ಯೋಬ 4:1-21

  • ಎಲೀಫಜನ ಮೊದಲ ಮಾತುಗಳು (1-21)

    • ಯೋಬನ ನಿಷ್ಠೆ ಬಗ್ಗೆ ಗೇಲಿ (7, 8)

    • ಅದೃಶ್ಯ ಶಕ್ತಿ ಹೇಳಿದ್ದನ್ನ ತಿಳಿಸಿದ್ದು (12-17)

    • ‘ದೇವರಿಗೆ ತನ್ನ ಸೇವಕರಲ್ಲಿ ನಂಬಿಕೆಯಿಲ್ಲ’ (18)

4  ಅದಕ್ಕೆ ತೇಮಾನ್ಯನಾದ ಎಲೀಫಜ+ ಹೀಗೆ ಹೇಳಿದ:   “ನಿನ್ನತ್ರ ಮಾತಾಡಿದ್ರೆ ಕೇಳುವಷ್ಟು ತಾಳ್ಮೆ ಇದ್ಯಾ? ಈಗ ಮಾತಾಡದೆ ಸುಮ್ಮನಿರೋಕೆ ನನ್ನಿಂದಾಗಲ್ಲ,   ನಿಜ, ನೀನು ಎಷ್ಟೋ ಜನ್ರನ್ನ ತಿದ್ದುತ್ತಿದ್ದೆ,ಕುಗ್ಗಿಹೋದವ್ರನ್ನ* ಬಲಪಡಿಸ್ತಿದ್ದೆ.   ಎಡವಿ ಬೀಳೋರನ್ನ ನಿನ್ನ ಮಾತುಗಳಿಂದ ಎಬ್ಬಿಸಿ ನಿಲ್ಲಿಸ್ತಿದ್ದೆ. ನಡುಗೋ ಮಂಡಿಗಳಿಗೆ ಶಕ್ತಿ ಕೊಡ್ತಾ ಇದ್ದೆ.   ಆದ್ರೆ ನಿನಗೇ ಅಂಥ ಸ್ಥಿತಿ ಬಂದಾಗ ಸೋತು ಹೋಗಿದ್ದೀಯ,ಅಂಥ ಕಷ್ಟ ನಿನಗೆ ಬಂದಾಗ ಎದೆಗುಂದಿ ಹೋಗಿದ್ದೀಯ.   ನಿನಗೆ ದೇವರ ಮೇಲೆ ಭಯಭಕ್ತಿ ಇದ್ಯಲ್ಲಾ, ಮತ್ಯಾಕೆ ಹೆದರ್ತೀಯಾ? ನಿಷ್ಠೆಯಿಂದ+ ನಡ್ಕೊಂಡಿದ್ದೀಯ ಅಂದ್ಮೇಲೆ ನಿನಗೆ ಒಳ್ಳೇದಾಗುತ್ತೆ ಅನ್ನೋ ಭರವಸೆ ಯಾಕಿಲ್ಲ?   ದಯವಿಟ್ಟು ಸ್ವಲ್ಪ ಯೋಚ್ನೆ ಮಾಡು, ತಪ್ಪು ಮಾಡದವನು ಯಾವತ್ತಾದ್ರೂ ನಾಶ ಆಗಿದ್ದಾನಾ? ನೀತಿವಂತ ಯಾವತ್ತಾದ್ರೂ ಸರ್ವನಾಶ ಆಗಿದ್ದಾನಾ?   ಹಾನಿ ಅನ್ನೋ ಹೊಲವನ್ನ ಉಳುಮೆ ಮಾಡಿ,*ಕೇಡು ಅನ್ನೋ ಬೀಜ ಬಿತ್ತುವವರು ಕೇಡನ್ನೇ ಕೊಯ್ಯೋದನ್ನ ನೋಡಿದ್ದೀನಿ.   ಅವರು ದೇವರ ಉಸಿರಿಂದಾನೇ ನಾಶ ಆಗ್ತಾರೆ,ಆತನ ಕೋಪ ಸಿಡಿದು ಬೂದಿಯಾಗಿ ಹೋಗ್ತಾರೆ. 10  ಸಿಂಹ ಗರ್ಜಿಸುತ್ತೆ, ಎಳೇ ಸಿಂಹ ಇನ್ನೂ ಜೋರಾಗಿ ಗರ್ಜಿಸುತ್ತೆ,ಆದ್ರೆ ಅಂಥ ಬಲಿಷ್ಠ ಸಿಂಹಗಳ ಹಲ್ಲುಗಳು ಕೂಡ ಮುರಿದುಹೋಗುತ್ತೆ. 11  ಬೇಟೆ ಸಿಗದೆ ಸಿಂಹ ಸತ್ತುಹೋಗುತ್ತೆ,ಸಿಂಹದ ಮರಿಗಳು ಚೆಲ್ಲಾಪಿಲ್ಲಿ ಆಗುತ್ತೆ. 