾಣುಗಳು ಅಂಟಿಕೊಂಡಿರುತ್ತೆ. ಅದ್ರಿಂದ ನಮಗೆ ಕಾಯಿಲೆ ಬರುತ್ತೆ. ನೊಣ ಆಹಾರ ಪದಾರ್ಥಗಳ ಮೇಲೆ ಕೂತ್ಕೊಬಾರದು ಅಂದ್ರೆ ಅದನ್ನ ಸರಿಯಾಗಿ ಮುಚ್ಚಿಡಬೇಕು.

 ತಪ್ಪಭಿಪ್ರಾಯ: “ತುಂಬ ವರ್ಷಗಳಿಂದ ಆರೋಗ್ಯಕರವಲ್ಲದ ಆಹಾರನ ತಿನ್ನುತ್ತಾ ಇದ್ದೀನಿ, ಈಗ ಬದಲಾಯಿಸಿಕೊಳ್ಳೋದ್ರಿಂದ ಏನೂ ಪ್ರಯೋಜನ ಇಲ್ಲ ಅನ್ಸುತ್ತೆ.”

 ನಿಜ: ಆಹಾರ ರೂಢಿನ ಬದಲಾಯಿಸಿಕೊಂಡು ಪೌಷ್ಠಿಕ ಆಹಾರ ತಿನ್ನೋದ್ರಿಂದ ಒಳ್ಳೇ ಆರೋಗ್ಯ ಕಾಪಾಡಿಕೊಳ್ಳಬಹುದು ಮತ್ತು ತುಂಬ ಕಾಲ ಬದುಕಬಹುದು ಅಂತ ಸಂಶೋಧಕರು ಕಂಡು ಹಿಡಿದಿದ್ದಾರೆ.

a ಕೀಟಾಣುಗಳು ಅಥವಾ ಸೂಕ್ಷ್ಮಾಣು ಜೀವಿಗಳು ಅಂದ್ರೆ ಬರೀ ಕಣ್ಣಲ್ಲಿ ನೋಡೋಕೆ ಸಾಧ್ಯವಾಗದಿರೋ ಜೀವಿಗಳು. ಉದಾಹರಣೆಗೆ ಬ್ಯಾಕ್ಟೀರಿಯ, ವೈರಸ್‌, ಪ್ಯಾರಾಸೈಟ್ಸ್‌ (ಪರೋಪಕಾರಿ ಜೀವಿಗಳು). ಕೆಲವು ಸೂಕ್ಷ್ಮಾಣು ಜೀವಿಗಳು ನಮಗೆ ಒಳ್ಳೇದು ಮಾಡುತ್ತವೆ. ಆದ್ರೆ ಇನ್ನೂ ಕೆಲವಿಂದ ನಮಗೆ ಅಪಾಯ ಇದೆ, ಎಷ್ಟಂದ್ರೆ ಅವು ನಮ್ಮ ಪ್ರಾಣನೇ ತೆಗೆದುಬಿಡುತ್ತವೆ.

b ಬರೀ ನೀರಲ್ಲಿ ತೊಳೆಯುವ ಬದಲು ಸೋಪು ಮತ್ತು ನೀರಿನಿಂದ ತೊಳೆದಾಗ ಕೀಟಾಣುಗಳು ಸತ್ತು ಹೋಗುತ್ತವೆ.

c ಅಪೂರಿತ (ಅನ್‌ಸ್ಯಾಚುರೇಟೆಡ್‌) ಕೊಬ್ಬು ರೂಮ್‌ ಟೆಂಪರೇಚರ್‌ನಲ್ಲೂ ದ್ರವ ರೂಪದಲ್ಲಿರುತ್ತೆ ಅದು ಗಟ್ಟಿಯಾಗಲ್ಲ.

d ಈ ಸಕ್ಕರೆಯಲ್ಲಿ ಕಾಫಿ ಟೀಗೆ ಉಪಯೋಗಿಸೋ ಸಕ್ಕರೆ, ಜೇನು, ಜ್ಯೂಸ್‌ ಸೇರಿದೆ ಹೊರತು ಹಣ್ಣು ಹಾಲು ತರಕಾರಿಯಲ್ಲಿ ಇರೋ ಸಕ್ಕರೆ ಅಂಶನಾ ಸೂಚಿಸೋದಿಲ್ಲ.