12  ರಹಸ್ಯವಾಗಿ ನನ್ಗೊಂದು ವಿಷ್ಯ ಗೊತ್ತಾಯ್ತು,ಪಿಸುಗುಟ್ಟೋ ಧ್ವನಿ ನನ್ನ ಕಿವಿಗೆ ಬಿತ್ತು. 13  ರಾತ್ರಿ ಜನ ಗಾಢ ನಿದ್ದೆ ಮಾಡ್ತಿದ್ದಾಗ ದರ್ಶನಗಳನ್ನ* ನೋಡ್ದೆ. ಅವು ನನ್ನ ಮನಸ್ಸನ್ನ ಕದಡಿದ್ವು. 14  ಆಗ ನಾನು ಭಯಪಟ್ಟೆ,ಭೀತಿಯಿಂದ ನನ್ನ ಮೂಳೆಗಳೆಲ್ಲ ನಡುಗ್ತು. 15  ಏನೋ ಒಂದು* ನನ್ನ ಹತ್ರದಿಂದ ದಾಟಿಹೋಯ್ತು,ಆಗ ನನ್ನ ಮೈಮೇಲಿನ ಕೂದಲುಗಳೆಲ್ಲ ನೆಟ್ಟಗೆ ನಿಂತ್ವು. 16  ಆಮೇಲೆ ಅದು ಒಂದು ಕಡೆ ನಿಲ್ತು. ಅದು ಏನಂತ ನನಗೆ ಗೊತ್ತಾಗಲಿಲ್ಲ. ಒಂದು ರೂಪ ನನ್ನ ಕಣ್ಮುಂದೆ ನಿಲ್ತು,ಎಲ್ಲೆಲ್ಲೂ ನಿಶ್ಯಬ್ದ, ಆಮೇಲೆ ಒಂದು ಧ್ವನಿ ಕೇಳಿಸ್ತು. 17  ‘ನಶಿಸಿಹೋಗೋ ಮನುಷ್ಯ ದೇವ್ರಿಗಿಂತ ಹೆಚ್ಚು ನೀತಿವಂತ ಆಗೋಕೆ ಸಾಧ್ಯನಾ? ಒಬ್ಬ ಮನುಷ್ಯ ತನ್ನನ್ನ ಸೃಷ್ಟಿ ಮಾಡಿದವನಿಗಿಂತ ಹೆಚ್ಚು ಪರಿಶುದ್ಧ ಆಗೋಕೆ ಸಾಧ್ಯನಾ?’ ಅಂತ ಹೇಳ್ತು. 18  ನೋಡು! ದೇವರಿಗೆ ತನ್ನ ಸೇವಕರಲ್ಲಿ ನಂಬಿಕೆಯಿಲ್ಲ. ಆತನು ದೇವದೂತರಲ್ಲೂ* ತಪ್ಪು ಕಂಡುಹಿಡಿತಾನೆ. 19  ನೆಲದ ಧೂಳಲ್ಲಿ ಅಡಿಪಾಯ ಹಾಕೊಂಡು+ ಮಣ್ಣಿನ ಮನೆಗಳಲ್ಲಿ ವಾಸಿಸೋ ಮನುಷ್ಯರನ್ನ,ಹುಳವನ್ನ ಹೊಸಕಿಹಾಕೋ ಹಾಗೇ ಸುಲಭವಾಗಿ ಸಾಯಿಸಬಹುದು,ಹೀಗಿರುವಾಗ ಮನುಷ್ಯರು ಯಾವ ಲೆಕ್ಕ? 20  ಬೆಳಿಗ್ಗೆಯಿಂದ ಸಂಜೆ ಒಳಗೆ ಅವರು ಪೂರ್ತಿ ಅಳಿದು ಹೋಗ್ತಾರೆ,ಅವರು ಸರ್ವನಾಶ ಆಗ್ತಾರೆ, ಯಾರ ಗಮನಕ್ಕೂ ಬರಲ್ಲ. 21  ಹಗ್ಗ ಕಿತ್ತಾಗ ಬಿದ್ದುಹೋಗೋ ಡೇರೆ ಹಾಗೇ ಅವರಿದ್ದಾರೆ,ವಿವೇಕ ಇಲ್ಲದ್ರಿಂದ ಅವರು ಸತ್ತು ಹೋಗ್ತಾರೆ.

ಪಾದಟಿಪ್ಪಣಿ

ಅಕ್ಷ. “ಬಲ ಇಲ್ಲದ ಕೈಗಳನ್ನ.”
ಅಥವಾ “ಹಾನಿಮಾಡೋಕೆ ಸಂಚು ಮಾಡುವವರು.”
ಅಥವಾ “ಒಬ್ಬ ಕೆಟ್ಟ ದೇವದೂತ.”
ಅಥವಾ “ತನ್ನ ದೂತರಲ್ಲೂ.”